ADVERTISEMENT

ಭಾರಿ ಏರಿಳಿತ ಪ್ರದರ್ಶಿಸಿದ ಸೂಚ್ಯಂಕ

ಕೆ.ಜಿ ಕೃಪಾಲ್
Published 1 ಮಾರ್ಚ್ 2015, 19:30 IST
Last Updated 1 ಮಾರ್ಚ್ 2015, 19:30 IST

ಷೇರುಪೇಟೆಯು ಕಳೆದ ವಾರ ಉಯ್ಯಾಲೆ ಆಡುತ್ತಾ   ಇದ್ದುದರಿಂದ ಅನೇಕ ಕಂಪೆನಿಗಳ ಷೇರುಗಳು ಹೆಚ್ಚಿನ ಏರಿಳಿತ ಪ್ರದರ್ಶಿಸಿವೆ. ಪೇಟೆಯು ಈ ವಾರದಲ್ಲಿ ಎರಡು, ಮೂರು ದಿನ, ವಹಿವಾಟಿನ ಮಧ್ಯಾಂತರದವರೆಗೂ ಏರಿಕೆಯಲ್ಲಿದ್ದು, ಮಧ್ಯಾಹ್ನ ನಂತರ ಏಕಮುಖವಾಗಿ ಇಳಿಕೆ ಕಂಡಿದೆ.

ಗುರುವಾರ ಸಂವೇದಿ ಸೂಚ್ಯಂಕವು ೪೭೩ ಅಂಶಗಳ ಏರಿಕೆ ಕಂಡರೆ ಇದಕ್ಕೆ ಬೆಂಬಲವಾಗಿ ಆಟೊ ಸೂಚ್ಯಂಕವು ೪೧೭ ಅಂಶಗಳ, ಬ್ಯಾಂಕೆಕ್ಸ್ ೫೮೧ ಅಂಶಗಳ, ಕ್ಯಾಪಿಟಲ್ ಗೂಡ್ಸ್ ೬೫೩ ಅಂಶಗಳ ಏರಿಕೆಯನ್ನು ಕಂಡಿವೆ. ಈ ಭಾರಿ ಏರಿಕೆಯು ಪೇಟೆಯಲ್ಲಿ ಹೆಚ್ಚಿನ ಬದಲಾವಣೆಯನ್ನು ತ್ವರಿತವಾಗಿ ಕಾಣುವಂತೆ ಮಾಡುತ್ತದೆ. ಈ ಪ್ರಕ್ರಿಯೆಯಲ್ಲಿ ಬ್ಯಾಂಕಿಂಗ್ ಕಂಪೆನಿಗಳ ಕೊಡುಗೆ ಅಪಾರವಾಗಿದೆ ಎಂಬುದು ಈ ವಾರ ಮತ್ತೊಮ್ಮೆ ದೃಢಪಟ್ಟಿದೆ.

ಗುರುವಾರ ಮೂಲಾಧಾರಿತ ಪೇಟೆಯ ಚುಕ್ತಾ ದಿನವಾದ್ದರಿಂದ ಭಾರಿ ಬದಲಾವಣೆಗಳನ್ನು ಪೇಟೆ ಪ್ರದರ್ಶಿಸಿದೆ. ಇತ್ತೀಚೆಗೆ ₨೩೫೨­ರಂತೆ ಷೇರು ವಿಕ್ರಯ ಮಾಡಿದ ಕೋಲ್ ಇಂಡಿಯಾ  ಕಂಪೆನಿಯು ಪ್ರಕಟಿಸಿದ ಲಾಭಾಂಶ ಆಕರ್ಷಕವಾಗಿದೆ.
ಸಂವೇದಿ ಸೂಚ್ಯಂಕ ಈ ವಾರ ಒಟ್ಟಾರೆ ೧೩೦ ಅಂಶಗಳ ಏರಿಕೆ ಕಂಡಿದೆ.  ಆದರೆ ಮಧ್ಯಮ ಶ್ರೇಣಿಯ ಸೂಚ್ಯಂಕವು ೩೫ ಅಂಶಗಳ ಹಾಗೂ ಕೆಳ ಮಧ್ಯಮ ಶ್ರೇಣಿಯ ಸೂಚ್ಯಂಕವು ೧೫೯ ಅಂಶಗಳ ಇಳಿಕೆ ಕಂಡಿವೆ. ಪೇಟೆಯಲ್ಲಿ ವಿದೇಶಿ ವಿತ್ತೀಯ ಸಂಸ್ಥೆಗಳು ಕೊಳ್ಳುವ ಭರಾಟೆ ಪ್ರದರ್ಶಿಸಿವೆ. ಒಟ್ಟು ೬,೬೯೮ ಕೋಟಿ ಮೌಲ್ಯದ ಷೇರನ್ನು ಖರೀದಿಸಿವೆ. ಸ್ವದೇಶಿ ವಿತ್ತೀಯ ಸಂಸ್ಥೆಗಳು ₨೧,೧೮೨ ಕೋಟಿ ಮೌಲ್ಯದ ಷೇರು ಮಾರಾಟ ಮಾಡಿವೆ. ಪೇಟೆಯ ಬಂಡವಾಳ ಮೌಲ್ಯ ₨೧೦೪.೬೬ ಲಕ್ಷ ಕೋಟಿಯಲ್ಲಿತ್ತು.

ಬೋನಸ್ ಷೇರು
ಪರ್ಸಿಸ್ಟಂಟ್ ಸಿಸ್ಟಮ್ಸ್ ಲಿಮಿಟೆಡ್ ಕಂಪೆನಿ ವಿತರಿಸಲಿರುವ ೧:೧ ರ ಅನುಪಾತದ ಬೋನಸ್ ಷೇರಿಗೆ ಮಾರ್ಚ್ ೧೧ ನಿಗದಿತ ದಿನವಾಗಿದೆ.
ಎಸ್.ವಿ.ಪಿ.ಗ್ಲೋಬಲ್ ವೆಂಚರ್ಸ್ ಲಿ., ಟಿ ಗುಂಪಿನ ಕಂಪೆನಿ, ವಿತರಿಸಲಿರುವ ೯:೧ ರ ಅನುಪಾತದ ಬೋನಸ್ ಷೇರಿಗೆ ಮಾರ್ಚ್ ೫ ನಿಗದಿತ ದಿನವಾಗಿದೆ.

ಹೊಸ ಷೇರು
ಪ್ರಾದೇಶಿಕ ಕೇಬಲ್ ಆಪರೇಟರ್ ಮತ್ತು ಬ್ರಾಡ್ ಬ್ಯಾಂಡ್ ಸೇವೆ ಒದಗಿಸುವ ಕಂಪೆನಿ, ಆರ್ಟೆಲ್ ಕಮ್ಯುನಿಕೇಶನ್ ಕಂಪೆನಿ ಮಾರ್ಚ್ ೩ ರಿಂದ ೫ರವರೆಗೆ ಆರಂಭಿಕ ಷೇರು ವಿತರಣೆ ಮಾಡ­ಲಿದೆ. ೧.೨ ಕೋಟಿ ಷೇರುಗಳನ್ನು ಸಾರ್ವಜನಿಕ ವಿತರಣೆಗೆ ಬಿಡು­ಗಡೆ­ಮಾಡಲಿದ್ದು ಇದರಲ್ಲಿ ೬೦ ಲಕ್ಷ ಷೇರುಗಳು ಹೊಸದಾಗಿ ವಿತರಿಸು­ವುದರೊಂದಿಗೆ ೬೦ ಲಕ್ಷ ಷೇರುಗಳನ್ನು ಮಾರಿಷಸ್‌ನ ಕಂಪೆನಿಯು ಮಾರಾಟ ಮಾಡಲಿದೆ. ಈ ಮೂಲಕ ೩೦೦ ಕೋಟಿ ಹಣ ಸಂಗ್ರಹಣೆ ಗುರಿ ಹೊಂದಿದೆ. ವಿತರಣೆ ಬೆಲೆ  ₨೧೮೧ ರಿಂದ ೨೦೦ ಎಂದು, ಲಾಟ್ ಗಾತ್ರ ೭೫ ಎಂದು  ನಿಗದಿಪಡಿಸಿದೆ.

ಆಡ್ ಲ್ಯಾಬ್ಸ್ ಎಂಟರ್‌ಟೇನ್ಮೆಂಟ್‌ ಲಿಮಿಟೆಡ್ ಕಂಪೆನಿಯು ೧.೮೩ ಕೋಟಿ ಷೇರುಗಳನ್ನು ಆರಂಭಿಕ ಷೇರು ವಿತರಣೆ ಮೂಲಕ ಮಾರ್ಚ್ ೧೦ ರಿಂದ ೧೨ ರವರೆಗೆ ವಿತರಿಸಲಿದೆ.ಮುಂಬೈ ಮತ್ತು ರಾಷ್ಟ್ರೀಯ ಷೇರು ವಿನಿಮಯ ಕೇಂದ್ರಗಳಲ್ಲಿ ಲೀಸ್ಟಿಂಗ್ ಆಗುವ ಈ ಕಂಪೆನಿ ವಿತರಣೆಯಲ್ಲಿ ಕೇವಲ ಶೇ.೧೦ ರಷ್ಟು ಮಾತ್ರ ಸಣ್ಣ ಹೂಡಿಕೆ­ದಾರರಿಗೆ ಮೀಸಲಿಡಲಾಗಿದೆ. ವಿತರಣೆ ದಿನಕ್ಕೆ ಐದು  ದಿನ ಮುಂಚೆ ವಿತರಣೆ ಬೆಲೆ, ಲಾಟ್ ಮುಂತಾದವುಗಳನ್ನು ಪ್ರಕಟಿಸಲಿದೆ.

ರಿಯಲ್ ಎಸ್ಟೇಟ್ ವಿಭಾಗವನ್ನು ವಿರಾಟ್ ಕ್ರೇನ್ ಇಂಡಸ್ಟ್ರೀಸ್ ನಿಂದ ಬೇರ್ಪಡಿಸಿ ಕ್ರೇನ್ ಇನ್ಫ್ರಾಸ್ಟ್ರಕ್ಚರ್ ವಿಲೀನಗೊಳಿಸುವ ಯೋಜನೆ ಜಾರಿಗೊಳಿಸಿದ ನಂತರ  ಕ್ರೇನ್ ಇನ್ಫ್ರಾಸ್ಟ್ರಕ್ಚರ್ ಕಂಪೆನಿ ೨೭ ರಿಂದ ಟಿ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಿದೆ.
4ಕಲ್ಕತ್ತಾ ಮತ್ತು ಯು.ಪಿ. ಷೇರು ವಿನಿಮಯ ಕೇಂದ್ರಗಳಲ್ಲಿ ವಹಿವಾ­ಟಾಗುತ್ತಿರುವ ಮನ್ ವಿಜಯ್ ಡೆವೆಲಪ್ ಮೆಂಟ್  ಕಂಪೆನಿ ೨೭ ರಿಂದ ಡಿ, ಟಿ.ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆ­ಯಾಗಿದೆ.

ಕಲ್ಕತ್ತಾ ಮತ್ತು ಯು ಜೈಪುರ್  ಷೇರು ವಿನಿಮಯ ಕೇಂದ್ರಗಳಲ್ಲಿ ವಹಿವಾಟಾಉತ್ತಿರುವ ಶ್ರೀ ಸೆಕ್ಯುರಿಟೀಸ್ ಕಂಪೆನಿ ಮಾರ್ಚ್ ೩  ರಿಂದ ಟಿ.ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಿದೆ.

ಐ.ಟಿ.ಸಿ.ಯಿಂದ ಯಶಸ್ವಿ ಬಿಡ್‌
ಗೋವಾದಲ್ಲಿನ ಪಾರ್ಕ್ ಹೈಯಾಟ್ ಹೋಟೆಲ್‌ನ ಕಟ್ಟಡ, ಪ್ರದೇಶ, ಯಂತ್ರೋಪಕರಣಗಳು, ಮುಂತಾದವನ್ನು ಐ.ಎಫ್.ಸಿ.ಐ,  ಎಸ್ಎಆರ್ಎಫ್ ಅಂಡ್‌ ಇ.ಎಸ್.ಐ. ಕಾಯ್ದೆ ೨೦೦೨ ರ ಪ್ರಕಾರ ತನ್ನ ಹಕ್ಕು ಚಲಾಯಿಸಿದ ಕಾರಣ ಐ ಟಿ.ಸಿ. ಕಂಪೆನಿಯು ಬಿಡ್ ಮಾಡಿತ್ತು. ಈ ಬಿಡ್ ಮೊತ್ತವು ₨೫೧೫.೪೪ ಕೋಟಿಯದಾಗಿದ್ದು, ಈಗಾಗಲೇ ಶೇ.೨೫ ರಷ್ಟು ಅಂದರೆ ₨೧೨೮.೮೬ ಲಕ್ಷ ಕೋಟಿಯನ್ನು ಐ.ಟಿ.ಸಿ.ಯು ನೀಡಿದ್ದು, ಉಳಿದ ಹಣವನ್ನು ಮುಂದಿನನ ೧೫ ದಿನದೊಳಗೆ ಪಾವತಿಸಲು ಸೂಚಿಸಲಾಗಿದೆ.

ವಾರದ ವಿಶೇಷ
ಬಜೆಟ್ ಮಂಡಣೆಯಾಯಿತು ಸರ್ಕಾರದ ಈ ಪ್ರಕ್ರಿಯೆಯಿಂದ ವಿವಿಧ ವಲಯಗಳಲ್ಲಿ ಬದಲಾವಣೆ, ಸುಧಾರಣೆ ಗಳ ನಿರೀಕ್ಷೆ, ಅಪೇಕ್ಷೆಗಳಿಗೆ ತೆರೆಬಿದ್ದಂತಾಗಿದೆ. ಈಗ ಘೋಷಣೆಯಾಗಿರುವ ಯೋಜನೆಗಳು ಎಷ್ಟರ ಮಟ್ಟಿಗೆ ಜಾರಿಯಾಗು­ವುವೆಂಬುದನ್ನು ಕಾದುನೋಡ­ಬೇಕಾಗಿದೆ.

ಆದರೆ ಬಜೆಟ್ ದಿನದಂದು  ಕೆಲವು ಕಂಪೆನಿಗಳು ವಿಶೇಷವಾಗಿ ಬ್ಯಾಂಕಿಂಗ್, ಆಟೋ ವಲಯ, ಫಾರ್ಮ ವಲಯ, ಎಫ್.ಎಂ.ಸಿ.ಜಿ. ವಲಯದ  ಕಂಪೆನಿಗಳು ತೋರಿದ ಏರಿಳಿತಗಳು ಕಂಪೆನಿಯ ಸಾಧನೆಗಳಿಗಿಂತ ನಿರೀಕ್ಷಿತ ಭಾವನೆಗಳೇ ಹೆಚ್ಚು ಪ್ರಭಾವಿಯಾಗಿವೆ ಎನ್ನಬಹುದು. ಐ.ಟಿ.ಸಿ. ಕಂಪೆನಿಯ ಷೇರು ವಿತ್ತ ಸಚಿವರ ಬಾಷಣವು ಕೊನೆಗೊಳ್ಳು­ವವರೆಗೂ ಏರಿಕೆಯಲ್ಲಿದ್ದು, ಸಿಗರೇಟ್  ಸಂಬಂಧಿತ   ಸುಂಕ  ಬದಲಾಗಿಲ್ಲ ವೆಂಬ ಕಾರಣಕ್ಕಾಗಿ ೪೦೯ ರವರೆಗೂ ಏರಿಕೆಯಿಂದ ವಿಜೃಂಭಿಸಿತು. ಆದರೆ ಸುಂಕ ಹೆಚ್ಚಾಗಿದೆ ಎಂಬ ಅಂಶ ಹೊರಬಿದ್ದಂತೆ ಷೇರಿನ ಬೆಲೆಯು ತರಗೆಲೆಯಂತೆ ಕುಸಿದು ೩೫೦ ರವರೆಗೂ ಇಳಿಯಿತು. ಹಲವರು ₨೪೧೦ನ್ನು ದಾಟಿದರೆ ಮಾರಾಟಮಾಡುವ ಉದ್ದೇಶ  ಹೊಂದಿರುತ್ತಾರೆ, ಅವಕಾಶ ವಂಚಿತರಾಗುತ್ತಾರೆ. ಇಂತಹ ಚಿಂತನೆಗಳಿಂದ ಹೊರಬರಬೇಕು. ಛಲ, ಚಪಲಗಳ ಸುಳಿಯು ಚಟಕ್ಕೆ ತಿರುಗಿ ಅವಕಾಶಗಳ ವಂಚಿತರನ್ನಾಗಿ ಮಾಡುತ್ತವೆ ಎಂಬುದನ್ನು ನೆನಪಿನಲ್ಲಿಡಬೇಕಾದ ಅಂಶವಾಗಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.