ADVERTISEMENT

ಮೈಕೊಡವಿ ನಿಂತ ಗೂಳಿ

19 ತಿಂಗಳಿನಲ್ಲಿ ದಿನದ ವಹಿವಾಟಿನ ಗರಿಷ್ಠ ಜಿಗಿತ

ಪಿಟಿಐ
Published 12 ಅಕ್ಟೋಬರ್ 2018, 18:15 IST
Last Updated 12 ಅಕ್ಟೋಬರ್ 2018, 18:15 IST
ಗೂಳಿ
ಗೂಳಿ   

ಮುಂಬೈ: ಕರಡಿ ಹಿಡಿತದಲ್ಲಿದ್ದ ಗೂಳಿ ಮೈಕೊಡವಿ ಮತ್ತೆ ತನ್ನ ಓಟ ಆರಂಭಿಸಿದೆ. ಇದರಿಂದಾಗಿ ಸಂವೇದಿ ಸೂಚ್ಯಂಕವು 19 ತಿಂಗಳ ಬಳಿಕ ಶುಕ್ರವಾರ ದಿನದ ವಹಿವಾಟಿನ ಗರಿಷ್ಠ ಏರಿಕೆ ದಾಖಲಿಸಿತು.

ಕಚ್ಚಾ ತೈಲ ದರ ಇಳಿಕೆ, ಡಾಲರ್‌ ಎದುರು ರೂಪಾಯಿ ಮೌಲ್ಯ ಏರಿಕೆಯು ಶುಕ್ರವಾರ ವಹಿವಾಟಿನಲ್ಲಿ ಭಾರಿ ಚೇತರಿಕೆಗೆ ಮುಖ್ಯ ಕಾರಣಗಳಾಗಿವೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) 732 ಅಂಶ ಜಿಗಿತ ಕಂಡು 34,733 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ. 2017ರ ಮಾರ್ಚ್‌ ನಂತರ ದಿನದ ವಹಿವಾಟಿನ ಗರಿಷ್ಠ ಗಳಿಕೆ ಇದಾಗಿದೆ.

ADVERTISEMENT

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 237 ಅಂಶ ಚೇತರಿಕೆ ಕಂಡು, 10,472 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ಆರು ವಾರಗಳ ಬಳಿಕ ಎರಡೂ ಸೂಚ್ಯಂಕಗಳು ಏರುಮುಖವಾಗಿ ವಾರದ ವಹಿವಾಟು ಅಂತ್ಯಗೊಳಿಸಿವೆ.

‘ಜುಲೈ–ಸೆಪ್ಟೆಂಬರ್‌ತ್ರೈಮಾಸಿಕದಲ್ಲಿ ಟಿಸಿಎಸ್‌ ಉತ್ತಮ ಆರ್ಥಿಕ ಸಾಧನೆ ಪ್ರಕಟಿಸಿದೆ. ಬೇರೆ ಕಂಪನಿಗಳ ಸಾಧನೆಯೂ ಉತ್ತಮವಾಗಿರುವ ನಿರೀಕ್ಷೆಯನ್ನು ಇದು ಮೂಡಿಸಿದೆ. ಇದರ ಜತೆಗೆ ಕಚ್ಚಾ ತೈಲ ದರ ಇಳಿಕೆ, ಬಾಂಡ್‌ ಗಳಿಕೆ ತಗ್ಗಿರುವುದು ಹಾಗೂ ರೂಪಾಯಿ ಮೌಲ್ಯ ವೃದ್ಧಿಯು ಸಕಾರಾತ್ಮಕ ವಹಿವಾಟು ನಡೆಯುವಂತೆ ಮಾಡಿವೆ’ ಎಂದು ಸ್ಯಾಂಕ್ಟಮ್‌ ವೆಲ್ತ್‌ ಮ್ಯಾನೇಜ್‌ಮೆಂಟ್‌ನ ಮುಖ್ಯ ಹೂಡಿಕೆ ಅಧಿಕಾರಿ ಸುನಿಲ್‌ ಶರ್ಮಾ ಹೇಳಿದ್ದಾರೆ.

ಕಚ್ಚಾ ತೈಲ: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ
ಶೇ 3 ರಷ್ಟು ಇಳಿಕೆ ಕಂಡು ಒಂದು ಬ್ಯಾರೆಲ್‌ಗೆ 80.37 ಡಾಲರ್‌ಗಳಿಗೆ ಇಳಿಕೆಯಾಗಿದೆ.

ರೂಪಾಯಿ ಚೇತರಿಕೆ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಶುಕ್ರವಾರ ರೂಪಾಯಿ ಮೌಲ್ಯ 55 ಪೈಸೆ ಹೆಚ್ಚಾಗಿದೆ. ಇದರಿಂದ ಒಂದು ಡಾಲರ್‌ಗೆ ₹ 73.57ರಂತೆ ವಿನಿಮಯಗೊಂಡಿತು.

ಮೂರು ವಾರಗಳಲ್ಲಿಯೇ ರೂಪಾಯಿ ಕಂಡಿರುವ ಗರಿಷ್ಠ ಚೇತರಿಕೆ ಇದಾಗಿದೆ. ಆಮದು ನಿಯಂತ್ರಿಸಲು ಮತ್ತು ವಿದೇಶಿ ಹೂಡಿಕೆa ಹೆಚ್ಚಳಕ್ಕೆ ಸರ್ಕಾರ ಕೈಗೊಂಡಿರುವ ಕ್ರಮಗಳಿಂದಾಗಿ ರೂಪಾಯಿ ಚೇತರಿಸಿಕೊಂಡಿದೆ ಎಂದು ವರ್ತಕರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.