ADVERTISEMENT

ಹೊಸ ಎತ್ತರಕ್ಕೆ ಏರಿದ ಷೇರುಪೇಟೆ

ಕೆ.ಜಿ ಕೃಪಾಲ್
Published 5 ನವೆಂಬರ್ 2017, 19:30 IST
Last Updated 5 ನವೆಂಬರ್ 2017, 19:30 IST

ಸಂವೇದಿ ಸೂಚ್ಯಂಕದ ಪ್ರತಿಯೊಂದು ಏರಿಕೆಯು ಷೇರುಪೇಟೆಯಲ್ಲಿ ದಾಖಲೆಯಾಗಿ ವಿಜೃಂಭಿಸುತ್ತಿದೆ. ಶುಕ್ರವಾರ ಸಂವೇದಿ ಸೂಚ್ಯಂಕವು ದಿನದ ಮಧ್ಯಂತರದಲ್ಲಿ 33,733.71 ಅಂಶಗಳಿಗೆ ತಲುಪಿ ಸಾರ್ವಕಾಲಿಕ ದಾಖಲೆ ನಿರ್ಮಿಸಿದೆ. ಅಂದಿನ ಏರಿಕೆಗೆ ಕೊಡುಗೆ ನೀಡಿದ ಕಂಪನಿಗಳು ಎಂದರೆ ಎಸ್‌ಬಿಐ , ಲಾರ್ಸನ್ ಅಂಡ್ ಟೂಬ್ರೊ, ಟಾಟಾ ಮೋಟಾರ್ಸ್, ಎಚ್‌ಡಿಎಫ್‌ಸಿ, ಎಚ್‌ಡಿಎಫ್‌ಸಿ ಬ್ಯಾಂಕ್ ನಂತಹ ಕಂಪನಿಗಳು.

ಸಂವೇದಿ ಸೂಚ್ಯಂಕದಲ್ಲಿರುವ ಮೂವತ್ತು ಕಂಪನಿಗಳು ಒಂದೇ ದಿಕ್ಕಿನಲ್ಲಿ ಸಾಗುವುದು ಅತಿ ವಿರಳ. ಈ ಕಾರಣ ವಹಿವಾಟುದಾರರಿಗೆ ಸಂವೇದಿ ಸೂಚ್ಯಂಕವನ್ನು ಕೃತಕವಾಗಿಯಾದರೂ ಸ್ಥಿರತೆ ಮೂಡಿಸುವುದು ಸಾಧ್ಯವಾಗಿದೆ. ಇದುವರೆಗೂ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಟೆಲಿಕಾಂ ವಲಯ, ಕೆಲವು ದಿನಗಳಿಂದ  ಏರಿಕೆ ಕಂಡಿದೆ.  ಸಂವೇದಿ ಸೂಚ್ಯಂಕದ ಹೆಚ್ಚಿನ ಷೇರುಗಳು ಏರಿಕೆಯತ್ತ ಸಾಗಿದ್ದರೆ,  ಉಳಿದಂತೆ ಫಾರ್ಮಾ ವಲಯದ ಕಂಪನಿಗಳು ನಿಶ್ಚೇಷ್ಟಿತ ಅವಸ್ಥೆಯಲ್ಲಿದ್ದುದು ತಿಳಿದಿರುವ ವಿಷಯವಾಗಿದೆ. ಆದರೆ, ಈ ವಾರ ಫಾರ್ಮಾ ವಲಯವು ಸಹ ದಿಢೀರ್ ಏರಿಕೆಯಿಂದ ಮಿಂಚಿದೆ.

ಮುಖ್ಯವಾಗಿ ದಿವೀಸ್ ಲ್ಯಾಬೊರೇಟರೀಸ್ ಕಂಪನಿಯ ಘಟಕವೊಂದರ ಮೇಲೆ ಅಮೆರಿಕದ ಎಫ್‌ಡಿಎ ವಿಧಿಸಿದ್ದ ನಿಷೇಧವನ್ನು ತೆರವುಗೊಳಿಸಲಿದೆ ಎಂಬ ಸುದ್ದಿಯ ಕಾರಣಕ್ಕೆ  ಷೇರಿನ ಬೆಲೆಯನ್ನು ₹900 ರ ಸಮೀಪದಿಂದ ₹1,117 ರವರೆಗೂ ಏರಿಕೆ ಕಾಣುವಂತಾಯಿತು. ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ₹1,300ರಲ್ಲಿದ್ದ ಈ ಷೇರಿನ ಬೆಲೆಯು, ಈ ವರ್ಷದ ಮೇ ಅಂತ್ಯದಲ್ಲಿ  ₹533 ರವರೆಗೂ ಕುಸಿದು ಮತ್ತೆ ಆರು ತಿಂಗಳಲ್ಲಿ ₹1,100 ರ ಗಡಿ ದಾಟಿದೆ.  ಕೇವಲ ಆರು ತಿಂಗಳಲ್ಲಿ  ಷೇರಿನ ಬೆಲೆ ದ್ವಿಗುಣಗೊಂಡಿರುವುದು ವಿಸ್ಮಯಕಾರಿಯಲ್ಲವೇ.

ADVERTISEMENT

ಸೋಮವಾರ ಮತ್ತೊಂದು ಫಾರ್ಮಾ ಕಂಪನಿ ಲುಪಿನ್ ಲಿಮಿಟೆಡ್ ಪ್ರಕಟಿಸಿದ ಫಲಿತಾಂಶ ಪ್ರೇರಿತವಾಗಿ ₹₹1,090ರವರೆಗೂ ಏರಿಕೆ ಕಂಡಿತು.  ಆದರೆ ನಂತರದ ಕೆಲವೇ ನಿಮಿಷಗಳಲ್ಲಿ ಷೇರಿನ ಬೆಲೆ ಕುಸಿದು ₹ 1,027 ರಲ್ಲಿ ಕೊನೆಗೊಂಡಿತು. ಈ ರೀತಿಯ ಏರಿಕೆಗೆ ಫಾರ್ಮಾ ಸಮೂಹದ ಕಂಪನಿಗಳಾದ ಸನ್ ಫಾರ್ಮಾ ಸ್ಯುಟಿಕಲ್ಸ್, ಸಿಪ್ಲಾ ಗಳು ಜೊತೆಗೂಡಿದವು. ಬುಧವಾರ ಸಂವೇದಿ ಸೂಚ್ಯಂಕವು ಮತ್ತೊಮ್ಮೆ ಏಣಿ ಹತ್ತಿತು. ಇದಕ್ಕೆ ಕಾರಣವಾಗಿದ್ದು, ವಿಶ್ವ ಬ್ಯಾಂಕ್ ನ ಪಟ್ಟಿಯಲ್ಲಿ  ಸುಲಭವಾಗಿ ವ್ಯವಹಾರ ಮಾಡಬಹುದಾದ ದೇಶಗಳಲ್ಲಿ  ಭಾರತಕ್ಕೆ 100 ನೇ ಸ್ಥಾನ ದೊರೆತಿದೆ. ಈ ಹಿಂದೆ ಇದ್ದ 130 ನೇ  ಸ್ಥಾನದಿಂದ 100 ನೇ  ಸ್ಥಾನಕ್ಕೆ ಜಿಗಿತ ಕಂಡಿದ್ದರಿಂದ ಅಗಾಧ ಮಟ್ಟದ ಏರಿಕೆ ಪ್ರದರ್ಶಿತ
ವಾಯಿತು.

ಈ ಮಧ್ಯೆ, ಐಟಿಸಿ ಕಂಪನಿಯು ತನ್ನ ಗ್ರಾಹಕ ಬಳಕೆಯ ಉತ್ಪನ್ನಗಳ ವಿಭಾಗಕ್ಕೆ ₹10,000 ಕೋಟಿ ಹೂಡಿಕೆ ಮಾಡಲಿದೆ ಎಂದು ತಿಳಿಸಿದೆ. ಇದುವರೆಗೂ ಸಂವೇದಿ ಸೂಚ್ಯಂಕದಲ್ಲಿ ತಟಸ್ಥವಾಗಿರುವ ಈ ಷೇರು ಮುಂದಿನ ದಿನಗಳಲ್ಲಿ ಚೇತರಿಕೆಗೆ ಪೀಠಿಕೆ ಹಾಕಿದಂತಿದೆ. ಸರ್ಕಾರಿ ವಲಯದ ನ್ಯಾಷನಲ್ ಅಲ್ಯೂಮಿನಿಯಂ, ಹಿಂದೂಸ್ಥಾನ್ ಕಾಪರ್,  ಎಂಎಂಟಿಸಿ ಗಳು ವಾರ್ಷಿಕ ಗರಿಷ್ಠದಲ್ಲಿದ್ದರೂ ಮುಂದಿನ  ದಿನಗಳಲ್ಲಿ ಕಳೆದ ತ್ರೈಮಾಸಿಕದಲ್ಲಿನ ತಮ್ಮ ಸಾಧನೆಯಾಧರಿಸಿ ಇನ್ನಷ್ಟು ಚುರುಕಾಗುವ ಸಾಧ್ಯತೆ ಇದೆ.

ಸೋಮವಾರ ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿರುವ ಆರ್‌ಇಸಿ ಷೇರಿನ ಬೆಲೆಯು ಕಳೆದ ಒಂದು ತಿಂಗಳಲ್ಲಿ ₹150 ರ ಸಮೀಪದಿಂದ ₹183 ರವರೆಗೂ ಜಿಗಿದಿದೆ. ಅಪೋಲೊ ಟೈರ್ ಕಂಪನಿಯ ಫಲಿತಾಂಶ ಹೊರಬಿದ್ದ ನಂತರವೂ ಇಳಿಕೆಯಲ್ಲಿದೆ. ಬಹುಶಃ ಎರಡನೇ ಸುತ್ತಿನ ಏರಿಕೆಯಲ್ಲಿ ಪಾಲ್ಗೊಳ್ಳಬಹುದು.  ಹಿಂದೂಸ್ಥಾನ್ ಯುನಿಲಿವರ್ ಫಲಿತಾಂಶದ ನಂತರ ನೀರಸ ಚಟುವಟಿಕೆಯಲ್ಲಿದೆ.

ವಾಯು ಯಾನದ  ಇಂಟರ್‌ಗ್ಲೋಬ್ ಏವಿಯೇಷನ್ ಲಿಮಿಟೆಡ್ ಫಲಿತಾಂಶ ಪ್ರಕಟಣೆಗೆ ಮುನ್ನವೇ ಪಡೆದುಕೊಂಡ ಏರಿಕೆ ಪ್ರವೃತ್ತಿಯನ್ನು ಮುಂದುವರೆಸಿಕೊಂಡು ಚುರುಕಾಗಿತ್ತು. ಪೇಪರ್ ವಲಯದ ಹುಹ್ ಟಮಕಿ ಪಿಪಿಎಲ್ ಲಿಮಿಟೆಡ್ (ಹಿಂದಿನ ಪೇಪರ್ ಪ್ರಾಡಕ್ಟ್ಸ್ ಲಿಮಿಟೆಡ್) ಕಂಪನಿ ಮುಂದಿನ ವಾರ ತನ್ನ ಫಲಿತಾಂಶ ಪ್ರಕಟಿಸಲಿದ್ದು, ಷೇರಿನ ಬೆಲೆ ಈ ವಾರ ₹215 ರಿಂದ ₹322 ರವರೆಗೂ ಏರಿಕೆ ಕಂಡಿದೆ. ಶುಕ್ರವಾರ ಒಂದೇ ದಿನ ₹268 ರ ಸಮೀಪದಿಂದ ₹322 ರವರೆಗೂ ಜಿಗಿತ ಕಂಡು ₹294 ರಲ್ಲಿ ಕೊನೆಗೊಂಡಿದೆ.

ಶುಕ್ರವಾರ ಎಡೆಲ್ವಿಸ್ ಫೈನಾನ್ಶಿಯಲ್ ಸರ್ವಿಸಸ್ ಕಂಪನಿ ತನ್ನ ಫಲಿತಾಂಶಕ್ಕೆ ಮುನ್ನ ₹309 ರ ವಾರ್ಷಿಕ ಗರಿಷ್ಠ ತಲುಪಿ ನಂತರ ಕುಸಿದು ₹292 ರ ಸಮೀಪ ಕೊನೆಗೊಂಡಿದೆ. ರೇನ್ ಇಂಡಸ್ಟ್ರೀಸ್ ಕಂಪನಿ ಮುಂದಿನ ವಾರ 8 ರಂದು ತನ್ನ ಫಲಿತಾಂಶ ಪ್ರಕಟಿಸಲಿದ್ದು ಒಂದೇ ವಾರದಲ್ಲಿ ₹245 ರ ಸಮೀಪದಿಂದ ₹319 ರ ಗರಿಷ್ಠ ತಲುಪಿ ₹309 ರಲ್ಲಿ ಕೊನೆಗೊಂಡಿದೆ.

ಮಂಗಳವಾರ ಬೋನಸ್ ಷೇರು ವಿತರಣೆ ಪರಿಶೀಲಿಸಲಿರುವ ಕ್ಯಾಸ್ಟ್ರಾಲ್ ಇಂಡಿಯಾ ಚುರುಕಾದ ಏರಿಕೆ ಪಡೆದುಕೊಂಡಿತು. ಈ ಷೇರು ಕಳೆದ ಒಂದು ತಿಂಗಳಲ್ಲಿ ವಾರ್ಷಿಕ ಕನಿಷ್ಠ₹ 353 ರ ಸಮೀಪದಿಂದ ₹418 ರವರೆಗೂ ಏರಿಕೆ ಕಂಡಿದೆ.

ಒಟ್ಟಾರೆ ಕೆಳಮಧ್ಯಮ ಶ್ರೇಣಿ ಕಂಪನಿಗಳು ಹೆಚ್ಚು ಬೇಡಿಕೆಯಿಂದ ಏರಿಕೆಯಲ್ಲಿರುವ ಈ ವಾರ ಸಂವೇದಿ ಸೂಚ್ಯಂಕ 528 ಅಂಶಗಳ ಏರಿಕೆ ಪಡೆದುಕೊಂಡರೆ ಮಧ್ಯಮ ಶ್ರೇಣಿ ಸೂಚ್ಯಂಕ  333  ಅಂಶಗಳ ಹಾಗು ಕೆಳಮಧ್ಯಮ ಶ್ರೇಣಿ ಸೂಚ್ಯಂಕ 521 ಅಂಶಗಳ ಏರಿಕೆ ಕಂಡುಕೊಂಡವು. ಸ್ವದೇಶಿ ವಿತ್ತೀಯ ಸಂಸ್ಥೆಗಳ ಚಟುವಟಿಕೆ ₹354 ಕೋಟಿ ಮಾರಾಟದತ್ತ ಸಾಗಿದರೆ, ವಿದೇಶಿ ವಿತ್ತೀಯ ಸಂಸ್ಥೆಗಳು ₹8,337 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿವೆ. ಪೇಟೆಯ ಬಂಡವಾಳ ಮೌಲ್ಯ ₹145.56 ಲಕ್ಷ ಕೋಟಿಗೆ ಏರಿಕೆ ಕಂಡು ಸರ್ವಕಾಲೀನ ದಾಖಲೆ ನಿರ್ಮಿಸಿತು. ಡಿಸಿಬಿ ಬ್ಯಾಂಕ್ ಟೈರ್ - 2 ಡಿಬೆಂಚರ್ ಗಳ  ಮೂಲಕ ₹100 ಕೋಟಿ ಹಣವನ್ನು  ಸಂಗ್ರಹಿಸಲಿದೆ.

(9886313380, ಸಂಜೆ 4.30 ರನಂತರ)

ವಾರದ ವಿಶೇಷ

ಸಾಫ್ಟ್‌ವೇರ್ ಕಂಪನಿ ಇನ್ಫೊಸಿಸ್ ತನ್ನ ಷೇರುದಾರರಿಂದ ಷೇರುಗಳನ್ನು ಹಿಂದೆಕೊಳ್ಳಲು ನವೆಂಬರ್ 1 ನಿಗದಿತ ದಿನವಾಗಿದ್ದರೂ ಇದುವರೆಗೂ ಏನೂ ಬೆಳವಣಿಗೆ ಇಲ್ಲ ಏನು ಮಾಡುವುದು ಎಂಬುದು ಹೆಚ್ಚಿನ  ಹೂಡಿಕೆದಾರರ ಪ್ರಶ್ನೆಯಾಗಿದೆ. ನವೆಂಬರ್ 1 ನಿಗದಿತ ದಿನವಾಗಿರುವುದು ಸರಿ.  ಈಗ ಕಂಪನಿ ಅರ್ಹ ಷೇರುದಾರರಿಗೆ ಕಳುಹಿಸಬೇಕಾದ ಅರ್ಜಿಗಳು ಸಿದ್ಧಗೊಳ್ಳುತ್ತಿರಬಹುದು. ಸ್ವಲ್ಪ ಸಮಯದಲ್ಲೇ ಅವು ಷೇರುದಾರರನ್ನು ತಲುಪಬಹುದಾಗಿದೆ.

ಸಾಮಾನ್ಯವಾಗಿ ಷೇರುದಾರರು ಈ ಅರ್ಜಿಯನ್ನು ತುಂಬಿಸಿ ಸಹಿಯೊಂದಿಗೆ,  ಕಂಪನಿ ಒದಗಿಸಿರುವ ಡಿಪಿಐಡಿ ಮತ್ತು ಇತರೆ ಅಂಶಗಳನ್ನು ತುಂಬಿಸಿ ಡಿಪಾಜಿಟರಿ ಪಾರ್ಟಿಸಿಪಂಟ್ ಸಂಸ್ಥೆಗೆ ತಲುಪಿಸಿದ  ಡೆಲಿವರಿ ಇನ್ ಸ್ಟ್ರಕ್  ಷನ್ ಸ್ಲಿಪ್ ಜೊತೆಗೆ ತಮ್ಮ ಟ್ರೇಡಿಂಗ್ ಖಾತೆಯಿರುವ ಬ್ರೋಕರ್ ಗೆ ತಲುಪಿಸಬೇಕು.  ಅವರು ಕಂಪ್ಯೂಟರ್ ಗೆ ಪೂರ್ಣ ಮಾಹಿತಿ ತುಂಬುವರು.  ಕೊನೆಯ ದಿನದ ನಂತರ ಎಷ್ಟು ಷೇರುಗಳು ಈ ಹಿಂದೆಕೊಳ್ಳುವಿಕೆಯಲ್ಲಿ ಅಂಗೀಕರಿಸಲಾಗಿದೆ ಎಂಬುದು ತಿಳಿಯುತ್ತದೆ. ಹೆಚ್ಚಿನ ಷೇರುಗಳು ತಮ್ಮ ಡಿ ಮ್ಯಾಟ್  ಖಾತೆಗೆ ವರ್ಗಾಯಿಸಲ್ಪಡುತ್ತವೆ.  ಅಂಗೀಕೃತವಾದ ಷೇರುಗಳ ಹಣವು ಸಹ ಅವರ ಟ್ರೇಡಿಂಗ್ ಖಾತೆಗೆ ಜಮೆಯಾಗುವುದು.

ಈ ಸಂದರ್ಭದಲ್ಲಿ ಹೂಡಿಕೆದಾರರು ಗಮನಿಸಬೇಕಾದ ಅಂಶವೆಂದರೆ,  ತಮ್ಮಲ್ಲಿರುವ  ಡೆಲಿವರಿ ಇನ್ ಸ್ಟ್ರಕ್  ಷನ್ ಪುಸ್ತಕವು ಹೊಸ ಮಾದರಿಯದಾಗಿದ್ದು ಚಲಾವಣೆಗೆ ಯೋಗ್ಯವೇ ಎಂಬುದನ್ನು ಖಾತ್ರಿಪಡಿಸಿಕೊಳ್ಳುವುದು ಸೂಕ್ತ. ಒಂದುವೇಳೆ ಹಳೆ ಮಾದರಿಯದಾಗಿದ್ದರೆ ಶೀಘ್ರವೇ  ಹೊಸದಕ್ಕೆ ಬೇಡಿಕೆ ಸಲ್ಲಿಸಿ ಪಡೆದುಕೊಂಡು ಸಿದ್ಧಪಡಿಸಿಕೊಳ್ಳಿ. ಹೆಚ್ಚಿನ ಇನ್ಫೊಸಿಸ್ ಹೂಡಿಕೆದಾರರು ಷೇರುಪೇಟೆಯ ಟ್ರೇಡಿಂಗ್ ಹವ್ಯಾಸವಿಲ್ಲದೆ, ನಿಷ್ಕ್ರಿಯ ಹೂಡಿಕೆದಾರರಾಗಿರುವ ಕಾರಣ ಈ ಸಲಹೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.