ADVERTISEMENT

ಹೊಸ ಕೊರೊನಾ ವೈರಸ್‌ ಭೀತಿಗೆ ಕುಸಿದ ಷೇರು ಮಾರುಕಟ್ಟೆ

ಪಿಟಿಐ
Published 21 ಡಿಸೆಂಬರ್ 2020, 11:52 IST
Last Updated 21 ಡಿಸೆಂಬರ್ 2020, 11:52 IST
ಮುಂಬೈ ಶೇರು ಮಾರುಕಟ್ಟೆಯ ಪ್ರಾತಿನಿಧಿಕ ಚಿತ್ರ (ಪಿಟಿಐ)
ಮುಂಬೈ ಶೇರು ಮಾರುಕಟ್ಟೆಯ ಪ್ರಾತಿನಿಧಿಕ ಚಿತ್ರ (ಪಿಟಿಐ)   

ಮುಂಬೈ: ಬ್ರಿಟನ್ನಿನಲ್ಲಿ ಪತ್ತೆಯಾಗಿರುವ ಹೊಸ ಸ್ವರೂಪದ ಕೊರೊನಾ ವೈರಾಣು ಭಾರತದ ಷೇರು ಮಾರುಕಟ್ಟೆಯಲ್ಲಿ ಸೋಮವಾರ ಭೀತಿಯ ವಾತಾವರಣ ಸೃಷ್ಟಿಸಿತು. ವರ್ತಕರು, ಹೂಡಿಕೆದಾರರು ಷೇರುಗಳ ಭಾರಿ ಪ್ರಮಾಣದ ಮಾರಾಟದಲ್ಲಿ ತೊಡಗಿದ ಪರಿಣಾಮವಾಗಿ ಬಿಎಸ್‌ಇ ಸೆನ್ಸೆಕ್ಸ್‌ ಒಟ್ಟು 1,407 ಅಂಶಗಳ ಕುಸಿತ ದಾಖಲಿಸಿತು.

45,553 ಅಂಶಗಳಲ್ಲಿ ದಿನದ ವಹಿವಾಟು ಕೊನೆಗೊಳಿಸಿದ ಸೆನ್ಸೆಕ್ಸ್, ಒಂದೇ ದಿನದಲ್ಲಿ ಶೇಕಡ 3ರಷ್ಟು ಕುಸಿತ ಕಂಡಂತಾಯಿತು. ನಿಫ್ಟಿ ಸೂಚ್ಯಂಕವು 432 ಅಂಶಗಳಷ್ಟು ಕುಸಿತ ದಾಖಲಿಸಿತು, 13,328 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿತು.

ಮುಂಬೈ ಷೇರುಪೇಟೆಯಲ್ಲಿ ವಹಿವಾಟು ನಡೆಸುವ ಬಹುತೇಕ ಎಲ್ಲ ಕಂಪನಿಗಳ ಷೇರುಗಳ ಮೌಲ್ಯ ಕುಸಿಯಿತು. ಒಎನ್‌ಜಿಸಿ ಷೇರುಗಳ ಮೌಲ್ಯದಲ್ಲಿ ಶೇಕಡ 9ರಷ್ಟು ಇಳಿಕೆಯಾಯಿತು. ಇಂಡಸ್‌ಇಂಡ್‌ ಬ್ಯಾಂಕ್‌, ಮಹೀಂದ್ರ ಆ್ಯಂಡ್ ಮಹೀಂದ್ರ, ಎಸ್‌ಬಿಐ, ಐಟಿಸಿ, ಎಕ್ಸಿಸ್ ಬ್ಯಾಂಕ್ ಮತ್ತು ಪವರ್‌ ಗ್ರಿಡ್ ಕಂಪನಿ ಷೇರುಗಳ ಮೌಲ್ಯದಲ್ಲಿ ಗರಿಷ್ಠ ಶೇಕಡ 7ರಷ್ಟು ಇಳಿಕೆ ಆಯಿತು.

ADVERTISEMENT

‘ಹೊಸ ಸ್ವರೂಪದ ಕೊರೊನಾ ವೈರಾಣು ಬ್ರಿಟನ್ನಿನಲ್ಲಿ ಪತ್ತೆಯಾಗಿರುವುದು ಹಾಗೂ ಕೋವಿಡ್–19ಕ್ಕೆ ಅಭಿವೃದ್ಧಿಪಡಿಸಲಾಗಿರುವ ಲಸಿಕೆ ಎಷ್ಟು ಪರಿಣಾಮಕಾರಿ ಎಂಬ ಅನುಮಾನ ಮೂಡಿರುವುದು ಹೂಡಿಕೆದಾರರ ವಿಶ್ವಾಸವನ್ನು ವಿಶ್ವದಾದ್ಯಂತ ಕುಂದಿಸಿದೆ. ಸೆನ್ಸೆಕ್ಸ್‌ ಏರುಗತಿಯಲ್ಲಿ ಇದ್ದುದರಿಂದ ಸೋಮವಾರ ಲಾಭ ಗಳಿಕೆಯ ವಹಿವಾಟು ಕೂಡ ನಡೆಯಿತು. ಇದರಿಂದಾಗಿ ಭಾರತದ ಷೇರು ಮಾರುಕಟ್ಟೆಗಳಲ್ಲಿ ಭಾರಿ ಕುಸಿತ ಕಂಡುಬಂತು’ ಎಂದು ರಿಲಯನ್ಸ್‌ ಸೆಕ್ಯುರಿಟೀಸ್‌ನ ಬಿನೋದ್ ಮೋದಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.