ADVERTISEMENT

ಪ್ರಶ್ನೋತ್ತರ: ಪಿಪಿಎಫ್‌ ಅವಧಿ ಮುಗಿದ ನಂತರವೂ ಮುಂದುವರಿಸಬಹುದೇ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2020, 19:45 IST
Last Updated 18 ಫೆಬ್ರುವರಿ 2020, 19:45 IST
   

ಸಂತೋಷ್‌, ಹಂದಿಗನೂರು

ವಯಸ್ಸು 33. ಸರ್ಕಾರಿ ನೌಕರಿ. ಒಟ್ಟು ಸಂಬಳ ₹ 42,539. ಕಡಿತ ಪಿಟಿ ₹ 200. ಜಿಐಎಸ್‌ ₹ 180. ಕೆಜಿಐಡಿ ₹ 7,000. ಎಲ್‌ಐಸಿ ₹ 4673, ಎನ್‌ಪಿಎಸ್‌ ₹ 4081. ಮಗುವಿನ ವಯಸ್ಸು 3 ವರ್ಷ. ಮಕ್ಕಳ ಭವಿಷ್ಯ, ತೆರಿಗೆ, ಕುಟುಂಬದ ಭವಿಷ್ಯಕ್ಕಾಗಿ ಉಳಿತಾಯ ಯೋಜನೆ ತಿಳಿಸಿ.

ಉತ್ತರ: ಸದ್ಯದ ಪರಿಸ್ಥಿತಿಯಲ್ಲಿ ನೀವು ಆದಾಯ ತೆರಿಗೆಗೆ ಒಳಗಾಗುವುದಿಲ್ಲ. ಜೀವವಿಮೆ ಇರುವುದನ್ನು ಮುಂದುವಿರಿಸಿ ಹಾಗೂ ಇನ್ನೂ ಹೆಚ್ಚಿನ ವಿಮೆ ನಿಮಗೆ ಅವಶ್ಯವಿಲ್ಲ. ನೀವು ಪಿಪಿಎಫ್‌ ಖಾತೆ ಪ್ರಾರಂಭಿಸಿ. ಇಲ್ಲಿ ಕನಿಷ್ಠ ₹ 500, ಗರಿಷ್ಠ ₹ 1.50 ಲಕ್ಷ ತುಂಬುವ ಅವಕಾಶವಿದೆ. ಸಂಬಳದಲ್ಲಿ ಕಡಿತ ₹ 16,134, ಮನೆ ಖರ್ಚು ₹ 1,500 ಇವೆರಡನ್ನೂ ಕಳೆದರೆ ಗರಿಷ್ಠ ₹ 10,000 ತಿಂಗಳಿಗೆ ಉಳಿಸಬಹುದು. ₹ 10 ಸಾವಿರ ಐದು ವರ್ಷಗಳ ಆರ್.ಡಿ ಮಾಡಿ. 4 ವರ್ಷ ಮುಗಿಯುತ್ತಲೇ ಸ್ವಲ್ಪ ವೈಯಕ್ತಿಕ ಸಾಲ ಪ‍ಡೆದು 30X40 ಅಳತೆಯ ನಿವೇಶನ ಖರೀದಿಸಿ. ವಾರ್ಷಿಕ ಇನ್‌ಕ್ರಿಮೆಂಟ್‌, ಅರ್ಧ ವಾರ್ಷಿಕ, ಡಿ.ಎ ಇವುಗಳಿಂದ ಬರುವ ಮೊತ್ತದ ಕನಿಷ್ಠ ಶೇ 50ರಷ್ಟು ನಿಮ್ಮ ಮಗನ ಭವಿಷ್ಯಕ್ಕಾಗಿ ಪ್ರತಿ ವರ್ಷ ಅರ್‌.ಡಿ ಮಾಡಿ. ಈ ಪ್ರಕ್ರಿಯೆ ನಿರಂತರವಾಗಿರಲಿ.

ADVERTISEMENT

ಚಿತ್ತಯ್ಯಸ್ವಾಮಿ, ಊರುಬೇಡ

ನಾನು ಪ್ರೌಢಶಾಲಾ ಶಿಕ್ಷಕ. ಪ್ರಜಾವಾಣಿಯನ್ನು 25 ವರ್ಷಗಳಿಂದ ಓದುತ್ತಿದ್ದೇನೆ. ನಿಮ್ಮ ಅಂಕಣ ಪ್ರಾರಂಭವಾದಾಗಿನಿಂದ ಪ್ರತಿ ಬುಧವಾರ ತಪ್ಪದೇ ಓದುತ್ತಿದ್ದು, ಪೇಪರ್‌ ಕಟಿಂಗ್‌ ಇಟ್ಟುಕೊಂಡಿದ್ದೇನೆ. ನಿಮ್ಮ ಅಂಕಣದಿಂದ ಪ್ರಭಾವಿತನಾಗಿ ₹ 20 ಲಕ್ಷ ಉಳಿತಾಯ ಮಾಡಿದ್ದೇನೆ. ನನ್ನ ಮಗ ಎಂಬಿಬಿಎಸ್‌, ಮಗಳು ಬಿಇ ಓದಿದ್ದಾರೆ. ಮುಂದಿನ ಜೀವನಕ್ಕೆ ನನ್ನ ಮಕ್ಕಳ ಭವಿಷ್ಯಕ್ಕೆ ಸಲಹೆ ನೀಡಿ.

ಉತ್ತರ: ಪ್ರಜಾವಾಣಿ ಹಾಗೂ ನನ್ನ ಮೇಲೆ ಇಟ್ಟಿರುವ ನಂಬಿಕೆ, ವಿಶ್ವಾಸಕ್ಕೆ ಚಿರಋಣಿಯಾಗಿದ್ದೇನೆ. ನೀವು ಈಗಾಗಲೇ ಬಹಳಷ್ಟು ಉಳಿತಾಯ ಮಾಡಿದ್ದೀರಿ. ಸಾಧ್ಯವಾದರೆ ನಿವೇಶನ ಖರೀದಿಸಿ. ನಿಮ್ಮ ಉಳಿತಾಯದ ಪಾಠವನ್ನು ನಿಮ್ಮ ಮನೆಯವರೆಲ್ಲರೂ ಮುಂದುವರಿಸಲಿ.

ರಾಮಚಂದ್ರ ಶಾಸ್ತ್ರಿ, ಬಾಣಾವರ

ಪಿಪಿಎಫ್‌ ಎಷ್ಟು ವರ್ಷಗಳ ನಂತರ ಅಂದರೆ ಅವಧಿ ಮುಗಿದ ನಂತರವೂ ಮುಂದುವರಿಸಬಹುದೇ. ಇಲ್ಲಿ ಬರುವ ಬಡ್ಡಿಗೆ ಅವಧಿ ಮುಗಿದ ನಂತರವೂ ಆದಾಯ ತೆರಿಗೆ ವಿನಾಯ್ತಿ ಇದೆಯೇ?

ಉತ್ತರ: ಪಿಪಿಎಫ್‌ ಖಾತೆಯನ್ನು ಅಂಚೆ ಕಚೇರಿ ಹಾಗೂ ಕೆಲವು ಪ್ರಮುಖ ಬ್ಯಾಂಕ್‌ಗಳಲ್ಲಿ ತೆರೆಯಬಹುದಾಗಿದೆ. ಇದರ ಅವಧಿ 15 ವರ್ಷಗಳು. ಅವಧಿ ಮುಗಿದ ನಂತರ, ಅಂದರೆ 15 ವರ್ಷಗಳು ಕಳೆದ ನಂತರ, ಅರ್ಜಿ ಕೊಟ್ಟು ಮುಂದಿನ 5 ವರ್ಷದಂತೆ ಮುಂದುವರಿಸುತ್ತಾ ಬರಬಹುದು. ಒಮ್ಮೆ 5 ವರ್ಷ ಮುಂದುವರಿಸಿದರೆ, ಆ ಅವಧಿಯ ಮುನ್ನ ಖಾತೆ ಮುಕ್ತಾಯ ಮಾಡುವುಂತಿಲ್ಲ. ಅವಧಿ ಮುಗಿದು ಖಾತೆ ಮುಂದುವರಿಸದೆ, ಕೆಲ ಸಮಯದ ನಂತರ ಖಾತೆ ಮುಕ್ತಾಯಗೊಳಿಸುವಲ್ಲಿ, ಅವಧಿ ಮುಗಿದು ಹಣ ಪಡೆಯುವ ತಾರೀಕಿನವರೆಗೆ ಅಂಚೆ ಕಚೇರಿ ಉಳಿತಾಯ ಖಾತೆ ಬಡ್ಡಿ ಪಡೆಯಬಹುದು. ಸೆಕ್ಷನ್‌ 10 (II) ಆಧಾರದ ಮೇಲೆ ಪಿಪಿಎಫ್‌ ಖಾತೆಯ ಅವಧಿಯಲ್ಲಿ ಹಾಗೂ ಅವಧಿ ಮುಗಿದ ನಂತರ ಬರುವ ಬಡ್ಡಿಗೆ ಸಂಪೂರ್ಣ ತೆರಿಗೆ ವಿನಾಯ್ತಿ ಇದೆ. ಅವಧಿ ಮುಗಿದ ನಂತರ 5 ವರ್ಷಗಳಂತೆ ಮುಂದುವರಿಸುವ ಸವಲತ್ತು ಬಹಳ ಜನರಿಗೆ ತಿಳಿದಿಲ್ಲ. ನಿಮ್ಮ ಪ್ರಶ್ನೆಯಿಂದ ಹಲವರಿಗೆ ತಿಳಿದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.