ADVERTISEMENT

ಹೂಡಿಕೆದಾರರ ಮುಂದಿರುವ ಆಯ್ಕೆ ಏನು?

​ಪ್ರಜಾವಾಣಿ ವಾರ್ತೆ
Published 9 ಜುಲೈ 2019, 19:31 IST
Last Updated 9 ಜುಲೈ 2019, 19:31 IST
ಮುಂಬೈ ಷೇರುಪೇಟೆ
ಮುಂಬೈ ಷೇರುಪೇಟೆ   

ದೇಶಿ ಷೇರುಪೇಟೆ ಈಗ ತೇಜಿಯಲ್ಲಿದೆ. ಲೋಕಸಭಾ ಚುನಾವಣೆಯು ಮಾರುಕಟ್ಟೆಗೆ ಅನುಕೂಲಕರ ವಾತಾವರಣ ಸೃಷ್ಟಿಸಿರುವುದರ ಜತೆಗೆ, ವಿದೇಶಿ ಹೂಡಿಕೆದಾರರಲ್ಲೂ ಸ್ಫೂರ್ತಿ ತುಂಬಿದ್ದರಿಂದ ವಿದೇಶಿ ಬಂಡವಾಳ ಹರಿವು ಸ್ಥಿರವಾಗಿ ಬರುತ್ತಿದೆ. ಜಾಗತಿಕ ಮಟ್ಟದಲ್ಲಿ ವ್ಯಾಪಾರ ವಿವಾದಗಳು ಸೃಷ್ಟಿಯಾಗಿ ಮಾರುಕಟ್ಟೆಗಳು ಕುಸಿತದ ಹಾದಿ ಹಿಡಿದಿರುವಾಗ, ಭಾರತದಲ್ಲಿ ಇಂಥ ಸ್ಥಿತಿ ಬಂದಿದೆ ಎಂಬುದು ಗಮನಾರ್ಹ ಅಂಶವಾಗಿದೆ.‌

ಭಾರತದ ಮಾರುಕಟ್ಟೆಯ ಮೇಲ್ಮುಖ ಚಲನೆಗೆ ಕಾರಣವಾದ ಇನ್ನೊಂದು ಅಂಶವೆಂದರೆ ಕಚ್ಚಾ ತೈಲದ ದರ ಇಳಿಕೆಯಾಗುತ್ತಿರುವುದು. ಭಾರತವು ತನ್ನ ಅಗತ್ಯದ ಹೆಚ್ಚಿನ ಭಾಗದ ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ದರ ಇಳಿಕೆಯಿಂದ ವಿತ್ತೀಯ ಕೊರತೆಯ ಪ್ರಮಾಣ ಹಾಗೂ ಹಣದುಬ್ಬರ ಪ್ರಮಾಣ ತಗ್ಗಲಿದೆ ಎಂಬುದು ಸಕಾರಾತ್ಮಕ ಅಂಶವಾಗಿದೆ. ಇದರಿಂದ ಅಭಿವೃದ್ಧಿಗೆ ಪೂರಕವಾದ ಹೆಜ್ಜೆಗಳನ್ನಿಡಲು ಸರ್ಕಾರಕ್ಕೆ ಸಾಧ್ಯವಾಗಲಿದೆ.

ಮಾರುಕಟ್ಟೆ ಅರಿತುಕೊಳ್ಳುವುದು: ಚುನಾವಣೆಯ ಬಳಿಕ ಷೇರುಗಳ ಬಗೆಗಿನ ನಮ್ಮ ದೃಷ್ಟಿಕೋನ ಸುಧಾರಿಸಿದೆ. ಚುನಾವಣಾ ಫಲಿತಾಂಶ ಸಕಾರಾತ್ಮಕ ಇದ್ದಾಗಲೆಲ್ಲ ಷೇರುಗಳು ಉತ್ತಮ ಸಾಧನೆ ಮಾಡಿವೆ. ಆದರೆ, ದೀರ್ಘಾವಧಿಯಲ್ಲಿ ಮಾರುಕಟ್ಟೆಗಳು ಒಟ್ಟಾರೆ ಆರ್ಥಿಕ ಸ್ಥಿತಿಗತಿಯನ್ನು ಪ್ರತಿಫಲಿಸುವ ಸ್ಥೂಲ ಆರ್ಥಿಕ ಸೂಚಕಗಳ ಆಧಾರದಲ್ಲೇ ನಡೆಯುತ್ತವೆ. ಉದಾಹರಣೆಗೆ; 2009ರಲ್ಲಿ ಹಿಂದಿನ ಅವಧಿಯಲ್ಲಿ ಆಡಳಿತ ನಡೆಸಿದ್ದ ಸರ್ಕಾರವೇ ಪುನಃ ಅಧಿಕಾರಕ್ಕೆ ಬಂದಾಗ ಮಾರುಕಟ್ಟೆಗಳು ಒಮ್ಮೆಲೇ ತೇಜಿ ಕಂಡು, ಶೇ 15.9ರಷ್ಟು ಗಳಿಕೆ ತಂದುಕೊಟ್ಟವು. ಆದರೆ, ನಂತರದ ನಾಲ್ಕು ವರ್ಷಗಳಲ್ಲಿ ಮಾಡಿರುವ ಗಳಿಕೆ ಶೇ 9.5ರಷ್ಟು ಮಾತ್ರ. ಅದರಂತೆ 2014ರಲ್ಲಿ ಕೇಂದ್ರದಲ್ಲಿ ಹೊಸ ಸರ್ಕಾರ ರಚನೆಯಾದಾಗ ಮಾರುಕಟ್ಟೆಗಳು ಶೇ 14.9ರಷ್ಟು ಗಳಿಕೆ ಮಾಡಿದವು. ನಂತರದ ನಾಲ್ಕು ವರ್ಷಗಳಲ್ಲಿ ಗಳಿಕೆಯ ಪ್ರಮಾಣ ಶೇ 8.8ಕ್ಕೆ ಇಳಿಯಿತು.

ADVERTISEMENT

ಇಂತಹ ಸಂಧಿ ಕಾಲದಲ್ಲಿ ಸ್ಥೂಲ ಆರ್ಥಿಕ ಸೂಚಕಗಳತ್ತ ಗಮನ ಹರಿಸುವುದು ಅಗತ್ಯ. ದೀರ್ಘಾವಧಿಯಲ್ಲಿ ಇವು ಅತಿ ಮುಖ್ಯವಾದ ಪಾತ್ರ ವಹಿಸುತ್ತವೆ. ಆದ್ದರಿಂದ ನಾವು ಸ್ಥೂಲ ವಿಚಾರಗಳ ಮೇಲೆ ಕಣ್ಣಿಟ್ಟಿರುತ್ತೇವೆ. ಚೀನಾ– ಅಮೆರಿಕ ಮಧ್ಯೆ ವ್ಯಾಪಾರ ವಿಚಾರ, ಇರಾನ್‌– ಅಮೆರಿಕ ಸಂಘರ್ಷದಿಂದಾಗಿ ತೈಲ ಬೆಲೆಯಲ್ಲಿ ಆಗಬಹುದಾದ ಏರಿಳಿತ, ವಿತ್ತೀಯ ಕೊರತೆ ಇಳಿಸಲು ಸರ್ಕಾರ ಕೈಗೊಂಡಿರುವ ಕ್ರಮ, ಎರಡು ಮತ್ತು ಮೂರನೇ ಹಂತದ ನಗರಗಳು ಮತ್ತು ಗ್ರಾಮೀಣ ಪ್ರದೇಶದಲ್ಲಿ ಇಳಿಕೆಯಾಗುತ್ತಿರುವ ಖರೀದಿ ಪ್ರಮಾಣ... ಮುಂತಾದ ಎಲ್ಲಾ ವಿಚಾರಗಳನ್ನು ನಾವು ಅತಿ ಸೂಕ್ಷ್ಮವಾಗಿ ಗಮನಿಸುತ್ತಿರುತ್ತೇವೆ.

ಷೇರುಗಳು: ಷೇರು ಮಾರುಕಟ್ಟೆ ಇಂದು ಅಗ್ಗವಲ್ಲ. ಈ ಏರಿಕೆಗೆ ಅನೇಕ ಸಕಾರಾತ್ಮಕ ಕಾರಣಗಳು ಇವೆ. ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಮೌಲ್ಯ ಇದೆ ಎಂಬುದು ಅರ್ಥವಾಗುವ ವಿಚಾರ. ಆದರೆ ಇವುಗಳಿಗೆ ಹೋಲಿಸಿದರೆ ಸಣ್ಣ ಮತ್ತು ಮಧ್ಯಮ ಗಾತ್ರದ ಸಂಸ್ಥೆಗಳ ಷೇರುಗಳು ಹೆಚ್ಚು ಮೌಲ್ಯಯುತವಾಗಿ ಉತ್ತಮ ಆಯ್ಕೆಗಳಾಗಿ ಕಾಣಿಸುತ್ತವೆ. ಚಿಲ್ಲರೆ ಹೂಡಿಕೆದಾರರು ಎಸ್‌ಐಪಿ (ವ್ಯವಸ್ಥಿತ ಹೂಡಿಕೆ ಯೋಜನೆ) ಅಥವಾ ಎಸ್‌ಟಿಪಿ (ವ್ಯವಸ್ಥಿತ ವರ್ಗಾವಣೆ ಯೋಜನೆ)ಮೂಲಕ ಇಂಥ ಕಂಪನಿಗಳ ಷೇರುಗಳನ್ನು ದೊಡ್ಡ ಪ್ರಮಾಣದಲ್ಲಿ ಕ್ರೋಡೀಕರಿಸಬೇಕು ಎಂಬುದು ನಮ್ಮ ಅಭಿಪ್ರಾಯವಾಗಿದೆ.

ಇಂದಿನ ಮಾರುಕಟ್ಟೆ ಸ್ಥಿತಿಯಲ್ಲಿ ಗಮನ ಹರಿಸಬೇಕಾದ ಇನ್ನೊಂದು ಮುಖ್ಯ ಅಂಶವೆಂದರೆ, ಸಂಪತ್ತು ವಿತರಣಾ ಯೋಜನೆಗಳಿಗೆ ಅಂಟಿಕೊಳ್ಳುವುದು. ಬಹುತೇಕ ಎಲ್ಲಾ ಷೇರುಗಳ ಬೆಲೆ ಏರಿಕೆಯಲ್ಲಿ ಇರುವುದರಿಂದ ಈಗ ಹೂಡಿಕೆಗೆ ಮುಂದಾಗುವವರು, ಬೇರೆ ಬೇರೆ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುವಂತಹ ಫಂಡ್‌ಗಳನ್ನು ಹೂಡಿಕೆಗಾಗಿ ಆಯ್ಕೆ ಮಾಡುವುದು ಒಳ್ಳೆಯದು.

ಸಾಲ ಸೌಲಭ್ಯ: ಹಣದುಬ್ಬರವು ಆರ್‌ಬಿಐ ಸೂಚಿಸಿದ ಮಟ್ಟದೊಳಗೇ ಇರುವುದರಿಂದ ಮತ್ತು ಅಭಿವೃದ್ಧಿ ದರ ನಿಧಾನವಾಗುತ್ತಿರುವುದರಿಂದ ಜನರ ಕೈಯಲ್ಲಿ ಹೆಚ್ಚು ಹಣ ಚಲಾವಣೆಯಲ್ಲಿ ಇರುವಂತೆ ಮಾಡಲು ಆರ್‌ಬಿಐಯು ಬಡ್ಡಿದರವನ್ನು ಕಡಿಮೆ ಮಾಡುವ ಸಾಧ್ಯತೆ ಇದೆ. ಬಡ್ಡಿ ದರ ಕಡಿತವು ಹೇಗೆ ಜಾರಿಯಾಗುತ್ತದೆ ಮತ್ತು ಆನಂತರ ಅದು ಆರ್ಥಿಕ ವೃದ್ಧಿಗೆ ಹೇಗೆ ಸಹಕಾರಿಯಾಗುತ್ತದೆ ಮತ್ತು ಇವೆರಡನ್ನು ಆರ್‌ಬಿಐ ಹೇಗೆ ಸಮತೋಲನಗೊಳಿಸುತ್ತದೆ ಎಂಬುದನ್ನು ಕಾಯ್ದು ನೋಡಬೇಕಾಗಿದೆ.

ಬಡ್ಡಿ ದರ ಕಡಿತದ ಲಾಭವನ್ನು ಮಾರುಕಟ್ಟೆಗೆ ರವಾನಿಸುವ ನಿಟ್ಟಿನಲ್ಲಿ ಇರುವ ರಚನಾತ್ಮಕ ಅಡಚಣೆಗಳನ್ನು ನಿವಾರಿಸುವ ಸವಾಲು ಆರ್‌ಬಿಐ ಮುಂದಿದೆ. ಅಡಚಣೆಗಳನ್ನು ನಿವಾರಿಸದ ಹೊರತು ಬಡ್ಡಿ ದರ ಇಳಿಕೆಯ ಲಾಭವನ್ನು ಮಾರುಕಟ್ಟೆಗೆ ರವಾನಿಸುವುದು ಕಷ್ಟಸಾಧ್ಯವಾಗಲಿದೆ.

ಕಾರ್ಪೊರೇಟ್‌ಗಳ ಯೋಜನೆಗಳು ಸಹ ಈಗ ಹೂಡಿಕೆಗೆ ಒಳ್ಳೆಯ ಆಯ್ಕೆಯಾಗಬಲ್ಲವು. ಇಂಥ ಯೋಜನೆಯಲ್ಲಿ ಮಾಡಿದ ಹೂಡಿಕೆಯ ಅವಧಿ, ನಗದೀಕರಿಸುವ ಅವಕಾಶ ಮುಂತಾದವುಗಳ ಸ್ಪಷ್ಟ ಮಾಹಿತಿ ಹೂಡಿಕೆದಾರರಿಗೆ ಇರುವುದರಿಂದ ಅಪಾಯವೂ ಸ್ವಲ್ಪ ಕಡಿಮೆ ಇರುತ್ತದೆ.

ಇಂದಿನ ಮಾರುಕಟ್ಟೆಯ ಸ್ಥಿತಿಯನ್ನು ನೋಡಿದರೆ ಅಲ್ಪಾವಧಿಯ ಗಳಿಕೆಯ ವಿಚಾರದಲ್ಲೂ ನಾವು ಸಕಾರಾತ್ಮಕವಾಗಿದ್ದೇವೆ. 1ರಿಂದ 4 ವರ್ಷದೊಳಗಿನ ಅವಧಿಯ ಹೂಡಿಕೆಗೆ ಕಾಯುವಿಕೆಯ ಪ್ರತಿಫಲ ಇನ್ನೂ ಉತ್ತಮವಾಗಿರುತ್ತದೆ. ಅದೂ ಅಲ್ಲದೆ ಸಂಪತ್ತು ವಿತರಣಾ ಫಂಡ್‌ಗಳಲ್ಲಿ ಹೂಡಿಕೆ ಮಾಡಿದರೆ ಸುರಕ್ಷತೆಯ ಭರವಸೆಯೂ ಇರುತ್ತದೆ.

(ಲೇಖಕ:ಐಸಿಐಸಿಐ ಪ್ರುಡೆನ್ಶಿಯಲ್‌ ಎಎಂಸಿಯ ಸಿಇಒ)

* ಎಸ್‌ಐಪಿ, ಎಸ್‌ಟಿಪಿ ಮೂಲಕ ಸಣ್ಣ, ಮಧ್ಯಮ ಗಾತ್ರದ ಸಂಸ್ಥೆಗಳ ಷೇರು ಖರೀದಿ

* ವಿಭಿನ್ನ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುವ ಫಂಡ್‌ ಆಯ್ಕೆ ಜಾಣತನ

* ಆರ್‌ಬಿಐ ಬಡ್ಡಿ ದರ ಕಡಿತದ ಮೇಲೆ ನಿಗಾ

* ಕಾರ್ಪೊರೇಟ್‌ಗಳ ಯೋಜನೆಗಳಲ್ಲಿನ ಹೂಡಿಕೆ ಒಳ್ಳೆಯ ಆಯ್ಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.