ADVERTISEMENT

ಪೇಟೆಯಲ್ಲಿ ಸ್ಥಿರತೆ ಕಾಣದ ವಹಿವಾಟು

ಕೆ.ಜಿ ಕೃಪಾಲ್
Published 12 ಮಾರ್ಚ್ 2017, 19:30 IST
Last Updated 12 ಮಾರ್ಚ್ 2017, 19:30 IST

ಷೇರುಪೇಟೆಯಲ್ಲಿ ಆರಂಭಿಕ ಷೇರು ವಿತರಣೆಗೆ (ಐಪಿಒ) ಈ ವಾರ ಉತ್ತಮ ಸ್ಪಂದನೆ ದೊರೆತಿದೆ.  

ಮೊದಲು ಮಾಧ್ಯಮ ಕಂಪೆನಿ ಜಾಗರಣ್‌  ಪ್ರಕಾಶನ ಅಂಗ ಸಂಸ್ಥೆ, ರೇಡಿಯೊ ಸಿಟಿ ಎಫ್‌ಎಂನ ಮ್ಯೂಸಿಕ್ ಬ್ರಾಡ್ ಕಾಸ್ಟ್ ಲಿಮಿಟೆಡ್ ಪ್ರತಿ ಷೇರಿಗೆ ₹324 ರಿಂದ ₹333 ರ ಅಂತರದಲ್ಲಿ 104 ಲಕ್ಷ ಷೇರುಗಳಿಗೆ ಉತ್ತಮ ಬೇಡಿಕೆ ದೊರೆತಿದ್ದು, ಸುಮಾರು ನಲವತ್ತು ಪಟ್ಟು ಹೆಚ್ಚು ಹಣ ಸಂಗ್ರಹವಾಗಿದೆ. 

ಹಾಗೆಯೇ  ಡಿ ಮಾರ್ಟ್ ಹೆಸರಿನ ಸರಣಿ ಮಾಲ್ ಸಮೂಹ ಅವೆನ್ಯೂ ಸೂಪರ್ ಮಾರ್ಟ್ಸ್ ಕಂಪೆನಿಯು 443 ಲಕ್ಷ ಷೇರುಗಳನ್ನು ಪ್ರತಿ ಷೇರಿಗೆ ₹295 ರಿಂದ ₹299 ರ ಅಂತರದಲ್ಲಿ ವಿತರಣೆಗೆ ಅತ್ಯುತ್ತಮ ಸ್ಪಂದನೆ ದೊರೆತು ಸುಮಾರು 56 ಪಟ್ಟು ಹೆಚ್ಚು ಸಂಗ್ರಹವಾಗಿರುವುದು ಪೇಟೆಯಲ್ಲಿ ಹರಿದಾಡುತ್ತಿರುವ ಸುಲಭ ಹಣಕ್ಕೆ ಸಾಕ್ಷಿಯಾಗಿದೆ.

ADVERTISEMENT

ಸಾಮಾನ್ಯವಾಗಿ ಮಾರ್ಚ್ ತಿಂಗಳಲ್ಲಿ ಷೇರುಪೇಟೆಯ ಚಟುವಟಿಕೆಯು ನೀರಸಮಯವಾಗಿರುತ್ತದೆ ಎಂಬ ನಂಬಿಕೆ ಸುಳ್ಳಾಗಿದೆ.  ಪೇಟೆಯ ಪ್ರಮುಖ ಸೂಚ್ಯಂಕಗಳು ಉತ್ತಮ ಏರಿಕೆಯಿಂದ ವಿಜೃಂಭಿಸುತ್ತಿವೆ ಎಂದು ಬಾಹ್ಯ ನೋಟಕ್ಕೆ ಕಂಡರೂ ಸೂಚ್ಯಂಕಗಳು ಗರಿಷ್ಠದಲ್ಲಿದ್ದು ಅಸಮತೋಲನೆ  ಬಿಂಬಿಸುತ್ತಿವೆ.  

ಮುಂಬೈ ಷೇರು ವಿನಿಮಯ ಕೇಂದ್ರದ ಹೆಗ್ಗುರುತಾದ ಸಂವೇದಿ ಸೂಚ್ಯಂಕವು   ಒಂದು ತಿಂಗಳಲ್ಲಿ   600 ಅಂಶಗಳ ಏರಿಕೆ ಕಂಡರೆ ಹದಿನೈದು ದಿನಗಳಲ್ಲಿ  ಕೇವಲ 37 ಅಂಶಗಳಷ್ಟು ಮಾತ್ರ  ಏರಿಕೆ ಕಂಡಿದೆ.  ಆದರೆ ವರ್ಷಾಂತ್ಯದ ಕಾರಣ ಹತ್ತಾರು ಹೊಂದಾಣಿಕೆ, ಕೆಲವು ಗಜಗಾತ್ರದ ವಹಿವಾಟು, ಪ್ರವರ್ತಕರಿಂದ ಅವಕಾಶದ ಲಾಭ ಪಡೆಯುವ ಯತ್ನದ ಕಾರಣ ಕೆಲವು ಕಂಪೆನಿಗಳ ಷೇರಿನ ಬೆಲೆಗಳು ಗಗನಕ್ಕೆ ಚಿಮ್ಮಿರುವುದನ್ನು ಕಾಣಬಹುದಾಗಿದೆ. ಪರಿಸ್ಥಿತಿಯನ್ನು  ಗಮನಿಸಿದಾಗ ಪೇಟೆಯು ಗರಿಷ್ಠದಲ್ಲಿದ್ದು ಅಸಮತೋಲನ ಪ್ರದರ್ಶಿಸುತ್ತಿದೆ.  

ಈ ವಾರ ರಿಲಯನ್ಸ್ ಇಂಡಸ್ಟ್ರೀಸ್  ಷೇರಿನ ಬೆಲೆಯೂ ₹1,326 ರ ವಾರ್ಷಿಕ ಗರಿಷ್ಠ ತಲುಪಿ ಸೂಚ್ಯಂಕದ ಏರಿಕೆಗೆ ತನ್ನ ಕೊಡುಗೆ ನೀಡಿದೆ. ಮತ್ತೊಮ್ಮೆ ಟಿಸಿಎಸ್ ಅಥವಾ ಎಚ್‌ಡಿಎಫ್‌ಸಿ, ಎಚ್‌ಡಿಎಫ್‌ಸಿ ಬ್ಯಾಂಕ್, ಲಾರ್ಸನ್ ಅಂಡ್ ಟೋಬ್ರೊ ನಂತಹ ಕಂಪೆನಿಗಳು ಆಗಿಂದಾಗ್ಗೆ  ಏರಿಳಿತಗಳನ್ನು ಪ್ರದರ್ಶಿಸಿ ಸೂಚ್ಯಂಕದ ಮೇಲೆ ಪರಿಣಾಮ ಬೀರಿವೆ.  ಇದು ಮುಂದುವರೆಯುವುದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಅವಕಾಶದ ಉಪಯೋಗ: ಬುಧವಾರದ ಚಟುವಟಿಕೆ ಆರಂಭದ ಕ್ಷಣಗಳಲ್ಲಿ ಖಾಸಗಿ ವಲಯದ ಕೋಟಕ್ ಮಹಿಂದ್ರಾ ಬ್ಯಾಂಕ್‌ನ 2.76 ಕೋಟಿ ಷೇರುಗಳ ಗಜಗಾತ್ರದ ವಹಿವಾಟು ನಡೆಯಿತು. ಅಂದು ಬ್ಯಾಂಕ್  ಪ್ರವರ್ತಕರು ಶೇ1.5 ರಷ್ಟರ ಭಾಗಿತ್ವವನ್ನು ಮಾರಾಟ ಮಾಡಿ ಸುಮಾರು ₹ 2,200 ಕೋಟಿಯನ್ನು ತಮ್ಮ ಕಿಸೆಗೆ ಸೇರಿಸಿದ್ದಾರೆ.  ಅಂದರೆ ಷೇರಿನ ಬೆಲೆ ವಾರ್ಷಿಕ ಗರಿಷ್ಠವಾದ ₹839 ನ್ನು ತಲುಪಿದ ಸಂದರ್ಭದಲ್ಲಿ ಈ ಗಜಗಾತ್ರದ ವಹಿವಾಟು 'ರಾಯಲ್ಟಿ' ಮುಖ್ಯವೇ ಹೊರತು ಲಾಯಲ್ಟಿಯಲ್ಲ ಎಂಬುದನ್ನು ದೃಢಪಡಿಸುತ್ತದೆ. 

ಈ ಹಿಂದೆ ಇಂತಹ ಗಜಗಾತ್ರದ ವಹಿವಾಟುಗಳು ಅನೇಕ ಕಂಪೆನಿಗಳಲ್ಲಿ ನಡೆದಿದ್ದು ಇದು ಹೊಸದೇನಲ್ಲ. ಹೀಗಾಗಿ ಭಾವನಾತ್ಮಕಕ್ಕಿಂತ ಲಾಭ ಗಳಿಸುವತ್ತ ಮಾತ್ರ ಗಮನವಿರಲಿ.

ಕೆನರಾ ಬ್ಯಾಂಕ್ ತನ್ನ  ಅಂಗ ಸಂಸ್ಥೆ ಕ್ಯಾನ್ ಫಿನ್ ಹೋಮ್ಸ್‌ನ ಶೇ 13.45 ಭಾಗಿತ್ವದ ಷೇರುಗಳನ್ನು ಪ್ರತಿ ಷೇರಿಗೆ ₹2,105 ರಂತೆ ಮಾರಾಟ ಮಾಡಿ ₹754 ಕೋಟಿ ಸಂಗ್ರಹಿಸಿದೆ.

ಗಾಳಿ ಸುದ್ದಿ - ಷೇರಿನ ಬೆಲೆಯಲ್ಲಿ ಸುಂಟರಗಾಳಿ: ಇತ್ತೀಚಿಗೆ  ಭಾರತ್ ಫೈನಾನ್ಶಿಯಲ್ ಇನ್ಕ್ಯೂಷನ್‌ ಕಂಪೆನಿಯನ್ನು ತನ್ನಲ್ಲಿ ವಿಲೀನಗೊಳಿಸಿಕೊಳ್ಳಲು ಖಾಸಗಿ ಬ್ಯಾಂಕ್ ಗಳಾದ ಇಂಡಸ್ ಇಂಡ್ ಬ್ಯಾಂಕ್, ರತ್ನಾಕರ್ ಬ್ಯಾಂಕ್‌ಗಳು ಪ್ರಯತ್ನಿಸುತ್ತಿವೆ ಎಂಬ ಕಾರಣಕ್ಕೆ ಷೇರಿನ ಬೆಲೆಯು ₹884ರವರೆಗೂ ಏರಿಕೆ ಕಂಡಿತ್ತು.  ಹಿಂದಿನವಾರ  ಷೇರಿನ ಬೆಲೆ  ಶೇ6 ರಷ್ಟು ಕುಸಿಯಿತು. ಷೇರಿನ ಬೆಲೆಯು ₹754 ರವರೆಗೂ ಕುಸಿದು ನಂತರದ ದಿನ ಪುಟಿದೆದ್ದು ₹828 ರಲ್ಲಿ ವಾರಾಂತ್ಯ ಕಂಡಿತು. ಅಂದರೆ ₹754 ರಿಂದ ₹861 ರವರೆಗಿನ ಏರಿಳಿತ ಒಂದೇ ವಾರದಲ್ಲಿ ನಡೆದಿದೆ.  ಈ ಕಂಪೆನಿಯ  ಷೇರಿನ ಬೆಲೆಯು ಡಿಸೆಂಬರ್‌ನಲ್ಲಿ ₹465 ರ ಸಮೀಪವಿದ್ದು ಅಲ್ಲಿಂದ ಷೇರಿನ ಬೆಲೆಯು ₹400 ರಷ್ಟು ಏರಿಕೆಯನ್ನು ಕಂಡಿರುವುದು ಗಮನಾರ್ಹವಾಗಿದೆ.

ಅಮೆರಿಕ ಎಫ್‌ಡಿಎ ಪ್ರಭಾವ: ಗುರುವಾರ ಡಾ. ರೆಡ್ಡಿ ಲ್ಯಾಬೊರೇಟರೀಸ್ ಕಂಪೆನಿಯ ಷೇರಿನ ಬೆಲೆಯು ₹151 ರಷ್ಟು ಕುಸಿತಕ್ಕೊಳಗಾಯಿತು.  ಕಂಪೆನಿ ವಿಶಾಖಪಟ್ಟಣದ ದುವಾಡ ಘಟಕದ ತನಿಖೆಯನ್ನು ಅಮೆರಿಕದ ಎಫ್‌ಡಿಎ ನಡೆಸಿ 13 ನ್ಯೂನ್ಯತೆಗಳನ್ನು ನಮೂದಿಸಿದೆ ಎಂಬುದು ಕಾರಣವಾಯಿತು.

ಆದರೆ, ಶುಕ್ರವಾರ  ಅಲೆಂಬಿಕ್ ಫಾರ್ಮಾಸ್ಯುಟಿಕಲ್ಸ್‌ನ ಬರೋಡಾ ಘಟಕವು ಎಫ್‌ಡಿಎ ತನಿಖೆಗೊಳಪಟ್ಟಿದ್ದು, ಇದರಲ್ಲಿ ಯಾವುದೇ ನ್ಯೂನ್ಯತೆಗಳಿಲ್ಲ ಎಂಬ ಸಂಗತಿ ಹೊರಬರುತ್ತಿದ್ದಂತೆಯೇ  ಕೆಲವೇ  ಕ್ಷಣಗಳಲ್ಲಿ ಷೇರಿನ ಬೆಲೆಯು ₹605 ರ ಸಮೀಪದಿಂದ ₹645 ಕ್ಕೆ ಜಿಗಿತ ಕಂಡಿತು. 

ಇತ್ತೀಚಿಗೆ ಕ್ಯಾಡಿಲ್ಲಾ ಹೆಲ್ತ್ ಕೇರ್ ನಲ್ಲೂ ಇದೇ ರೀತಿಯ ಏರಿಕೆ ಪ್ರದರ್ಶಿತವಾಗಿ ಹಾಗೂ ದಿವೀಸ್ ಲ್ಯಾಬ್  ಈ ಪ್ರಭಾವದಿಂದ ಕುಸಿತಕ್ಕೆ ಒಳಗಾಗಿದ್ದನ್ನು ಪೇಟೆ ಪ್ರದರ್ಶಿಸಿದೆ.  ಅಲ್ಕೆಮ್ ಲ್ಯಾಬೊರೇಟರೀಸ್ ಕಂಪೆನಿಯು ಅಮೆರಿಕದ ಎಫ್‌ಡಿಎ  ತನಿಖೆಯಲ್ಲಿ 3  ನ್ಯೂನ್ಯತೆಗಳು ಕಂಡುಬಂದ ಕಾರಣ ಮಾರಾಟದ ಒತ್ತಡಕ್ಕೊಳಗಾಗಿದೆ.

ಒಟ್ಟಾರೆ ಈ ವಾರದಲ್ಲಿ ಸಂವೇದಿ ಸೂಚ್ಯಂಕವು 113 ಅಂಶಗಳ ಏರಿಕೆ ಕಂಡಿದೆ.  ವಿದೇಶಿ ವಿತ್ತೀಯ ಸಂಸ್ಥೆಗಳು ₹5,900 ಕೋಟಿಗೂ ಹೆಚ್ಚಿನ ಹೂಡಿಕೆ ಮಾಡಿದರೆ ಸ್ಥಳೀಯ ವಿತ್ತೀಯ ಸಂಸ್ಥೆಗಳು ₹3,290 ಕೋಟಿಯಷ್ಟು ಷೇರುಗಳನ್ಉ ಮಾರಾಟ ಮಾಡಿವೆ.  ಪೇಟೆಯ ಬಂಡವಾಳ ಮೌಲ್ಯವು ₹117.31 ಲಕ್ಷ ಕೋಟಿಯಲ್ಲಿ ಸ್ಥಿರತೆ ಕಂಡುಕೊಂಡಿದೆ.

ಲಾಭಾಂಶ ವಿಚಾರ: ಕೋಲ್ ಇಂಡಿಯಾ ಪ್ರತಿ ಷೇರಿಗೆ ₹18.75 (ನಿಗದಿತ ದಿನ ಮಾ.15 ), ಕ್ಯಾಡಿಲ್ಲ ಹೆಲ್ತ್ ಕೇರ್  ₹3.20 (ಮುಖ ಬೆಲೆ ₹1), ಹೀರೊ ಮೋಟೊ ಕಾರ್ಪ್  ₹55 (₹2,  ಮಾ. 18 ), ಎನ್‌ಎಂಡಿಸಿ     ₹4.15 ( ಮಾ 18), ನೈಲ್  ₹3, ಸನ್ ಟಿವಿ  ₹5 (ಮು ಬೆ ₹5).

ಬೋನಸ್ ಷೇರು: ವಿ ಗಾರ್ಡ್ ಇಂಡಸ್ಟ್ರೀಸ್ ವಿತರಿಸಲಿರುವ 2:5 ಅನುಪಾತದ ಬೋನಸ್ ಷೇರಿಗೆ ಮಾರ್ಚ್ 16 ನಿಗದಿತ ದಿನವಾಗಿದೆ.

ವಾರದ ವಿಶೇಷ

ಪೇಟೆಯಲ್ಲಿ ಹಿಂದಿನ ಬೆಳವಣಿಗೆಯನ್ನಾಧರಿಸಿ ಮುಂದಿನ ಏಳ್ಗೆಯನ್ನು ನಿರೀಕ್ಷಿಸಬಾರದು ಎಂಬುದು ಎಚ್ಚರಿಕೆಯ ನುಡಿ ಎಲ್ಲಾ ನಿಯಂತ್ರಕರಿಂದ ಬರುತ್ತಲೇ ಇರುತ್ತದೆ ಎಂಬುದನ್ನು ಗಮನದಲ್ಲಿಡಬೇಕು. ವಿಶೇಷವಾಗಿ ಕೆಳಮಧ್ಯಮ, ಕಳಪೆ ಷೇರುಗಳಲ್ಲಿ ಹೂಡಿಕೆ ಮಾಡುವಾಗ ಹೆಚ್ಚಿನ ಎಚ್ಚರಿಕೆ ಅಗತ್ಯ.

 ಸಾಧನೆಯಾಧಾರಿತ, ಬೃಹತ್ ಕಂಪೆನಿ, ಪೇಟೆಯ ಬಂಡವಾಳೀಕರಣ ಮೌಲ್ಯದಲ್ಲಿ ಉತ್ತಮ ಸ್ಥಾನ ಪಡೆದಿರುವ ಕಂಪೆನಿ ರಿಲಯನ್ಸ್ ಇಂಡಸ್ಟ್ರೀಸ್ ಷೇರಿನ ಬೆಲೆಯೂ ಸಹ ಸುಮಾರು ಎಂಟು ವರ್ಷಗಳ ನಂತರ ₹1,200 ರ ಗಡಿ ದಾಟಿರುವುದು ಗಮನಿಸಬೇಕಾದ ಸಂಗತಿಯಾಗಿದೆ. ಆದರೆ ಒಂದು ವ್ಯತ್ಯಾಸವೆಂದರೆ ಇದು ಅಗ್ರಮಾನ್ಯ ಬೃಹತ್ ಕಂಪೆನಿಯಾದ್ದರಿಂದ ಈ ರೀತಿ ಪುಟಿದೇಳಲು ಸಾಧ್ಯವಾಗಿದೆ.

ಅದೇ ಕೆಳಮಧ್ಯಮ, ಕಳಪೆ ಷೇರುಗಳಾಗಿದ್ದರೆ ಅವುಗಳ ಸಮಸ್ಯೆಗಳ ತೂಕಕ್ಕೆ ಕುಸಿದು ಹಾನಿಗೊಳಪಡಿಸುವ ಸಾಧ್ಯತೆ ಹೆಚ್ಚು. ಇದು ದೀರ್ಘಕಾಲೀನ ಪ್ರಭಾವವಾದರೆ, ಇತ್ತೀಚಿನ ಮಧ್ಯಮ ಶ್ರೇಣಿಯ  ಕಂಪೆನಿ ಪಿನ್ ಕಾನ್ ಲೈಫ್ ಸ್ಟೈಲ್ ಲಿಮಿಟೆಡ್ ಕಂಪೆನಿಯ ಷೇರಿನ ಬೆಲೆಯನ್ನು ಕಳೆದ ಡಿಸೆಂಬರ್ ತಿಂಗಳಿಂದ ಗಮನಿಸಿದಲ್ಲಿ ಈ ವಲಯದಲ್ಲಿನ ವಹಿವಾಟು ತ್ವರಿತ ಎಂಬುದರ ಅರಿವಾಗುವುದು.  ಡಿಸೆಂಬರ್ ಅಂತ್ಯದಲ್ಲಿ  ₹358 ರ ವಾರ್ಷಿಕ ಗರಿಷ್ಠದಲ್ಲಿದ್ದ ಈ ಷೇರಿನ ಬೆಲೆಯು ನಿರಂತರವಾಗಿ ಏಕಮುಖವಾಗಿ ಕುಸಿಯುತ್ತಾ ಶುಕ್ರವಾರ  ₹106.90 ರ ಕನಿಷ್ಠ ಅವರಣಮಿತಿಯಲ್ಲಿತ್ತು. ಕೊಳ್ಳುವವರೇ ಇಲ್ಲದೆ, ವಾರ್ಷಿಕ ಕನಿಷ್ಠ ದಾಖಲಿಸಿದೆ.  ಕೇವಲ 70 ದಿನಗಳಲ್ಲಿ ಷೇರಿನ ಬೆಲೆ ವಾರ್ಷಿಕ ಗರಿಷ್ಠದಿಂದ ವಾರ್ಷಿಕ ಕನಿಷ್ಠಕ್ಕೆ ಕುಸಿದಿರುವುದು ಗಮನಾರ್ಹವಾಗಿದೆ. ಸಾಮಾನ್ಯವಾಗಿ ಏರಿಕೆಯಲ್ಲಿರುವ ಕಂಪೆನಿಗಳಿಗೆ ಹೆಚ್ಚಿನ ಪ್ರಚಾರ  ನೀಡುವ ಈಗಿನ ರೀತಿಯು ಇಂತಹ ಬೆಳವಣಿಗೆಗಳನ್ನು ಸಹ ಹೂಡಿಕೆದಾರರು ಅರಿತಿದ್ದರೆ ಇವು ಒಂದು ರೀತಿಯ ನಿರೋಧಕ ಚುಚ್ಚು ಮದ್ದಾಗುತ್ತದೆ. 

ಪಿನ್ ಕಾನ್ ಲೈಫ್ ಸ್ಟೈಲ್ ಕಂಪೆನಿಯಲ್ಲಿ ಪ್ರವರ್ತಕರ ಭಾಗಿತ್ವವು ಕೇವಲ ಶೇ3.41 ಮಾತ್ರವಾಗಿದೆ. ಈ ಕಂಪೆನಿಯ ಹೆಸರನ್ನು ಕಳೆದ ತಿಂಗಳು ಮೋದಿ ಉದ್ಯೋಗ ಲಿ., ನಿಂದ ಈಗಿನ ಹೆಸರಿಗೆ ಬದಲಿಸಲಾಗಿದೆ.   ಈಗಿನ ದಿನಗಳಲ್ಲಿ ಒಂದು ಕಂಪೆನಿಯ ಷೇರಿನ ಬೆಲೆಯಲ್ಲಿ ಏರಿಕೆ / ಇಳಿಕೆ ಕಾಣಲು ಅನೇಕ ಕಾರಣಗಳು ಇರುತ್ತವೆ. ಆಂತರಿಕ ಸಾಧನೆಗಿಂತ ಹೊರಗಿನ ಕಾರಣಗಳು ಹೆಚ್ಚು ಪ್ರಭಾವಿಯಾಗಿವೆ. ಉದಾಹರಣೆಗೆ ಪ್ರತಿ ವಾರವೂ ನಾವು ಅಮೆರಿಕದ ಎಫ್‌ಡಿಎ ಕ್ರಮದಿಂದ ಫಾರ್ಮಾ ವಲಯದ ಕಂಪೆನಿಗಳಲ್ಲಿ ಹೆಚ್ಚಿನ ಏರಿಳಿತ ಕಾಣುತ್ತಿದ್ದೇವೆ.

ಮೊ: 9886313380 (ಸಂಜೆ 4.30ರ ನಂತರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.