ADVERTISEMENT

ಏರಿಕೆ ಹಾದಿಗೆ ಮರಳಿದ ಸೂಚ್ಯಂಕಗಳು

​ಪ್ರಜಾವಾಣಿ ವಾರ್ತೆ
Published 1 ಜನವರಿ 2023, 20:05 IST
Last Updated 1 ಜನವರಿ 2023, 20:05 IST
   

ಸತತ ಮೂರು ವಾರಗಳಿಂದ ಕುಸಿತದ ಹಾದಿಯಲ್ಲಿದ್ದ ಷೇರುಪೇಟೆ ಸೂಚ್ಯಂಕಗಳು ಈ ವಾರ ಗಳಿಕೆಯ ಲಯಕ್ಕೆ ಮರಳಿವೆ. ಡಿಸೆಂಬರ್ 30ರಂದು ಕೊನೆಗೊಂಡ ವಾರದಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಗಳಿಕೆ ದಾಖಲಿಸಿವೆ. 60,840 ಅಂಶಗಳಲ್ಲಿ ವಹಿವಾಟು ಮುಗಿಸಿದ ಸೆನ್ಸೆಕ್ಸ್, ಶೇಕಡ 1.66ರಷ್ಟು ಗಳಿಕೆ ಕಂಡಿದೆ. 18,105 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ನಿಫ್ಟಿ ಶೇ 1.67ರಷ್ಟು ಜಿಗಿದಿದೆ.

ವಲಯವಾರು ಪ್ರಗತಿಯಲ್ಲಿ ನಿಫ್ಟಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಸೂಚ್ಯಂಕ ಶೇ 11ರಷ್ಟು, ಲೋಹ ಸೂಚ್ಯಂಕ ಶೇ 8ರಷ್ಟು, ರಿಯಲ್ ಎಸ್ಟೇಟ್ ಮತ್ತು ಅನಿಲ ಹಾಗೂ ತೈಲ ಸೂಚ್ಯಂಕ ತಲಾ ಶೇ 5ರಷ್ಟು ಗಳಿಸಿಕೊಂಡಿವೆ. ಆದರೆ ನಿಫ್ಟಿ ಹೆಲ್ತ್ ಕೇರ್ ಸೂಚ್ಯಂಕ ಶೇ 2ರಷ್ಟು ತಗ್ಗಿದೆ.

ಬಿಎಸ್ಇ ಲಾರ್ಜ್ ಕ್ಯಾಪ್ ವಲಯದಲ್ಲಿ ಅದಾನಿ ವಿಲ್ಮರ್, ಅದಾನಿ ಟೋಟಲ್ ಗ್ಯಾಸ್, ಅದಾನಿ ಟ್ರಾನ್ಸ್‌ಮಿಷನ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಪೇಟಿಎಂ, ಜೊಮಾಟೊ, ಟಾಟಾ ಸ್ಟೀಲ್ ಮತ್ತು ಹಿಂಡಾಲ್ಕೊ ಇಂಡಸ್ಟ್ರೀಸ್ ಶೇ 10ರಿಂದ ಶೇ 23ರಷ್ಟು ಗಳಿಸಿಕೊಂಡಿವೆ.

ADVERTISEMENT

ಬಿಎಸ್ಇ ಮಿಡ್ ಕ್ಯಾಪ್ ಸೂಚ್ಯಂಕ ಶೇ 3.6ರಷ್ಟು ಜಿಗಿದಿದೆ. ಇಂಡಿಯನ್ ಓವರ್ ಸೀಸ್ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ನ್ಯೂ ಇಂಡಿಯಾ ಅಶೂರೆನ್ಸ್ ಕಂಪನಿ, ರಾಜೇಶ್ ಎಕ್ಸ್‌ಪೋರ್ಟ್ಸ್, ಕೆನರಾ ಬ್ಯಾಂಕ್, ಅದಾನಿ ಪವರ್, ಬ್ಯಾಂಕ್ ಆಫ್ ಇಂಡಿಯಾ, ಜೆಎಸ್‌ಡಬ್ಲ್ಯೂ ಎನರ್ಜಿ, ಫೆಡರಲ್ ಬ್ಯಾಂಕ್, ಐಡಿಬಿಐ ಬ್ಯಾಂಕ್ ಮತ್ತು ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಗಳಿಸಿಕೊಂಡಿವೆ.

ಬಿಎಸ್ಇ ಸ್ಮಾಲ್ ಕ್ಯಾಪ್ ಸೂಚ್ಯಂಕ ಶೇ 6ರಷ್ಟು ಜಿಗಿದಿದೆ. ಜಿಆರ್‌ಎಂ ಓವರ್‌ಸೀಸ್, ಲ್ಯಾನ್ಸರ್ ಕಂಟೇನರ್ಸ್ ಲೈನ್ಸ್, ನ್ಯಾಷನಲ್ ಫರ್ಟಿಲೈಜರ್ಸ್, ಆಶಾಪುರ ಮೈನ್ ಕೆಮ್, ವಿಟೂ ರಿಟೇಲ್, ರಾಷ್ಟ್ರೀಯ ಕೆಮಿಕಲ್ಸ್ ಆ್ಯಂಡ್ ಫರ್ಟಿಲೈಜರ್ಸ್, ಜಿಐಸಿ ಹೌಸಿಂಗ್ ಫೈನಾನ್ಸ್ ಮತ್ತು ಪೂನಾವಾಲಾ ಫಿನ್ ಕಾರ್ಪ್ ಶೇ 25ರಿಂದ ಶೇ 41ರಷ್ಟು ಬೆಲೆ ಹೆಚ್ಚಿಸಿಕೊಂಡಿವೆ. ಮೋರ್ಫೆನ್ ಲ್ಯಾಬೊರೇಟರಿಸ್, ನೆಕ್ಟಾರ್ ಲೈಫ್ ಸೈನ್ಸಸ್, ಐಒಎಲ್ ಕೆಮಿಕಲ್ಸ್ ಆ್ಯಂಡ್ ಫಾರ್ಮಾಸೂಟಿಕಲ್ಸ್, ಸಿನ್ ಕಾಮ್ ಫಾರ್ಮ್ಯೂಲೇಷನ್ಸ್, ನ್ಯೂರೇಕಾ, ಕೆಬಿಸಿ ಗ್ಲೋಬಲ್ ಶೇ 6ರಿಂದ ಶೇ 11ರಷ್ಟು ಕುಸಿದಿವೆ.

ಮುನ್ನೋಟ: ಕಳೆದ ವಾರದ ಅವಧಿಯಲ್ಲಿ ಷೇರು ಮಾರುಕಟ್ಟೆ ಸಕಾರಾತ್ಮಕವಾಗಿ ಕಂಡುಬಂದಿದ್ದರೂ ಒಟ್ಟಾರೆ ಡಿಸೆಂಬರ್ ತಿಂಗಳಲ್ಲಿ ನಿಫ್ಟಿ ಮತ್ತು ಸೆನ್ಸೆಕ್ಸ್ ತಲಾ ಶೇ 3.5ರಷ್ಟು ಕುಸಿದಿವೆ. ಸದ್ಯದ ಸ್ಥಿತಿಯಲ್ಲಿ ಷೇರುಪೇಟೆಯಲ್ಲಿ ಏರಿಳಿತದ ಹಾದಿ ಮುಂದುವರಿಯಲಿದೆ. ಜಾಗತಿಕ ವಿದ್ಯಮಾನಗಳ ಜೊತೆಗೆ ದೇಶಿಯ ಬೆಳವಣಿಗೆಗಳು ಷೇರುಪೇಟೆ ಮೇಲೆ ಪರಿಣಾಮ ಬೀರಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.