ADVERTISEMENT

ಎಫ್‌ಪಿಐ : 9 ತಿಂಗಳ ಗರಿಷ್ಠ

ನಿಫ್ಟಿಯು ಹೊಸ ಎತ್ತರಕ್ಕೆ ಏರುವ ಸಂಭವ: ವಿಜಯಕುಮಾರ್

​ಪ್ರಜಾವಾಣಿ ವಾರ್ತೆ
Published 28 ಮೇ 2023, 4:27 IST
Last Updated 28 ಮೇ 2023, 4:27 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ಭಾರತದ ಆರ್ಥಿಕ ಸ್ಥಿತಿಯು ಅನುಕೂಲಕರವಾಗಿ ಇರುವುದರಿಂದ ಷೇರುಪೇಟೆಗಳಲ್ಲಿ ಮೇ ತಿಂಗಳಿನಲ್ಲಿ ವಿದೇಶಿ ಬಂಡವಾಳ ಹೂಡಿಕೆಯ (ಎಫ್‌ಪಿಐ) ಒಂಬತ್ತು ತಿಂಗಳ ಗರಿಷ್ಠ ಮಟ್ಟವನ್ನು ತಲುಪಿದೆ ಎಂದು ಜಿಯೋಜಿತ್ ಫೈನಾನ್ಶಿಯಲ್‌ ಸರ್ವಿಸಸ್‌ನ ಮುಖ್ಯ ಹೂಡಿಕೆ ತಜ್ಞ ವಿ.ಕೆ. ವಿಜಯಕುಮಾರ್‌ ಹೇಳಿದರು.

ನ್ಯಾಷನಲ್‌ ಸೆಕ್ಯುರಿಟೀಸ್‌ ಡೆಪಾಸಿಟರಿ ಲಿಮಿಟೆಡ್‌ನಲ್ಲಿ (ಎನ್‌ಎಸ್‌ಡಿಎಲ್‌) ಇರುವ ಮಾಹಿತಿಯ ಪ್ರಕಾರ, ಮೇ ತಿಂಗಳಿನಲ್ಲಿ ₹ 37,316 ಕೋಟಿ ಮೌಲ್ಯದ ಷೇರುಗಳನ್ನು ವಿದೇಶಿ ಹೂಡಿಕೆದಾರರು ಖರೀದಿಸಿದ್ದಾರೆ ಎಂದು ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ವಿದೇಶಿ ಹೂಡಿಕೆದಾರರು ಭಾರತದ ಷೇರುಪೇಟೆಗಳಲ್ಲಿ ನಿರಂತರವಾಗಿ ಖರೀದಿ ನಡೆಸುತ್ತಿರುವುದರಿಂದ ಮೇನಲ್ಲಿ ನಿಫ್ಟಿ ಶೇ 2.4ರಷ್ಟು ಗಳಿಕೆ ಕಂಡಿದೆ. ಇದೇ ರೀತಿಯಲ್ಲಿ ಮುಂದುವರಿದಲ್ಲಿ ನಿಫ್ಟಿಯು ಹೊಸ ಎತ್ತರಕ್ಕೆ ಏರಿಕೆ ಕಾಣುವ ಸಾಧ್ಯತೆ ಇದೆ ಎಂದೂ ವಿಜಯಕುಮಾರ್‌ ಅಭಿಪ್ರಾಯಪಟ್ಟರು.

ADVERTISEMENT

ಆಟೊಮೊಬೈಲ್‌, ಬಂಡವಾಳ ಸರಕುಗಳು, ಆರೋಗ್ಯ ಸೇವೆ, ತೈಲ ಮತ್ತು ಅನಿಲ, ದೂರಸಂಪರ್ಕ ವಲಯಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಹಣಕಾಸು ವಲಯ; ಅದರಲ್ಲಿಯೂ ಮುಖ್ಯವಾಗಿ ಬ್ಯಾಂಕಿಂಗ್ ಷೇರುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಜಿಎಸ್‌ಟಿ ಸಂಗ್ರಹ, ತಯಾರಿಕಾ ವಲಯದ ಬೆಳವಣಿಗೆ, ಸಾಲ ನೀಡಿಕೆ...ಹೀಗೆ ಹಲವು ಅಂಶಗಳು ಆರ್ಥಿಕ ಬೆಳವಣಿಗೆಯು ಉತ್ತಮವಾಗಿರುವ ಸೂಚನೆ ನೀಡುತ್ತಿವೆ. ಏಪ್ರಿಲ್‌ ತಿಂಗಳ ಚಿಲ್ಲರೆ ಹಣದುಬ್ಬರ ಶೇ 4.7 ಇಳಿಕೆ ಕಂಡಿರುವುದು ಷೇರುಪೇಟೆಯ ಪಾಲಿಗೆ ಉತ್ತೇಜನಕಾರಿ ಬೆಳವಣಿಗೆ ಆಗಿದೆ ಎಂದು ಹೇಳಿದರು.

ವಿದೇಶಿ ಹೂಡಿಕೆಗೆ ಪೂರಕ ವಾತಾವರಣ ಆರ್ಥಿಕ ಬೆಳವಣಿಗೆ ಉತ್ತಮವಾಗಿರುವ ನಿರೀಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.