ADVERTISEMENT

ಮಾರಾಟದ ಒತ್ತಡ: ಸೂಚ್ಯಂಕ ಇಳಿಕೆ

ಪಿಟಿಐ
Published 9 ಮೇ 2022, 13:39 IST
Last Updated 9 ಮೇ 2022, 13:39 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ದೇಶದ ಷೇರುಪೇಟೆಗಳಲ್ಲಿ ಸೋಮವಾರ ಮಾರಾಟದ ತೀವ್ರ ಒತ್ತಡ ಕಂಡುಬಂದು ಸೂಚ್ಯಂಕಗಳು ಇಳಿಕೆ ಕಾಣುವಂತಾಯಿತು.

ರಿಲಯನ್ಸ್‌ ಇಂಡಸ್ಟ್ರೀಸ್‌ ಷೇರುಗಳ ಮೌಲ್ಯ ಇಳಿಕೆ ಹಾಗೂ ಜಾಗತಿಕ ಮಾರುಕಟ್ಟೆಗಳಲ್ಲಿನ ನಕಾರಾತ್ಮಕ ವಹಿವಾಟಿನ ಪರಿಣಾಮವಾಗಿ ದೇಶಿ ಮಾರುಕಟ್ಟೆಗಳಲ್ಲಿಯೂ ವಹಿವಾಟು ಇಳಿಕೆ ಕಂಡಿತು.

ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್‌ ಎದುರು ರೂಪಾಯಿ ಮೌಲ್ಯ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿತ ಕಂಡಿರುವುದು ಸಹ ವಹಿವಾಟಿನ ಮೇಲೆ ಪರಿಣಾಮ ಉಂಟುಮಾಡಿತು.

ADVERTISEMENT

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 365 ಅಂಶ ಇಳಿಕೆ ಕಂಡು 54,470 ಅಂಶಗಳಲ್ಲಿ ವಹಿವಾಟು ಅಂತ್ಯವಾಯಿತು. ದಿನದ ವಹಿವಾಟಿನ ಒಂದು ಹಂತದಲ್ಲಿ ಸೆನ್ಸೆಕ್ಸ್ 900 ಅಂಶಗಳಿಗೂ ಹೆಚ್ಚು ಇಳಿಕೆ ಕಂಡಿತ್ತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 109 ಅಂಶ ಇಳಿಕೆಯಾಗಿ 16,302 ಅಂಶಗಳಲ್ಲಿ ವಹಿವಾಟು ಅಂತ್ಯವಾಯಿತು.

ರಿಲಯನ್ಸ್‌ ಇಂಡಸ್ಟ್ರೀಸ್‌ನ ನಾಲ್ಕನೇ ತ್ರೈಮಾಸಿಕದ ಆರ್ಥಿಕ ಸಾಧನೆಯು ಹೂಡಿಕೆದಾರರನ್ನು ಉತ್ತೇಜಿಸುವಲ್ಲಿ ವಿಫಲವಾಗಿದೆ. ಈ ಕಾರಣಕ್ಕೆ ಕಂಪನಿಯ ಷೇರು ಮೌಲ್ಯ ಶೇ 3.97ರಷ್ಟು ಇಳಿಕೆ ಕಂಡಿತು.

‘ರೂಪಾಯಿ ಮೌಲ್ಯ ಕುಸಿತ, ಜಾಗತಿಕ ಮಟ್ಟದಲ್ಲಿ ಬಡ್ಡಿದರ ಹೆಚ್ಚಳ ಹಾಗೂ ಚೀನಾದಲ್ಲಿ ಲಾಕ್‌ಡೌನ್ ನಿಯಮಗಳನ್ನು ಬಿಗಿಗೊಳಿಸಿರುವ ಕಾರಣಗಳಿಂದಾಗಿ ದೇಶಿ ಷೇರುಪೇಟೆಗಳಲ್ಲಿ ವಹಿವಾಟು ಇಳಿಕೆ ಕಂಡಿತು’ ಎಂದು ಜಿಯೋಜಿತ್‌ ಫೈನಾನ್ಶಿಯಲ್‌ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್‌ ನಾಯರ್ ಹೇಳಿದ್ದಾರೆ.

ಬ್ರೆಂಟ್‌ ಕಚ್ಚಾ ತೈಲ ದರ ಶೇ 1.17ರಷ್ಟು ಇಳಿಕೆ ಕಂಡು ಒಂದು ಬ್ಯಾರಲ್‌ಗೆ 111 ಡಾಲರ್‌ಗಳಿಗೆ ತಲುಪಿತು.

ಮೈಂಡ್‌ಟ್ರೀ ಷೇರು ಮೌಲ್ಯ ಇಳಿಕೆ: ಮೈಂಡ್‌ಟ್ರೀ ಮತ್ತು ಎಲ್‌ ಆ್ಯಂಡ್‌ ಟಿ ಇನ್ಫೊಟೆಕ್‌ ಕಂಪನಿಗಳ ವಿಲೀನದ ಸುದ್ದಿಯ ನಂತರ ಎರಡೂ ಕಂಪನಿಗಳ ಷೇರು ಮೌಲ್ಯ ಇಳಿಕೆ ಕಂಡಿದೆ. ಬಿಎಸ್‌ಇನಲ್ಲಿ ಮೈಂಡ್‌ಟ್ರೀ ಷೇರು ಮೌಲ್ಯ ಶೇ 5.30ರಷ್ಟು ಇಳಿಕೆ ಕಂಡು ಪ್ರತಿ ಷೇರಿನ ಬೆಲೆ ₹ 3,195.65ಕ್ಕೆ ತಲುಪಿತು. ಎಲ್‌ ಆ್ಯಂಡ್‌ ಟಿ ಇನ್ಫೊಟೆಕ್‌ ಷೇರು ಮೌಲ್ಯ ಶೇ 3.13ರಷ್ಟು ಇಳಿಕೆ ಆಗಿ ಪ್ರತಿ ಷೇರಿನ ಬೆಲೆ ₹ 4,449.45ಕ್ಕೆ ತಲುಪಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.