ADVERTISEMENT

ವಿದೇಶಿ ವಿತ್ತೀಯ ಸಂಸ್ಥೆಗಳ ಒತ್ತಡ

ಕೆ.ಜಿ ಕೃಪಾಲ್
Published 8 ಸೆಪ್ಟೆಂಬರ್ 2013, 19:59 IST
Last Updated 8 ಸೆಪ್ಟೆಂಬರ್ 2013, 19:59 IST

ಮುಂಬೈ ಷೇರು ವಿನಿಮಯ ಕೇಂದ್ರದ ಹೆಗ್ಗುರುತಾದ ಎಸ್ ಅಂಡ್ ಪಿ ಸಂವೇದಿ ಸೂಚ್ಯಂಕವು ಸ್ಥಿರತೆ ಕಾಣದೆ ಉಯ್ಯಾಲೆಯಲ್ಲಿ ಜೀಕುತ್ತಾ ಕಳೆದ 28ನೇ ಆಗಸ್ಟ್‌ದಂದು 17,448 ಅಂಶಗಳನ್ನು ತಲುಪಿ ವಾರ್ಷಿಕ ಕನಿಷ್ಠಮಟ್ಟ ದಾಖಲಿಸಿತು. ಮೇ 20 ರಂದು ಅಂದರೆ ಕೇವಲ ಮೂರು ತಿಂಗಳ ಹಿಂದಷ್ಟೇ 20,443 ಅಂಶಗಳನ್ನು ತಲುಪಿ ವಾರ್ಷಿಕ ಗರಿಷ್ಠ ದಾಖಲಿಸಿತ್ತು.

ಕೇವಲ ಮೂರು ತಿಂಗಳ ಅವಧಿಯಲ್ಲಿ ವಾರ್ಷಿಕ ಗರಿಷ್ಠ ಮಟ್ಟದಿಂದ ವಾರ್ಷಿಕ ಕನಿಷ್ಠಮಟ್ಟಕ್ಕೆ ಕುಸಿದು ಅಲ್ಲಿಂದ ಕೇವಲ 8 ದಿನಗಳ ವಹಿವಾಟಿನಲ್ಲಿ 1800 ಅಂಶಗಳಷ್ಟು ಏರಿಕೆ ಕಂಡಿರುವುದು ಷೇರುಪೇಟೆಯಲ್ಲಿನ ಬದಲಾವಣೆಯ ವೇಗಕ್ಕೆ ಹಿಡಿದ ಕನ್ನಡಿಯಾಗಿದೆ. ಮಂಗಳವಾರದಂದು ಸಂವೇದಿ ಸೂಚ್ಯಂಕವು ಆರಂಭದಲ್ಲಿ 19002  ಅಂಶಗಳಲ್ಲಿ ಆರಂಭವಾಗಿ 18,166  ಅಂಶಗಳವರೆಗೆ  ಕುಸಿದು 18,234  ಅಂಶಗಳಲ್ಲಿ ಅಂತ್ಯಕಂಡಿತು. ಇಂತಹ ಏರಿಳಿತಗಳು ಇತ್ತೀಚೆಗೆ ಹೆಚ್ಚಾಗುತ್ತಿದ್ದು ಇದು ವಿತ್ತೀಯ ಸಂಸ್ಥೆಗಳ, ವಿದೇಶಿ ವಿತ್ತೀಯ ಸಂಸ್ಥೆಗಳ ವಹಿವಾಟಿನ ರಭಸದಿಂದಾಗಿದೆ. ಅಗ್ರಮಾನ್ಯ ಕಂಪೆನಿಗಳು ಷೇರಿನ ಬೆಲೆಗಳು ಇಳಿಕೆಯಲ್ಲಿರುವುದರಿಂದ ಸಣ್ಣ ಹೂಡಿಕೆದಾರರು ಪ್ರವೇಶಿಸಿದಲ್ಲಿ ಷೇರುಪೇಟೆಗೆ ಉತ್ತೇಜನ ಲಭಿಸಿ ಸ್ಥಿರತೆ ಮೂಡುವುದು.
  
ಬುಧವಾರದಂದು ಆರ್‌ಬಿಐನ ನೂತನ ಗವರ್ನರ್ ಆಗಿ ರಘುರಾಂ ರಾಜನ್ ಅಧಿಕಾರ ವಹಿಸಿಕೊಂಡ ನಂತರ ಪ್ರಕಟಿಸಿದ ಯೋಜನೆಗಳಿಂದ ನೀರಸ ವಾತಾವರಣದಲ್ಲಿದ್ದ ಷೇರುಪೇಟೆಯಲ್ಲಿ ಉತ್ಸಾಹ ಮೂಡಿತು. ಇದರಿಂದ ಅಗ್ರಮಾನ್ಯ ಕಂಪೆನಿಗಳು ಪುನಶ್ಚೇತನಗೊಂಡು ಪುಟಿದೆದ್ದವು. `ಆರ್‌ಬಿಐ' ಸೆಪ್ಟೆಂಬರ್ 20 ರಂದು ಹಣಕಾಸು ನೀತಿ ಪ್ರಕಟಿಸುವ ಕಾರ್ಯಸೂಚಿ ಬಹಿರಂಗ ಪಡಿಸಿದೆ. ಇದರ ಬೆನ್ನಲ್ಲೇ ರೂಪಾಯಿ ಮೌಲ್ಯ ಸ್ಥಿರತೆ ಕಂಡು ಶುಕ್ರವಾರದಂದುರೂ 65.24 ರಲ್ಲಿ ಅಂತ್ಯಗೊಂಡು ಪೇಟೆಗಳಲ್ಲಿ ಆಸಕ್ತಿ ಮರುಕಳಿಸುವಂತೆ ಮಾಡಿತ್ತು. ಈ ಸಂದರ್ಭದಲ್ಲಿ ಹಲವಾರು ಕಂಪನಿಗಳ ಷೇರುಗಳು ಪುಟಿದೆದ್ದ ರೀತಿ ಅಭೂತಪೂರ್ವವಾದುದಾಗಿದೆ.

ಇಂತಹವುಗಳಲ್ಲಿ ಪ್ರಮುಖವಾಗಿ ಸಾರ್ವಜನಿಕ ವಲಯದ ಎಂಜಿನಿಯರ್ಸ್ ಇಂಡಿಯಾ ಕಂಪೆನಿಯುರೂ36 ಏರಿಕೆಯನ್ನು ಕಳೆದ ಒಂದು ವಾರದಲ್ಲಿ ಕಂಡಿದೆ.  ಇದರಲ್ಲಿ ಸುಮಾರು ಶೇ 20 ರಷ್ಟು ಏರಿಕೆ ಶುಕ್ರವಾರದಂದು ಕಂಡಿದೆ. ಇದರಂತೆ ಹಲವಾರು ಸಾರ್ವಜನಿಕ ವಲಯದ ಕಂಪೆನಿಗಳು ಮಿಂಚಿನಂತೆ ಏರಿಕೆ ಕಂಡವು. ಅವುಗಳಲ್ಲಿ ಬಿ.ಎಚ್.ಇ.ಎಲ್. ಸುಮಾರು ಶೇ 20 ರಷ್ಟು ಏರಿಕೆ ಕಂಡರೆ ಹಿಂದೂಸ್ತಾನ್ ಕಾಪರ್ ಶೇ 17 ರಷ್ಟು, ಒಎನ್‌ಜಿಸಿ ಶೇ16 ರಷ್ಟು ಏರಿಕೆ ಕಂಡಿವೆ. ಎಲ್‌ಅಂಡ್‌ಟಿ ಫೈನಾನ್ಸ್ ಹೋಲ್ಡಿಂಗ್ಸ್ ಸಹ ಶೇ 20 ರಷ್ಟು ಏರಿಕೆಯನ್ನು ಒಂದು ವಾರದಲ್ಲಿ ಪಡೆದಿರುವುದು, ಜೆಟ್ ಏರ್‌ವೇಸ್ ವಾರದಲ್ಲಿರೂ56 ರಷ್ಟು ಏರಿಕೆ ಕಂಡಿರುವುದು, ಪ್ರತಿ ಷೇರಿಗೆರೂ11 ರಂತೆ ಲಾಭಾಂಶದ ನಂತರದ ವಹಿವಾಟಿನಲ್ಲಿ ಬಿಪಿಸಿಎಲ್ರೂ12 ಏರಿಕೆ ಕಂಡಿರುವುದು,

ಬಿಎಚ್‌ಇಎಲ್ರೂ 3.29ರ ಲಾಭಾಂಶದ ನಂತರದಲ್ಲಿರೂ4.35ರ ಏರಿಕೆ ಮುಂತಾದವು ಹೂಡಿಕೆದಾರರ ಆಸಕ್ತಿ ಹೆಚ್ಚುತ್ತಿರುವುದನ್ನು ತೋರಿಸುತ್ತದೆ. ಮುಂದಿನ ದಿನಗಳಲ್ಲಿ, ಇದುವರೆಗೂ ಕಡೆಗಣಿಸಿರುವ ಉತ್ತಮ ಕಂಪೆನಿ ಷೇರುಗಳಲ್ಲಿ ಚಟುವಟಿಕೆ ಮೂಡುವ ಸಾಧ್ಯತೆ ಇದೆ. ಸಣ್ಣ ಹೂಡಿಕೆದಾರರು ಮೂಲಅಂಶಗಳನ್ನು ಆಧರಿಸಿದ ಹೂಡಿಕೆಗೆ ಇನ್ನು ಅವಕಾಶವಿದೆ. ಷೇರಿನ ಬೆಲೆಗಳು ಏರಿಕೆ ಕಾಣುವುದಕ್ಕಿಂತ ಮುಂಚೆ ಅವಕಾಶದ ಲಾಭ ಪಡೆಯಿರಿ.
ಹಿಂದಿನ ವಾರ ಒಟ್ಟಾರೆ 650 ಅಂಶಗಳಷ್ಟು ಏರಿಕೆ ಕಂಡ ಸಂವೇದಿ ಸೂಚ್ಯಂಕವು ತನ್ನೊಂದಿಗೆ ಮಧ್ಯಮ ಶ್ರೇಣಿಯ ಸೂಚ್ಯಂಕ 150 ಅಂಶಗಳಷ್ಟು, ಕೆಳ ಮಧ್ಯಮಶ್ರೇಣಿ ಸೂಚ್ಯಂಕ 152 ಅಂಶಗಳಷ್ಟುಜಿಗಿತ ಕಾಣುವಂತೆ ಮಾಡಿತು. ವಿದೇಶಿ ವಿತ್ತೀಯ ಸಂಸ್ಥೆಗಳು ಒಟ್ಟಾರೆರೂ 2434 ಕೋಟಿ ಹೂಡಿಕೆ ಮಾಡಿದರೆ ಸ್ಥಳೀಯ ವಿತ್ತೀಯ ಸಂಸ್ಥೆಗಳುರೂ643 ಕೋಟಿ ಮೌಲ್ಯದ ಷೇರನ್ನು ಮಾರಾಟ ಮಾಡಿವೆ. ಷೇರುಪೇಟೆಯ ಬಂಡವಾಳ ಮೌಲ್ಯವು ಹಿಂದಿನ ವಾರದರೂ60.30 ಲಕ್ಷ ಕೋಟಿಯಿಂದರೂ62.35 ಲಕ್ಷ ಕೋಟಿಗೆ ಏರಿಕೆ ಕಂಡಿದೆ.

ಹೊಸ ಷೇರಿನ ವಿಚಾರ
*ಕುಶಾಲ್ ಟ್ರೇಡ್ ಲಿಂಕ್ ಲಿಮಿಟೆಡ್ ಕಂಪೆನಿಯು ಇತ್ತೀಚೆಗೆರೂ35 ರಂತೆ ಷೇರುಗಳನ್ನು ಸಾರ್ವಜನಿಕ ವಿತರಣೆ ಮಾಡಿದೆ. ಈ ಕಂಪೆನಿಯು ಎಸ್.ಎಂ.ಇ. ವಿಭಾಗದ್ದಾಗಿದ್ದು ಸೆಪ್ಟೆಂಬರ್ * ರಿಂದ ಮುಂಬೈ ಷೇರು ವಿನಿಮಯ ಕೇಂದ್ರದ ಎಂಟಿ ವಿಭಾಗದಲ್ಲಿ 4,000 ಷೇರುಗಳ ವಹಿವಾಟು ಗುಚ್ಛದೊಂದಿಗೆ ವಹಿವಾಟಿಗೆ ಬಿಡುಗಡೆಯಾಗಿದೆ.
*ಸುಚನಾ ಟವರ್ಸ್ ಲಿ. ಕಂಪೆನಿಯು ಷೇರಿನ ಮುಖಬೆಲೆಯನ್ನುರೂ1 ರಿಂದರೂ10ಕ್ಕೆ ಕ್ರೋಡೀಕರಿಸಿದ ನಂತರ ಹೊಸ ಅವತಾರದಲ್ಲಿ 11ನೇ ಸೆಪ್ಟೆಂಬರ್‌ನಿಂದ ವಹಿವಾಟಿಗೆ ಬಿಡುಗಡೆಯಾಗಿದೆ.

ಬೋನಸ್ ಷೇರಿನ ವಿಚಾರ
*ಅಜಂತಾ ಫಾರ್ಮಾ ಲಿ. ಕಂಪೆನಿ ವಿತರಿಸಲಿರುವ 1:2ರ ಅನುಪಾತದ ಬೋನಸ್ ಷೇರಿಗೆ 18ನೇ ಸೆಪ್ಟೆಂಬರ್ ನಿಗದಿತ ದಿನವಾಗಿದೆ.
*ಸಂವೃದ್ಧಿ ರಿಯಾಲ್ಟಿ ಲಿ. ಕಂಪೆನಿ ವಿತರಿಸಲಿರುವ 1:5ರ ಅನುಪಾತದ ಬೋನಸ್‌ಗೆ ಷೇರಿಗೆ 12ನೇ ಸೆಪ್ಟೆಂಬರ್ ನಿಗದಿತ ದಿನವಾಗಿದೆ.
*ಆರೋ ಗ್ರಾನೈಟ್ ಇಂಡಸ್ಟ್ರೀಸ್ ಲಿ. ಕಂಪೆನಿಯು 17 ರಂದು ಬೋನಸ್ ಷೇರು ವಿತರಣೆ ಪರಿಶೀಲಿಸಲಿದೆ.

ಹಕ್ಕಿನ ಷೇರಿನ ವಿಚಾರ
*ಯುನಿಫಾಸ್ ಎಂಟರ್‌ಪ್ರೈಸಸ್ ಲಿ. ಕಂಪೆನಿಯು 7 ರಂದು ಹಕ್ಕಿನ ಷೇರು ವಿತರಣೆ ಬಗ್ಗೆ ಪರಿಶೀಲಿಸಿದೆ.
*ವಾಟರ್ ಬೇಸ್ ಲಿ. ಕಂಪೆನಿಯು 1:2ರ ಅನುಪಾತದಲ್ಲಿ ಮುಖ ಬೆಲೆಯಲ್ಲಿ, ಹಕ್ಕಿನ ಷೇರು ವಿತರಿಸಲು 12ನೇ ಸೆಪ್ಟೆಂಬರ್ ನಿಗದಿತ ದಿನವಾಗಿದೆ.
*ಕೋರಮಂಡಲ್ ಎಂಜಿನಿಯರಿಂಗ್ ಕಂಪೆನಿಯುರೂ60 ಕೋಟಿ ವರೆಗೂ ಹಕ್ಕಿನ ಷೇರು ವಿತರಿಸಲು ನಿರ್ಧರಿಸಿದ್ದು ಇದಕ್ಕಾಗಿ ಅಕ್ಟೋಬರ್ 1 ರಂದು ವಿಶೇಷ ಸಾಮಾನ್ಯ ಸಭೆ ಕರೆದಿದೆ.

ಮುಖ ಬೆಲೆ ಸೀಳಿಕೆ ವಿಚಾರ
*ಮಯೂರ್ ಯುನಿಕೋಟರ್ಸ್ ಕಂಪೆನಿಯ ಷೇರಿನ ಮುಖ ಬೆಲೆಯನ್ನುರೂ10 ರಿಂದರೂ5ಕ್ಕೆ ಸೀಳಲು 26ನೇ ಸೆಪ್ಟೆಂಬರ್ ನಿಗದಿತ ದಿನವಾಗಿದೆ.
*ಸ್ವಗೃಹ ಇನ್‌ಫ್ರಾಸ್ಟ್ರಕ್ಚರ್ ಲಿ. ಷೇರಿನ ಮುಖ ಬೆಲೆಯನ್ನುರೂ10 ರಿಂದರೂ5ಕ್ಕೆ ಸೀಳಲಿದೆ.
ವಹಿವಾಟಿನಿಂದ ಹಿಂದಕ್ಕೆ
ಅಂಕುರ್ ಡ್ರಗ್ಸ್ ಅಂಡ್ ಫಾರ್ಮ ಲಿ. ಕಂಪೆನಿಗೆ ಸಮಾಪನಗೊಳಿಸಲು ಅಧಿಕೃತ ಲಿಕ್ವಿಡೇಟರ್ ನೇಮಿಸಿರುವುದರಿಂದ 6 ರಿಂದ ಈ ಷೇರಗಳ ವಹಿವಾಟು ಸ್ಥಗಿತಗೊಂಡಿದೆ.

ಅಸಹಜ ಚಟುವಟಿಕೆ
ಸ್ಟರ್ಲೈಟ್ ಇಂಡಸ್ಟ್ರೀಸ್ ಕಂಪೆನಿಯು ಸೀಸಾ ಗೋವಾ ಕಂಪೆನಿಯಲ್ಲಿ 5:3 ಅನುಪಾತದಲ್ಲಿ ವಿಲೀನಗೊಳ್ಳುವುದನ್ನು ಅದಕ್ಕಾಗಿ 28ನೇ ಆಗಸ್ಟ್ ನಿಗದಿತ ದಿನವನ್ನಾಗಿ ಕಂಪೆನಿ ಪ್ರಕಟಿಸಿದಾಗ ಸೀಸಾ ಗೋವಾ ಷೇರಿನ ಬೆಲೆಯುರೂ130ರ ಸಮೀಪವಿತ್ತು. ಕೇವಲ 10 ದಿನಗಳಲ್ಲಿ ಷೇರಿನ ಬೆಲೆಯುರೂ192ರ ವರೆಗೂ ಏರಿಕೆ ಕಂಡಿದ್ದು, 5ನೇ ಸೆಪ್ಟೆಂಬರ್ ಷೇರಿನ ಬೆಲೆಯುರೂ174ರ ವರೆಗೂ ಇಳಿಕೆ ಕಂಡಿತು.

ಇಂತಹ ಏರಿಳಿತಗಳ ಲಾಭವು ಸ್ಟರ್ಲೈಟ್ ಇಂಡಸ್ಟ್ರೀಸ್ ಷೇರುದಾರರಿಗೆ ದೊರೆಯದಂತೆ ನಿರ್ವಹಿಸಲಾಗಿದೆ. ಸೆಪ್ಟೆಂಬರ್ 6 ರಂದು 209 ಕೋಟಿ ಹೊಸ ಷೇರುಗಳು (ಸ್ಟರ್ಲೈಟ್ ಇಂಡಸ್ಟ್ರೀಸ್, ಮದ್ರಾಸ್ ಅಲ್ಯುಮಿನಿಯಂ ಕಂಪೆನಿ, ಸ್ಟರ್ಲೈಟ್ ಎನರ್ಜಿ, ವೇದಾಂತ ಅಲ್ಯುಮಿನಿಯಂ, ಎಕಟೆರಿಸಾ ಕಂಪೆನಿಗಳು ಸೀಸಾಗೋವಾದಲ್ಲಿ ವಿಲೀನದಿಂದ ವಿತರಿಸಿದವು) ವಹಿವಾಟಿಗೆ ಬಿಡುಗಡೆಯಾಗುವ ಸೂಚನೆ ಹೊರಬಿದ್ದ ಕಾರಣ ಷೇರಿನ ಬೆಲೆಯುರೂ192 ರಿಂದರೂ174ರ ವರೆಗೂ ಇಳಿಕೆ ಕಂಡು 6 ರಂದು ವಹಿವಾಟಾಗುವ ಹೊಸ ಷೇರುಗಳು ಈ ಅವಕಾಶದಿಂದ ವಂಚಿತವಾಗಿವೆ. ಇದು ಕೃತಕಮಯವಾಗಿದ್ದು ನಿಯಂತ್ರಕರು ಗಮನಿಸಬೇಕಾಗಿದೆ.

ADVERTISEMENT

ವಾರದ ವಿಶೇಷ

ಸೆ. 4 ರಂದು ಭಾರತೀಯ ರಿಸರ್ವ್ ಬ್ಯಾಂಕಿನ ಹೊಸ ಗವರ್ನರ್ ನೀಡಿದ ಹೇಳಿಕೆಗಳು ಪೇಟೆಗೆ ಹೊಸ ಚೈತನ್ಯ ತುಂಬಿದವು. ಅಂದು ಸಂವೇದಿ ಸೂಚ್ಯಂಕವು 332 ಅಂಶಗಳಷ್ಟು ಹಾಗೂ ಗುರುವಾರ 412 ಅಂಶಗಳಷ್ಟು ಮುನ್ನಡೆ ಸಾಧಿಸಿತು. ಗುರುವಾರ ವಿದೇಶಿ ವಿತ್ತೀಯ ಸಂಸ್ಥೆಗಳುರೂ1,100 ಕೋಟಿಗೂ ಹೆಚ್ಚಿನ ಹೂಡಿಕೆ ಮಾಡುವಂತಾಗಿ ರೂಪಾಯಿಯ ಮೌಲ್ಯ ಚೇತರಿಕೆಯತ್ತ ತಿರುಗಿಸಿತು. ಅಂದು ಬಿ.ಎಸ್.ಇ. ಬ್ಯಾಂಕೆಕ್ಸ್ 937 ಅಂಶಗಳಷ್ಟು ಬ್ಯಾಂಕ್ `ನಿಫ್ಟಿ' 836 ಅಂಶಗಳಷ್ಟು ಏರಿಕೆ ಕಂಡವು.

ಇತ್ತೀಚಿನ ದಿನಗಳಲ್ಲಿ ಬ್ಯಾಂಕಿಂಗ್ ವಲಯದ ಕಂಪೆನಿಗಳು ಅದರಲ್ಲೂ ವಿಶೇಷವಾಗಿ ಸಾರ್ವಜನಿಕ ವಲಯದ ಬ್ಯಾಂಕುಗಳು ಕುಸಿತ ಕಂಡಿದ್ದವು. ಇಂತಹ ಸಂದರ್ಭದಲ್ಲಿ ಹೊಸ ಗವರ್ನರ್ ಅವರ ಭರವಸೆಯ ಮಾತುಗಳು ಪೇಟೆಗೆ ಬಲ ತುಂಬಿ, ಬೃಹತ್ ಮುನ್ನಡೆ ಸಾಧ್ಯವಾಯಿತು. ಅಂದು ಯೆಸ್ ಬ್ಯಾಂಕ್ ಶೇ 21 ರಷ್ಟು, ಎಕ್ಸಿಸ್ ಬ್ಯಾಂಕ್ ಶೇ 15ರಷ್ಟು, ಫೆಡರಲ್ ಬ್ಯಾಂಕ್ ಶೇ 12 ರಷ್ಟು, ಓರಿಯಂಟಲ್ ಬ್ಯಾಂಕ್ ಶೇ11 ರಷ್ಟು ಏರಿಕೆ ಕಂಡಿದ್ದಲ್ಲದೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾರೂ140ಕ್ಕೂ ಹೆಚ್ಚಿನ ಏರಿಕೆಯಿಂದ ವಿಜೃಂಭಿಸಿದೆ. ಇದರೊಂದಿಗೆ ಐಸಿಐಸಿಐ ಬ್ಯಾಂಕ್, ಇಂಡಸ್ ಇಂಡ್ ಬ್ಯಾಂಕ್, ದೇನಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಎಚ್.ಡಿ.ಎಫ್.ಸಿ. ಬ್ಯಾಂಕ್, ಕೆನರಾ ಬ್ಯಾಂಕ್, ಕರ್ನಾಟಕ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್ ಮೊದಲ್ಗೊಂಡು ಎಲ್ಲಾ ಬ್ಯಾಂಕಿಂಗ್ ವಲಯ ಚೇತರಿಕೆ, ಗಮನಾರ್ಹ ಪ್ರಮಾಣದಲ್ಲಿ ಕಂಡಿದೆ.

ಇದರ ಹಿಂದಿನ ರಹಸ್ಯ ಮೌಲ್ಯಾಧಾರಿತ ಕೊಳ್ಳುವಿಕೆಯಾಗಿದೆ. ಹೆಚ್ಚಿನ ಕುಸಿತದಲ್ಲಿ ಈ ಅಗ್ರಮಾನ್ಯ ಕಂಪೆನಿಗಳು ಉತ್ತಮ ಹೂಡಿಕೆಯಾಗಿ ಪರಿಣಮಿಸಿದವು. ಆದರೆ ಇತ್ತೀಚೆಗೆ ರಭಸದ ಏರಿಕೆ ಕಂಡಿದ್ದ ಟಾಟಾ ಸ್ಟೀಲ್, ಸೀಸಾಗೋವಾ, ರಾನ್‌ಬಾಬಕ್ಸಿ ಲ್ಯಾಬ್, ಇನ್ಫೊಸಿಸ್, ಟಿ ಸಿ ಎಸ್, ವಿಪ್ರೊ ಮುಂತಾದವು ಕುಸಿತಕೊಳ್ಳಗಾಗಿದ್ದು ಆ ಷೇರಿನ ದರಗಳಲ್ಲಿ ಪಕ್ವತೆಯ ಹಂತ ತಲುಪಿರುವುದನ್ನು ದೃಢಪಡಿಸುತ್ತವೆ. ಮಾಧ್ಯಮಗಳಲ್ಲಿ ಬರುವ ವಿಶ್ಲೇಷಣೆಗಳನ್ನೇ ಸಂಪೂರ್ಣವಾಗಿ ಅವಲಂಭಿಸಿದೆ. ವಾಸ್ತವಾಂಶವರಿತು ನಿರ್ಧರಿಸುವುದು ಸರ್ವಶ್ರೇಷ್ಠ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.