ADVERTISEMENT

ಸಾರ್ವಜನಿಕರಿಗೆ ಎಲ್‌ಐಸಿಯಲ್ಲಿ ಭಾಗಿಯಾಗುವ ಅವಕಾಶ; ಐಪಿಒ ಪ್ರಕ್ರಿಯೆಗೂ ಮುನ್ನ... 

ಏಜೆನ್ಸೀಸ್
Published 3 ಫೆಬ್ರುವರಿ 2020, 12:28 IST
Last Updated 3 ಫೆಬ್ರುವರಿ 2020, 12:28 IST
ಎಲ್‌ಐಸಿ
ಎಲ್‌ಐಸಿ    

ಆರಂಭಿಕ ಸಾರ್ವಜನಿಕ ನೀಡಿಕೆ (ಐಪಿಒ) ಮೂಲಕಸರ್ಕಾರಿ ಸ್ವಾಮ್ಯದ ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಸ್ವಲ್ಪ ಪಾಲು ಮಾರಾಟ ಮಾಡಲು ಸರ್ಕಾರ ಸಿದ್ಧತೆ ನಡೆಸಿದೆ. ಇದು ದೇಶದ ಇತಿಹಾಸದಲ್ಲೇ ಅತಿ ದೊಡ್ಡ ಐಪಿಒ ಆಗಬಹುದಾಗಿದ್ದು, ಎಲ್‌ಐಸಿ ಮತ್ತು ಐಡಿಬಿಐ ಬ್ಯಾಂಕ್‌ ಷೇರು ಮಾರಾಟದ ಮೂಲಕ₹ 90,000 ಕೋಟಿ ಸಂಗ್ರಹಿಸುವ ಗುರಿ ಹೊಂದಿದೆ.2010ರಲ್ಲಿ 'ಕೋಲ್‌ ಇಂಡಿಯಾ' ಐಪಿಒ ಮೂಲಕ ₹ 15,200 ಕೋಟಿ ಸಂಗ್ರಹ ಮಾಡಿತ್ತು.

* ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಎಲ್‌ಐಸಿಯಲ್ಲಿ ಸ್ವಲ್ಪ ಪಾಲು ಮಾರಾಟ ಮಾಡುವ ನಿರ್ಧಾರವನ್ನು ಫೆ.1ರಂದು ಬಜೆಟ್‌ ಭಾಷಣದಲ್ಲಿ ಮಂಡಿಸಿದರು. ಐಪಿಒ ಮೂಲಕ ಸಾರ್ವಜನಿಕರು ಸಂಪತ್ತು ಭರಿತ ಸರ್ಕಾರಿ ಸ್ವಾಮ್ಯದ ಕಂಪನಿಯಲ್ಲಿ ಪಾಲುದಾರರಾಗುವ ಅವಕಾಶ ಸಿಗಲಿದೆ. ಷೇರುಪೇಟೆ ವಹಿವಾಟಿಗೆ ಒಳಪಡುವ ಮೂಲಕ ಮಾರುಕಟ್ಟೆ ಮೌಲ್ಯವು ಹೆಚ್ಚಲಿದೆ. ಪ್ರಸ್ತುತ ₹31 ಲಕ್ಷ ಕೋಟಿಗೂ ಅಧಿಕ ಸಂಪತ್ತು ನಿರ್ವಹಣೆಯನ್ನು ಎಲ್‌ಐಸಿ ಹೊಂದಿದೆ.

* ಸರ್ಕಾರ ಎಲ್‌ಐಸಿಯಲ್ಲಿ ಶೇ 100 ಪಾಲು ಹೊಂದಿದ್ದು, ಶೇ 10 ಅಥವಾ ಅದಕ್ಕಿಂತ ಕಡಿಮೆ ಪಾಲು ಮಾರಾಟ ಮಾಡಲಿದೆ. 'ಎಲ್‌ಐಸಿ ಕಾಯ್ದೆ'ಯ ಆಧಾರದಲ್ಲಿ ಎಲ್‌ಸಿಯ ಕಾರ್ಯನಿರ್ವಹಣೆ ಅನುಷ್ಠಾನದಲ್ಲಿದೆ. ಹಾಗಾಗಿ, ಐಪಿಒ ಪ್ರಕ್ರಿಯೆಗೂ ಮುನ್ನಕಾಯ್ದೆಗೆ ತಿದ್ದುಪಡಿ ತರುವುದು ಅನಿವಾರ್ಯ ಎಂದು ಬಿಸಿನೆಸ್‌ ಟುಡೆ ವರದಿ ಮಾಡಿದೆ.

ADVERTISEMENT

* 2021–22ನೇ ಹಣಕಾಸು ವರ್ಷದ ದ್ವಿತಿಯಾರ್ಧದಲ್ಲಿ ಎಲ್‌ಐಸಿ 'ಐಪಿಒ' ಪ್ರಕ್ರಿಯೆ ನಡೆಯುವ ಸಾಧ್ಯತೆಯಿದೆ. ತಜ್ಞರ ಪ್ರಕಾರ ಸರ್ಕಾರಿ ಸ್ವಾಮ್ಯದ ವಿಮಾ ನಿಗಮವು ₹ 8–10 ಲಕ್ಷ ಕೋಟಿಮಾರುಕಟ್ಟೆ ಮೌಲ್ಯ ಹೊಂದಲಿದೆ. ಅತಿ ಹೆಚ್ಚು ಮಾರುಕಟ್ಟೆ ಮೌಲ್ಯ ಹೊಂದಿರುವ ರಿಲಯನ್ಸ್‌ ಇಂಡಸ್ಟ್ರೀಸ್‌, ಟಿಸಿಎಸ್‌ ಹಾಗೂ ಎಚ್‌ಡಿಎಫ್‌ಸಿ ಬ್ಯಾಂಕ್‌ಗಳ ಸಾಲಿಗೆ ಎಲ್‌ಐಸಿ ಹೊಸ ಸೇರ್ಪಡೆಯಾಗಲಿದೆ.

* ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಷೇರು ವಿಕ್ರಯಗೊಳಿಸುವ ಮೂಲಕ ಮುಂದಿನ ಹಣಕಾಸು ವರ್ಷದಲ್ಲಿ ₹ 2.1 ಲಕ್ಷ ಕೋಟಿ ಸಂಗ್ರಹಿಸುವುದು ಹಾಗೂ ಎಲ್‌ಐಸಿಯಸ್ವಲ್ಪ ಮಟ್ಟಿನ ಪಾಲು ಮಾರಾಟದ ಮೂಲದ ₹ 70,000 ಕೋಟಿ ಸಂಗ್ರಹಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಇದು ವಿದೇಶ ಹೂಡಿಕೆದಾರರನ್ನು ಬಹುಮಟ್ಟಿಗೆ ಸೆಳೆಯಲಿದೆ ಎಂದು ಅಂದಾಜಿಸಲಾಗಿದೆ.

* 2019-20ನೇ ಸಾಲಿನ ಮೊದಲ ಆರು ತಿಂಗಳಲ್ಲಿ (ಏಪ್ರಿಲ್‌–ಸೆಪ್ಟೆಂಬರ್‌) ಎಲ್‌ಸಿಐಯ ಒಟ್ಟು ವಸೂಲಾಗದ ಸಾಲದ (ಎನ್‌ಪಿಎ) ಪ್ರಮಾಣ ಶೇ 6.10ಕ್ಕೆ ಹೆಚ್ಚಳವಾಗಿದೆ. ಕಳೆದ ಐದು ವರ್ಷಗಳಲ್ಲಿ ಎಪಿಎ ಪ್ರಮಾಣ ದುಪ್ಪಟ್ಟಾಗಿದೆ. ಹಿಂದಿನಿಂದಲೂ ಎಲ್‌ಐಸಿ ಶೇ 1.5–2ರಷ್ಟು ಎನ್‌ಪಿಎ ಹೊಂದಿದೆ.

* ದೇಶದ ಅತಿ ದೊಡ್ಡ ವಿಮೆ ಸಂಸ್ಥೆಯಾಗಿರುವ ಎಲ್ಐಸಿ, ಪಾಲಿಸಿಗಳ ಸಂಖ್ಯೆಗಳು ಮತ್ತು ಮೊದಲ ವರ್ಷದ ಪ್ರೀಮಿಯಂ ಪಡೆಯುವ ಪೈಕಿ ಶೇ 76.28ರಷ್ಟು ಮಾರುಕಟ್ಟೆ ಪಾಲು ಹೊಂದಿದೆ. ಐಡಿಬಿಐ ಬ್ಯಾಂಕ್‌ ಸೇರಿದಂತೆ ಹಲವು ಸಂಸ್ಥೆಗಳಲ್ಲಿ ಎಲ್‌ಐಸಿ ಪಾಲುದಾರಿಕೆ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.