ADVERTISEMENT

ಷೇರುಪೇಟೆಯಲ್ಲಿ ದಿನವೂ ಹೊಸ ದಾಖಲೆ

ದೂರಸಂಪರ್ಕ, ಲೋಹ, ರಿಲಯ್‌ ಎಸ್ಟೇಟ್‌ ಷೇರುಗಳ ಮೌಲ್ಯ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2019, 19:53 IST
Last Updated 28 ನವೆಂಬರ್ 2019, 19:53 IST
bse
bse   

ಮುಂಬೈ (ಪಿಟಿಐ): ಷೇರುಪೇಟೆಗಳಲ್ಲಿ ಹೂಡಿಕೆ ಚಟುವಟಿಕೆ ಹೆಚ್ಚಾಗುತ್ತಿದೆ. ಹೀಗಾಗಿ ದಿನವೂ ಹೊಸ ದಾಖಲೆ ಸೃಷ್ಟಿಯಾಗುತ್ತಿದೆ.

ಮುಂಬೈ ಷೇರುಪೇಟೆಯಲ್ಲಿ ಸತತ ಎರಡನೇ ದಿನವೂ ದಾಖಲೆ ಮಟ್ಟದ ವಹಿವಾಟು ನಡೆಯಿತು. ದಿನದ ವಹಿವಾಟಿನಲ್ಲಿ 41,164 ಅಂಶಗಳ ಗರಿಷ್ಠ ಮಟ್ಟವನ್ನು ತಲುಪಿತ್ತು. ಅಂತಿಮವಾಗಿ 110 ಅಂಶಗಳ ಏರಿಕೆಯೊಂದಿಗೆ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 41,130 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 50 ಅಂಶ ಹೆಚ್ಚಾಗಿ 12,151 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.

ADVERTISEMENT

‘ಕೇಂದ್ರ ಸರ್ಕಾರದ ಆರ್ಥಿಕ ಉತ್ತೇಜನಾ ಕ್ರಮಗಳು ಸಕಾರಾತ್ಮಕ ವಹಿವಾಟು ನಡೆಯುವಂತೆ ಮಾಡಿವೆ’ ಎಂದು ಜಿಯೋಜಿತ್ ಫೈನಾನ್ಶಿಯಲ್‌ನ ಸಂಶೋಧನಾ ಮುಖ್ಯಸ್ಥ ವಿನೋದ್‌ ನಾಯರ್‌ ಹೇಳಿದ್ದಾರೆ.

ಗರಿಷ್ಠ ಗಳಿಕೆ: ಇಂಡಸ್‌ಇಂಡ್‌ ಬ್ಯಾಂಕ್‌ ಷೇರುಗಳು ಶೇ 2.68ರಷ್ಟು ಗರಿಷ್ಠ ಗಳಿಕೆ ಕಂಡುಕೊಂಡಿವೆ. ಐಸಿಐಸಿಐ ಬ್ಯಾಂಕ್‌, ಯೆಸ್‌ ಬ್ಯಾಂಕ್‌, ಟಾಟಾ ಸ್ಟೀಲ್‌, ಎಸ್‌ಬಿಐ, ಟಿಸಿಎಸ್‌, ಎಲ್‌ಆ್ಯಂಡ್‌ಟಿ ಮತ್ತು ಇನ್ಫೊಸಿಸ್‌ ಷೇರುಗಳು ಗಳಿಕೆ ಕಂಡುಕೊಂಡಿವೆ.

ರೂಪಾಯಿ ಇಳಿಕೆ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯ 27 ಪೈಸೆ ಇಳಿಕೆಯಾಗಿ ಒಂದು ಡಾಲರ್‌ಗೆ ₹ 71.62ರಂತೆ ವಿನಿಮಯಗೊಂಡಿತು.ಆಮದುದಾರರಿಂದ ಡಾಲರ್‌ಗೆ ಹೆಚ್ಚಿನ ಬೇಡಿಕೆ ಬಂದಿದ್ದರಿಂದ ರೂಪಾಯಿ ಮೌಲ್ಯದಲ್ಲಿ ಇಳಿಕೆಯಾಗಿದೆ ಎಂದು ತಜ್ಞರು ಹೇಳಿದ್ದಾರೆ.

ಸಂಪತ್ತು ಹೆಚ್ಚಳ:ಎರಡು ದಿನಗಳ ಗರಿಷ್ಠ ಮಟ್ಟದ ವಹಿವಾಟಿನಿಂದಾಗಿ ಹೂಡಿಕೆದಾರರ ಸಂಪತ್ತು ₹ 1.87 ಲಕ್ಷ ಕೋಟಿಗಳಷ್ಟು ಹೆಚ್ಚಾಗಿದೆ. ಷೇರುಪೇಟೆಯ ಬಂಡವಾಳ ಮೌಲ್ಯ ₹ 153.7 ಲಕ್ಷ ಕೋಟಿಗಳಿಂದ ₹ 155.57 ಲಕ್ಷ ಕೋಟಿಗಳಿಗೆ ಏರಿಕೆಯಾಗಿದೆ.

ವಹಿವಾಟಿನ ವಿವರ

0.97% -ಬಿಎಸ್‌ಇ ಮಧ್ಯಮ ಗಾತ್ರದ ಷೇರುಗಳ ಗಳಿಕೆ

0.45% -ಸಣ್ಣ ಗಾತ್ರದ ಷೇರುಗಳ ಗಳಿಕೆ

ಶೇ 4ರಷ್ಟು ಷೇರು ಮಾರಾಟ

ಸೆಂಟ್ರಲ್‌ ಡೆಪಾಸಿಟರಿ ಸರ್ವೀಸಸ್ ಲಿಮಿಟೆಡ್‌ನಲ್ಲಿ (ಸಿಡಿಎಸ್‌ಎಲ್‌) ಹೊಂದಿರುವ ಶೇ 4ರಷ್ಟು ಷೇರುಗಳನ್ನು ಮಾರಾಟ ಮಾಡಲು ಬಿಎಸ್‌ಇ ನಿರ್ಧರಿಸಿದೆ.

ಸಿಡಿಎಸ್‌ಎಲ್‌ನ 41.8 ಲಕ್ಷ ಷೇರುಗಳನ್ನು ಮುಕ್ತ ಕೊಡುಗೆಯ ಮೂಲಕ ಮಾರಾಟ ಮಾಡಲಿದೆ ಎಂದು ಎನ್‌ಎಸ್‌ಇನಲ್ಲಿ ಮಾಹಿತಿ ಇದೆ.

ಬಿಎಸ್‌ಇಯು ಸಿಡಿಎಸ್ಎಲ್‌ನಲ್ಲಿ ಶೇ 24ರಷ್ಟು ಷೇರುಗಳನ್ನು ಹೊಂದಿದೆ. ಬ್ಯಾಂಕ್‌ ಮತ್ತು ಹಣಕಾಸು ಸಂಸ್ಥೆಗಳು ಶೇ 22.42ರಷ್ಟು, ಮ್ಯೂಚವಲ್‌ ಫಂಡ್‌ ಸಂಸ್ಥೆಗಳು ಶೇ 9.54ರಷ್ಟು ಮತ್ತು ಎಫ್‌ಪಿಐಗಳು ಶೇ 1.78ರಷ್ಟು ಷೇರು ಹೊಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.