ADVERTISEMENT

ಎಂಎಫ್: ಯಾರಿಗೆ ಲಾಭ?

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2020, 19:30 IST
Last Updated 5 ಏಪ್ರಿಲ್ 2020, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   
""

ಹೂಡಿಕೆದಾರನೊಬ್ಬ ಡೈರೆಕ್ಟ್ ಪ್ಲ್ಯಾನ್‌ ಗ್ರೋತ್ ಮ್ಯೂಚುವಲ್ ಫಂಡ್‌ವೊಂದರಲ್ಲಿ ಫೆಬ್ರುವರಿ 29 ರಂದು ₹ 1,500 ಹೂಡಿಕೆ ಮಾಡುತ್ತಾನೆ. ಮಾರುಕಟ್ಟೆ ಮತ್ತಷ್ಟು ಕುಸಿಯುತ್ತಿದೆಯಲ್ಲಾ, ಇದರ ಲಾಭ ಪಡೆದುಕೊಳ್ಳೋಣ ಅಂತ ಮಾರ್ಚ್ 12 ರಂದು ಮತ್ತೆ ₹ 3,000 ಹೂಡುತ್ತಾನೆ. ಆದರೆ, ಕೋವಿಡ್ ವ್ಯಾಪಕವಾಗಿ ಹರಡಿದ ಕಾರಣ ಅತನ ಒಟ್ಟು ₹4,500 ಹೂಡಿಕೆಯಲ್ಲಿ ಏಪ್ರಿಲ್ 3 ರ ವೇಳೆಗೆ ಬರೋಬರಿ ಶೇ 21.03 ರಷ್ಟು, ಅಂದರೆ ₹ 947 ನಷ್ಟವಾಗಿದೆ. ಹೌದು, ಮಾರುಕಟ್ಟೆಯ ಅಂದಾಜು ಯಾವಾಗಲಾದರೂ ತಲೆಕೆಳಗಾಗಬಹುದು ಎನ್ನುವುದಕ್ಕೆ ಸದ್ಯದ ತಾಜಾ ನಿದರ್ಶನ ಇದು.

ಕೋವಿಡ್‌ನಿಂದ ಜಗತ್ತೇ ಲಾಕ್ ಡೌನ್ ಆಗಬಹುದು ಎಂಬ ಅಂದಾಜು ಯಾರಿಗೂ ಇರಲಿಲ್ಲ. ಆರಂಭದಲ್ಲಿ ಕೋವಿಡ್, ಚೀನಾಗೆ ಮಾತ್ರ ಸೀಮಿತ ಎನ್ನುವ ಲೆಕ್ಕಾಚಾರದಲ್ಲಿ ಜಗತ್ತಿನ ಅಗ್ರಗಣ್ಯ ರಾಷ್ಟ್ರಗಳ ನಾಯಕರೂ ಒಳಗೊಂಡಂತೆ ಎಲ್ಲರೂ ಇದ್ದರು. ಆದರೆ, ಕೋವಿಡ್‌ನಿಂದ ನಿರ್ಮಾಣವಾಗಿರುವ ಸ್ಥಿತಿಯಿಂದ ಸಾಮಾನ್ಯ ಹೂಡಿಕೆದಾರರು ನಷ್ಟ ಅನುಭವಿಸುವಂತಾಗಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಹೂಡಿಕೆ ಹಿಂದೆಪಡೆದಿರುವುದರ ನೇರ ಪರಿಣಾಮ ಮ್ಯೂಚುವಲ್ ಫಂಡ್ ಹೂಡಿಕೆದಾರರ ಮೇಲಾಗಿದೆ.

ಪ್ರತಿ ಕುಸಿತವೂ ಕೊಳ್ಳುವಿಕೆಗೆ ಸದವಕಾಶ ಎನ್ನುವುದು ಸರಿಯೇ. ನಮ್ಮ ಮಾರುಕಟ್ಟೆಯಲ್ಲಿ ಹಣ ತೊಡಗಿಸುವವರಲ್ಲಿ ಎರಡು ಮಾದರಿಯವರಿದ್ದಾರೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಮತ್ತು ದೇಶಿಯ ಸಾಂಸ್ಥಿಕ ಹೂಡಿಕೆದಾರರು (ಡಿಐಐ).

ADVERTISEMENT

ಭಾರತೀಯ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಅನ್ಯ ದೇಶದ ಸಂಸ್ಥೆಗಳು ಮತ್ತು ಜನರನ್ನು ವಿದೇಶಿ ಹೂಡಿಕೆದಾರರು ಎಂದು ಪರಿಗಣಿಸಬಹುದು. ಹಾಗೆಯೇ ನಮ್ಮ ದೇಶದ ಸಂಸ್ಥೆಗಳು ಮತ್ತು ವ್ಯಕ್ತಿಗಳು ಮಾಡುವ ಹೂಡಿಕೆಯನ್ನು ದೇಶಿಯ ಹೂಡಿಕೆ ಎನ್ನಬಹುದು. ಕೋವಿಡ್‌ನಿಂದಾಗಿ ಮಾರ್ಚ್‌ನಲ್ಲಿ 27 ರಂದು ಹೊರತುಪಡಿಸಿ ಪ್ರತಿ ದಿನ ವಿದೇಶಿ ಹೂಡಿಕೆದಾರರು ಷೇರುಗಳ ಮಾರಾಟ ಮಾಡಿದ್ದಾರೆ. ಮಾರ್ಚ್ 26 ರಂದು ಬಿಟ್ಟು ಬೇರೆಲ್ಲ ದಿನ ದೇಶಿ ಹೂಡಿಕೆದಾರರು ಷೇರುಗಳನ್ನು ಖರೀದಿ ಮಾಡಿದ್ದಾರೆ.

ಭಾರತದ ಮಾರುಕಟ್ಟೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಒಂದೇ ತಿಂಗಳಲ್ಲಿ ₹ 1 ಲಕ್ಷ ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ನ್ಯಾಷನಲ್ ಸೆಕ್ಯೂರಿಟಿಸ್ ಡೆಪಾಸಿಟರಿ ಲಿಮಿಟೆಡ್‌ನ (ಎನ್ಎಸ್‌ಡಿಎಲ್) ದತ್ತಾಂಶದ ಪ್ರಕಾರ ಈಕ್ವಿಟಿ ವಲಯದಲ್ಲಿ₹ 61,973 ಕೋಟಿ ಮತ್ತು ಡೆಟ್ ವಲಯದಿಂದ ₹ 60,376 ಕೋಟಿ ಹೊರಹೋಗಿದೆ.

ಈ ಹಿಂದೆ 2013 ಜೂನ್ ತಿಂಗಳಲ್ಲಿ ಮಾತ್ರ ₹ 44,000 ಕೋಟಿ ಮೊತ್ತದ ಹೂಡಿಕೆಯನ್ನು ವಿದೇಶಿ ಹೂಡಿಕೆದಾರರು ಹೊರತೆಗೆದಿದ್ದರು. ಸದ್ಯದ ಪರಿಸ್ಥಿತಿಯಲ್ಲಿ ದೇಶಿ ಹೂಡಿಕೆದಾರರು ಮಾರ್ಚ್‌ನಲ್ಲಿ ₹ 55,595 ಕೋಟಿ ಮೊತ್ತದ ಷೇರುಗಳನ್ನು ಖರೀದಿ ಮಾಡಿ ಮಾರುಕಟ್ಟೆ ಮತ್ತಷ್ಟು ನೆಲಕಚ್ಚುವುದನ್ನು ತಪ್ಪಿಸಿದ್ದಾರೆ. ಬ್ಯಾಂಕ್‌ಗಳು, ಇನ್ಶುರೆನ್ಸ್ ಕಂಪನಿಗಳು, ಮ್ಯೂಚುವಲ್ ಫಂಡ್ ಕಂಪನಿಗಳು ಮತ್ತು ದೇಶಿಯ ಹಣಕಾಸು ಸಂಸ್ಥೆಗಳ ಷೇರುಗಳಲ್ಲಿ ಹೂಡಿಕೆ ಮಾಡುವ ಮೂಲಕ ದೇಶಿ ಹೂಡಿಕೆದಾರರು ವಿದೇಶಿ ಹೂಡಿಕೆದಾರರಿಂದ ಸೃಷ್ಟಿಯಾಗಿರುವ ಮಾರಾಟ ಒತ್ತಡ ತಿಳಿಯಾಗಿಸುವಲ್ಲಿ ನೆರವಾಗಿದ್ದಾರೆ. ಆದರೆ, ದೇಶಿ ಹೂಡಿಕೆದಾರರಿಗೆ ಇದರಿಂದ ನಿಜಕ್ಕೂ ಲಾಭವಾಯಿತೆ ಎನ್ನುವುದಕ್ಕೆ ಸಮರ್ಪಕ ಉತ್ತರ ಸಿಗುವುದಿಲ್ಲ.

ಪ್ರತಿ ಕುಸಿತ ಕೊಳ್ಳುವಿಕೆಗೆ ಅವಕಾಶವೇ: ಪ್ರತಿ ಕುಸಿತವು ಮಾರುಕಟ್ಟೆಯಲ್ಲಿ ಕೊಳ್ಳುವಿಕೆಯ ಅವಕಾಶವನ್ನು ನಿರ್ಮಿಸುತ್ತದೆ ಎನ್ನುವ ಲೆಕ್ಕಾಚಾರ ಅಸೆಟ್ ಮ್ಯಾನೇಜ್‌ಮೆಂಟ್ ಕಂಪನಿಗಳು (ಎಎಂಸಿ) ಮತ್ತು ಫಂಡ್ ಮ್ಯಾನೇಜರ್‌ಗಳದ್ದು. ಮಾರುಕಟ್ಟೆಯಲ್ಲಿ ಸಾಮಾನ್ಯ ಏರಿಳಿತಗಳಾದಾಗ ಈ ಸೂತ್ರವನ್ನು ಒಪ್ಪಬಹುದು. ಆದರೆ, ಇದೇ ಮೊದಲ ಬಾರಿಗೆ ಕೋವಿಡ್‌ನಿಂದಾಗಿ ಜಗತ್ತಿನಾದ್ಯಂತ ಆತಂಕದ ಕಾರ್ಮೋಡ ಕವಿದಿರುವಾಗ ಈಗಲೂ ಪ್ರತಿ ಕುಸಿತವೂ ಕೊಳ್ಳುವಿಕೆಯ ಅವಕಾಶ ಎನ್ನುವುದು ಎಷ್ಟರ ಮಟ್ಟಿಗೆ ಸರಿ ಎನ್ನುವ ಪ್ರಶ್ನೆ ಕಾಡುತ್ತಿದೆ. ಅಸೆಟ್ ಮ್ಯಾನೇಜ್‌ಮೆಂಟ್ ಕಂಪನಿಗಳು ಕೆಲ ನಿಬಂಧನೆಗಳಿಗೆ ಒಳಪಟ್ಟು ಹೀಗೆ ಖರೀದಿಗೆ ಮುಂದಾಗಿವೆಯೇ ಎನ್ನುವ ಪ್ರಶ್ನೆ ಏಳುತ್ತದೆ.

ಉದಾಹರಣೆಗೆ ಡೆಟ್ ಫಂಡ್‌ಗಳಲ್ಲಿ ಶೇ 20 ಕ್ಕಿಂತ ಹೆಚ್ಚು ಪ್ರಮಾಣದ ಹಣವನ್ನು ಅಸೆಟ್ ಮ್ಯಾನೇಜ್‌ಮೆಂಟ್ ಕಂಪನಿಗಳು ಷೇರುಗಳಲ್ಲಿ ಹೂಡಿಕೆ ಮಾಡುವುದಿಲ್ಲ. ಬ್ಯಾಲೆನ್ಸ್ಡ್ ಫಂಡ್‌ಗಳು ಶೇ 60 ರಷ್ಟು ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹೂಡುತ್ತವೆ. ಇಂತಹ ನಿಬಂಧನೆಗಳಿಗೆ ಜೋತು ಬಿದ್ದು ಫಂಡ್ ಮ್ಯಾನೇಜರ್‌ಗಳು ಖರೀದಿ ಮಾಡಿದರೇ ಎನ್ನುವ ಪ್ರಶ್ನೆಯೂ ಉದ್ಭವಿಸುತ್ತದೆ.

ಕೋವಿಡ್ ಚೀನಾವನ್ನು ಮಾತ್ರ ಬಾಧಿಸಲಿದೆ ಎನ್ನುವ ಅಂದಾಜು ಆರಂಭದಲ್ಲಿತ್ತು. ಆ ಸಂದರ್ಭದಲ್ಲಿ ಚೀನಾ ಮಾರುಕಟ್ಟೆಯಿಂದ ವಿದೇಶಿ ಹೂಡಿಕೆದಾರರು ಹೊರಬಂದರು. ಆ ನಂತರದಲ್ಲಿ ಭಾರತ ಸೇರಿ ಜಗತ್ತಿನ ಬಹುಪಾಲು ರಾಷ್ಟ್ರಗಳು ಕೋವಿಡ್‌ನಿಂದ ತೊಂದರೆಗೆ ಸಿಲುಕಿದವು. ಮಂದಗತಿಯ ಆರ್ಥಿಕತೆಯಿಂದ ಬಸವಳಿದಿದ್ದ ಭಾರತದ ಅರ್ಥ ವ್ಯವಸ್ಥೆಗೆ, ಕೋವಿಡ್ ಜತೆ ಜತೆಗೇ ಬಂದ ಲಾಕ್‌ಡೌನ್ ಬಲವಾದ ಪೆಟ್ಟು ನೀಡಿತು. ಭಾರತದಂತಹ ಬೆಳವಣಿಗೆ ಹೊಂದುತ್ತಿರುವ ರಾಷ್ಟ್ರದಲ್ಲಿ ಪರಿಸ್ಥಿತಿ ಹೀಗಿರುವಾಗ ಸಹಜವಾಗೇ ವಿದೇಶಿ ಹೂಡಿಕೆದಾರರು ಸುರಕ್ಷಿತ ಹೂಡಿಕೆ ತಾಣಗಳ ಮೊರೆ ಹೋಗುತ್ತಾರೆ. ಭವಿಷ್ಯದಲ್ಲಿ ರೂಪಾಯಿ ಮೌಲ್ಯ ಕುಸಿತದ ಪರಿಣಾಮ ಮತ್ತಷ್ಚು ಹೊಡೆತ ಬೀಳಬಹುದು ಎನ್ನುವ ಕಾರಣದಿಂದ ಅಮೆರಿಕ ದಂತಹ ಬಲಿಷ್ಠ ರಾಷ್ಟ್ರಗಳಲ್ಲಿ ಹೂಡಿಕೆಯತ್ತ ಆಕರ್ಷಿತರಾಗುತ್ತಾರೆ. ಆದರೆ, ಯಾವುದೇ ದೇಶೀಯ ಮಾರುಕಟ್ಟೆ ಬೆಳವಣಿಗೆಯಲ್ಲಿ ವಿದೇಶಿ ಹೂಡಿಕೆದಾರರ ಪಾತ್ರ ಮಹತ್ವದ್ದಾಗಿರುತ್ತದೆ.

ಭಾರತದಲ್ಲಿ 2003 ರಿಂದ 2007 ರ ವರೆಗಿನ ಅವಧಿಯಲ್ಲಿ ಇದು ಸಾಬೀತಾಗಿದೆ. 2008 ರಲ್ಲಿ ವಿದೇಶಿ ಹೂಡಿಕೆದಾರರು ₹ 52,987 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದಾಗ ನಿಫ್ಚಿ (50) ಸೂಚ್ಯಂಕ ಶೇ 51.7 ರಷ್ಟು ಕುಸಿತ ಕಂಡಿದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಲಾಕ್‌ ಇನ್ ಪೀರಿಯಡ್ ಸಡಿಲಗೊಳಿಸುವ ಬಗ್ಗೆ ಚಿಂತಿಸಲು ಇದು ಸಕಾಲವಲ್ಲವೇ ಎನ್ನುವ ಪ್ರಶ್ನೆಯೂ ಅನೇಕರನ್ನು ಕಾಡುತ್ತಿದೆ. ಈಕ್ವಿಟಿ ಲಿಂಕ್ಡ್ ಸೇವಿಂಗ್ಸ್ ಸ್ಕೀಂನಲ್ಲಿ (ಇಎಲ್‌ಎಸ್‌ಎಸ್) 3 ವರ್ಷಗಳ ಕಡ್ಡಾಯ ಲಾಕ್‌ ಇನ್ ಅವಧಿ ಇರುತ್ತದೆ. ಕೋವಿಡ್‌ನಂತಹ ಸಂಕಷ್ಟದ ಸ್ಥಿತಿಯಲ್ಲಿ ‘ಇಎಲ್‌ಎಸ್‌ಎಸ್’ ಸ್ಕೀಂಗಳಲಾಕ್‌ ಇನ್ ಪೀರಿಯಡ್ ನಿಯಮ ಸಡಿಲಗೊಳಿಸುವಂತೆ ಮ್ಯೂಚುವಲ್ ಫಂಡ್ ಅಸೆಟ್ ಮ್ಯಾನೇಜ್‌ಮೆಂಟ್ ಕಂಪನಿಗಳು ಷೇರು ನಿಯಂತ್ರಣ ಮಂಡಳಿ (ಸೆಬಿ) ಮುಂದೆ ಕೋರಿಕೆ ಸಲ್ಲಿಸುವ ಬಗ್ಗೆ ಚಿಂತಿಸಬಹುದು. ಆದರೆ, ಯಾವುದೇ ಸರ್ಕಾರ ಷೇರು ಮಾರುಕಟ್ಟೆ ಸೂಚ್ಯಂಕ ಕುಸಿತವನ್ನು ಒಪ್ಪಿಕೊಳ್ಳುವುದು ಅಷ್ಟು ಸಲೀಸಲ್ಲ. ಹೀಗಾಗಿ ಹೂಡಿಕೆದಾರರ ಈ ಕೋರಿಕೆಗೆ ಸರ್ಕಾರ ಮತ್ತು ‘ಸೆಬಿ’ವತಿಯಿಂದ ಎಷ್ಟರ ಮಟ್ಟಿಗೆ ಸ್ಪಂದನೆ ಸಿಗಲಿದೆ ಎಂಬುದನ್ನು ಕಾದು ನೋಡಬೇಕು.

ಸತತ ಏಳು ವಾರಗಳ ಕುಸಿತ

ಷೇರುಪೇಟೆ ಸೂಚ್ಯಂಕಗಳು ಸತತ 7 ವಾರಗಳ ಕಾಲ ಕುಸಿತ ದಾಖಲಿಸಿವೆ. ಈ ಅವಧಿಯಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಬರೋಬ್ಬರಿ ಶೇ 33 ರಷ್ಟು ಹಿನ್ನಡೆ ಕಂಡಿವೆ. ವಾರಾಂತ್ಯಕ್ಕೆ 27,590 ಅಂಶಗಳಲ್ಲಿ ವಹಿವಾಟು ಮುಗಿಸಿರುವ ಸೆನ್ಸೆಕ್ಸ್, ಶೇ 7.5 ರಷ್ಟು ಕುಸಿತ ಕಂಡಿದೆ. 8,083 ಅಂಶಗಳಲ್ಲಿ ಕೊನೆಗೊಂಡಿರುವ ನಿಫ್ಟಿ ಶೇ 6.7 ರಷ್ಟು ತಗ್ಗಿದೆ. ನಿಫ್ಚಿ ಮಿಡ್ ಕ್ಯಾಪ್ ಸೂಚ್ಯಂಕ ಶೇ 3.8 ರಷ್ಟು ಹಿನ್ನಡೆ ಅನುಭವಿಸಿದ್ದರೆ, ಸ್ಮಾಲ್ ಕ್ಯಾಪ್ ಸೂಚ್ಯಂಕ ಶೇ 2.3 ರಷ್ಟು ಕೆಳಗಿಳಿದಿದೆ. 2008 ರ ಜುಲೈ ನಂತರದಲ್ಲಿ ನಿಫ್ಟಿ 50 ಸೂಚ್ಯಂಕ ಈಗ ಸತತ 7 ವಾರಗಳ ದೀರ್ಘಾವಧಿ ಕುಸಿತ ಕಂಡಿದೆ.

ಜಾಗತಿಕವಾಗಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು ಐರೋಪ್ಯ ರಾಷ್ಟಗಳಲ್ಲೂ ಹಾವಳಿ ಹೆಚ್ಚಾಗಿರುವುದರಿಂದ ಮಾರುಕಟ್ಟೆ ಸೂಚ್ಯಂಕಗಳು ನಕಾರಾತ್ಮಕ ಹಾದಿ ಹಿಡಿದಿವೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಈ ವಾರದಲ್ಲಿ ಸೂಚ್ಯಂಕಗಳು ಮತ್ತಷ್ಟು ಕುಸಿತ ಕಾಣುವ ಸಾಧ್ಯತೆಯೇ ಹೆಚ್ಚು.

ನಿಫ್ಟಿ, ಖಾಸಗಿ ಬ್ಯಾಂಕ್ ಸೂಚ್ಯಂಕ ಶೇ 14.72 ರಷ್ಟು ತಗ್ಗಿದೆ. ಬ್ಯಾಂಕ್ ಸೂಚ್ಯಂಕ ಶೇ 13.6 ರಷ್ಟು ಕುಸಿದಿದ್ದು ಜುಲೈ 2008 ರ ನಂತರದಲ್ಲಿ ಆದ ಅತಿ ದೊಡ್ಡ ಕುಸಿತ ಇದಾಗಿದೆ. ಹಣಕಾಸು ಸೇವೆಗಳ ಸೂಚ್ಯಂಕ ಶೇ 12.22 ರಷ್ಟು ಹಿನ್ನಡೆ ಕಂಡಿದೆ. ನಿಫ್ಟಿ ವಾಹನ ತಯಾರಿಕೆ ಸೂಚ್ಯಂಕ ಸತತ 11 ನೇ ವಾರ ಶೇ 8.52 ರಷ್ಟು ಕುಸಿತ ಕಂಡಿದ್ದು , ಇದು ಸಾರ್ವಕಾಲಿಕ ದೀರ್ಘಾವಧಿ ಕುಸಿತ ಎನಿಸಿಕೊಂಡಿದೆ. ಇನ್ನು ನಿಫ್ಟಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್, ಮಾಹಿತಿ ತಂತ್ರಜ್ಞಾನ, ರಿಯಲ್ ಎಸ್ಟೇಟ್, ಮಾಧ್ಯಮ ಮತ್ತು ಲೋಹ ವಲಯ ಕೂಡ ಶೇ 8 ರಿಂದ ಶೇ 2 ರ ವರೆಗೆ ತಗ್ಗಿವೆ. ಆದರೆ ನಿಫ್ಟಿ ಎಫ್‌ಎಂಜಿಸಿ ಮತ್ತು ಫಾರ್ಮಾ ವಲಯ ಕ್ರಮವಾಗಿ ಶೇ 3.1 ಮತ್ತು ಶೇ 8 ರಷ್ಟು ಏರಿಕೆ ಕಂಡಿವೆ.

ಮುನ್ನೋಟ: ಈ ಹೊತ್ತಿಗಾಗಲೇ ಕಂಪನಿಗಳ ನಾಲ್ಕನೇ ತ್ರೈಮಾಸಿಕ ಫಲಿತಾಂಶಗಳ ಪರ್ವ ಶುರುವಾಗಬೇಕಿತ್ತು. ಆದರೆ, ಕೊರೊನಾದಿಂದಾಗಿ ಲಾಕ್‌ಡೌನ್ ಇರುವ ಕಾರಣ ‘ಸೆಬಿ’ ಜೂನ್ 30 ರ ವರೆಗೆ ಫಲಿತಾಂಶ ಪ್ರಕಟಿಸಲು ಅವಕಾಶ ನೀಡಿದೆ. ಇಂದು ಮಹಾವೀರ ಜಯಂತಿಯ ಪ್ರಯುಕ್ತ ಮಾರುಕಟ್ಟೆಗೆ ರಜೆ ಇರಲಿದೆ. ಸೋಮವಾರ ನಡೆಯಬೇಕಾಗಿದ್ದ ತೈಲೋತ್ಪನ್ನ ರಫ್ತು ರಾಷ್ಟ್ರಗಳ ಒಕ್ಕೂಟದ (ಒಪೆಕ್) ಸಭೆ ಮುಂದೂಡಲಾಗಿದೆ.

ಮಾರ್ಗನ್ ಸ್ಟ್ಯಾನ್ಲಿ, ಜಾಗತಿಕ ಆರ್ಥಿಕತೆ 2020 ರಲ್ಲಿ ಶೇ 1.9 ರಷ್ಟು ಕುಸಿಯಲಿದೆ ಎಂದು ಅಂದಾಜು ಮಾಡಿದೆ. ಮಾರುಕಟ್ಟೆ ತಜ್ಞರ ಪ್ರಕಾರ ಕೋವಿಡ್ ಪ್ರಕರಣಗಳಲ್ಲಿ ಇಳಿಕೆಯಾಗದಿದ್ದರೆ ನಿಫ್ಟಿ 7,500 ಅಂಶ ಗಳಿಗೆ ಇಳಿಕೆಯಾಗುವ ಸಾಧ್ಯತೆಯೂ ಇದೆ.

(ಲೇಖಕ: ಇಂಡಿಯನ್ ಮನಿ ಡಾಟ್ ಕಾಂನ ಹಣಕಾಸು ಸಲಹ ವಿಭಾಗದ ಮುಖ್ಯಸ್ಥ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.