ADVERTISEMENT

ಓಮೈಕ್ರಾನ್ ಪ್ರಭಾವ: 764 ಅಂಶ ಕುಸಿದ ಸೆನ್ಸೆಕ್ಸ್

ಪಿಟಿಐ
Published 3 ಡಿಸೆಂಬರ್ 2021, 13:09 IST
Last Updated 3 ಡಿಸೆಂಬರ್ 2021, 13:09 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಕೊರೊನಾ ವೈರಾಣುವಿನ ಓಮೈಕ್ರಾನ್ ರೂಪಾಂತರಿಯ ಪ್ರಕರಣಗಳು ದೇಶದಲ್ಲಿ ವರದಿಯಾದ ಮಾರನೆಯ ದಿನ ಷೇರುಪೇಟೆ ಸೂಚ್ಯಂಕಗಳು ಇಳಿಕೆಯ ಹಾದಿ ಹಿಡಿದವು.

ಎರಡು ದಿನಗಳಿಂದ ಚೇತರಿಕೆಯ ಹಾದಿಯಲ್ಲಿ ಇದ್ದ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಶುಕ್ರವಾರದ ವಹಿವಾಟಿನಲ್ಲಿ 764 ಅಂಶ ಕುಸಿಯಿತು. ದಿನದ ಕೊನೆಯಲ್ಲಿ 57,696 ಅಂಶಗಳಿಗೆ ತಲುಪಿತು. ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 204 ಅಂಶ ಇಳಿಕೆಯಾಗಿ 17,196 ಅಂಶದಲ್ಲಿ ವಹಿವಾಟು ಕೊನೆಗೊಳಿಸಿತು.

ಸೆನ್ಸೆಕ್ಸ್‌ನಲ್ಲಿ ಎಲ್‌ಆ್ಯಂಡ್‌ಟಿ, ಇಂಡಸ್‌ಇಂಡ್ ಬ್ಯಾಂಕ್, ಟಾಟಾ ಸ್ಟೀಲ್ ಮತ್ತು ಅಲ್ಟ್ರಾಟೆಕ್ ಸಿಮೆಂಟ್ ಷೇರುಗಳು ಮಾತ್ರ ಗಳಿಕೆ ಕಂಡುಕೊಂಡವು. ‘ಆರ್‌ಬಿಐನ ಹಣಕಾಸು ನೀತಿ ಸಮಿತಿಯ ಸಭೆಯ ಮುಂದಿನ ವಾರ ನಡೆಯಲಿದೆ. ಹೂಡಿಕೆದಾರರು ಆ ಸಭೆಯ ತೀರ್ಮಾನಗಳತ್ತ ಒಂದು ದೃಷ್ಟಿ ಇರಿಸಿದ್ದಾರೆ. ಅಲ್ಲದೆ, ದೇಶದಲ್ಲಿ ಓಮೈಕ್ರಾನ್ ರೂಪಾಂತರಿ ತಳಿಯ ಪ್ರಕರಣಗಳು ವರದಿಯಾಗಿರುವ ಕಾರಣ ಹೂಡಿಕೆದಾರರು ಎಚ್ಚರಿಕೆಯ ವಹಿವಾಟು ನಡೆಸುತ್ತಿದ್ದಾರೆ’ ಎಂದು ಜಿಯೋಜಿತ್ ಫೈನಾನ್ಶಿಯಲ್ ಸರ್ವಿಸಸ್‌ನ ಸಂಶೋಧನಾ ವಿಭಾಗದ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.

ADVERTISEMENT

‘ಕೊರೊನಾ ವೈರಾಣುವಿನ ಹೊಸ ರೂಪಾಂತರಿ ಪತ್ತೆಯಾಗಿರುವುದು ಮತ್ತು ಅದರ ವಿಚಾರವಾಗಿ ಒಂದಿಷ್ಟು ಅನಿಶ್ಚಿತತೆಗಳು ಇರುವ ಕಾರಣ ಆರ್‌ಬಿಐನ ಹಣಕಾಸು ನೀತಿ ಸಮಿತಿಯು ಹೊಂದಾಣಿಕೆಯ ನಿಲುವನ್ನು ಮುಂದುವರಿಸುವ ಸಾಧ್ಯತೆ ಇದೆ’ ಎಂದು ನಾಯರ್ ಅವರು ತಿಳಿಸಿದ್ದಾರೆ.

‘‍ಭಾರತದ ಅತಿದೊಡ್ಡ ಐಪಿಒ (ಒನ್‌97 ಕಮ್ಯುನಿಕೇಷನ್ಸ್‌) ವಿಚಾರದಲ್ಲಿ ಹೂಡಿಕೆದಾರರು ತೋರಿದ ನಿರುತ್ಸಾಹದ ಪ್ರತಿಕ್ರಿಯೆ, ಯುರೋಪಿನ ವಿವಿಧೆಡೆ ಕೋವಿಡ್ ಪ್ರಕರಣಗಳು ಮತ್ತೆ ಹೆಚ್ಚಾಗುತ್ತಿರುವುದು ಕೂಡ ಎಚ್ಚರಿಕೆಯ ವಹಿವಾಟಿಗೆ ಇಂಬು ಕೊಟ್ಟಿತು’ ಎಂದು ಕೋಟಕ್ ಸೆಕ್ಯುರಿಟೀಸ್‌ನ ಈಕ್ವಿಟಿ ಸಂಶೋಧನಾ ವಿಭಾಗದ ಶ್ರೀಕಾಂತ್ ಚವಾಣ್ ಹೇಳಿದ್ದಾರೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆಯು ಶೇಕಡ 2.38ರಷ್ಟು ಹೆಚ್ಚಾಗಿದ್ದು ಪ್ರತಿ ಬ್ಯಾರೆಲ್‌ಗೆ 71.32 ಅಮೆರಿಕನ್ ಡಾಲರ್‌ಗೆ ತಲುಪಿದೆ. ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಭಾರತದ ರೂಪಾಯಿ ಮೌಲ್ಯವು ಅಮೆರಿಕದ ಡಾಲರ್ ಎದುರು 14 ಪೈಸೆ ಇಳಿಕೆ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.