ADVERTISEMENT

ಐ.ಟಿ, ಔಷಧ ವಲಯದತ್ತ ಕಣ್ಣು!

ಕೆ.ಜಿ ಕೃಪಾಲ್
Published 16 ಮಾರ್ಚ್ 2014, 19:30 IST
Last Updated 16 ಮಾರ್ಚ್ 2014, 19:30 IST

ಸಂವೇದಿ ಸೂಚ್ಯಂಕವು ಮಾ. 10 ರಂದು 22,023.98 ಅಂಶಗಳ ದಾಖಲೆಯ ಮಟ್ಟ ತಲುಪಿತು. ಆದರೆ, ಇದು ಕಾಲ್ಪನಿಕ ಎಂಬಂತೆ ನಂತರದ ದಿನ­ಗಳಲ್ಲಿ ವೈವಿಧ್ಯಮಯ ಕಾರಣಗಳಿಂದ ಇಳಿಕೆಯತ್ತ ತಿರುಗಿತು.

ಇತ್ತೀಚೆಗೆ ಅಗ್ರಮಾನ್ಯ ಕಂಪೆನಿಗಳ ಷೇರುಗಳ ದರಗಳೂ ಸಹ ಅತಿವೇಗದ ಏರಿಳಿತ ಪ್ರದರ್ಶಿಸಿ ಹೂಡಿಕೆದಾರರ ಸಂಪತ್ತು ಕರಗುವಂತೆ ಮಾಡಿವೆ. ಕಳೆದ ಒಂದು ತಿಂಗಳಲ್ಲಿ ಮಾರುತಿ ಸುಜುಕಿಯ ಷೇರು ₨1,800ರ ಸಮೀಪದಿಂದ ₨1,551ರ­ವರೆಗೂ ಕುಸಿದು ನಂತರ ಅತಿ ವೇಗವಾಗಿ ಪುಟಿದೆದ್ದು ₨1,800 ತಲುಪಿತು. ಐ.ಟಿ ವಲಯದ ಇನ್ಫೊಸಿಸ್‌ ಕಂಪನಿಯ ಸಾಧನೆಯು ನಿರೀಕ್ಷಿತ ಮಟ್ಟ­ದಲ್ಲಿ ಇರಲಾರದು ಎಂಬ ಕಾರಣಕ್ಕೆ ಷೇರಿನ ಬೆಲೆ ₨400 ರಷ್ಟು ಏರಿಳಿತ ಪ್ರದರ್ಶಿ­ಸಿತು. ಲೋಹವಲಯದ ಕಂಪನಿಗಳು ಹೆಚ್ಚಿನ ಒತ್ತಡದಲ್ಲಿದ್ದವು.

    ಫಾರ್ಮಾ ವಲಯದ ಕಂಪೆನಿ ಸನ್‌ಫಾರ್ಮಾ­ಸ್ಯುಟಿಕಲ್‌್ಸ ಯು.ಎಸ್‌.­ಎಫ್‌.­ಡಿ.ಎ.ಯ ವಾರ್ನಿಂಗ್‌ ಲೆಟರ್‌ ಕಾರಣ ಗುರುವಾರ ಕುಸಿಯಿತು. ಶುಕ್ರವಾರವೂ ₨552 ರವರೆಗೂ ಕುಸಿದು ₨581ರ ಸಮೀಪ ಅಂತ್ಯಗೊಂಡಿತು. ಫಾರ್ಮಾ ವಲಯ, ಐಟಿ ವಲಯದ ಕಂಪನಿಗಳ ಷೇರಿನ ದರಗಳು ಇತ್ತೀಚೆಗೆ ಹೆಚ್ಚಿನ ಏರಿಕೆ ಕಂಡಿ­ದ್ದರಿಂದ ವಹಿವಾಟುದಾರರ ಆಸಕ್ತಿ ಹೊಸ ವಲಯದತ್ತ ತಿರುಗಿದೆ.

ಈಗ ಸರ್ಕಾರಿ ಸ್ವಾಮ್ಯದ ಎಂಜಿನಿಯರ್ಸ್ ಇಂಡಿಯಾ, ಗುಜರಾತ್‌ ಮಿನರಲ್‌ ಡೆವೆಲ­ಪ್‌­ಮೆಂಟ್‌, ಎಂ.ಎಂ.ಟಿ.ಸಿ. ಭಾರತ್‌ ಪೆಟ್ರೋಲಿಯಂ ಕಾರ್ಪೊ­ರೇಷನ್‌, ಬಿ.ಎಚ್‌.ಇ.ಎಲ್‌, ರೂರಲ್‌ ಎಲೆಕ್ಟ್ರಿಫಿಕೇಷನ್‌ ಕಾರ್ಪೊರೇಷನ್‌ಗಳತ್ತ ತಿರುಗಿ ಇವುಗಳು ಆಕರ್ಷಕ ಏರಿಕೆ ದಾಖಲಿಸಿದವು. ಎಲ್‌ಅಂಡ್‌ಟಿ ಫೈನಾನ್‌್ಸ ಹೋಲ್ಡಿಂಗ್‌್ಸ ಕಂಪೆನಿ ಷೇರಿನ ಬೆಲೆ ₨88 ರವರೆಗೂ ಏರಿಕೆ ಕಂಡಿತು. ನಂತರ ಏಕಮುಖವಾಗಿ ಇಳಿದು ಗುರುವಾ­ರ­ದಂದು ಸಂಜೆ ಕಂಪೆನಿಯ ಪ್ರವರ್ತಕರು ವಿಶೇಷ ಗವಾಕ್ಷಿಯ ಮೂಲಕ ಷೇರು ಮಾರಾಟ ಮಾಡುವ ಸುದ್ದಿಯಿಂದ ಶುಕ್ರವಾರ ₨74ರ ಸಮೀಪ ಕೊನೆಗೊಂಡಿರುವುದು ನೀತಿ ಪಾಲನೆಯ ಬಗ್ಗೆ ಸಂದೇಹಕ್ಕೆ ಎಡೆ ಮಾಡಿಕೊಟ್ಟಿದೆ.

ಕೈಗಾರಿಕಾ  ಪ್ರಗತಿ ಸೂಚ್ಯಂಕ (ಐಐಪಿ) ಮತ್ತು ಹಣದುಬ್ಬರ ಅಂಕಿ ಅಂಶಗಳು ಪ್ರೋತ್ಸಾಹದಾಯ­ಕ­ವಾ­ದರೂ ಸಂವೇದಿ ಸೂಚ್ಯಂಕವು ವಾರದಲ್ಲಿ 109 ಅಂಶಗಳಷ್ಟು ಇಳಿಕೆ ಕಂಡಿತು. ಮಧ್ಯಮ­ಶ್ರೇಣಿ ಸೂಚ್ಯಂಕವು 37 ಅಂಶಗಳಷ್ಟು ಇಳಿಕೆ ಕಂಡರೆ ಕೆಳಮಧ್ಯಮ ಶ್ರೇಣಿ  ಸೂಚ್ಯಂಕವು 15 ಅಂಶ ಏರಿಕೆ ಕಂಡಿತು. ವಿದೇಶಿ ವಿತ್ತೀಯ ಸಂಸ್ಥೆಗಳು ಸತತವಾದ ಹೂಡಿಕೆಯಿಂದ ವಾರದಲ್ಲಿ ₨5,188 ಕೋಟಿ ಹೂಡಿಕೆ ಮಾಡಿದರೆ ಸ್ಥಳೀಯ ವಿತ್ತೀಯ ಸಂಸ್ಥೆಗಳು ₨4,379 ಕೋಟಿ ಮೌಲ್ಯದ ಷೇರು ಮಾರಾಟ ಮಾಡಿವೆ. ಪೇಟೆಯ ಬಂಡವಾಳ ಮೌಲ್ಯವು ಹಿಂದಿನವಾರದ ₨71.33 ಲಕ್ಷ ಕೋಟಿಯಿಂದ ₨70.94 ಲಕ್ಷ ಕೋಟಿಗೆ ಇಳಿದಿತು.

ಹೊಸ ಷೇರಿನ ವಿಚಾರ
ಬಿ.ಸಿ. ಪವರ್‌ ಕಂಟ್ರೋಲ್‌್ಸ ಲಿ. ಕಂಪೆನಿಯು ಪ್ರತಿ ಷೇರಿಗೆ ₨18 ರಂತೆ ಇತ್ತೀಚೆಗೆ ಸಾರ್ವಜನಿಕ ವಿತರಣೆ ಮಾಡಿದ್ದು 14 ರಿಂದ ಮುಂಬೈ ಷೇರು ವಿನಿಮಯ ಕೇಂದ್ರದಲ್ಲಿ 8 ಸಾವಿರ ಷೇರುಗಳ ವಹಿವಾಟು ಗುಚ್ಚದೊಂದಿಗೆ ಎಂ.ಟಿ. ವಿಭಾಗದಲ್ಲಿ ವಹಿವಾಟು ಆರಂಭಿಸಿದೆ.

ಲಾಭಾಂಶ ವಿಚಾರ
* ಗೋದಾವರಿ ಪವರ್‌ ಕಂಪನಿ 15 ರಂದು ಲಾಭಾಂಶ ವಿತರಣೆ ಪರಿಶೀಲಿ­ಸಲಿದ್ದು, 21ನೇ ದಿನಾಂಕವು ವಿತರಣೆಗೆ ನಿಗದಿತ ದಿನವಾಗಿದೆ.
* ಜಯಂತ್‌ ಆಗ್ರೊ ಆರ್ಗಾನಿಕ್‌ ಕಂಪನಿಯು ಪ್ರತಿ ಷೇರಿಗೆ ₨2.50 ಯಂತೆ ಲಾಭಾಂಶ ವಿತರಿಸಲು ಮಾರ್ಚ್ 21 ನಿಗದಿತ ದಿನವಾಗಿದೆ.
* ಸ್ಟಾರ್‌ ಫೆರ್ರೊಟ ಸಿಮೆಂಟ್‌ ಕಂಪನಿಯು ಪ್ರತಿ ₨1ರ ಮುಖಬೆಲೆ ಷೇರಿಗೆ ₨0.33 ರಂತೆ ಲಾಭಾಂಶ ವಿತರಿಸಲು ಮಾರ್ಚ್ 21 ನಿಗದಿತ ದಿನವಾಗಿದೆ.
* ಸರ್ಕಾರಿ ಸ್ವಾಮ್ಯದ ಎಂಜಿನಿ­ಯರ್ಸ್ ಇಂಡಿಯಾ 15 ರಂದು ಲಾಭಾಂಶ ವಿತರಣೆ ಪರಿಶೀಲಿಸಲಿದ್ದು ವಿತರಣೆಗಾಗಿ ಮಾರ್ಚ್ 21 ನಿಗದಿತ ದಿನವಾಗಿದೆ.

ಹಕ್ಕಿನ ಷೇರಿನ ವಿಚಾರ
ಷೇರುಪೇಟೆಯ ಹೆಗ್ಗುರುತಾದ ಸಂವೇದಿ ಸೂಚ್ಯಂಕದ ಭಾಗವಾದ ಟಾಟಾ ಪವರ್‌ ಕಂಪನಿ ಲಿ. ಪ್ರತಿ ಷೇರಿಗೆ ₨60 ರಂತೆ, (ಷೇರಿನ ಮುಖಬೆಲೆ ₨ 1+59 ಪ್ರೀಮಿಯಂ ಸೇರಿ) 33,22,31,130 ಷೇರುಗಳನ್ನು ಪ್ರತಿ 50 ಷೇರು ಉಳ್ಳವರಿಗೆ 7 ಷೇರಿನಂತೆ (7:50) ಹಕ್ಕಿನ ಷೇರು ವಿತರಿಸಲಿದೆ. ಇದಕ್ಕಾಗಿ ಮಾರ್ಚ್ 20 ನಿಗದಿತ ದಿನವಾಗಿದೆ; 19ರಿಂದ ಹಕ್ಕಿನ ಷೇರು ರಹಿತ ವಹಿವಾಟು ಆರಂಭವಾಗಲಿದೆ. ಮಾರ್ಚ್ 31 ರೊಳಗೆ ವಿತರಣೆ ಆರಂಭ­ವಾ­ಗಲಿದ್ದು ಕನಿಷ್ಠ 15 ದಿನದವರೆಗೂ ತೆರೆದಿರುತ್ತದೆ.

ಆಫರ್‌ ಫಾರ್‌ ಸೇಲ್‌
ಎಲ್‌ಅಂಡ್‌ಟಿ ಫೈನಾನ್‌್ಸ ಹೋಲ್ಡಿಂಗ್‌್ಸ ಲಿ. ಕಂಪನಿಯಲ್ಲಿ ಪ್ರವರ್ತಕರು ಶೇ 81.50ರ ಭಾಗಿತ್ವ ಹೊಂದಿದ್ದು 14ರಂದು 5,55,05,­755 ಷೇರುಗಳನ್ನು ಷೇರು ವಿನಿಮಯ ಕೇಂದ್ರಗಳ ವಿಶೇಷ ಗವಾಕ್ಷಿ ಆಫರ್‌ ಫಾರ್‌ ಸೇಲ್‌ನಲ್ಲಿ ಪ್ರತಿ ಷೇರಿಗೆ ₨ 70 ರಂತೆ ವಿತರಿಸಿದೆ. ಇದರಿಂದ ಸಾರ್ವಜನಿಕ ಭಾಗಿತ್ವ ಶೇ 3.23 ರಷ್ಟು ಹೆಚ್ಚಿಸಿಕೊಂಡಿ­ದೆ­ಯಾದರೂ ನಿಗದಿತ ಮಿತಿ ತಲುಪಿಲ್ಲ.

ಶುಕ್ರವಾರ ಈ ಗವಾಕ್ಷಿಯ ಮೂಲಕ ವಿತರಣೆ ಸುದ್ದಿಯ ಕಾರಣ ಷೇರಿನ ಬೆಲೆ ಗುರುವಾರದಂದು ಆರಂಭದಲ್ಲಿ ₨ 88.35 ರವರೆಗೂ ಏರಿಕೆ ಕಂಡು ನಂತರ ಏಕಮುಖವಾಗಿ ₨ 78.40 ರವರೆಗೂ ಇಳಿದು ₨ 79.20ರಲ್ಲಿ ಅಂತ್ಯ ಕಂಡಿತು.

ಪುನರ್ ಬಿಡುಗಡೆ
ಕ್ಯಾಸ್ಟ್ರಾಲ್‌ ಇಂಡಿಯಾ ಕಂಪನಿಯು ತನ್ನ ಷೇರು ಬಂಡವಾಳವನ್ನು ಕಡಿತ­ಗೊಳಿಸಲು ಷೇರಿನ ಮುಖಬೆಲೆಯನ್ನು ₨ 10ರಿಂದ ₨5ಕ್ಕೆ ಇಳಿಸಿದೆ. ಈ 5 ರೂಪಾಯಿಗಳನ್ನು ಷೇರುದಾರರಿಗೆ ಹಿಂದಿರು­ಗಿಸಿ ಹೊಸ ಅವತಾರದ ₨ 5ರ ಮುಖಬೆಲೆ ಷೇರುಗಳು 14 ರಿಂದ ‘ಟಿ’ ಗುಂಪಿನಲ್ಲಿ ವಹಿ­ವಾಟಿಗೆ ಬಿಡುಗಡೆಯಾ­ಗಿದೆ. 28ನೇ ಮಾರ್ಚ್‌­ನಿಂದ ‘ಎ’ ಗುಂಪಿಗೆ ವರ್ಗಾಯಿಸಲಾಗುವುದು.

ಬೋನಸ್‌ ಷೇರಿನ ವಿಚಾರ
ರಾಜ್‌ ಟೆಲಿವಿಷನ್‌ ನೆಟ್‌ವರ್ಕ್ 1:1ರ ಅನುಪಾತದ ಬೋನಸ್‌ ಪ್ರಕಟಿಸಿದೆ.

ಮುಖಬೆಲೆ ಸೀಳಿಕೆ
* ರಾಜ್‌ ಟೆಲಿವಿಷನ್‌ ನೆಟ್‌ವರ್ಕ್‌ ಕಂಪನಿಯು ಷೇರಿನ ಮುಖಬೆಲೆಯನ್ನು ₨10 ರಿಂದ ₨ 5ಕ್ಕೆ ಸೀಳಲಿದೆ.
* ಶಾರ್ಪ್ ಟ್ರೇಡಿಂಗ್‌ ಅಂಡ್‌ ಫೈನಾನ್‌್ಸ ಲಿ. ಕಂಪನಿಯು ಷೇರಿನ ಮುಖಬೆಲೆಯನ್ನು ₨10 ರಿಂದ ₨1ಕ್ಕೆ ಸೀಳಲಿದೆ.

ತೆರೆದ ಕರೆ
ಚೆಟ್ಟಿನಾಡ್‌ ಸಿಮೆಂಟ್‌ ಕಾರ್ಪೋ­ರೇಷನ್‌ ಕಂಪೆನಿಯು ಹೈದರಾಬಾದ್‌ನ ಅಂಜನಿ ಪೋರ್ಟ್‌­ಲ್ಯಾಂಡ್‌ ಸಿಮೆಂಟ್‌ ಲಿಮಿಟೆಡ್‌ ಕಂಪೆನಿಯ ಷೇರುದಾ­ರರಿಂದ 1,13,31,030 ಷೇರುಗಳನ್ನು ಅಂದರೆ ಶೇ61.62ರಷ್ಟರ ಭಾಗಿತ್ವವನ್ನು ಖರೀದಿಸುವ ಒಪ್ಪಂದ ಮಾಡಿಕೊಂಡ ಕಾರಣ ಸಾರ್ವಜನಿಕ ಷೇರುದಾರರಿಂ­ದಲೂ ಪ್ರತಿ ಷೇರಿಗೆ ₨61.75 ರಂತೆ ಶೇ 26ರಷ್ಟು ಭಾಗಿತ್ವದ ಷೇರುಗಳನ್ನು ಕೊಳ್ಳಲು ತೆರೆದ ಕರೆ ನೀಡಲಿದೆ.

ಒಂದು ವೇಳೆ ಶೇ 26ರಷ್ಟು ಷೇರುಗಳು ಈ ಮೂಲಕ ಲಭ್ಯವಾದಲ್ಲಿ ಪ್ರವರ್ತಕ ಷೇರುದಾರ­ರಿಂದ ಖರೀದಿಸಬೇಕೆಂದಿ­ರುವ ಶೇ 61.62ರ ಬದಲು ಶೇ 45 ಮಾತ್ರ ಖರೀದಿಸಿ ಕಂಪೆನಿಗಳಲ್ಲಿ ಕನಿಷ್ಠ ಶೇ 25ರ ಭಾಗಿತ್ವದ ನಿಯಮ ಪಾಲಿಸಲಿದೆ.

ಸುಚ್ಯಂಕದಲ್ಲಿ ಬದಲಾವಣೆ
ಹಾಟ್ಸನ್‌ ಆಗ್ರೊ ಪ್ರಾಡಕ್ಟ್ಸ್, ಡೆಲ್ಟಾ­ಕಾರ್ಪ್‌, ಕಜಾರಿಯಾ ಸಿರಾಮಿಕ್‌್ಸ, ವೈಭವ ಗ್ಲೋಬಲ್‌, ಫಿನೋಲೆಕ್‌್ಸ ಇಂಡಸ್ಟ್ರೀಸ್‌, ಜುಬಿಲಿಯಂಟ್‌ ಲೈಫ್‌ ಸೈನ್ಸಸ್‌, ಥಾಮಸ್‌ ಕುಕ್‌, ಎಸ್‌.ಕೆ.­ಎಸ್‌. ಮೈಕ್ರೊಫೈನಾನ್‌್ಸ, ರ್ಯಾಡಿಕೊ ಖೈತಾನ್‌, ಬಿ.ಎಫ್‌.ಯುಬಿಲಿಟೀಸ್‌, ಎಸ್‌.ಡಿ. ಅಲ್ಯುಮಿನಿಯಂ, ಸುಲಭ್‌ ಎಂಜಿನಿಯರ್ಸ್ ಮತ್ತು ರೆಪ್ಪೊ ಹೋಂ ಫೈನಾನ್‌್ಸ ಕಂಪೆನಿಗಳನ್ನು ಕೆಳಮಧ್ಯಮ ಶ್ರೇಣಿಯಿಂದ ಮಧ್ಯಮ ಶ್ರೇಣಿ ಸೂಚ್ಯಂಕಕ್ಕೆ ಭಡ್ತಿ ನೀಡಲಾಗಿದೆ. ಈ ಕಂಪೆನಿಗಳ ಷೇರಿನ ಬೆಲೆಗಳು ಇತ್ತೀಚೆಗೆ ಏರಿಕೆ ಕಂಡಿರುವುದು ಈ ಭಡ್ತಿಗೆ ಕಾರಣವಾಗಿದೆ.

ಪಿ ಸಿ ಜ್ಯುವೆಲರ್ಸ್‌ ಮತ್ತು ಇಂಡಿಯಾ ಟೂರಿಸಂ ಡೆವೆಲಪ್‌ಮೆಂಟ್‌ ಕಾರ್ಪ್‌ಗಳು ಮಧ್ಯಮ ಶ್ರೇಣಿ ಸೂಚ್ಯಂಕದಿಂದ ಕೆಳಮಧ್ಯಮ ಶ್ರೇಣಿಗೆ 24ರಿಂದ ವರ್ಗಾಯಿಸಲಾಗಿದೆ. ಇವುಗಳೊಂದಿಗೆ ವೆಲ್‌ಸ್ಪಸ್‌ ಕಾರ್ಪ್‌, ಎಕ್ಸೆಲ್‌ ಕಾರ್ಪ್‌ ಕೇರ್‌, ವೈಬ್ರಂಟ್‌ ಡಿಜಿಟಲ್‌, ಗಟಿ, ಎಫ್‌.ಐ.ಇ.ಎಂ ಇಂಡಸ್ಟ್ರೀಸ್‌, ಸೊಮಾನಿ ಸಿರಾಮಿಕ್‌್ಸ, ಮಹೀಂದ್ರ ಯುಜಿನ್‌ ಸ್ಟೀಲ್‌ ಕಂ, ಎಂ.ಪಿ.ಎಸ್‌.ಲಿ., ಸೋನಾಕೋಯಾ ಸ್ಟೀಲಿಂಗ್‌ ಡಿಐಸಿ ಇಂಡಿಯಾ, ದೀಪಕ್‌ ನೈಟ್ರೇಟ್‌, ಸೆಂಚುರಿ ಎಂಕಾ, ಹೀಲಿ­ಯೋಸ್‌ ಅಂಡ್‌ ಮೆಥೆಸನ್‌, ಇಂಡಿಯಾ ಹ್ಯೂಂಪೈಪ್‌ ಮುಂತಾದ­ವುಗಳು ಸಹ ಕೆಳಮಧ್ಯಮ ಶ್ರೇಣಿ ಸೂಚ್ಯಂಕದಲ್ಲಿ ಸ್ಥಾನ ಪಡೆದಿವೆ.

ಇದು ಮಾರ್ಚ್‌ 24 ರಿಂದ ಜಾರಿಯಾಗಲಿದೆ.

ವಾರದ ವಿಶೇಷ
ಸಂವೇದಿ ಸೂಚ್ಯಂಕವು 22 ಸಾವಿರ ಗಡಿ ದಾಟಿದೆ. ಬ್ಯಾಂಕೆಕ್‌್ಸ ಒಂದೊಂದು ದಿನ ಐದು ಆರು ನೂರು ಅಂಶಗಳಷ್ಟು ಏರಿಳಿತ ಕಾಣುತ್ತಿದೆ. ಅದೇ ರೀತಿ ಐಟಿ.ಟೆಕ್‌ ಸೂಚ್ಯಂಕಗಳು, ಫಾರ್ಮಾ ವಲಯದ ಸೂಚ್ಯಂಕಗಳು ಪಾದರ­ಸದಂತೆ ಏರಿಕೆ ಇಳಿಕೆಗಳನ್ನು ಅಸಹಜ ರೀತಿಯಲ್ಲಿ ಪ್ರದರ್ಶಿಸುತ್ತಿವೆ. ಇಂತಹ ವೇಗದ ಏರಿಕೆ ಇಳಿಕೆಗಳು ಉಳಿತಾಯ, ಹೂಡಿಕೆ ಭಾವನೆಗಳುಳ್ಳ  ಸಣ್ಣ ಹೂಡಿಕೆದಾರರನ್ನು ಷೇರುಪೇಟೆಯಿಂದ ದೂರ ತಳ್ಳುತ್ತಿದೆ.

ಷೇರುಪೇಟೆಯಲ್ಲಿ ಹೂಡಿಕೆ ಸಾಧ್ಯವಿಲ್ಲದಿದ್ದರೆ ಮ್ಯುಚುವಲ್‌ ಫಂಡ್‌ ಮಾರ್ಗದಲ್ಲಿ ಹೂಡಿಕೆ ಮಾಡಿ ಎಂಬುದು ಸಾಮಾನ್ಯ ಸಲಹೆಯಾದರೂ ಅಲ್ಲಿಯೂ ಯಾವ ರೀತಿ ಹೂಡಿಕೆ ಮಾಡ­ಬೇಕು ಎಂಬುದರ ಸಂಪೂರ್ಣ ಅರಿವಿರಬೇಕು. ಮ್ಯೂಚುವಲ್‌ ಫಂಡ್‌­ಸಂಸ್ಥೆಗಳು ಷೇರುಪೇಟೆ­ಯಲ್ಲಿ ಸ್ವಲ್ಪ ಏರಿಕೆ ಕಂಡಾಕ್ಷಣ ಮಾರಾಟಕ್ಕೆ ಮುಂದಾಗುತ್ತವೆ.

ADVERTISEMENT

   ನಾವು ಈಗಿನ ದಿನಗಳಲ್ಲಿ ಸಂಪೂರ್ಣವಾಗಿ ವಿದೇಶಿ ವಿತ್ತೀಯ ಸಂಸ್ಥೆಗಳ ಚಟುವಟಿಕೆಯನ್ನೇ  ಅವಲಂಬಿಸುವ ಪರಿಸ್ಥಿತಿ ನಿರ್ಮಾ­ಣವಾಗಿದೆ. ಮ್ಯೂಚುವಲ್‌ ಫಂಡ್‌ಗಳು ಷೇರು ಪೇಟೆಗಳಲ್ಲಿ ಹೆಚ್ಚು ತೊಡಗಿಸದೆ, ಸಾಲಪತ್ರಗಳತ್ತ ಹೆಚ್ಚು ಒಲವು ತೋರು­ತ್ತಿವೆ. ಇದರ ಹಿಂದೆ ಅಡಕವಾಗಿರುವ ಪ್ರಮುಖ ಅಂಶವೆಂದರೆ 2008ರಲ್ಲಿ ಉಂಟಾಗಿದ್ದ ತೇಜಿ ವಾತಾವರಣದಲ್ಲಿ ಸಂವೇದಿ ಸೂಚ್ಯಂಕ 21,200 ಅಂಶ  ತಲುಪಿತ್ತು.

ಇದರೊಂದಿಗೆ ಮಧ್ಯಮ ಶ್ರೇಣಿ ಸೂಚ್ಯಂಕವು 10,245 ಅಂಶ, ಕೆಳಮಧ್ಯಮ ಶ್ರೇಣಿ ಸೂಚ್ಯಂಕವು 14,239 ಅಂಶ ದಾಖಲೆ  ಏರಿಕೆ ಕಂಡಿದ್ದವು. ಆ ಸಂದರ್ಭದಲ್ಲಿ ಹೆಚ್ಚಿನ ಸಂಸ್ಥೆಗಳು ಹಣವನ್ನು ಮಧ್ಯಮ ಮತ್ತು ಕೆಳಮಧ್ಯಮ ಶ್ರೇಣಿಗಳ ಷೇರುಗಳಲ್ಲಿ ತೊಡಗಿಸಿದವು. ನಂತರ ಉಂಟಾದ ಭಾರಿ ಕುಸಿತದ ಕಾರಣ ಕೇವಲ ಹದಿ­ನಾಲ್ಕು ತಿಂಗಳಲ್ಲಿ ಸಂವೇದಿ ಸೂಚ್ಯಂಕವು ಹತ್ತು ಸಾವಿರದೊಳಗೆ ಕುಸಿದರೆ ಮಧ್ಯಮ ಶ್ರೇಣಿ ಸೂಚ್ಯಂಕ 10245ರ ಗರಿಷ್ಠದಿಂದ ಕೇವಲ 2547 ಅಂಶಕ್ಕೆ ಇಳಿಯಿತು.

  ಕೆಳಮಧ್ಯಮ ಶ್ರೇಣಿ ಸೂಚ್ಯಂಕ 14,239 ಅಂಶಗಳಿಂ 2864 ಅಂಶಗಳಿಗೆ ಕುಸಿದು ಹೂಡಿಕೆದಾರರ ಸಂಪತ್ತನ್ನು ದೊಡ್ಡ ಪ್ರಮಾಣದಲ್ಲಿ ಕರಗಿಸಿತು. 2008ರಲ್ಲಿ  ಮುಂಬೈ ಷೇರು ವಿನಿಮಯ ಕೇಂದ್ರದ ವಾರ್ಷಿಕ ವಹಿವಾಟು ₨15.78 ಲಕ್ಷ ಕೋಟಿ­ಯಷ್ಟಿತ್ತು, ಅಲ್ಲಿಂದ  2013–14ರ ವಾರ್ಷಿಕ ವಹಿವಾಟು ₨4.51ಲಕ್ಷ ಕೋಟಿಗೆ ಕುಸಿದಿದೆ. ಇದಕ್ಕೆ ಮುಖ್ಯ ಕಾರಣ ಅರಿಯದೆ, ಸೂಕ್ತ ವಿಶ್ಲೇಷಣೆ ಇಲ್ಲದೆ, ಅರ್ಹತೆ ಎಂಬ ಮಾನದಂಡ ಉಪಯೋಗಿಸದೆ ಹೂಡಿಕೆ ಮಾಡುವ ಚಟ ಎನ್ನಬಹುದು.

ಕೇವಲ ಪೇಟೆಯ ದರಗಳನ್ನು, ಶಿಫಾರಸುಗಳನ್ನಾಧರಿಸಿ ಹೂಡಿಕೆ ಮಾಡದೆ, ಅಗ್ರಮಾನ್ಯ ಕಂಪೆನಿ, ಹೆಚ್ಚಿನ ಬಂಡವಾಳದ, ಉತ್ತಮ ಸಾಧನೆ, ಹೂಡಿಕೆದಾರ ಸ್ನೇಹಿ ಕಂಪೆನಿಗಳಲ್ಲಿ ಹೂಡಿಕೆ ಮಾಡಿದಲ್ಲಿ ಪೇಟೆಯೂ ಅಪಾರವಾದ ಅವಕಾಶ ಕಲ್ಪಿಸಿ ಕೊಡುತ್ತಿದೆ.

ಮಾರುತಿ ಸುಜುಕಿಯ ಇತ್ತೀಚಿನ  ಏರಿಳಿತ, ಪ್ರಮುಖ ಬ್ಯಾಂಕಿಂಗ್‌ ಕಂಪೆನಿ­ಗಳಲ್ಲಿನ ಏರಿಳಿತ, ಫಾರ್ಮಾ ಕಂಪೆನಿ­ಗಳಲ್ಲಿನ ಏರುಪೇರುಗಳನ್ನು ನಮ್ಮದೇ ಆದ ಸುರಕ್ಷಿತ ವಹಿವಾಟು ವಿಧ ರಚಿಸಿ­ಕೊಂಡು ಪೇಟೆ ನೀಡುವ ಅವಕಾಶದ ಲಾಭ ಪಡೆಯಬಹುದು. ಅವಧಿಯ ಬಗ್ಗೆ ಚಿಂತಿಸದೆ ಅವಕಾಶದ ಬಗ್ಗೆ ಒಲವು ಮೂಡಿಸಿಕೊಂಡು ಸಕ್ರಮ ಚಟುವಟಿಕೆ­ಯಿಂದ ಷೇರುಪೇಟೆಯಲ್ಲಿ ಲಾಭಗಳಿಸು­ವುದು ಈಗಲೂ ಸಾಧ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.