ADVERTISEMENT

ಕೋವಿಡ್: ವೈಯಕ್ತಿಕ ಸಾಲ ಸೂಕ್ತವೇ?

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2020, 20:05 IST
Last Updated 19 ಏಪ್ರಿಲ್ 2020, 20:05 IST
   
""

‘ಕೋವಿಡ್-19’ನಿಂದಾಗಿ ಹಣಕಾಸಿನ ಸಂಕಷ್ಟಕ್ಕೆ ಸಿಲುಕಿರುವವರಿಗೆ ಅನುಕೂಲ ಮಾಡಿಕೊಡಲು ಕೆಲ ಬ್ಯಾಂಕ್‌‌ಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳು (ಎನ್‌ಬಿಎಫ್‌ಸಿ) ತಮ್ಮ ಗ್ರಾಹಕರಿಗೆ ಕೆಲ ರಿಯಾಯಿತಿಗಳೊಂದಿಗೆ ವೈಯಕ್ತಿಕ ಸಾಲ ನೀಡಲು ಮುಂದಾಗಿವೆ. ಅಲ್ಪಾವಧಿ ಹಣಕಾಸಿನ ಕೊರತೆ ನೀಗಿಸಿಕೊಳ್ಳಲು ಈ ಸಾಲದ ಮೊರೆ ಹೋಗುವುದು ಸೂಕ್ತವೇ ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.

ವಿವಿಧ ಬ್ಯಾಂಕ್‌‌ಗಳಲ್ಲಿ ಕೋವಿಡ್ ಸಾಲ: ಬ್ಯಾಂಕ್‌ ಆಫ್ ಬರೋಡಾ ₹ 25,000 ರಿಂದ ₹ 5 ಲಕ್ಷದವರೆಗೆ ಕೋವಿಡ್ ವೈಯಕ್ತಿಕ ಸಾಲ ನೀಡುತ್ತಿದೆ. ಈಗಾಗಲೇ ಬ್ಯಾಂಕ್‌‌ನ ಗ್ರಾಹಕರಾಗಿದ್ದು, ಕನಿಷ್ಠ 6 ತಿಂಗಳ ವಹಿವಾಟು ನಡೆಸಿದ್ದವರಿಗೆ ಮಾತ್ರ ಈ ವೈಯಕ್ತಿಕ ಸಾಲ ಲಭ್ಯ. ಬ್ಯಾಂಕ್‌ನಿಂದ ಈಗಾಗಲೇ ಗೃಹ ಸಾಲ, ವಾಹನ ಸಾಲ, ವೈಯಕ್ತಿಕ ಸಾಲ, ಶಿಕ್ಷಣ ಸಾಲ ಮತ್ತು ಇತರೆ ಸಾಲ ಪಡೆದಿರುವ ಗ್ರಾಹಕರಿಗೂ ಈ ಸೌಲಭ್ಯ ಸಿಗಲಿದೆ. ಆದರೆ, ಅವರೆಲ್ಲರೂ ಈಗಾಗಲೇ ಪಡೆದಿರುವ ಸಾಲದ ಕನಿಷ್ಠ 3 ಕಂತುಗಳನ್ನು ಪಾವತಿಸಿರಬೇಕು. ಕ್ರೆಡಿಟ್ ಸ್ಕೋರ್ ಸುಸ್ಥಿತಿಯಲ್ಲಿದ್ದವರಿಗೆ ಮಾತ್ರ ಈ ಸಾಲ ಸುಲಭದಲ್ಲಿ ಸಿಗಲಿದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್‌ ಕೂಡ ಹಾಲಿ ಗ್ರಾಹಕರಿಗೆ ವೈಯಕ್ತಿಕ ಸಾಲ ನೀಡಲು ಮುಂದಾಗಿದೆ. ಐಐಎಫ್‌ಎಲ್ ಫೈನಾನ್ಸ್, ಬ್ಯಾಂಕ್‌ ಆಫ್ ಮಹಾರಾಷ್ಟ್ರ ಮತ್ತು ಬ್ಯಾಂಕ್‌ ಆಫ್ ಇಂಡಿಯಾ ಕೂಡ ಈ ರೀತಿಯ ವೈಯಕ್ತಿಕ ಸಾಲಗಳನ್ನು ಘೋಷಣೆ ಮಾಡಿವೆ. ಆನ್‌ಲೈನ್‌ನಲ್ಲೇ ಈ ಸಾಲಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ADVERTISEMENT
ಅವಿನಾಶ್ ಕೆ.ಟಿ.

ಅನುಕೂಲ, ಅನನುಕೂಲ: ‘ಕೋವಿಡ್ -19’ ವೈಯಕ್ತಿಕ ಸಾಲಗಳಿಗೆ ಬಡ್ಡಿ ದರ ಕಡಿಮೆ ಇದೆ. ಶೇ 7.25 ರಿಂದ ಶೇ 14 ರ ವಾರ್ಷಿಕ ಬಡ್ಡಿ ದರದಲ್ಲಿ ಬ್ಯಾಂಕ್‌ಗಳು ಸಾಲ ನೀಡುತ್ತಿವೆ. ಸಾಮಾನ್ಯ ವೈಯಕ್ತಿಕ ಸಾಲಗಳಲ್ಲಿ ಬಡ್ಡಿ ದರ ಶೇ 13 ರಿಂದ ಶೇ 20 ರವರೆಗೂ ಇರುತ್ತದೆ. ಆದರೆ, ಬಹುಪಾಲು ಸಂದರ್ಭಗಳಲ್ಲಿ ಬ್ಯಾಂಕ್‌ಗಳು ಹಾಲಿ ಗ್ರಾಹಕರಿಗಷ್ಟೇ ಸಾಲ ನೀಡುತ್ತಿರುವುದರಿಂದ ಎಷ್ಟರ ಮಟ್ಟಿಗೆ ಇದು ಅಗತ್ಯ ಇರುವವರಿಗೆ ಸಿಗುತ್ತದೆ ಎನ್ನುವ ಪ್ರಶ್ನೆ ಇದ್ದೇ ಇದೆ. ಬ್ಯಾಂಕ್‌ಗಳು ರೆಪೊ ದರಕ್ಕೆ ಸಾಲ ಲಿಂಕ್ ಮಾಡಿರುವುದರಿಂದ ಆರ್‌ಬಿಐ ರೆಪೊ ದರ ಹೆಚ್ಚಳ ಮಾಡಿದರೆ ಸಾಲ ಪಡೆದಿರುವ ವ್ಯಕ್ತಿ ಹೆಚ್ಚು ಮಾಸಿಕ ಕಂತುಗಳನ್ನು ಪಾವತಿಸಬೇಕಾಗಿ ಬರುತ್ತದೆ. ಕೆಲ ಬ್ಯಾಂಕ್‌ಗಳು ಕೋವಿಡ್ ವೈಯಕ್ತಿಕ ಸಾಲಗಳಿಗೆ ಮೂರು ತಿಂಗಳ ಅವಧಿಗೆ ಮರುಪಾವತಿಯಿಂದ ವಿನಾಯಿತಿಯನ್ನೂ ನೀಡಿವೆ. ಆದರೆ ಮೂರು ತಿಂಗಳ ಸಮಾನ ಮಾಸಿಕ ಕಂತು (ಇಎಂಐ) ಮುಂದೂಡಿದಾಗ ಅದಕ್ಕೆ ಬಡ್ಡಿಯನ್ನು ಬ್ಯಾಂಕ್‌ಗಳು ವಿಧಿಸುತ್ತವೆ. ವಿಳಂಬ ಪಾವತಿ ಮಾಡಿದರೆ ಶೇ 2 ರಷ್ಟು ದಂಡವೂ ಇದೆ.

ಇಂತಹ ಸಾಲ ಪಡೆಯುವುದು ಸರಿಯೇ?: ಯಾವುದೇ ಸಂದರ್ಭದಲ್ಲಿ ವೈಯಕ್ತಿಕ ಸಾಲ ಪಡೆಯುವುದು ಕಡೆಯ ಆಯ್ಕೆಯಾಗಿರಬೇಕು. ನಿಮ್ಮ ಹಣಕಾಸು ಪರಿಸ್ಥಿತಿ ಚೆನ್ನಾಗಿಲ್ಲದಿದ್ದರೆ ತುರ್ತು ನಿಧಿ ಇರಿಸಿದ್ದರೆ ಅದನ್ನು ಮೊದಲು ಬಳಸಿಕೊಳ್ಳಿ. ತುರ್ತು ನಿಧಿ ಇಲ್ಲ ಎಂದಾದಲ್ಲಿ ಚಿನ್ನ ಸೇರಿ ಮುಂತಾದ ಹೂಡಿಕೆಗಳನ್ನು ನಗದಾಗಿ ಪರಿವರ್ತಿಸುವ ಬಗ್ಗೆ ಚಿಂತಿಸಿ. ಜಗತ್ತೇ ಆರ್ಥಿಕ ಸಂಕಷ್ಟದಲ್ಲಿದ್ದು ಭವಿಷ್ಯ ಏನಾಗುತ್ತದೆ ಎನ್ನುವ ಸ್ಪಷ್ಟತೆ ಇಲ್ಲದಿದ್ದಾಗ ಸುಲಭದಲ್ಲಿ ಸಿಗುತ್ತದೆ ಅಂತ ಒಂದು ಸಾಲ ತೀರಿಸಲು ಮತ್ತೊಂದು ಸಾಲ ಮಾಡಬಾರದು. ಪರ್ಯಾಯ ಮಾರ್ಗಗಳೇ ಇಲ್ಲಾ ಎಂದಾದಲ್ಲಿ ಈ ಸಾಲ ಪರಿಗಣಿಸಬಹುದು.

ಅನಿಶ್ಚಿತತೆ ಮಧ್ಯೆ 2ನೇ ವಾರ ಗಳಿಕೆ

ಷೇರುಪೇಟೆ ಸೂಚ್ಯಂಕಗಳು ಸತತ ಎರಡನೇ ವಾರವೂ ಗಳಿಕೆ ಕಂಡಿವೆ. ವಸೂಲಾಗದ ಸಾಲದ ( ಎನ್‌ಪಿಎ) ವರ್ಗೀಕರಣ ವಿಚಾರದಲ್ಲಿ ಆರ್‌ಬಿಐ ನಿಯಮಗಳನ್ನು ಸಡಿಲಿಸಿರುವುದು, ಆರ್ಥಿಕ ಚೇತರಿಕೆಗೆ ಇನ್ನಷ್ಟು ಪ್ಯಾಕೇಜ್ ಘೋಷಣೆಯಾಗುವ ನಿರೀಕ್ಷೆ ಮತ್ತು ಲಾಕ್‌ಡೌನ್ ನಿಯಮ ಸಡಿಲಿಸಿ ಉದ್ದಿಮೆಗಳ ಪುನರಾರಂಭಕ್ಕೆ ಸರ್ಕಾರ ರೂಪುರೇಷೆ ಸಿದ್ಧಪಡಿಸಿರುವುದು ಹೂಡಿಕೆದಾರರಲ್ಲಿ ವಿಶ್ವಾಸ ಮೂಡಿಸಿದೆ. 31,588 ಅಂಶಗಳಲ್ಲಿ ವಹಿವಾಟು ಮುಗಿಸಿದ ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇ 1.38 ರಷ್ಟು ಏರಿಕೆ ಕಂಡರೆ ನಿಫ್ಟಿ 9,266 ರಲ್ಲಿ ವಹಿವಾಟು ಪೂರ್ಣಗೊಳಿಸಿ ಶೇ 1.7 ರಷ್ಟು ಜಿಗಿತ ಕಂಡಿತು.

ಗರಿಷ್ಠ ಏರಿಕೆ ದಾಖಲಿಸಿದ ಷೇರುಗಳು: ಮದರ್ ಸನ್ ಸುಮಿ ಸಿಸ್ಟಮ್ಸ್ ಶೇ 54, ಟಾಟಾ ಕಮ್ಯುನಿಕೇಷನ್ಸ್ ಶೇ 41, ಶ್ರೀರಾಮ್ ಟ್ರಾನ್ಸ್‌ಪೋರ್ಟ್ ಶೇ 34, ಒಬೆರಾಯ್ ರಿಯಾಲ್ಟಿ ಶೇ 26, ಹಿಂಡಾಲ್ಕೊ ಇಂಡಸ್ಟ್ರೀಸ್ ಶೇ 22, ಆ್ಯಕ್ಸಿಸ್ ಬ್ಯಾಂಕ್‌ ಶೇ 22, ಇಂಡಸ್ ಇಂಡ್ ಬ್ಯಾಂಕ್‌ ಶೇ 19, ಎಲ್‌ಆ್ಯಂಡ್‌ಟಿ ಶೇ 15 ರಷ್ಟು ಜಿಗಿತ ಕಂಡಿವೆ.

ವಿದೇಶಿ ಹೂಡಿಕೆ: ಏಪ್ರಿಲ್‌ನಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹ 2,851.73 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಕೋವಿಡ್ ಸಂಪೂರ್ಣ ಹತೋಟಿಗೆ ಬರುವುದರ ಜತೆಗೆ ಆರ್ಥಿಕತೆ ಚೇತರಿಕೆಯ ಲಕ್ಷಣಗಳನ್ನು ಗೋಚರಿಸುವವರೆಗೆ ವಿದೇಶಿ ಹೂಡಿಕೆಯಲ್ಲಿ ಸ್ಥಿರತೆ ಕಾಣುವುದು ಕಷ್ಟ.

ಪ್ಯಾಕೇಜ್ ನಿರೀಕ್ಷೆ: ಲಾಕ್‌ಡೌನ್ ಮೇ 3 ರವರೆಗೆ ವಿಸ್ತರಣೆಯಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಮತ್ತೊಂದು ಪ್ಯಾಕೇಜ್ ಘೋಷಣೆ ಮಾಡಬಹುದು ಎನ್ನುವ ನಿರೀಕ್ಷೆಯಲ್ಲಿ ಉದ್ಯಮಿಗಳಿದ್ದಾರೆ. ಕೇಂದ್ರ ಸರ್ಕಾರ ಮೊದಲ ಬಾರಿಗೆ ₹ 1.7 ಲಕ್ಷ ಕೋಟಿ ಮೊತ್ತದ ಪ್ಯಾಕೇಜ್ ಘೋಷಿಸಿತು. ಅದರ ಬೆನ್ನಲ್ಲೇ ಆರ್‌ಬಿಐ ನಗದು ಲಭ್ಯತೆಗೆ ಪೂರಕವಾಗಿ ಎರಡು ಬಾರಿ ಸುಧಾರಣೆಗಳನ್ನು ಪ್ರಕಟಿಸಿತು. ಇದೀಗ ಲಾಕ್‌ಡೌನ್ ಮುಗಿಯುವ ವೇಳೆಗೆ ಸರ್ಕಾರ ಪ್ಯಾಕೇಜ್ ಘೋಷಿಸಿದರೆ ಆರ್ಥಿಕತೆಗೆ ನೆರವಾಗಲಿದೆ ಎನ್ನುವ ಅಭಿಪ್ರಾಯ ತಜ್ಞ ವಲಯದಲ್ಲಿದೆ.

ಮುನ್ನೋಟ: ಕೋವಿಡ್ ಕಾರ್ಮೋಡದ ನಡುವೆ ಕಳೆದ ವಾರದಿಂದ ತ್ರೈಮಾಸಿಕ ಫಲಿತಾಂಶಗಳ ಪರ್ವ ಶುರುವಾಗಿದೆ. ವಿಪ್ರೊ , ಟಿಸಿಎಸ್ ಫಲಿತಾಂಶಗಳು ಮಾರುಕಟ್ಟೆ ನಿರೀಕ್ಷೆಗಳನ್ನು ಹುಸಿಗೊಳಿಸಿವೆ. ಎಚ್‌ಡಿಎಫ್‌ಸಿ ಬ್ಯಾಂಕ್‌ ಸಮಾಧಾನಕರ ಫಲಿತಾಂಶ ಪ್ರಕಟಿಸಿದೆ. ಇನ್ಫೊಸಿಸ್, ಎಸಿಸಿ, ಐಸಿಐಸಿಐ ಪ್ರುಡೆನ್ಷಿಯಲ್, ಭಾರ್ತಿ ಇನ್‌ಫ್ರಾಟೆಲ್, ಮೈಂಡ್ ಟ್ರೀ, ಪರ್ಸಿಸ್ಟೆಂಟ್ ಸಿಸ್ಟಮ್ಸ್ , ಟಿವಿ 18 ಸೇರಿ ಪ್ರಮುಖ ಕಂಪನಿಗಳು ಈ ವಾರ ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿವೆ. ಜಾಗತಿಕ ಪೇಟೆಗಳ ವರ್ತನೆ ಭಾರತೀಯ ಷೇರು ಮಾರುಕಟ್ಟೆ ಮೇಲೆ ಪರಿಣಾಮ ಬೀರಲಿದೆ. ಕಂಪನಿಯ ತ್ರೈಮಾಸಿಕ ಫಲಿತಾಂಶಗಳ ಮೇಲೆ ನಿರ್ದಿಷ್ಟ ಷೇರುಗಳ ಏರಿಳಿತ ಆಗಬಹುದು. ಆದರೆ ಜಗತ್ತಿನ ಪ್ರಮುಖ ದೇಶಗಳಲ್ಲಿ ಲಾಕ್‌ಡೌನ್ ತೆಗೆಯುವವರೆಗೆ ಮಾರುಕಟ್ಟೆಯಲ್ಲಿ ಭಾರಿ ಬದಲಾವಣೆಗಳನ್ನು ನಿರೀಕ್ಷಿಸುವಂತಿಲ್ಲ

(ಲೇಖಕ, ಇಂಡಿಯನ್ ಮನಿ ಡಾಟ್ ಕಾಂನ ಹಣಕಾಸು ಸಲಹಾ ವಿಭಾಗದ ಮುಖ್ಯಸ್ಥ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.