ADVERTISEMENT

ಬಾಹ್ಯ ವಿಶ್ಲೇಷಣೆಗೆ ಹೆಚ್ಚು ಮಹತ್ವ ಬೇಡ

ಕೆ.ಜಿ ಕೃಪಾಲ್
Published 8 ಜನವರಿ 2017, 19:30 IST
Last Updated 8 ಜನವರಿ 2017, 19:30 IST

ಬ್ಯಾಂಕ್‌ಗಳಲ್ಲಿ ಹಣವು ಹೆಚ್ಚು ಶೇಖರಣೆಯಾಗುತ್ತಿರುವುದರಿಂದ ಬ್ಯಾಂಕ್ ಠೇವಣಿ  ನಿಯಂತ್ರಿಸಿ, ಅದನ್ನು ದುಡಿಮೆಗೆ ತೊಡಗಿಸಲು  ಹೆಚ್ಚಿನ ಪ್ರಮಾಣದಲ್ಲಿ ಸಾಲ ವಿತರಣೆಗೆ ಸ್ಪರ್ಧಾತ್ಮಕ ಪ್ರಯತ್ನಗಳು ನಡೆಯುತ್ತಿದೆ.  ಹೀಗಾಗಿ ಬ್ಯಾಂಕ್‌ಗಳು ಆರ್‌ಬಿಐ ಕ್ರಮವಿಲ್ಲದೆಯೇ ತಮ್ಮಷ್ಟಕ್ಕೆ ತಾವೇ ಬಡ್ಡಿ ದರವನ್ನು ಮೊಟಕುಗೊಳಿಸುತ್ತಿವೆ.

ಇದರ ಪ್ರಮಾಣ ಯಾವ ಮಟ್ಟದಲ್ಲಿದೆ ಎಂದರೆ, ಆರ್‌ಬಿಐ ಮೊಟಕುಗೊಳಿಸುತ್ತಿದ್ದ ಬಡ್ಡಿ ದರ ಕೇವಲ 25 ಮೂಲಾಂಶಗಳಾದರೆ, ಈಗ ಬ್ಯಾಂಕ್ ಗಳು ಮೊಟಕುಗೊಳಿಸಿರುವುದು 90 ಮೂಲಾಂಶಗಳ ತನಕ ಇದೆ.  ಅಂದರೆ ಪೇಟೆಯೇ ಸಾರ್ವಭೌಮ ಅದನ್ನು ಅನುಸರಿಸುವುದೇ ಸೂಕ್ತ, ಮುಂಚಿತವಾಗಿ ಕಲ್ಪಿಸಿಕೊಂಡು ನಿರ್ಧರಿಸುವುದು ಅಪಾಯಕ್ಕೆ ಆಹ್ವಾನವಿತ್ತಂತೆ.

ಸತತವಾದ ಏರಿಕೆಯತ್ತ ಸಾಗುತ್ತಿರುವ ಕಚ್ಚಾ ತೈಲ ಬೆಲೆಯ ಕಾರಣ ತೈಲ ವಲಯ ಕಂಪೆನಿಗಳಾದ ಎಚ್‌ಪಿಸಿಎಲ್, ಐ ಒ ಸಿ, ಬಿಪಿಸಿಎಲ್, ಚೆನ್ನೈ ಪೆಟ್ರೋಲಿಯಂ, ಆಯಿಲ್ ಇಂಡಿಯಾ, ಒಎನ್‌ಜಿಸಿ, ಮುಂತಾದವುಗಳು ಭಾರಿ ಬೇಡಿಕೆಯಿಂದ ಏರಿಕೆ ಕಂಡವು.

ಗುರುವಾರ ಸಂವೇದಿ ಸೂಚ್ಯಂಕದ ಏರಿಕೆಗೆ ಮುಖ್ಯ ಕೊಡುಗೆ ಕೊಟ್ಟ ಕಂಪೆನಿಗಳೆಂದರೆ ಆಟೊ ವಲಯದ ಕಂಪೆನಿಗಳಾಗಿವೆ.  ಸಂವೇದಿ ಸೂಚ್ಯಂಕದ ಭಾಗವಾದ ಮಾರುತಿ ಸುಜುಕಿ ಸುಮಾರು ₹140 ರಷ್ಟು ಏರಿಕೆ ಪ್ರದರ್ಶಿಸಿದರೆ, ಟಾಟಾ ಮೋಟಾರ್ಸ್ ಕಂಪೆನಿ ₹15ಕ್ಕೂ ಹೆಚ್ಚಿನ ಏರಿಕೆ ಪ್ರದರ್ಶಿಸಿತು.  ಸೂಚ್ಯಂಕೇತರ ಕಂಪೆನಿಗಳಲ್ಲಿ ಫೋರ್ಸ್ ಮೋಟಾರ್ ₹300 ಕ್ಕೂ ಹೆಚ್ಚಿನ ಏರಿಕೆ ಕಂಡರೆ  ಐಷರ್ ಮೋಟಾರ್ ₹150 ಕ್ಕೂ ಹೆಚ್ಚಿನ ಏರಿಕೆ ಕಂಡಿತು. 

ಜಯಭಾರತ್ ಮಾರುತಿ, ಭಾರತ್ ಫೋರ್ಜ್, ಸ್ಟಿಲ್ ಸ್ಟ್ರಿಪ್ಸ್ ಆ್ಯಂಡ್ ವ್ಹೀಲ್ಸ್, ಸುಂದರಂ ಫಾಸ್ಟ್ನರ್ಸ್,   ಲಾರ್ಸನ್ ಅಂಡ್ ಟೋಬ್ರೊ,  ಜಿಎನ್‌ಎಫ್‌ಸಿ,  ಲುಪಿನ್,  ಟಿವಿಎಸ್ ಮೋಟಾರ್ ಮುಂತಾದ ಕಂಪೆನಿಗಳು ಆಕರ್ಷಕ ಏರಿಕೆ ಪ್ರದರ್ಶಿಸಿ ಪೇಟೆಯ ಚಿತ್ರಣವನ್ನೇ ಬದಲಿಸಿದವು. ಭಾರತ್ ಫೈನಾನ್ಶಿಯಲ್ ಇನ್‌ಕ್ಲೂಶನ್‌  ಕಂಪೆನಿಯ ಆಡಳಿತ ಮಂಡಳಿ  ಈ ತಿಂಗಳ 24 ರಂದು ಕಳೆದ ಡಿಸೆಂಬರ್ ಅಂತ್ಯದ  ತ್ರೈಮಾಸಿಕ  ಫಲಿತಾಂಶ ಪರಿಶೀಲಿಸುವ ಕಾರ್ಯ ಸೂಚಿಯ ಕಾರಣ ಏರಿಕೆ ಕಂಡಿತು.

ಹಿಂದೆ ಬಜಾಜ್ ಟೆಂಪೊ ಎಂದಿದ್ದು ಈಗ ಫೋರ್ಸ್ ಮೋಟಾರ್ಸ್ ಎಂದಾಗಿರುವ ಕಂಪೆನಿ ಒಂದು ತಿಂಗಳಲ್ಲಿ ₹4,040 ರಿಂದ ₹3,525ರವರೆಗೂ ಕುಸಿದು  ಕೇವಲ ಹತ್ತು ದಿನಗಳ ವಹಿವಾಟಿನಲ್ಲಿ ₹ 4,400ರ ಸಮೀಪಕ್ಕೆ ಪುಟಿದೆದ್ದಿದೆ. ಅಂದರೆ ₹ 515ರಷ್ಟು ಕುಸಿದು ನಂತರ ₹ 875ರಷ್ಟು ಜಿಗಿತ ಕಂಡಿದೆ.  ಜನವರಿ ಎರಡರಂದು ₹3,730ರ ಸಮೀಪವಿದ್ದ ದರವು ಜನವರಿ 6 ರಂದು  ₹4,400 ರ ಸಮೀಪಕ್ಕೆ ಜಿಗಿತ ಕಂಡಿರುವುದು ಪೇಟೆಯು ಚಲಿಸುವ ವೇಗವನ್ನು ತೋರುತ್ತದೆ.  ಇದು ವ್ಯಾಲ್ಯೂ ಪಿಕ್  ಮತ್ತು ಪ್ರಾಫಿಟ್ ಬುಕ್ ಚಟುವಟಿಕೆಗೆ ಕಂಪೆನಿಯ ಮೇಲಿನ ವ್ಯಾಮೋಹ ಅಡ್ಡಿಯಾಗಬಾರದು.

ಅಮೆರಿಕದ ಎಫ್‌ಡಿಎ ಕ್ರಮದ ಕಾರಣ ವೊಕಾರ್ಡ್ ಕಂಪೆನಿಯ ಷೇರುಗಳು ₹640 ರ ಸಮೀಪಕ್ಕೆ ಕುಸಿದು ಇಳಿಕೆಯಲ್ಲಿದ್ದಾಗ  ಕಂಪೆನಿಯ ಅಂಕಲೇಶ್ವರ್  ಘಟಕವು ಜರ್ಮನಿಯ ಔಷಧ ನಿಯಂತ್ರಕರಿಂದ ಸಕ್ರಮ ನಿರ್ವಹಣೆ ಪತ್ರ ಪಡೆದ ಕಾರಣ ಶುಕ್ರವಾರ ಷೇರಿನ ಬೆಲೆಯು ₹728 ರವರೆಗೂ ಜಿಗಿತ ಕಂಡಿತು.  ಪೇಟೆಯಲ್ಲಿ ಉತ್ತಮ ಕಂಪೆನಿಗಳ ಬೆಲೆಯು ಕುಸಿದಾಗ ಬಾಹ್ಯ ವಿಶ್ಲೇಷಣೆಗಳಿಗೆ ಹೆಚ್ಚು ಮಹತ್ವ ನೀಡದೆ ಸ್ವಲ್ಪ ಧೈರ್ಯದಿಂದ,  ಕಡಿಮೆ ಸಂಖ್ಯೆಯ ಷೇರುಗಳನ್ನು ಖರೀದಿಸಿದಲ್ಲಿ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ. 

ಪೇಟೆಯ ವೇಗವು ಹೇಗಿರುತ್ತದೆ ಎಂಬುದಕ್ಕೆ ಶುಕ್ರವಾರ ಗ್ಲೊಸ್ಟರ್ ಲಿಮಿಟೆಡ್ ಕಂಪೆನಿಯ ಷೇರಿನ ಚಲನೆಯು ಸಹ ಉತ್ತಮ ಉದಾಹರಣೆಯಾಗಿದೆ.  ಚಟುವಟಿಕೆ ಆರಂಭಿಕ ಕ್ಷಣಗಳಲ್ಲಿ ಎಲೆಕ್ಟ್ರಾನಿಕ್ ಮಾಧ್ಯಮವೊಂದು ಬಾಂಗ್ಲಾ ಮತ್ತು ನೇಪಾಳದಿಂದ  ನಾರು ಉತ್ಪನ್ನಗಳಿಗೆ ಆಮದು ಮಾಡಿಕೊಳ್ಳಲು 'ಸುರಿ  ವಿರುದ್ಧ ಸುಂಕ ' ವಿಧಿಸಲಾಗುವುದು ಎಂಬ ಸುದ್ದಿ ಪ್ರಸಾರವಾಗುತ್ತಿದ್ದಂತೆ  ಕ್ಷಣ ಮಾತ್ರದಲ್ಲಿ ಷೇರಿನ ಬೆಲೆಯು ₹490 ರ ಸಮೀಪದಿಂದ   ₹575 ಕ್ಕೆ ಜಿಗಿತಕಂಡಿತು.  ನಂತರ ₹543 ರ ಸಮೀಪಕ್ಕೆ ಇಳಿದು ಕೊನೆಗೊಂಡಿತು.

ಒಟ್ಟಾರೆ 132 ಅಂಶಗಳ ಏರಿಕೆ ಪಡೆದುಕೊಂಡ ಸಂವೇದಿ ಸೂಚ್ಯಂಕ ಮಧ್ಯಮ ಶ್ರೇಣಿಯ ಸೂಚ್ಯಂಕವನ್ನು 290 ಅಂಶಗಳಷ್ಟು, ಕೆಳಮಧ್ಯಮ ಶ್ರೇಣಿಯ ಸೂಚ್ಯಂಕವನ್ನು 294 ಅಂಶಗಳಷ್ಟು ಏರಿಕೆ ಕಾಣುವಂತೆ ಮಾಡಿತು.

ವಿದೇಶಿ ವಿತ್ತೀಯ ಸಂಸ್ಥೆಗಳು ₹1,903 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದರೆ, ಸ್ವದೇಶಿ ವಿತ್ತೀಯ ಸಂಸ್ಥೆಗಳು ₹1,624 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿವೆ. ಷೇರುಪೇಟೆ ಬಂಡವಾಳ ಮೌಲ್ಯವು  ₹106 ಲಕ್ಷ ಕೋಟಿಯಿಂದ ₹108 ಲಕ್ಷ ಕೋಟಿಗೆ ಏರಿಕೆ ಕಂಡಿತು.

ಬೋನಸ್ ಷೇರು: ಎನ್‌ಬಿಸಿಸಿ ಲಿ. ಕಂಪೆನಿ 1:2 ರ ಅನುಪಾತದ ಬೋನಸ್ ಷೇರು ಪ್ರಕಟಿಸಿದೆ.

ಮುಖಬೆಲೆ ಸೀಳಿಕೆ: ಎಲ್‌ಟಿ ಫುಡ್ಸ್ ಲಿ.  ಷೇರಿನ ಮುಖಬೆಲೆಯನ್ನು ₹10 ರಿಂದ ₹1 ಕ್ಕೆ ಸೀಳಲು ಫೆ. 8 ನಿಗದಿತ ದಿನವಾಗಿದೆ.

ಹೆಸರು ಬದಲಾವಣೆ
*ಹಿಂದೆ ಆದಿತ್ಯ ಲೀಸಿಂಗ್ ಲಿಮಿಟೆಡ್ ಎಂದಿದ್ದ ಕಂಪೆನಿಯ ಹೆಸರನ್ನು  2006 ರ ಸೆಪ್ಟೆಂಬರ್‌ನಲ್ಲಿ ನಿತಿನ್ ಅಲಾಯ್ಸ್ ಗ್ಲೋಬಲ್ ಲಿಮಿಟೆಡ್ ಕಂಪೆನಿಯು ಮತ್ತೊಮ್ಮೆ ತನ್ನ ಹೆಸರನ್ನು  ನಿತಿನ್ ಕ್ಯಾಸ್ಟಿಂಗ್ಸ್ ಲಿಮಿಟೆಡ್ ಎಂದು ವ್ಯವಸ್ಥಿತ ಯೋಜನೆಯನ್ನಾಧರಿಸಿ ಹೆಸರನ್ನು ಬದಲಾಯಿಸಿಕೊಂಡಿದೆ.
*ಸ್ಟೋರ್ ಒನ್ ರಿಟೇಲ್ ಇಂಡಿಯಾ ಲಿಮಿಟೆಡ್ ಕಂಪೆನಿಯ ಹೆಸರನ್ನು ಎಸ್‌ಒ ಆರ್‌ಐಎಲ್‌್ ಇನ್ಫ್ರಾ ರಿಸೋರ್ಸಸ್ ಲಿಮಿಟೆಡ್ ಎಂದು ಬದಲಾಗಿದೆ.
*ಜಿಂದಾಲ್ ಆನ್ ಲೈನ್ ಡಾಟ್ ಕಾಮ್ ಲಿಮಿಟೆಡ್  ಕಂಪೆನಿಯ ಹೆಸರನ್ನು ಕಶ್ಯಪ್ ಟೆಲಿ ಮೆಡಿಸಿನ್ಸ್  ಲಿ. ಎಂದು ಬದಲಿಸಲಾಗಿದೆ.

ADVERTISEMENT

ಲಾಭಾಂಶ ವಿಚಾರ
*ಮೈಂಡ್ ಟ್ರೀ  ಈ ತಿಂಗಳ 19ರಂದು ಪ್ರಕಟಿಸಲಿರುವ ಲಾಭಾಂಶಕ್ಕೆ 28 ನಿಗದಿತ ದಿನವಾಗಿದೆ.
*ಬಿ ಇ ಎಲ್ ಕಂಪೆನಿಯು ಈ ತಿಂಗಳ 27 ರಂದು ಪ್ರಕಟಿಸುವ ಲಾಭಾಂಶಕ್ಕೆ ಫೆಬ್ರವರಿ 4 ನಿಗದಿತ ದಿನವಾಗಿದೆ.
*ಬಜಾಜ್ ಕಾರ್ಪ್ 12 ರಂದು,  ಎಚ್ ಐಎಲ್‌ ಲಿ. 16 ರಂದು, ಪರ್ಸಿಸ್ಟಂಟ್ ಸಿಸ್ಟಮ್ಸ್ 21 ರಂದು, ಪವರ್ ಫೈನಾನ್ಸ್ ಕಾರ್ಪೊರೇಷನ್ 23 ರಂದು ಮಧ್ಯಂತರ ಲಾಭಾಂಶ ಪ್ರಕಟಿಸಲಿವೆ.

ವಾರದ ವಿಶೇಷ
ಹೊಸವರ್ಷದ ಆರಂಭದಲ್ಲೇ ಸರ್ಕಾರಿ ವಲಯದ ಹುಡ್ಕೊ ಮತ್ತು ಮುಂಬೈ ಷೇರು ವಿನಿಮಯ ಕೇಂದ್ರಗಳು ಆರಂಭಿಕ ಷೇರು ವಿತರಣೆಗೆ ಮುಂದಾಗಿರುವ ವಿಚಾರಕ್ಕೆ ಹೆಚ್ಚು ಪ್ರಚಾರ ದೊರೆತಿದೆ.  ಇದು ಷೇರುಪೇಟೆ ಚುರುಕು ಗೊಳಿಸುವಲ್ಲಿ ಯಶಸ್ವಿಯಾಗುವುದೇ ಎಂಬ ಪ್ರಶ್ನೆ ಮೂಡುವುದು ಸಹಜವಾಗಿದೆ. 

ಈ ಕಂಪೆನಿಗಳಲ್ಲದೆ ರಾಷ್ಟ್ರೀಯ ಷೇರು ವಿನಿಮಯದಂತಹ  ಇತರೆ ಐಪಿಒ ಗಳು ಸರತಿಯಲ್ಲಿದ್ದು  ಇವು  ಸಂಪನ್ಮೂಲ ಸಂಗ್ರಹಣೆಯಲ್ಲಿ  ಯಶಸ್ವಿಯಾಗುವು ವಾದರೂ , 2003 ರಲ್ಲಿ ಕೆನರಾ ಬ್ಯಾಂಕ್, ಮಾರುತಿ ಸುಜುಕಿ ಗಳ ಐ ಪಿ ಒ ರೀತಿ ಅಲ್ಪ ಪ್ರೀಮಿಯಂ ಗೊತ್ತು ಪಡಿಸಿದಲ್ಲಿ ಮಾತ್ರ ಷೇರುಪೇಟೆಯನ್ನು ಚುರುಕುಗೊಳಿಸಲಿವೆ.

ಆದರೆ, ಬದಲಾದ ಪರಿಸ್ಥಿತಿಯಲ್ಲಿ  ಸರ್ಕಾರಿ ಕಂಪೆನಿಗಳಾಗಲಿ, ಸ್ವ ನಿಯಂತ್ರಿತ ಸಂಸ್ಥೆಗಳಾದ ಷೇರು ವಿನಿಮಯ ಕೇಂದ್ರಗಳಾಗಲಿ, ಖಾಸಗಿ ಕಂಪೆನಿಗಳಾಗಲಿ ಕೇವಲ ವ್ಯಾವಹಾರಿಕ ದೃಷ್ಟಿಯಿಂದ ಕಾರ್ಯ ನಿರ್ವಹಿಸುವುದ ರಿಂದ  ಹೆಚ್ಚಿನ ವ್ಯತ್ಯಾಸವಿರುವುದಿಲ್ಲ. ಎಲ್ಲಾ ಸಂಸ್ಥೆಗಳು ಕೇವಲ ಸಂಪನ್ಮೂಲ ಸಂಗ್ರಹಣೆಯತ್ತ ತಮ್ಮ ಗಮನವನ್ನು ಕೇಂದ್ರೀಕರಿಸಿವೆ. 

ಹೂಡಿಕೆದಾರರು ಸಹ ಭಾವನಾತ್ಮಕ ಸಂಬಂಧಗಳನ್ನು ಬೆಳೆಸಿಕೊಳ್ಳದೆ  ಬಂಡವಾಳ ಸುರಕ್ಷತೆಯಿಂದ ಲಾಭಗಳಿಕೆಯತ್ತ  ಗಮನಹರಿಸ ಬೇಕಾದುದು ಅನಿವಾರ್ಯವಾಗಿದೆ. ಹಿಂದಿನ ಸಂದರ್ಭಗಳಲ್ಲಿ ಐಪಿ ಒ ಗಳ ಮೂಲಕ  ಹೂಡಿಕೆದಾರರು  ಹಣ ಗಳಿಸುತ್ತಿದ್ದರು,  ಆ ರೀತಿ ಐಪಿಒ ಗಳ ದರಗಳನ್ನು ನಿಗದಿಪಡಿಸುತ್ತಿದ್ದರು.

ಈಗ ಐಪಿಒ ಗಳ ಮೂಲಕ ಪ್ರವರ್ತಕರು, ವಿತ್ತೀಯ ಸಂಸ್ಥೆಗಳ ಹೂಡಿಕೆದಾರರು ಐ ಪಿಒ ಮೂಲಕ ತಾವು ಲಾಭ ಗಳಿಸಿ ಕೊಳ್ಳುವರು.  ಕೆಲವು ಬಾರಿ  ತಮ್ಮ ಭಾಗಿತ್ವದ ಷೇರುಗಳನ್ನು ಸಹ ಮಾರಾಟ ಮಾಡಿ ಹಣ ಗಳಿಸುವ ಪ್ರಯತ್ನದಲ್ಲಿರುತ್ತಾರೆ. ಪೇಟೆಗಳು ಚಲಿಸುತ್ತಿರುವ ರೀತಿಯು ಪಠ್ಯಗಳಿಂದ ಹೊರತಾಗಿದ್ದು, ಕೇವಲ ಅನುಭವದಿಂದಲೇ ನಿರ್ಧರಿಸ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಹೂಡಿಕೆ ಮಾಡುವಾಗ ಆಸೆಯ ವ್ಯಾಮೋಹದಿಂದ ಹೆಚ್ಚು ಹಣವನ್ನು ಒಂದೇ ಕಂಪೆನಿಯಲ್ಲಿ ಹೂಡಿಕೆ ಮಾಡದೆ, ಅದನ್ನು ಹತ್ತಾರು ಕಂಪೆನಿ ಷೇರುಗಳಿಗೆ ಹರಡಿದರೆ ಅಪಾಯದ ಮಟ್ಟ ನಿಯಂತ್ರಿಸಿದಂತಾಗುತ್ತದೆ.  ಹೂಡಿಕೆ ಮಾತ್ರ ಉತ್ತಮ ಕಂಪೆನಿಗಳಲ್ಲಿರುವುದು ಅತ್ಯಗತ್ಯ. 

ಮೊ: 9886313380 (ಸಂಜೆ 4.30ರ ನಂತರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.