ADVERTISEMENT

ಆನ್‌ಲೈನ್ ಮೂಲಕ ಅಂತ್ಯಸಂಸ್ಕಾರ ನಿರ್ವಹಣೆ ಸೇವೆ ಆರಂಭಿಸಿದ 'ಗುರುಜೀ ಆನ್ ಡಿಮಾಂಡ್'

ಪಿಟಿಐ
Published 2 ಜೂನ್ 2020, 10:05 IST
Last Updated 2 ಜೂನ್ 2020, 10:05 IST
ಸಾಂದರ್ಭಿಕ ಚಿತ್ರ (ಪಿಟಿಐ)
ಸಾಂದರ್ಭಿಕ ಚಿತ್ರ (ಪಿಟಿಐ)   

ಮುಂಬೈ:ಕೊರೊನಾವೈರಸ್ ಲಾಕ್‍ಡೌನ್‌ನಿಂದಾಗಿ ಬಹುತೇಕ ಕಾರ್ಯಗಳು ಆನ್‍ಲೈನ್ ಆಗಿರುವುದರಿಂದ ಅಂತ್ಯಸಂಸ್ಕಾರ ನಿರ್ವಹಣೆಯನ್ನು ಆನ್‌ಲೈನ್ ಮೂಲಕ ಮಾಡುವ ಸೌಲಭ್ಯ ಒದಗಿಸಲಿದೆ ಪುಣೆ ಮೂಲದ ಸ್ಟಾರ್ಟ್‌ಅಪ್ ಗುರುಜೀ ಆನ್ ಡಿಮಾಂಡ್.

'ಮೋಕ್ಷ ಸೇವಾ' ಎಂದು ಹೆಸರಿಟ್ಟಿರುವ ಈ ಆನ್‌ಲೈನ್ ಸೇವೆಯಲ್ಲಿ ಸಾವಿಗೀಡಾದ ವ್ಯಕ್ತಿಯ ಡೆತ್ ಸರ್ಟಿಫಿಕೇಟ್ ಪಡೆಯಲು, ಚಟ್ಟ ಕಟ್ಟಲು ಸಹಾಯ ಮಾಡುವ, ಸ್ಮಶಾನಕ್ಕೆ ಮೃತದೇಹವನ್ನು ಸಾಗಿಸುವ, ಸ್ಮಶಾನದ ಪಾಸ್ ಪಡೆಯುವ ಮತ್ತು ಅಂತ್ಯ ಸಂಸ್ಕಾರಕ್ಕೆ ಬೇಕಾಗುವ ವಸ್ತುಗಳನ್ನು ಆನ್‌ಲೈನ್ ಮೂಲಕ ಪಡೆಯಬಹುದು.

ಅಂತ್ಯ ಸಂಸ್ಕಾರದ ನಂತರ ಮಾಡಬೇಕಾದ ಕ್ರಿಯಾವಿಧಾನಗಳಿಗೂ ಸಹಾಯ ನೀಡಲಿದೆ ಎಂದು ಕಂಪನಿಯ ಪಾಲುದಾರ ಪ್ರಣವ್ ಚವರೆಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ. ಈ ತಿಂಗಳ ಅಂತ್ಯದಲ್ಲಿ ಈ ಎಲ್ಲ ಸೇವೆಗಳು ಆರಂಭವಾಗಲಿದೆ ಎಂದು ಅವರು ಹೇಳಿದ್ದಾರೆ.

ADVERTISEMENT

ಕೊರೊನಾವೈರಸ್ ಪಿಡುಗಿನಿಂದಾಗಿ ಅಂತ್ಯ ಸಂಸ್ಕಾರದಲ್ಲಿಯೂ ಜನರು ಭಾಗಿಯಾಗಲು ಸಾಧ್ಯವಾಗದಂತ ಪರಿಸ್ಥಿತಿ ಇದೆ. ಹಾಗಾಗಿ ಕುಟುಂಬದ ಸದಸ್ಯರು ಅಂತ್ಯ ಸಂಸ್ಕಾರಕ್ಕೆ ಬೇಕಾದ ವಸ್ತುಗಳನ್ನು ಸಂಗ್ರಹಿಸುವುದು ಕೂಡಾ ಕಷ್ಟವಾಗುತ್ತದೆ. ಕುಟುಂಬದಲ್ಲಿ ಯಾರಾದರೂ ಮೃತಪಟ್ಟರೆ ಆ ಕುಟುಂಬದ ಸದಸ್ಯರು ಅಂತ್ಯ ಸಂಸ್ಕಾರ ನಿರ್ವಹಿಸಲು ಅಲ್ಲಿ ಇಲ್ಲಿ ಓಡಬೇಕಾಗುತ್ತದೆ. ನಮ್ಮಲ್ಲಿ ಇದಕ್ಕೆಲ್ಲ ಪರಿಹಾರವಿದೆ ಎಂದು ಪ್ರಣವ್ ಹೇಳಿದ್ದಾರೆ.

ಪ್ರಸ್ತುತ 650 ಅರ್ಚಕರು ಪುಣೆಯ ಪಿಂಪ್ರಿ-ಚಿಂಚ್‌ವಡಾ ಪ್ರದೇಶದಲ್ಲಿದ್ದು, ಕಂಪನಿಯ ಆ್ಯಪ್ ಅಥವಾ ವೆಬ್‌ಸೈಟ್ ಮೂಲಕ ಇವರ ಸೇವೆಗೆ ಬುಕಿಂಗ್ ಮಾಡಬಹುದು.

ಯಾವುದಾದರೂ ವ್ಯಕ್ತಿಗೆ ವೈದಿಕ/ ಅರ್ಚಕರು ಬೇಕು ಎಂದಾದರೆಅದೇ ಪ್ರದೇಶದಲ್ಲಿ 5 ಕಿಮೀ ವ್ಯಾಪ್ತಿಯೊಳಗೆ ಲಭ್ಯವಿರುವ ಅರ್ಚಕರನ್ನು ಸಂಪರ್ಕ ಮಾಡಿಕೊಡಲಾಗುವುದು. ದೈಹಿಕ ಅಂತರ ಕಾಯ್ದುಕೊಳ್ಳುವುದು ಮುಖ್ಯವಾಗಿರುವುದಿಂದ ವಿಡಿಯೊ ಕಾನ್ಫರೆನ್ಸ್ ಮೂಲಕವೂ ಪೂಜೆ ಮಾಡಿಕೊಡಲಾಗುವುದು. ಅರ್ಚಕರು ಬಂದೇ ಬರಬೇಕು ಎಂಬುದಿದ್ದರೆ ಸೋಂಕು ತಗುಲದಂತೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದಿದ್ದಾರೆ ಪ್ರಣವ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.