ಮುಂಬೈ: ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷವು ದೇಶದ ಷೇರುಪೇಟೆಗಳಲ್ಲಿ ಹೂಡಿಕೆದಾರರು ಎಚ್ಚರಿಕೆಯಿಂದ ಹೆಜ್ಜೆ ಇರಿಸುವಂತೆ ಮಾಡಿದೆ.
ಹೂಡಿಕೆದಾರರು ಲೋಹ, ತೈಲ ಮತ್ತು ಅನಿಲ, ಔಷಧ ವಲಯಗಳ ಷೇರುಗಳನ್ನು ಲಾಭ ಗಳಿಕೆಯ ಉದ್ದೇಶದಿಂದ ಮಾರಾಟ ಮಾಡಿದ ಕಾರಣಕ್ಕೆ ಷೇರುಪೇಟೆ ಸೂಚ್ಯಂಕಗಳು ಮಂಗಳವಾರದ ವಹಿವಾಟಿನಲ್ಲಿ ತುಸು ಇಳಿಕೆ ಕಂಡಿವೆ.
ಮುಂಬೈ ಷೇರುಪೇಟೆಯಲ್ಲಿ ಸೆನ್ಸೆಕ್ಸ್ 212 ಅಂಶ ಇಳಿಕೆಯಾಗಿದೆ. ರಾಷ್ಟ್ರೀಯ ಷೇರುಪೇಟೆಯಲ್ಲಿ ನಿಫ್ಟಿ ಸೂಚ್ಯಂಕವು 93 ಅಂಶ ಇಳಿಕೆ ಕಂಡಿದೆ.
ಜಾಗತಿಕ ಮಾರುಕಟ್ಟೆಗಳಲ್ಲಿ ಕಚ್ಚಾ ತೈಲದ ಬೆಲೆಯು ಹೆಚ್ಚಳ ಆಗುತ್ತಿದೆ. ಅಮೆರಿಕದ ಫೆಡರಲ್ ಬ್ಯಾಂಕ್ ಬಡ್ಡಿ ದರದ ಬಗ್ಗೆ ಈ ವಾರ ನಿರ್ಣಯ ಕೈಗೊಳ್ಳಲಿದೆ. ಹೀಗಾಗಿ, ಹೂಡಿಕೆದಾರರು ಎಚ್ಚರಿಕೆಯಿಂದ ವಿದ್ಯಮಾನಗಳನ್ನು ಗಮನಿಸುತ್ತಿದ್ದಾರೆ ಎಂದು ತಜ್ಞರು ಹೇಳಿದ್ದಾರೆ.
ಔಷಧ ವಸ್ತುಗಳ ಮೇಲೆ ಹಾಗೂ ಸೆಮಿಕಂಡಕ್ಟರ್ ಉತ್ಪನ್ನಗಳ ಮೇಲೆ ಶೀಘ್ರದಲ್ಲಿಯೇ ತೆರಿಗೆ ವಿಧಿಸಲಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎಚ್ಚರಿಕೆ ನೀಡಿದ ನಂತರದಲ್ಲಿ ಔಷಧ ವಲಯದ ಷೇರುಗಳು ಕುಸಿದವು.
‘ಪಶ್ಚಿಮ ಏಷ್ಯಾದಲ್ಲಿ ಬಿಕ್ಕಟ್ಟು ತೀವ್ರವಾಗುತ್ತಿರುವ ಕಾರಣ ಸೂಚ್ಯಂಕಗಳು ತುಸು ಇಳಿಕೆ ಕಂಡಿವೆ. ಅನಿಶ್ಚಿತತೆಯ ಕಾರಣದಿಂದಾಗಿ ಬ್ರೆಂಟ್ ಕಚ್ಚಾ ತೈಲ ಬೆಲೆಯು ಏರಿಕೆಯಾಗಿದೆ. ಇದು ಭಾರತಕ್ಕೆ ಒಳ್ಳೆಯ ಸುದ್ದಿಯೇನೂ ಅಲ್ಲ. ತೈಲ ಬೆಲೆ ಏರಿಕೆಯು ಭಾರತದ ಕಂಪನಿಗಳ ವರಮಾನ ಗಳಿಕೆ ಹೆಚ್ಚಳದ ಮೇಲೆ ಪರಿಣಾಮ ಉಂಟುಮಾಡಬಹುದು’ ಎಂದು ಜಿಯೋಜಿತ್ ಇನ್ವೆಸ್ಟ್‌ಮೆಂಟ್ಸ್ ಲಿಮಿಟೆಡ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.
ಏಷ್ಯಾದಲ್ಲಿ ದಕ್ಷಿಣ ಕೊರಿಯಾದ ಕೊಸ್ಪಿ ಮತ್ತು ಜಪಾನ್‌ನ ನಿಕ್ಕೈ ಸೂಚ್ಯಂಕಗಳು ಏರಿಕೆ ಕಂಡಿವೆ. ಶಾಂಘೈ, ಹಾಂಗ್ ಕಾಂಗ್‌ನ ಸೂಚ್ಯಂಕಗಳು ಇಳಿಕೆ ಆಗಿವೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆಯು ಪ್ರತಿ ಬ್ಯಾರೆಲ್‌ಗೆ ಶೇ 1.69ರಷ್ಟು ಏರಿಕೆ ಆಗಿದ್ದು, ಬ್ಯಾರೆಲ್‌ಗೆ 74.47 ಡಾಲರ್‌ಗೆ ತಲುಪಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.