ADVERTISEMENT

ಷೇರುಪೇಟೆಯಲ್ಲಿ ಕೊನೆಗೊಂಡಿತೇ ಗೂಳಿ ಓಟ?

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2021, 20:30 IST
Last Updated 21 ನವೆಂಬರ್ 2021, 20:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಷೇರುಪೇಟೆಯಲ್ಲಿ ಗೂಳಿ ಓಟ ಸದ್ಯಕ್ಕೆ ನಿಂತಂತೆ ಕಾಣುತ್ತಿದೆ. ನವೆಂಬರ್ 18ಕ್ಕೆ ಕೊನೆಗೊಂಡ ವಾರದಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಕುಸಿತ ದಾಖಲಿಸಿವೆ. 59,636 ಅಂಶಗಳಲ್ಲಿ ವಹಿವಾಟು ಮುಗಿಸಿರುವ ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇ 1.73ರಷ್ಟು ಕುಸಿತ ಕಂಡಿದೆ.

17,764 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ನಿಫ್ಟಿ ಶೇ 1.87ರಷ್ಟು ಇಳಿಕೆಯಾಗಿದೆ. ಲಾಭ ಗಳಿಕೆಯ ಉದ್ದೇಶಕ್ಕೆ ಷೇರುಗಳ ಮಾರಾಟ, ಹಣದುಬ್ಬರ ಸೇರಿ ಹಲವು ಅಂಶಗಳು ಸೂಚ್ಯಂಕಗಳು ತಗ್ಗಲು ಕಾರಣವಾಗಿವೆ.

ವಲಯವಾರು ಪ್ರಗತಿಯಲ್ಲಿ, ನಿಫ್ಟಿ ವಾಹನ ವಲಯ ಮಾತ್ರ ಶೇ 0.35ರಷ್ಟು ಗಳಿಕೆ ಕಡಿದೆ. ಉಳಿದಂತೆ ನಿಫ್ಟಿ ಲೋಹ ಶೇ 5.32ರಷ್ಟು, ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಶೇ 3.43ರಷ್ಟು, ರಿಯಲ್ ಎಸ್ಟೇಟ್ ಶೇ 3.26ರಷ್ಟು, ಮಾಧ್ಯಮ ಶೇ 2.14ರಷ್ಟು, ಫಾರ್ಮಾ ಶೇ 2.13ರಷ್ಟು, ಮಿಡ್ ಕ್ಯಾಪ್ 100 ಶೇ 2.05ರಷ್ಟು, ನಿಫ್ಟಿ ಬ್ಯಾಂಕ್ ಶೇ 1.95ರಷ್ಟು, ಮಾಹಿತಿ ತಂತ್ರಜ್ಞಾನ ಶೇ 0.90ರಷ್ಟು ಮತ್ತು ಎಫ್‌ಎಂಸಿಜಿ ಶೇ 0.12ರಷ್ಟು ಕುಸಿದಿವೆ.

ADVERTISEMENT

ಏರಿಕೆ-ಇಳಿಕೆ: ನಿಫ್ಟಿಯಲ್ಲಿ ಮಾರುತಿ ಶೇ 9ರಷ್ಟು, ಪವರ್ ಗ್ರಿಡ್ ಶೇ 6ರಷ್ಟು, ಏಷ್ಯನ್ ಪೇಂಟ್ಸ್ ಶೇ 3ರಷ್ಟು ಮತ್ತು ಐಟಿಸಿ ಶೇ 2ರಷ್ಟು ಗಳಿಕೆ ಕಂಡಿವೆ. ಕೋಲ್ ಇಂಡಿಯಾ ಶೇ 8ರಷ್ಟು, ಟಾಟಾ ಸ್ಟೀಲ್ ಶೇ 8ರಷ್ಟು, ಶ್ರೀ ಸಿಮೆಂಟ್ ಶೇ 7ರಷ್ಟು ಮತ್ತು ಹಿಂಡಾಲ್ಕೋ ಶೇ 6ರಷ್ಟು ಕುಸಿತ ದಾಖಲಿಸಿವೆ.

ಮುನ್ನೋಟ: ಕಳೆದ ವಾರ ನಿಫ್ಟಿ 20 ದಿನಗಳ ಸರಾಸರಿ ಏರಿಳಿತ ಮತ್ತು 50 ದಿನಗಳ ಸರಾಸರಿ ಏರಿಳಿತಕ್ಕಿಂತ ಕೆಳಮಟ್ಟಕ್ಕೆ ಕುಸಿತಕಂಡಿದೆ. ಅಕ್ಟೋಬರ್‌ನಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹ 40 ಸಾವಿರ ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಈ ವಾರ ವಿದೇಶಿ ಹೂಡಿಕೆ ಯಾವ ರೀತಿ ಹರಿದು ಬರಲಿದೆ, ಡಾಲರ್ ಸೂಚ್ಯಂಕ ಯಾವ ದಿಕ್ಕಿನಲ್ಲಿ ಸಾಗಲಿದೆ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ಎಷ್ಟು ಸಕಾರಾತ್ಮಕತೆ ಇರಲಿದೆ ಎನ್ನುವ ಮೂರು ಪ್ರಮುಖ ಅಂಶಗಳು ದೇಶಿ ಮಾರುಕಟ್ಟೆಯ ದಿಕ್ಕು ನಿರ್ಧರಿಸಲಿವೆ. ನವೆಂಬರ್ 22ರಂದು ಭಾರತ- ಅಮೆರಿಕ ವ್ಯಾಪಾರದ ಕುರಿತು ಮಾತುಕತೆ ನಡೆಯಲಿದೆ. ನವೆಂಬರ್ 23ರಂದು ಅಮೆಜಾನ್ ಮತ್ತು ಫ್ಯೂಚರ್ ಗ್ರೂಪ್ ನಡುವಿನ ವಿವಾದದ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.