ADVERTISEMENT

ವಿಶ್ವಾಸ ಮೂಡಿಸದ ಕೊಡುಗೆ; ಸಂವೇದಿ ಸೂಚ್ಯಂಕ 1,069 ಅಂಶ ಕುಸಿತ

ಪಿಟಿಐ
Published 18 ಮೇ 2020, 21:34 IST
Last Updated 18 ಮೇ 2020, 21:34 IST

ಮುಂಬೈ: ಕೇಂದ್ರ ಸರ್ಕಾರವು ಘೋಷಿಸಿರುವ ಆರ್ಥಿಕ ಉತ್ತೇಜನಾ ಕೊಡುಗೆಗಳು ಹೂಡಿಕೆದಾರರ ನಿರೀಕ್ಷೆಯನ್ನು ತಲುಪುವಲ್ಲಿ ವಿಫಲವಾಗಿವೆ. ಹೀಗಾಗಿ ಸೋಮವಾರ ಷೇರುಪೇಟೆಗಳಲ್ಲಿ ಭಾರಿ ಕುಸಿತ ಕಂಡುಬಂದಿತು.

ಹಣಕಾಸು ಮತ್ತು ವಾಹನ ವಯಲದ ಷೇರುಗಳು ಅತಿಯಾದ ಮಾರಾಟದ ಒತ್ತಡಕ್ಕೆ ಒಳಗಾದವು. ಇದು ಸೂಚ್ಯಂಕಗಳ ಇಳಿಕೆಗೆ ಕಾರಣವಾಯಿತು.

ಐದು ಕಂತುಗಳ ₹ 20 ಲಕ್ಷ ಕೋಟಿ ಮೊತ್ತದ ಆರ್ಥಿಕ ಕೊಡುಗೆಗಳಿಗೆ ದೇಶದ ಷೇರುಪೇಟೆಗಳು ಸಂತುಷ್ಟಗೊಂಡಿಲ್ಲ. ಇದರ ಜತೆಗೆ ಕೋವಿಡ್‌–19 ಪ್ರಕರಣಗಳು ಏರಿಕೆಯಾಗುತ್ತಲೇ ಇವೆ. ಹೀಗಾಗಿ ಜಾಗತಿಕ ಷೇರುಪೇಟೆಗಳಲ್ಲಿ ಸಕಾರಾತ್ಮಕ ವಹಿವಾಟು ನಡೆದರೂ ಅದರ ಪರಿಣಾಮ ದೇಶಿ ಷೇರುಪೇಟೆಗಳ ಮೇಲೆ ಆಗಲಿಲ್ಲ.

ADVERTISEMENT

ಮುಂಬೈ ಷೇರುಪೇಟೆ (ಬಿಎಸ್‌ಇ) ಸಂವೇದಿ ಸೂಚ್ಯಂಕ 1,069 ಅಂಶಗಳ ಕುಸಿತ ಕಂಡು, 30,028 ಅಂಶಗಳಿಗೆ ಇಳಿಕೆಯಾಗಿದೆ. ಇದು ಆರು ವಾರಗಳ ಕನಿಷ್ಠ ಮಟ್ಟವಾಗಿದೆ.

ರಾಷ್ಟ್ರೀಯ ಷೇರುಪೇಟೆ (ಎನ್‌ಎಸ್‌ಇ) ಸೂಚ್ಯಂಕ ನಿಫ್ಟಿ 313 ಅಂಶ ಇಳಿಕೆ ಕಂಡು 8,823 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ಕರಗಿತು ₹3.65 ಲಕ್ಷ ಕೋಟಿ

ಷೇರುಪೇಟೆಯಲ್ಲಿನ ನಕಾರಾತ್ಮಕ ವಹಿವಾಟಿನಿಂದಾಗಿ ಮಾರುಕಟ್ಟೆ ಮೌಲ್ಯದ ಲೆಕ್ಕದಲ್ಲಿ ಹೂಡಿಕೆದಾರರ ಸಂಪತ್ತು ಮೌಲ್ಯ ₹ 3.65 ಲಕ್ಷ ಕೋಟಿ ಕರಗಿದೆ.

ಷೇರುಪೇಟೆಯ ಬಂಡವಾಳ ಮೌಲ್ಯ ₹122.65 ಲಕ್ಷ ಕೋಟಿಗಳಿಂದ ₹119 ಲಕ್ಷ ಕೋಟಿಗಳಿಗೆ ಇಳಿಕೆಯಾಗಿದೆ.

ರೂಪಾಯಿ 33 ಪೈಸೆ ಇಳಿಕೆ

ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯ 33 ಪೈಸೆ ಇಳಿಕೆಯಾಗಿ ಒಂದು ಡಾಲರ್‌ಗೆ ₹75.91ರಂತೆ ವಿನಿಮಯಗೊಂಡಿತು.

ಕಚ್ಚಾ ತೈಲ ದರ ಏರಿಕೆ ಹಾಗೂ ವಿತ್ತೀಯ ಉತ್ತೇಜನಾ ಕೊಡುಗೆ ಪರಿಣಾಮಕಾರಿ ಆಗದೇ ಇರುವುದು ಹೂಡಿಕೆದಾರರ ಮೇಲೆ ಪರಿಣಾಮ ಬೀರಿದೆ ಎಂದು ವರ್ತಕರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.