ADVERTISEMENT

ಷೇರುಪೇಟೆಯಲ್ಲಿ ಖರೀದಿ ಭರಾಟೆ

ಬಂಡವಾಳ ಗಳಿಕೆ ತೆರಿಗೆ, ಷೇರು ವಹಿವಾಟು ತೆರಿಗೆ ಪರಾಮರ್ಶೆ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2019, 20:17 IST
Last Updated 30 ಅಕ್ಟೋಬರ್ 2019, 20:17 IST
sensex
sensex   

ಮುಂಬೈ (ಪಿಟಿಐ): ಇತ್ತೀಚಿನ ದಿನಗಳಲ್ಲಿ ದೇಶದ ಷೇರುಪೇಟೆಗಳಲ್ಲಿ ಹೂಡಿಕೆದಾರರು ಉತ್ಸಾಹದಿಂದ ಭಾಗವಹಿಸುತ್ತಿದ್ದು, ಗೂಳಿ ಓಟಕ್ಕೆ ವೇಗ ದೊರೆತಿದೆ.

ಮುಂಬೈ ಷೇರುಪೇಟೆ (ಬಿಎಸ್‌ಇ) ಸಂವೇದಿ ಸೂಚ್ಯಂಕವು ಬುಧವಾರದ ವಹಿವಾಟಿನಲ್ಲಿ 40 ಸಾವಿರದ ಗಡಿ ದಾಟಿತು. ದಿನದಲ್ಲಿ 220 ಅಂಶಗಳ ಗಳಿಕೆಯೊಂದಿಗೆ 40,052 ಅಂಶಗಳಲ್ಲಿ ವಹಿವಾಟು ಅಂತ್ಯಕಂಡಿತು. ಜೂನ್‌ 3 ರಂದು 40,267 ಅಂಶಗಳಲ್ಲಿ ಮತ್ತು ಜೂನ್‌ 4 ರಂದು 40,083 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿತ್ತು.

ರಾಷ್ಟ್ರೀಯ ಷೇರುಪೇಟೆ (ಎನ್‌ಎಸ್‌ಇ) ಸೂಚ್ಯಂಕ ನಿಫ್ಟಿ, 57 ಅಂಶಗಳ ಗಳಿಕೆಯೊಂದಿಗೆ 11,844 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ADVERTISEMENT

ಗರಿಷ್ಠ ಗಳಿಕೆ: ಎಸ್‌ಬಿಐ, ಟಿಸಿಎಸ್‌, ಐಟಿಸಿ, ಭಾರ್ತಿ ಏರ್‌ಟೆಲ್‌, ಸನ್‌ ಫಾರ್ಮಾ, ಇನ್ಫೊಸಿಸ್‌ ಮತ್ತು ಬಜಾಜ್‌ ಆಟೊ ಕಂಪನಿ ಷೇರುಗಳು ಶೇ 3.37ರವರೆಗೂ ಏರಿಕೆ ಕಂಡಿವೆ.

ನಷ್ಟ: ಯೆಸ್‌ ಬ್ಯಾಂಕ್‌, ಮಾರುತಿ, ಇಂಡಸ್‌ಇಂಡ್‌ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌ ಮತ್ತು ಬಜಾಜ್‌ ಫೈನಾನ್ಸ್‌ ಷೇರುಗಳು ಶೇ 2.41ರವರೆಗೂ ಇಳಿಕೆ ಕಂಡಿವೆ.

ದೀರ್ಘಾವಧಿ ಬಂಡವಾಳ ಗಳಿಕೆ ಮೇಲಿನ ತೆರಿಗೆ, ಷೇರು ವಹಿವಾಟು ತೆರಿಗೆ ಹಾಗೂ ಲಾಭಾಂಶ ವಿತರಣೆ ಮೇಲಿನ ತೆರಿಗೆಗಳನ್ನು ಪರಿಷ್ಕರಿಸುವ ಪ್ರಸ್ತಾಪವನ್ನು ಕೇಂದ್ರ ಸರ್ಕಾರದ ಮುಂದಿಡಲಾಗಿದೆ. ಇದು ದೇಶಿ ಬಂಡವಾಳ ಹೂಡಿಕೆ ಚಟುವಟಿಕೆ
ಯನ್ನು ಉತ್ತೇಜಿಸಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಎರಡನೇ ತ್ರೈಮಾಸಿಕದಲ್ಲಿ ಕಂಪನಿಗಳ ಸಾಧನೆ ಉತ್ತಮವಾಗಿರುವುದು ಹಾಗೂ ಕಾರ್ಪೊರೇಟ್‌ ತೆರಿಗೆ ದರ ಕಡಿತದಿಂದ ಆಗಿರುವ ಪ್ರಯೋಜನವೂ ಸಕಾರಾತ್ಮಕ ವಹಿವಾಟಿಗೆ ಕಾರಣವಾಗುತ್ತಿದೆ.

ಜಾಗತಿಕ ಮಾರುಕಟ್ಟೆ: ವಾಣಿಜ್ಯ ಬಿಕ್ಕಟ್ಟು ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿಅಮೆರಿಕ–ಚೀನಾ ಒಂದು ನಿರ್ಧಾರಕ್ಕೆ ಬರಲು ವಿಳಂಬವಾಗುವ ಸಾಧ್ಯತೆ ಇದೆ. ಇದು ಏಷ್ಯಾದ ಷೇರುಪೇಟೆಗಳಲ್ಲಿ ನಕಾರಾತ್ಮಕ ವಹಿವಾಟು ನಡೆಯುವಂತೆ ಮಾಡಿತು ಎಂದು ತಜ್ಞರು ಹೇಳಿದ್ದಾರೆ.

ಹೂಡಿಕೆದಾರರ ಸಂಪತ್ತು ವೃದ್ಧಿ

ಸೂಚ್ಯಂಕಗಳು ಏರಿಕೆ ಕಾಣುತ್ತಿರುವಂತೆಯೇ ಹೂಡಿಕೆದಾರರ ಸಂಪತ್ತು ಸಹ ವೃದ್ಧಿಯಾಗುತ್ತಿದೆ. ಜೂನ್‌ 5 ರ ನಂತರ ಕಳೆದುಕೊಂಡಿದ್ದ ಸಂಪತ್ತು ಮರಳಿ ಬಂದಿದೆ. ಮಂಗಳವಾರದ ವಹಿವಾಟಿನಲ್ಲಿ ಮಾರುಕಟ್ಟೆ ಮೌಲ್ಯದ ಲೆಕ್ಕದಲ್ಲಿ ಸಂಪತ್ತು ₹ 2.73 ಲಕ್ಷ ಕೋಟಿಗಳಷ್ಟು ಹೆಚ್ಚಾಗಿತ್ತು.

ಬುಧವಾರದ ವಹಿವಾಟಿನಲ್ಲಿ ₹ 1.27 ಲಕ್ಷ ಕೋಟಿಗಳಷ್ಟು ಏರಿಕೆಯಾಗಿದೆ. ಮುಂಬೈ ಷೇರುಪೇಟೆಯ ಒಟ್ಟಾರೆ ಮಾರುಕಟ್ಟೆ ಮೌಲ್ಯವು ₹ 152 ಲಕ್ಷ ಕೋಟಿಗಳಿಂದ ₹ ₹ 153.27 ಲಕ್ಷ ಕೋಟಿಗಳಿಗೆ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.