ADVERTISEMENT

ಟ್ರಂಪ್ ಪ್ರತಿ ಸುಂಕಕ್ಕೆ ಅಮೆರಿಕ ಕೋರ್ಟ್ ತಡೆ: ಷೇರುಪೇಟೆ ಚೇತರಿಕೆ

ಪಿಟಿಐ
Published 29 ಮೇ 2025, 11:12 IST
Last Updated 29 ಮೇ 2025, 11:12 IST
ಷೇರುಪೇಟೆ
ಷೇರುಪೇಟೆ   

ಮುಂಬೈ: ಡೊನಾಲ್ಡ್ ಟ್ರಂಪ್ ಅವರ ಪ್ರತಿ ಸುಂಕಕ್ಕೆ ಅಮೆರಿಕ ನ್ಯಾಯಾಲಯ ತಡೆ ನೀಡಿದ ಬಳಿಕ ಜಾಗತಿಕ ಷೇರುಪೇಟೆಯಲ್ಲಿ ಚೇತರಿಕೆ ಸೂಚನೆ ಹಿನ್ನೆಲೆಯಲ್ಲಿ ಭಾರತೀಯ ಷೇರುಪೇಟೆಗಳಲ್ಲಿ ಏರಿಕೆ ಕಂಡುಬಂದಿದೆ.

ಎರಡು ದಿನಗಳಿಂದ ಕುಸಿದಿದ್ದ ದೇಶೀಯ ಷೇರು ಸೂಚ್ಯಂಕಗಳಾದ ಬಿಎಸ್‌ಇ ಸೆನ್ಸೆಕ್ಸ್ ಮತ್ತು ಎನ್‌ಎಸ್‌ಇ ನಿಫ್ಟಿ ಏರಿಕೆ ದಾಖಲಿಸಿವೆ.

30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 320.70 ಅಂಶಗಳಷ್ಟು ಏರಿಕೆ ಕಂಡು 81,633ರಲ್ಲಿ ಸ್ಥಿರವಾಯಿತು. ದಿನದ ವಹಿವಾಟಿನಲ್ಲಿ ಸೆನ್ಸೆಕ್ಸ್ 504.57 ಅಂಶಗಳಷ್ಟು ಏರಿಕೆ ಕಂಡಿತ್ತು.

ADVERTISEMENT

ಎನ್‌ಎಸ್‌ಇ ನಿಫ್ಟಿ 81.15 ಅಂಶಗಳಷ್ಟು ಏರಿಕೆ ಕಂಡು 24,833ಕ್ಕೆ ತಲುಪಿತ್ತು.

ಸೆನ್ಸೆಕ್ಸ್ ಸಂಸ್ಥೆಗಳಲ್ಲಿ ಇಂಡಸ್‌ಇಂಡ್ ಬ್ಯಾಂಕ್‌ನ ಷೇರುಗಳು ಶೇ 2.41ರಷ್ಟು ಗಳಿಕೆ ಕಂಡಿತ್ತು.

ಸನ್ ಫಾರ್ಮಾ, ಅದಾನಿ ಪೋರ್ಟ್ಸ್, ಎಟರ್ನಲ್, ಟಾಟಾ ಸ್ಟೀಲ್, ಟೆಕ್ ಮಹೀಂದ್ರ, ಆಕ್ಸಿಸ್ ಬ್ಯಾಂಕ್ ಸಹ ಲಾಭ ಕಂಡಿವೆ.

ಬಜಾಜ್ ಫೈನಾನ್ಸ್, ಐಟಿಸಿ, ಬಜಾಜ್ ಫಿನ್‌ಸರ್ವ್, ಏಷಿಯನ್ ಪೇಂಟ್ಸ್ ನಷ್ಟ ಕಂಡಿವೆ.

ವಿದೇಶಗಳ ಆಮದುಗಳ ಪ್ರತಿ ಸುಂಕ ವಿಧಿಸಿದ್ದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶಕ್ಕೆ ಅಮೆರಿಕ ನ್ಯಾಯಾಲಯ ತಡೆ ವಿಧಿಸಿದ ಬಳಿಕ ಹೂಡಿಕೆದಾರರಲ್ಲಿ ಆಶಾಭಾವನೆ ಮೂಡಿದೆ.

ಏಷ್ಯಾದ ಮಾರುಕಟ್ಟೆಗಳ ಪೈಕಿ ದಕ್ಷಿಣ ಕೊರಿಯಾದ ಕಾಸ್ಪಿ, ಜಪಾನ್‌ನ ನಿಕ್ಕಿ 225 ಸೂಚ್ಯಂಕ, ಶಾಂಘೈನ ಎಸ್‌ಎಸ್‌ಇ ಕಾಂಪೋಸಿಟ್ ಸೂಚ್ಯಂಕ ಮತ್ತು ಹಾಂಗ್ ಕಾಂಗ್‌ನ ಹ್ಯಾಂಗ್ ಸೆಂಗ್ ಗಳಿಕೆಯೊಂದಿಗೆ ಕೊನೆಗೊಂಡವು.

ಯುರೋಪ್‌ನ ಮಾರುಕಟ್ಟೆಗಳು ಲಾಭದೊಂದಿಗೆ ವಹಿವಾಟು ನಡೆಸುತ್ತಿದ್ದವು. ಬುಧವಾರ ಅಮೆರಿಕದ ಮಾರುಕಟ್ಟೆ ಕುಸಿತದೊಂದಿಗೆ ಕೊನೆಗೊಂಡಿತ್ತು.

ಬುಧವಾರದ ವಹಿವಾಟಿನಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹4,662 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.