ADVERTISEMENT

ಷೇರುಪೇಟೆಗಳಲ್ಲಿ ದಾಖಲೆಗಳ ಓಟ: ಐದನೇ ವಾರವೂ ಗಳಿಕೆ

ಪಿಟಿಐ
Published 25 ಆಗಸ್ಟ್ 2018, 15:41 IST
Last Updated 25 ಆಗಸ್ಟ್ 2018, 15:41 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ದೇಶದ ಷೇರುಪೇಟೆಗಳಲ್ಲಿ ದಾಖಲೆಗಳ ಓಟ ಮುಂದುವರಿದಿದೆ. ಸತತ ಐದನೇ ವಾರವೂ ಸೂಚ್ಯಂಕಗಳು ಏರಿಕೆ ಕಂಡುಕೊಂಡಿವೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) ವಾರದ ವಹಿವಾಟಿನಲ್ಲಿ 304 ಅಂಶ ಜಿಗಿತ ಕಂಡು 38,251 ಅಂಶಗಳ ಹೊಸ ಎತ್ತರಕ್ಕೆ ಏರಿದೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ ಸಹ 86 ಅಂಶ ಹೆಚ್ಚಾಗಿ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 11,557ಕ್ಕೆ ತಲುಪಿದೆ.

ADVERTISEMENT

ವಾರದ ವಹಿವಾಟಿನ ಅಂತಿಮ ದಿನವಾಗಿದ್ದ ಶುಕ್ರವಾರಹೂಡಿಕೆದಾರರುಲಾಭ ಗಳಿಕೆಯ ಉದ್ದೇಶದ ವಹಿವಾಟು ನಡೆಸಿದರು. ಇದರಿಂದ ಸೂಚ್ಯಂಕಗಳು ಅಲ್ಪ ಇಳಿಕೆ ಕಂಡು ವಹಿವಾಟು ಅಂತ್ಯವಾಗಿತ್ತು.

ಅಮೆರಿಕ ಮತ್ತು ಚೀನಾ ಮಧ್ಯೆ ವಾಣಿಜ್ಯ ಬಿಕ್ಕಟ್ಟಿನ ಬಗ್ಗೆ ಮೂಡಿರುವ ಅನಿಶ್ಚಿತ ಸ್ಥಿತಿ ಮತ್ತು ಕಚ್ಚಾ ತೈಲ ದರದ ಏರಿಕೆಯಿಂದಾಗಿ ವಹಿವಾಟು ಚಂಚಲವಾಗಿತ್ತು. ಆದರೆ ದೇಶಿ ಮತ್ತು ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಷೇರುಗಳ ಖರೀದಿಯನ್ನು ಮುಂದುವರಿಸಿದ್ದರಿಂದಾಗಿ ಮತ್ತು ಕೆಲವು ನಿರ್ದಿಷ್ಟ ಕಂಪನಿಗಳ ಷೇರುಗಳು ಉತ್ತಮ ಗಳಿಕೆ ಕಂಡುಕೊಂಡಿದ್ದರಿಂದ ಸೂಚ್ಯಂಕಗಳು ಏರಿಕೆ ಕಂಡುಕೊಂಡವು ಎಂದು ತಜ್ಞರು ಹೇಳಿದ್ದಾರೆ.

ರೂಪಾಯಿ ಕುಸಿತದಿಂದಾಗಿಗ್ರಾಹಕ ಬಳಕೆವಸ್ತುಗಳು, ಐ.ಟಿ, ರಿಯಲ್‌ ಎಸ್ಟೇಟ್‌ ಮತ್ತು ತಂತ್ರಜ್ಞಾನ ಷೇರುಗಳು ಹೆಚ್ಚಿನ ಮಾರಾಟದ ಒತ್ತಡಕ್ಕೆ ಒಳಗಾದವು.

ಬೃಹತ್‌ ಯಂತ್ರೋಪಕರಣಗಳು, ವಿದ್ಯುತ್, ಆರೋಗ್ಯ ಸೇವೆ, ಲೋಹ, ತೈಲ ಮತ್ತು ಅನಿಲ ಷೇರುಗಳು ಉತ್ತಮ ಖರೀದಿಗೆ ಒಳಗಾದವು.

ಜಾಗತಿಕ ಮಟ್ಟದಲ್ಲಿ, ನ್ಯೂಯಾರ್ಕ್ ಷೇರುಪೇಟೆ ಎಸ್‌ ಆ್ಯಂಡ್‌ ಪಿ 500 ಸೂಚ್ಯಂಕ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ ವಹಿವಾಟು ಅಂತ್ಯಗೊಳಿಸಿದೆ.

ವಹಿವಾಟಿನ ವಿವರ

1,677 ಅಂಶ - ನಾಲ್ಕು ವಾರಗಳ ವಹಿವಾಟು ಅವಧಿಯಲ್ಲಿ ಸೂಚ್ಯಂಕದ ಏರಿಕೆ

₹ 199 ಕೋಟಿ - ವಿದೇಶಿ ಬಂಡವಾಳ ಹೂಡಿಕೆ

₹ 12,824 ಕೋಟಿ - ಬಿಎಸ್‌ಇ ವಾರದ ವಹಿವಾಟು ಮೊತ್ತ

₹ 1.36 ಲಕ್ಷ ಕೋಟಿ - ನಿಫ್ಟಿ ವಾರದ ವಹಿವಾಟು ಮೊತ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.