ADVERTISEMENT

ವಿಮೆಗೂ, ಹೂಡಿಕೆಗೂ ವ್ಯತ್ಯಾಸವೇನು?

ಪ್ರಜಾವಾಣಿ ವಿಶೇಷ
Published 3 ಫೆಬ್ರುವರಿ 2019, 19:45 IST
Last Updated 3 ಫೆಬ್ರುವರಿ 2019, 19:45 IST
   

ಎಲ್ಲೆಲ್ಲಿ ಹಣ ಹೂಡಿಕೆ ಮಾಡಿದ್ದೀರಿ ಎಂದು ಯಾರನ್ನಾದರು ಕೇಳಿದರೆ ತಕ್ಷಣ ಇನ್ಶೂರೆನ್ಸ್ (ವಿಮೆ) ಎನ್ನುವ ಉತ್ತರ ಬರುತ್ತದೆ. ಆದರೆ, ವಾಸ್ತವದಲ್ಲಿ ಇನ್ಶೂರೆನ್ಸ್‌ಗೂ, ಹೂಡಿ
ಕೆಗೂ ಸಾಕಷ್ಟು ವ್ಯತ್ಸಾಸವಿದೆ.

ಹೂಡಿಕೆ ಮಾಡಬೇಕಿರುವುದು ಹಣ ವೃದ್ಧಿಸಲು. ಇನ್ಶೂರೆನ್ಸ್ ಬೇಕಿರುವುದು ನಿಮ್ಮ ಕುಟುಂಬದ ಆರ್ಥಿಕ ಭದ್ರತೆಗೆ. ಈ ವ್ಯತ್ಯಾಸ ತಿಳಿಯದ ಅನೇಕರು ಹೆಚ್ಚು ಪ್ರಯೋಜನ ನೀಡದ ಇನ್ಶೂರೆನ್ಸ್‌ ಯೋಜನೆಗಳಲ್ಲಿ ತೊಡಗಿಸಿ ಮೋಸ ಹೋಗುತ್ತಾರೆ. ಇಂತಹ ಮೋಸಗಳಿಂದ ಪಾರಾಗಿ ಸರಿಯಾದ ಇನ್ಶೂರೆನ್ಸ್ ಮತ್ತು ಹೂಡಿಕೆ ಆಯ್ಕೆ ಹೇಗೆ ಮಾಡಿಕೊಳ್ಳಬೇಕು ಎನ್ನುವುದನ್ನು ಇಲ್ಲಿ ವಿವರಿಸಲಾಗಿದೆ.

ಇನ್ಶೂರೆನ್ಸ್‌ನ ಅಗತ್ಯವೇನು?: ಇನ್ಶೂರೆನ್ಸ್ ಹೂಡಿಕೆಗೆ ಉತ್ತಮ ಸಾಧನವಲ್ಲ ಎನ್ನುವುದು ಒಪ್ಪುವ ವಿಚಾರವೇ. ಪ್ರತಿಯೊಬ್ಬ ವ್ಯಕ್ತಿಯೂ ಇನ್ಶೂರೆನ್ಸ್ ಹೂಂದಿರುವುದು ಅಗತ್ಯ.

ADVERTISEMENT

ಉದಾಹರಣೆಗೆ 40 ವರ್ಷದ ವ್ಯಕ್ತಿಯೊಬ್ಬ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ವಾರ್ಷಿಕವಾಗಿ ತನ್ನ ಕುಟುಂಬಕ್ಕೆ ₹ 10 ಲಕ್ಷ ಆದಾಯ ತಂದುಕೊಡುತ್ತಿರುತ್ತಾನೆ ಎಂದಿಟ್ಟುಕೊಳ್ಳಿ. ಅಕಸ್ಮಾತ್‌ ಆಗಿ ಆ ವ್ಯಕ್ತಿ ಅಕಾಲಿಕ ಮರಣಕ್ಕೆ ತುತ್ತಾದರೆ ಭವಿಷ್ಯದಲ್ಲಿ ಅತನ ಪತ್ನಿ ಮತ್ತು ಮಕ್ಕಳಿಗೆ ಹಣಕಾಸಿನ ಸಂಕಷ್ಟ ಎದುರಾಗುತ್ತದೆ. ಇಂತಹ ಸಂದರ್ಭಗಳನ್ನು ಎದುರಿಸಲು ಲೈಫ್ ಇನ್ಶೂರೆನ್ಸ್ ಪಡೆದುಕೊಳ್ಳಬೇಕು.

ಲೈಫ್ ಇನ್ಶೂರೆನ್ಸ್‌ನಲ್ಲಿ ಯಾವುದು ಉತ್ತಮ: ಲೈಫ್ ಇನ್ಶೂರೆನ್ಸ್ ಪಡೆದುಕೊಳ್ಳಲು ಉತ್ತಮ ಆಯ್ಕೆ ಟರ್ಮ್ ಲೈಫ್ ಪ್ಲ್ಯಾನ್‌ಗಳು. ಟರ್ಮ್ ಲೈಫ್ ಪಾಲಿಸಿ ಅತ್ಯಂತ ಅಗ್ಗವಾದ ಜೀವ ವಿಮೆ. ಇದು ಕಷ್ಟಕಾಲದಲ್ಲಿ ನೊಂದ ಕುಟುಂಬಕ್ಕೆ ದೊಡ್ಡ ಮೊತ್ತದ ಹಣ ತಂದುಕೊಡುತ್ತದೆ.

ವಾರ್ಷಿಕ ಆದಾಯದ 10 ರಿಂದ 15 ಪಟ್ಟು ಟರ್ಮ್ ಲೈಫ್ ಇನ್ಶೂರೆನ್ಸ್ ಪಡೆದುಕೊಳ್ಳುವುದು ಮುಖ್ಯ. ಉದಾಹರಣೆಗೆ 30 ವರ್ಷದ ವ್ಯಕ್ತಿಯೊಬ್ಬ ₹ 10 ರಿಂದ ₹ 12 ಸಾವಿರ ವಾರ್ಷಿಕ ಪ್ರೀಮಿಯಂ ಕಟ್ಟಿ ₹ 1 ಕೋಟಿ ಕವರೇಜ್‌ನ ಟರ್ಮ್ ಲೈಫ್ ಇನ್ಶೂರೆನ್ಸ್ ಮಾಡಿಸಿಕೊಂಡ ಎಂದಿಟ್ಟುಕೊಳ್ಳೋಣ. ಒಂದೊಮ್ಮೆ ಆ ವ್ಯಕ್ತಿ ಅಕಾಲಿಕ ಮರಣಕ್ಕೆ ತುತ್ತಾದರೆ ಆತನ ಕುಟುಂಬಕ್ಕೆ ಇನ್ಶೂರೆನ್ಸ್ ಕಂಪನಿ ₹ 1 ಕೋಟಿ ನೀಡುತ್ತದೆ. ಮನಿ ಬ್ಯಾಕ್, ಎಂಡೋಮೆಂಟ್, ಯುಲಿಪ್ ಪಾಲಿಸಿಗಳಲ್ಲಿ ಈ ಮೊತ್ತದ ಇನ್ಶೂರೆನ್ಸ್ ಕವರೇಜ್ ಸಿಗುವುದಿಲ್ಲ. ಕಮಿಷನ್ ಆಸೆಗಾಗಿ ಕೆಲ ಏಜೆಂಟ್‌ರು ಸಾಂಪ್ರದಾಯಿಕ ಪಾಲಿಸಿಗಳನ್ನೇ ಮಾಡಿಸುವಂತೆ ಪೀಡಿಸುತ್ತಾರೆ.

ಹೂಡಿಕೆಗೆ ಸಾಂಪ್ರದಾಯಿಕ ಪಾಲಿಸಿಗಳು ಸೂಕ್ತವಲ್ಲ: ಇನ್ಶೂರೆನ್ಸ್, ತೆರಿಗೆ ಉಳಿತಾಯ ಅಥವಾ ಹೂಡಿಕೆಗೆ ಸಾಂಪ್ರದಾಯಿಕ ಪಾಲಿಸಿಗಳಾದ ಮನಿ ಬ್ಯಾಕ್, ಎಂಡೋಮೆಂಟ್ , ಯುಲಿಪ್‌ಗಳು ಸೂಕ್ತವಲ್ಲ. ಈ ಪಾಲಿಸಿಗಳಲ್ಲಿ ಹೆಚ್ಚು ಇನ್ಶೂರೆನ್ಸ್ ಕವರೇಜ್ ಸಹ ಸಿಗುವುದಿಲ್ಲ. ಹೆಚ್ಚು ಲಾಭವೂ ಬರುವುದಿಲ್ಲ.

ಉದಾಹರಣೆಗೆ ವಾರ್ಷಿಕ ₹ 1 ಲಕ್ಷ ಪ್ರೀಮಿಯಂ ಇರುವ ಪಾಲಿಸಿಯನ್ನು ನೀವು ಮಾಡಿಸಿಕೊಂಡಿದ್ದೀರಿ ಎಂದು ಭಾವಿಸೋಣ. ಈ ಪಾಲಿಸಿ ನಿಮಗೆ ₹ 10 ಲಕ್ಷ ಕವರೇಜ್ ಅನ್ನು ಮಾತ್ರ ಖಾತರಿಪಡಿಸುತ್ತದೆ. ಅಲ್ಲದೆ ಸಾಂಪ್ರದಾಯಿಕ ಪಾಲಿಸಿಗಳಲ್ಲಿ ಹೂಡಿಕೆ ಮಾಡಿದಾಗ ಹೆಚ್ಚೆಂದರೆ ಶೇ 3 ರಿಂದ ಶೇ 5 ರಷ್ಟು ಮಾತ್ರ ಲಾಭಾಂಶ ಸಿಗುತ್ತದೆ. ಹೀಗಾಗಿ ಕೇವಲ ತೆರಿಗೆ ಉಳಿಸಲು ಈ ಹೂಡಿಕೆ ಮಾಡುವ ಬದಲು ತೆರಿಗೆ ಲಾಭದ ಜತೆಗೆ ಹೆಚ್ಚಿನ ಬಡ್ಡಿದರ ನೀಡುವ ಪಿಪಿಎಫ್, ಎನ್‌ಪಿಎಸ್‌ಗಳಲ್ಲಿ ನೀವು ಹಣ ತೊಡಗಿಸಬಹುದು. ಬಳಿಯಲ್ಲಿ ಹೆಚ್ಚಿಗೆ ಹಣ ಇದ್ದಲ್ಲಿ ಮ್ಯೂಚುವಲ್ ಫಂಡ್‌ಗಳಲ್ಲಿ ತೊಡಗಿಸಿಶೇ 12 ರಿಂದ ಶೇ 14 ರಷ್ಟು ಲಾಭಾಂಶಗಳಿಸಬಹುದು.

ಪೇಟೆಯಲ್ಲಿ ಉಳಿಯುವುದೇ ಬಜೆಟ್ ಉತ್ಸಾಹ?

ಮಧ್ಯಂತರ ಬಜೆಟ್‌ನಲ್ಲಿನ ಭರಪೂರ ಯೋಜನೆಗಳ ಪರಿಣಾಮ ಷೇರುಪೇಟೆ ಸೂಚ್ಯಂಕಗಳು ಜಿಗಿದಿವೆ. ಪ್ರಸಕ್ತ ವರ್ಷದಲ್ಲಿ ವಾರದ ಅವಧಿಯಲ್ಲಿ ಅತ್ಯುತ್ತಮ ಗಳಿಕೆಯನ್ನು ಸೆನ್ಸೆಕ್ಸ್ ಮತ್ತು ನಿಫ್ಟಿ ದಾಖಲಿಸಿವೆ. ಮೊದಲ ಮೂರು ದಿನಗಳ ವಹಿವಾಟಿನಲ್ಲಿ ನಿರಾಸೆ ಅನುಭವಿಸಿದ್ದ ಸೆನ್ಸೆಕ್ಸ್ ಮತ್ತು ನಿಫ್ಟಿ, ವಾರಾಂತ್ಯಕ್ಕೆ ಕ್ರಮವಾಗಿ ಶೇ 1.23 ರಷ್ಟು (36,469 ಅಂಶ) ಹಾಗೂ ಶೇ 1.05 ರಷ್ಟು ಏರಿಕೆ ಕಂಡಿವೆ.

ರೈತರಿಗೆ ವಾರ್ಷಿಕ ₹ 6 ಸಾವಿರ ನೇರ ನಗದು ವರ್ಗಾವಣೆ ಯೋಜನೆ, ಅಸಂಘಟಿತ ಕಾರ್ಮಿಕರಿಗೆ ಪಿಂಚಣಿ ಯೋಜನೆ, 5 ಲಕ್ಷ ವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ ಸೇರಿ ಜನಪ್ರಿಯ ಯೋಜನೆಗಳ ಪ್ರಭಾವದಿಂದ ಮಾರುಕಟ್ಟೆ ಸಕಾರಾತ್ಮಕವಾಗಿ ವರ್ತಿಸಿದೆ. ಆದರೆ, ಇದೇ ಸಕಾರಾತ್ಮಕ ಓಟ ನಿರೀಕ್ಷಿಸಲು ಸಾಧ್ಯವಿಲ್ಲ.

ಚುನಾವಣೆ ಹತ್ತಿರ ಇರುವುದರಿಂದ ಮುಂದೆ ಯಾವ ಸರ್ಕಾರ ಬರಲಿದೆ ಎಂಬ ಪ್ರಶ್ನೆ ಹೂಡಿಕೆದಾರರ ಮನದಲ್ಲಿ ಇದ್ದೇ ಇದೆ. ಜತೆಗೆ ಸರ್ಕಾರದ ಜನಪ್ರಿಯ ಯೋಜನೆಗಳಿಂದ ವಿತ್ತೀಯ ಕೊರತೆ ಹೆಚ್ಚಾಗಿ ಆರ್ಥಿಕ ಶಿಸ್ತು ಹಳಿ ತಪ್ಪುವುದೇ ಎಂಬ ಆತಂಕವೂ ಇದೆ. ಹೀಗಾಗಿ ಪೇಟೆಯ ಏರಿಳಿತ ಮುಂದುವರಿಯಲಿದೆ.

ವಲಯವಾರು ಪ್ರಗತಿ: ಐ.ಟಿ ವಲಯ ಶೇ 4.55 , ಆಟೊ ವಲಯ ಶೇ 2.20, ಫಾರ್ಮಾ ಶೇ 0.88, ಎಫ್‌ಎಂಸಿಜಿ ಶೇ 0.87, ರಿಯಲ್ ಎಸ್ಚೇಟ್ ಶೇ 0.59 ರಷ್ಟು ಏರಿಕೆ ದಾಖಲಿಸಿವೆ. ಬ್ಯಾಂಕಿಂಗ್ , ಹಣಕಾಸು ಸೇವೆ ಮತ್ತು ಲೋಹ ವಲಯ ಭಾರಿ ಕುಸಿತ ಕಂಡಿವೆ.

ಪ್ರಮುಖ ಬೆಳವಣಿಗೆ: ತ್ರೈಮಾಸಿಕ ಹಣಕಾಸು ಸಾಧನೆಯಲ್ಲಿ ಎಸ್‌ಬಿಐ ₹ 3,955 ಕೋಟಿ ನಿವ್ವಳ ಲಾಭ ಗಳಿಸಿದೆ. ಹೀರೊ ಮೋಟೊ ಕಾರ್ಪನ ನಿವ್ವಳ ಲಾಭ ಶೇ 4.5 ರಷ್ಟು ಕುಸಿದಿದೆ. ಆದರೆ, ವಾರಾಂತ್ಯಕ್ಕೆ ಷೇರುಗಳು ಶೇ 5 ರಷ್ಟು ಏರಿಕೆ ದಾಖಲಿಸಿವೆ.

ಆರೋಪಗಳನ್ನು ಎದುರಿಸುತ್ತಿರುವುದರಿಂದ ಡಿಎಚ್‌ಎಫ್‌ಎಲ್ ಷೇರುಗಳು ಶೇ 47 ಕ್ಕಿಂತ ಹೆಚ್ಚು ಕುಸಿದಿವೆ. ಭಾರಿ ಕುಸಿತ ಕಂಡಿದ್ದ ಝೀ ಎಂಟರ್‌ಟೇನ್ಮೆಂಟ್ ಷೇರುಗಳು ವಾರದ ಅವಧಿಯಲ್ಲಿ ಶೇ 11.31 ಏರಿಕೆಯಾಗಿವೆ.

ಮುನ್ನೋಟ: ಟಾಟಾ ಮೋಟರ್ಸ್, ಐಡಿಬಿಐ, ಎಂಆರ್‌ಪಿಎಲ್ , ಬಿಎಚ್‌ಇಎಲ್, ಜಿಐಎಎಲ್ ಇಂಡಿಯಾ, ಜೆಎಸ್‌ಡಬ್ಲ್ಯು ಸ್ಟೀಲ್ , ಎಚ್‌ಪಿಸಿಎಲ್, ಅದಾನಿ ಪೋರ್ಟ್ಸ್, ಬ್ರಿಟಾನಿಯಾ, ಎಂಆರ್‌ಎಫ್, ಸಿಪ್ಲಾ , ಎಸಿಸಿ , ಟಾಟಾ ಸ್ಟೀಲ್ , ಮಹೀಂದ್ರಾ ಆ್ಯಂಡ್ ಮಹೀಂದ್ರಾ ಸೇರಿ ಪ್ರಮುಖ ಕಂಪನಿಗಳು ತ್ರೈಮಾಸಿಕ ಸಾಧನೆ ಪ್ರಕಟಿಸಲಿವೆ.

(ಲೇಖಕ: ಸುವಿಷನ್ ಹೋಲ್ಡಿಂಗ್ಸ್ ಉಪಾಧ್ಯಕ್ಷ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.