ADVERTISEMENT

ಪೇಟೆಯಲ್ಲಿ ಮತ್ತೆ ಕರಡಿ ಕುಣಿತ

ಕೆ.ಜಿ ಕೃಪಾಲ್
Published 4 ಆಗಸ್ಟ್ 2013, 19:59 IST
Last Updated 4 ಆಗಸ್ಟ್ 2013, 19:59 IST

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಕಳೆದವಾರ ಸುಮಾರು 584 ಅಂಶಗಳಷ್ಟು ಭಾರಿ ಕುಸಿತದಿಂದ 19,164 ಅಂಶಗಳಲ್ಲಿ ಅಂತ್ಯ ಕಂಡಿದೆ. ಆದರೆ, ಕೆಲವು ಕಂಪೆನಿಗಳ ಷೇರುಗಳನ್ನು ಪರಿಶೀಲಿಸಿದಾಗ ಪೇಟೆಯು ಎಷ್ಟು ತ್ವರಿತ-ಹರಿತ ಎಂಬುದು ಅರಿವಾಗುತ್ತದೆ.

2010ರ ಜೂನ್‌ನಲ್ಲಿ ಇಮಾಮಿ ಇನ್‌ಫ್ರಾಸ್ಟ್ರಕ್ಚರ್ ಕಂಪೆನಿಯು ಲೀಸ್ಟ್ ಆದ ಮೊದಲನೆ ದಿನ ಕಂಡಂತಹ ರೂ.599 ರಿಂದ ರೂ.86 ರವರೆಗೆ ಕುಸಿತಕ್ಕೆ ಸಮನಾಗಿರದೆ ಅದಕ್ಕೆ ಹೋಲುವ ರೀತಿ ಕುಸಿತವನ್ನು ಗುರುವಾರದಂದು ನೋಡುವಂತಾಯಿತು. ಎ ಗುಂಪಿನ ಫೈನಾನ್ಶಿಯಲ್ ಟೆಕ್ನಾಲಜೀಸ್ ಗುರುವಾರ ರೂ.542ರ ಸಮೀಪದಿಂದ ಶುಕ್ರವಾರ ರೂ.105.50 ವರೆಗೂ ಕುಸಿದು ಅಂತಿಮವಾಗಿ ರೂ.15ರ ಸಮೀಪ ಅಂತ್ಯಗೊಂಡಿದ್ದು ಆತಂಕಮಯವಾಗಿದೆ.

ಇದರೊಂದಿಗೆ ಸಮೂಹ ಕಂಪೆನಿಯಾದ ಮಲ್ಟಿ ಕಮ್ಮಾಡಿಟೀಸ್ ಎಕ್ಸ್‌ಚೇಂಜ್ ಸಹ ಎರಡು ದಿನವೂ ಶೇ 20 ರಷ್ಟು ಕುಸಿತಕ್ಕೊಳಗಾಗಿದೆ. ಇದರ ಹಿಂದೆ ನ್ಯಾಶನಲ್ ಸ್ಪಾಟ್ ಎಕ್ಸ್‌ಚೇಂಜ್‌ನಲ್ಲಿನ ಗೊಂದಲವು ಕಾರಣವಾಗಿದೆ. ಏಷಿಯನ್ ಪೇಂಟ್ಸ್ ಕಂಪೆನಿ ಮುಖಬೆಲೆ ಸೀಳಿಕೆಯಿಂದ ಕುಸಿತ ಕಂಡರೆ ಸನ್ ಫಾರ್ಮ ಬೋನಸ್ ನಂತರದ ಚಟುವಟಿಕೆಯಲ್ಲಿ ಕುಸಿತ ಕಂಡಿತು.

ರೂಪಾಯಿ ಮೌಲ್ಯದಲ್ಲುಂಟಾದ ಹೆಚ್ಚಿನ ಕುಸಿತವು ಷೇರುಪೇಟೆಯಲ್ಲಿ ಕರಡಿ ಕುಣಿತ ಮೂಡಿಸಿತು.  ಹಣಕಾಸಿನ ಒತ್ತಡದ ಕಾರಣ ಬ್ಯಾಂಕಿಂಗ್ ಷೇರುಗಳು ಹೆಚ್ಚಿನ ಕುಸಿತಕ್ಕೊಳಗಾಗಿವೆ. ಹ್ಯಾವೆಲ್ಸ್ ಇಂಡಿಯಾ ರೂ. 765ರ ಹಂತದಿಂದ ರೂ. 617 ರವರೆಗೂ, ಫಲಿತಾಂಶ ನಿರೀಕ್ಷಿತ ಮಟ್ಟದಲ್ಲಿಲ್ಲವೆಂಬ ಕಾರಣಕ್ಕೆ, ಕುಸಿದಿದೆ.

ಸಂವೇದಿ ಸೂಚ್ಯಂಕದ ಜತೆಗೆ ಮಧ್ಯಮಶ್ರೇಣಿ ಸೂಚ್ಯಂಕವು 350 ಅಂಶಗಳಷ್ಟು, ಕೆಳ ಮಧ್ಯಮಶ್ರೇಣಿ ಸೂಚ್ಯಂಕವು 338 ಅಂಶಗಳಷ್ಟು ಕುಸಿತ ಕಂಡವು. ವಿದೇಶಿ ವಿತ್ತೀಯ ಸಂಸ್ಥೆಗಳು ಒಟ್ಟಾರೆ ರೂ. 629 ಕೋಟಿ ಹೂಡಿಕೆ ಮಾಡಿದರೆ ಸ್ಥಳೀಯ ಸಂಸ್ಥೆಗಳು ಒಟ್ಟು ರೂ. 1,278 ಕೋಟಿ ಮೌಲ್ಯದ ಷೇರು  ಮಾರಾಟ ಮಾಡಿವೆ. ಈ ಕಾರಣದಿಂದ ಷೇರುಪೇಟೆ ಬಂಡವಾಳ ಮೌಲ್ಯ ರೂ. 64.34 ಕೋಟಿಯಿಂದ ರೂ. 61.36 ಲಕ್ಷ ಕೋಟಿಗೆ ಕುಸಿತ ಕಂಡಿದೆ.

ಲಾಭಾಂಶ ವಿಚಾರ
ಕ್ಲಾರಿಯಂಟ್ ಕೆಮಿಕಲ್ಸ್ ಶೇ 100, ಕ್ಯಾಸ್ಟ್ರಾಲ್ ಇಂಡಿಯಾ ಶೇ 35, ಫೈನಾನ್ಶಿಯಲ್ ಟೆಕ್ನಾಲಜೀಸ್ ಶೇ 100 (ಮು.ಬೆ. ರೂ. 2), ಜಿ.ಎಂ.ಎಂ. ಫೌಡ್ಲರ್ ಶೇ 35 (ಮು.ಬೆ. ರೂ. 2), ಗಟಿ ಶೇ 30 (ಮು.ಬೆ. ರೂ. 2), ಗ್ಲೆನ್‌ಮಾರ್ಕ್ ಫಾರ್ಮ ಶೇ 200 (ಮು.ಬೆ. ರೂ.1), ಹೆಚ್.ಸಿ.ಎಲ್. ಟೆಕ್ನಾಲಜೀಸ್ ಶೇ 300 (ಮು.ಬೆ. ರೂ. 2), ಮ್ಯಾಕ್ ಚಾರ್ಲ್ಸ್ ಶೇ 60, ಆರ್. ಸಿಸ್ಟಮ್ಸ ಶೇ 25, ಸನೊಫಿ ಇಂಡಿಯಾ ಶೇ 100, ಸನ್‌ಟಿವಿ ಶೇ 45 (ಮು.ಬೆ. ರೂ. 5).

ಬೋನಸ್ ಷೇರಿನ ವಿಚಾರ
* ರ‌್ಯಾಪಿಕಟ್ ಕಾರ್ಬೈಡ್ ಕಂಪೆನಿಯು 3:2ರ ಅನುಪಾತದ ಬೋನಸ್ ಷೇರು ಪ್ರಕಟಿಸಿದೆ.
* ಎ.ವಿ.ಟಿ. ನ್ಯಾಚುರಲ್ ಪ್ರಾಡಕ್ಟ್ಸ್ ಕಂಪೆನಿಯು 1:1ರ ಅನುಪಾತದ ಬೋನಸ್ ಷೇರು ಪ್ರಕಟಿಸಿದೆ.
* ಟಾಟಾ ಟೆಲಿಕಮ್ಯುನಿಕೇಷನ್ಸ್ ಕಂಪೆನಿಯು ವಿತರಿಸಲಿರುವ 2:15ರ ಅನುಪಾತದ ಬೋನಸ್ ಷೇರಿಗೆ 8ನೇ ಆಗಸ್ಟ್ ನಿಗದಿತ ದಿನವಾಗಿದೆ.

ಮುಖಬೆಲೆ ಸೀಳಿಕೆ ವಿಚಾರ
* ರಿಲ್ಯಾಕ್ಸೊ ಫುಟ್‌ವೇರ್ ಕಂಪೆನಿಯು ಷೇರಿನ ಮುಖಬೆಲೆಯನ್ನು ರೂ. 5 ರಿಂದ ರೂ. 1ಕ್ಕೆ ಸೀಳಲು ನಿರ್ಧರಿಸಿದೆ.
* ಅರಿಸೆಂಟ್ ಇನ್‌ಫ್ರಾ ಕಂಪೆನಿಯು ರೂ. 10ರ ಮುಖಬೆಲೆ ಷೇರನ್ನು ರೂ. 5ಕ್ಕೆ ಸೀಳಲು ನಿರ್ಧರಿಸಿದೆ.
* ವರ್ಚುಯಲ್ ಗ್ಲೋಬಲ್ ಎಜುಕೇಷನ್ ಲಿ. ಕಂಪೆನಿಯು ರೂ. 10ರ ಮುಖಬೆಲೆ ಷೇರನ್ನು ರೂ. 1ಕ್ಕೆ ಸೀಳಲಿದೆ.

ಹಕ್ಕಿನ ಷೇರಿನ ವಿಚಾರ
ಟ್ಯಾನ್‌ಫ್ಯಾಕ್ ಇಂಡಸ್ಟ್ರೀಸ್ ಕಂಪೆನಿಯು ರೂ. 14.96 ಕೋಟಿ ಮೌಲ್ಯದವರೆಗೂ ಹಕ್ಕಿನ ಷೇರನ್ನು ಮುಖಬೆಲೆಯಲ್ಲಿ ವಿತರಿಸಲು ನಿರ್ಧರಿಸಿದೆ.

ಮುಖಬೆಲೆ ಕ್ರೋಢೀಕರಣ
ಸುಜನಾ ಟವರ್ಸ್ ಲಿ. ಕಂಪೆನಿಯು ಸದ್ಯ ಪೆನ್ನಿಸ್ಟಾಕ್ ಆಗಿದ್ದು ಅದರ ರೂ.  10ರ ಮುಖಬೆಲೆಯ 10 ಷೇರನ್ನು ಕ್ರೋಡೀಕರಿಸಿ ರೂ. 10ರ ಮುಖಬೆಲೆ ಷೇರನ್ನಾಗಿ ಪರಿವರ್ತಿಸಲು ಕಂಪೆನಿ ನಿರ್ಧರಿಸಿದೆ ಇದಕ್ಕಾಗಿ ಆಗಸ್ಟ್ 10ನ್ನು ನಿಗದಿತ ದಿನವನ್ನಾಗಿ ಪ್ರಕಟಿಸಿದೆ.

ಸಾಲ ಪುನರ್ ರಚನೆ
ಹನಂಗ್ ಟಾಯ್ಸ ಟೆಕ್ಸ್‌ಟೈಲ್ಸ್ ಕಂಪೆನಿಯು ಕಾರ್ಪೊರೇಟ್ ಸಾಲ ಪುನರ್ ರಚನೆಗೆ ಮುಂದಾದ ಕಾರಣ ಷೇರಿನ ಬೆಲೆ ವಾರ್ಷಿಕ ಕನಿಷ್ಠ ಬೆಲೆಗೆ ಕುಸಿದಿದೆ.

ಆಫರ್ ಫಾರ್ ಸೇಲ್
* ನ್ಯಾಷನಲ್ ಫರ್ಟಿಲೈಸರ್ಸ್ ಲಿ. ಕಂಪೆನಿಯಲ್ಲಿನ 3,74,79,940 ಷೇರುಗಳನ್ನು ಅವರ ಪ್ರವರ್ತಕರಾದ ರಾಷ್ಟ್ರಾಧ್ಯಕ್ಷರು ಪ್ರತಿ ಷೇರಿಗೆ ರೂ. 27 ರಂತೆ ವಿನಿಮಯ ಕೇಂದ್ರದ ವಿಶೇಷ ಗವಾಕ್ಷಿಯಲ್ಲಿ 31 ರಂದು ಮಾರಾಟ ಮಾಡಿದ್ದಾರೆ.

* ನೈವೇಲಿ ಲಿಗ್ನೈಟ್ ಕಾರ್ಪೊರೇಷನ್ ಕಂಪೆನಿಯ ಪ್ರವರ್ತಕರಾದ ರಾಷ್ಟ್ರಾಧ್ಯಕ್ಷರು 5,97.01,260 ಷೇರನ್ನು ರೂ. 58 ರಂತೆ ಆಗಸ್ಟ್ 2 ರಂದು ಆಫರ್ ಫಾರ್ ಸೇಲ್ ಗವಾಕ್ಷಿ ಮೂಲಕ ಮಾರಾಟ ಮಾಡಿದ್ದಾರೆ.

* ಸ್ಟೇಟ್ ಟ್ರೇಡಿಂಗ್ ಕಾರ್ಪೊರೇಷನ್ ಕಂಪೆನಿಯ ಪ್ರವರ್ತಕರಾದ ರಾಷ್ಟ್ರಾಧ್ಯಕ್ಷರು 6,13,600 ಷೇರುಗಳನ್ನು ಪ್ರತಿ ಷೇರಿಗೆ ರೂ.  74 ರಂತೆ ಈ ವಿಶೇಷ ಗವಾಕ್ಷಿಯ ಮೂಲಕ ಆಗಸ್ಟ್ 2 ರಂದು ಮಾರಾಟ ಮಾಡಿದ್ದಾರೆ.

* ಇಂಡಿಯಾ ಟೂರಿಸಂ ಡೆವೆಲಪ್‌ಮೆಂಟ್ ಕಾರ್ಪೊರೇಷನ್ ಕಂಪೆನಿಯ 52,88,470 ಷೇರುಗಳನ್ನು ಪ್ರವರ್ತಕರಾದ ರಾಷ್ಟ್ರಾಧ್ಯಕ್ಷರು 2ನೇ ಆಗಸ್ಟ್ ರಂದು ಪ್ರತಿ ಷೇರಿಗೆ ರೂ. 70 ರಂತೆ 2-ಎಫ್‌ಎಸ್ ಗವಾಕ್ಷಿ ಮೂಲಕ ಮಾರಾಟ ಮಾಡಿದ್ದಾರೆ.

* ಕೇಂದ್ರ ಮಂತ್ರಿಮಂಡಲವು ಸಾರ್ವಜನಿಕ ತೈಲ ಕಂಪೆನಿ ಇಂಡಿಯನ್ ಆಯಿಲ್ ಕಾರ್ಪೊರೇಷನ್‌ನಲ್ಲಿನ ಶೇ 10 ರಷ್ಟರ ಭಾಗಿತ್ವವನ್ನು ಮಾರಾಟ ಮಾಡುವ ಮೂಲಕ ರೂ. 3,750 ಕೋಟಿ ಸಂಗ್ರಹಣೆಗೆ ಮುಂದಾಗಿದೆ. ಈ ಕಂಪೆನಿಯ ಷೇರುಪೇಟೆ ಬಂಡವಾಳವು ರೂ.  47,527 ಕೋಟಿಯಷ್ಟಿದೆ. ಆಗಸ್ಟ್ ಒಂದರಂದು.

ಯು.ಎಸ್.ಎಫ್.ಡಿ.ಎ. ಪ್ರಭಾವ
ಭಾರತದಲ್ಲಿನ ಅಗ್ರಮಾನ್ಯ ಫಾರ್ಮಾ ಕಂಪೆನಿಗಳು ತಮ್ಮ ಉತ್ಪನ್ನಗಳನ್ನು ಅಮೇರಿಕಾಕ್ಕೆ ಸರಬರಾಜು ಮಾಡುತ್ತಿದೆ. ಅಲ್ಲಿನ ಔಷಧ ನಿಯಂತ್ರಕ ಸಂಸ್ಥೆ ನಿರ್ಧಾರಗಳು ಇತ್ತೀಚೆಗೆ ಹೆಚ್ಚಿನ ಪ್ರಭಾವಿಯುತವಾಗಿವೆ. ಹಿಂದೆ ಅರವಿಂದೋ ಫಾರ್ಮಾ ಎಫ್.ಡಿ.ಎ. ಕ್ರಮದಿಂದ ಹೆಚ್ಚಿನ ಕುಸಿತ ಕಂಡಿತು. ನಂತರ ರ‌್ಯಾನಬಾಕ್ಸಿ ಲ್ಯಾಬೊರೆಟರೀಸ್ ಎಫ್.ಡಿ.ಎ. ಕ್ರಮದಿಂದ ಮೇ ತಿಂಗಳಲ್ಲಿ ರೂ. 470 ರಲ್ಲಿದ್ದ ಷೇರು ಈಗ ರೂ. 260ರ ಸುಮಾರಿಗೆ ಕುಸಿಯುವಂತೆ ಮಾಡಿತು. ವೊಕಾರ್ಡ್ ಲಿ. ಎಫ್.ಡಿ.ಎ. ಎಚ್ಚರಿಕೆಯ ಕಾರಣ ಮೇ ತಿಂಗಳಿನ ರೂ.  1900ರ ಹಂತದಿಂದ ರೂ.444ರ ವರೆಗೂ ಕುಸಿದಿದೆ.

ಈಗ ಸ್ಟ್ರೈಡ್ ಆರ್ಕೊಲ್ಯಾಬ್ ಕಂಪೆನಿಯು ಯುಎಸ್‌ಎಫ್‌ಡಿಎ ತನಿಖೆಗೆ, ಕಳೆದ ಜೂನ್ ತಿಂಗಳಲ್ಲಿ, ಒಳಪಟ್ಟಿದ್ದು ವೀಕ್ಷಣಾ ಪತ್ರವನ್ನು ಪಡೆದಿದೆ. ಷೇರು ಬೆಲೆಯು ಕಳೆದ ಒಂದು ತಿಂಗಳಲ್ಲಿ ರೂ.  890ರ ಸಮೀಪದಿಂದ ರೂ. 552ರ ವರೆಗೂ ಕುಸಿದು ಈಗ 694 ರೂ. ಗಳಲ್ಲಿದೆ. ಇದು ಎಫ್.ಡಿ.ಎ. ಕ್ರಮದಿಂದಾಗುತ್ತಿರುವ ಬಂಡವಾಳ ಕೊರೆತದ ಗಾತ್ರ ತಿಳಿಸುತ್ತದೆ.

ವಾರದ ವಿಶೇಷ
ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಸಾಲ ನೀತಿಯನ್ನು ಪ್ರಕಟಿಸಿದ ನಂತರ ಷೇರುಪೇಟೆಗಳು ಕುಸಿತ ಕಂಡವು. ಸಾಲ ನೀತಿಯಲ್ಲಿ ಯಾವುದೇ ಬದಲಾವಣೆಗಳು, ನಿರೀಕ್ಷೆಗನುಗುಣವಾಗಿ, ಇರಲಿಲ್ಲವಾದರೂ ಪೇಟೆಗಳು ಕುಸಿದವು. ಬ್ಯಾಂಕಿಂಗ್ ವಲಯದಲ್ಲಿ ಖಾಸಗಿ ವಲಯದ ಐಸಿಐಸಿಐ ಬ್ಯಾಂಕ್, ಕರ್ನಾಟಕ ಬ್ಯಾಂಕ್, ಐ.ಎನ್.ಜಿ. ವೈಶ್ಯ ಹಾಗೂ ಸರ್ಕಾರಿ ಸ್ವಾಮ್ಯದ ವಿಜಯ ಬ್ಯಾಂಕ್, ಯೂನಿಯನ್ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಶನಲ್ ಬ್ಯಾಂಕುಗಳು ಉತ್ತಮ ಫಲಿತಾಂಶ ಪ್ರಕಟಿಸಿದರೂ ಕುಸಿತ ಕಂಡಿವೆ.

ವಾರ್ಷಿಕ ಕನಿಷ್ಟ ತಲುಪಿದ ದಾಖಲೆ ನಿರ್ಮಿಸಿವೆ. ಫಲಿತಾಂಶ ಪ್ರಕಟವಾದ ನಂತರ ಬಂದ ವಿಶ್ಲೇಷಣೆಗಳಲ್ಲಿ ಈ ಬ್ಯಾಂಕ್‌ಗಳು ಆರೋಗ್ಯಕರ ಆಸ್ತಿ ಹೊಂದಿಲ್ಲವೆಂದು ತಿಳಿಸಲಾಗಿದೆ. ದೇಶದಲ್ಲಿನ ಆರ್ಥಿಕತೆಯೇ ಹಿಂಜರಿತದಡಿಯಲ್ಲಿ ನಲುಗಿರುವಾಗ ಉತ್ತಮ ಗುಣಮಟ್ಟವನ್ನು ನಿರೀಕ್ಷಿಸುವುದಾದರೂ ಹೇಗೆ? ಇದು ಕೇವಲ ನೆಪ ಮಾತ್ರ.

ಅಮೆರಿಕದ ಎಫ್.ಡಿ.ಎ. ಯಿಂದ ಎಚ್ಚರಿಕೆಯ ಸರಮಾಲೆಯು ರಾನಬಾಕ್ಸಿ, ವೊಕಾರ್ಡ್, ಸ್ಟ್ರೈಡ್ಸ್ ಆರ್ಕೊಲ್ಯಾಬ್‌ಗಳ ಬೆಲೆ ಕುಸಿಯುವಂತಾಗಿದೆ. ಗುರುವಾರದಂದು ನ್ಯಾಷನಲ್ ಸ್ಪಾಟ್ ಎಕ್ಸ್‌ಚೇಂಜ್‌ನ ಗೊಂದಲದಿಂದ ಅದರ ಪ್ರವರ್ತಕ ಸಂಸ್ಥೆ ಫೈನಾನ್ಶಿಯಲ್ ಟೆಕ್ನಾಲಜಿ ಷೇರನ್ನು ಸುಮಾರು ಶೇ 66 ರಷ್ಟು ಕುಸಿಯುವಂತೆ ಮಾಡಲಾಯಿತು.

ಈ ಕಂಪೆನಿಯ ಷೇರಿನ ಬೆಲೆಯು ಬುಧವಾರದಂದು ರೂ. 542 ರಲ್ಲಿದ್ದು ಗುರುವಾರ ರೂ. 180.35ರ ಕನಿಷ್ಠಕ್ಕೆ ಕುಸಿಯುವಂತಹ ಶಿಕ್ಷೆಗೆ ಗುರಿಯಾಯಿತು. ಇದೇ ಸಮೂಹದ ಎಂ.ಸಿ.ಎಕ್ಸ್ ಕಂಪೆನಿ ಶೇ 20ಕ್ಕೂ ಹಾನಿಗೊಳಗಾಯಿತು. ಈ ಸಂದರ್ಭದಲ್ಲಿ ರಿಲೈಯನ್ಸ್ ಗ್ರೋತ್ ಫಂಡ್ 4.1 ಲಕ್ಷ ಫೈನಾನ್ಶಿಯಲ್ ಟೆಕ್ನಾಲಜಿ ಷೇರನ್ನು ರೂ.212ರ ಸಮೀಪ ಮಾರಾಟ ಮಾಡಿ ಪರಿಸ್ಥಿತಿ ಮತ್ತಷ್ಟು ಹದಗೆಡಿಸಿದೆ. ಬೆಳವಣಿಗೆ ಕುಂಟಿತವಾಗಿ, ಆರ್ಥಿಕ ಬಿಗಿತ ಹೆಚ್ಚಾಗುತ್ತಿರುವ ಕಾರಣ ರಿಯಲ್ ಎಸ್ಟೇಟ್ ವಲಯದ ಕಂಪೆನಿಗಳಾದ ಎಂ.ಆರ್.ಬಿ. ಇನ್‌ಫ್ರಾಸ್ಟ್ರಕ್ಚರ್ ಡಿ.ಎಲ್.ಎಫ್. ಇಂಡಿಯಾ ಬುಲ್ ರಿಯಲ್ ಎಸ್ಟೇಟ್, ಮುಂತಾದವು ಅಗಾದವಾದ ಕುಸಿತಕ್ಕೊಳಗಾಗಿವೆ.

ಈ ಸಂದರ್ಭದಲ್ಲಿ ಗುರುವಾರದಂದು ಮೆರ‌್ರಿಲ್ ಲಿಂಚ್ ಕ್ಯಾಪಿಟಲ್ ಮಾರ್ಕೆಟ್ 30.32 ಲಕ್ಷ ಐ.ಆರ್.ಬಿ. ಇನ್‌ಫ್ರಾ ಷೇರನ್ನು ಫೊಂಡಿಟಾಲಿಯಾ ಈಕ್ವಿಟಿ ಇಂಡಿಯಾಗೆ ಮಾರಾಟ ಮಾಡಿದೆ. ಮೂಲ ಸೌಕರ್ಯ ವಲಯದ ಜಯಪ್ರಕಾಶ್ ಅಸೋಸಿಯೇಟ್ಸ್ ಸಮೂಹದ ಕಂಪೆನಿಗಳು, ಲ್ಯಾಂಕೋ ಇನ್‌ಫ್ರಾ, ಜಿ.ಎಂ.ಆರ್. ಇನ್‌ಫ್ರಾ, ಮುಂತಾದವು `ಪೆನ್ನಿ' ಸ್ಟಾಕ್ಸ್ ಪಟ್ಟಕ್ಕೆ ಸಮೀಪವಾಗುತ್ತಿವೆ.

ಅದರಂತೆ ಸಾರ್ವಜನಿಕ ವಲಯದ ಎಂ.ಎಂ.ಟಿ.ಸಿ., ಹಿಂದೂಸ್ಥಾನ್ ಕಾಪರ್, ನ್ಯಾಶನಲ್ ಅಲ್ಯುಮಿನಿಯಂ, ಎನ್.ಎಚ್.ಪಿ.ಸಿ., ಮುಂತಾದವು ಪೆನ್ನಿಸ್ಟಾಕ್ ಪಟ್ಟ ಪಡೆಯುವತ್ತ ಸಾಗುತ್ತಿವೆ. ರೂಪಾಯಿಯ ಬೆಲೆ ಕುಸಿತದ ಕಾರಣ ಐ ಟಿ ದಿಗ್ಗಜ ಕಂಪೆನಿಗಳಾದ ಟಿ.ಸಿ.ಎಸ್. ಇನ್‌ಫೋಸಿಸ್, ವಿಪ್ರೊ, ಎಚ್.ಸಿ.ಎಲ್. ಟೆಕ್, ಟೆಕ್ ಮಹೇಂದ್ರ ಕಂಪೆನಿಗಳ ಮಾತ್ರ ಸಂಭ್ರಮಿಸುತ್ತಿವೆ. ಹಿಂದೂಸ್ತಾನ್ ಯುನಿಲೀವರ್, ಐಟಿಸಿಗಳು ಸ್ವಲ್ಪ ಇಳಿಕೆ ಕಂಡಿವೆ.

ಈ ಸಂದರ್ಭದಲ್ಲಿ ಸರ್ಕಾರ ವಿದೇಶಿ ನೇರ ಬಂಡವಾಳಕ್ಕೆ ಮತ್ತೊಮ್ಮೆ ರತ್ನಗಂಬಳಿ ಹಾಸಿ ಸುಧಾರಣಾ ಕ್ರಮಗಳಿಗೆ ಮುಂದಾಗಿವೆ. ಈ ಕ್ರಮವು ಸರಿಯಾಗಿದೆ. ಆದರೆ ಇದರ ಜೊತೆ ಜೊತೆಗೆ ಸ್ಥಳೀಯವಾಗಿ ಆರ್ಥಿಕ ಭದ್ರತೆ, ಏಳ್ಗೆಗೆ ಮಹತ್ವ ನೀಡುವುದು ಅತ್ಯವಶ್ಯವಾಗಿದೆ.  ಕಾರ್ಪೊರೇಟ್ ವಲಯದಲ್ಲಾಗುತ್ತಿರುವ ಮುಗ್ಗಟ್ಟಿನ ಬಗ್ಗೆ ಸೂಕ್ತ ನಿರ್ಧಾರ ಅತ್ಯಗತ್ಯ.

ಗ್ರಾಹಕರಲ್ಲಿ ಕೊಳ್ಳುವ ಶಕ್ತಿ ವೃದ್ಧಿಗೆ ಕ್ರಮ ಇಂದಿನ ಅಗತ್ಯ. ಇದು ಮೂಲಭೂತವಾದ ಅಂಶ ಇದರಿಂದ ಉದ್ಯಮಗಳ ಚಟುವಟಿಕೆಗೆ ಪೂರಕವಾತಾವರಣ ನಿರ್ಮಾಣವಾಗುವುದು, ಕ್ಷೀಣಿಸುತ್ತಿರುವ ಷೇರು ಪೇಟೆಗಳಲ್ಲಿ ಚೈತನ್ಯ ಮೂಡಿಸಲು ಸಣ್ಣ ಹೂಡಿಕೆದಾರರಿಗೆ ಮಾತ್ರ ಅಲ್ಪಕಾಲೀನ ಲಾಭದ ತೆರಿಗೆಯನ್ನು ಈಗಿನ ಶೇ 15ರ ತೆರಿಗೆಯಿಂದ ಶೇ 10ಕ್ಕೆ ಇಳಿಸುವುದು. ನಿಗಧಿತ ಆದಾಯದ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಹಿರಿಯ ನಾಗರಿಕರಾದಿಯಾಗಿ ಆರ್ಥಿಕ ಚೇತರಿಕೆಗೆ ಪಾಲ್ಗೊಳ್ಳುವ ಅವಕಾಶ ಲಭ್ಯವಾಗಿ ಉತ್ತಮ ಫಲಿತಾಂಶಕ್ಕೆ ದಾರಿಯಾಗುವುದು.

ಷೇಟೆಯಲ್ಲಿ ಆಷಾಡದ ಮಂಪರು ಮಾಯವಾಗಿ ಶ್ರಾವಣದ ಸಂಭ್ರಮವು ಎಲ್ಲವನ್ನೂ ಸುಗಮಗೊಳಿಸುವುದೆಂದು ಆಶಿಸೋಣ.
......

* ಲೇಖಕರನ್ನು ಈ ಸಂಖ್ಯೆ ಮೂಲಕ ಸಂಪರ್ಕಿಸಬಹುದು. - 98863 13380 (ಮಧ್ಯಾಹ್ನ 4.30ರ ನಂತರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT