ADVERTISEMENT

ಕೊರೊನಾ ಕಾಲದ ಬಡತನ ಮೀಮಾಂಸೆ

ನವ ಶ್ರೀಮಂತರ ಬಗ್ಗೆ ಅಭಿಮಾನಪಡುತ್ತಿದ್ದ ದೇಶಗಳ ಮುಂದೆ ಈಗ ನವ ಬಡತನದ ಸವಾಲು

ನಾರಾಯಣ ಎ
Published 28 ಜೂನ್ 2020, 21:52 IST
Last Updated 28 ಜೂನ್ 2020, 21:52 IST
   
""

ಕೋವಿಡ್ ಸೋಂಕಿನ ಸಾಂದ್ರತೆಯು ಅಮೆರಿಕನ್ ಮತ್ತು ಯುರೋಪಿಯನ್ ದೇಶಗಳಾಚೆ ದಾಕ್ಷಿಣಾತ್ಯ ರಾಷ್ಟ್ರಗಳತ್ತ ಮುಖ ಮಾಡಿದ ನಂತರ, ವಿಶ್ವಬ್ಯಾಂಕ್ ಮತ್ತು ಇತರ ಅಂತರರಾಷ್ಟ್ರೀಯ ಸಂಸ್ಥೆಗಳು ಸಾಂಕ್ರಾಮಿಕದ ಆರ್ಥಿಕ ಪರಿಣಾಮಗಳ ಕುರಿತಾದ ಲೆಕ್ಕಾಚಾರಗಳನ್ನು ಪರಿಷ್ಕರಿಸಿವೆ. ಹೊಸ ಅಂಕಿ-ಅಂಶಗಳ ಪ್ರಕಾರ, ಕೊರೊನಾ ತಂದಿಟ್ಟ ಜಾಗತಿಕ ಆರ್ಥಿಕ ಹಿಂಜರಿತ ಸುಮಾರು 10 ಕೋಟಿಯಷ್ಟು ಕಡುಬಡವರನ್ನು ಹೊಸದಾಗಿ ಸೃಷ್ಟಿಸಲಿದೆ. ಅವರಲ್ಲಿ ಬಹುತೇಕ ಮಂದಿ ಭಾರತ ಮತ್ತಿತರ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಇರುವವರು.

ಈ ವಿಶ್ಲೇಷಣೆಯಲ್ಲಿ ಅಂತರ್ಗತವಾಗಿರುವ ಅಂಶಗಳು ಎರಡು. ಒಂದು, ಈಗಾಗಲೇ ಬಡತನದಲ್ಲಿ ಇರುವವರು ಇನ್ನಷ್ಟು ಬಡತನದ ಹಂತವನ್ನು ಪ್ರವೇಶಿಸಲಿದ್ದಾರೆ. ಜತೆಗೆ ಈಗ ಬಡವರಲ್ಲದ ಎಷ್ಟೋ ಮಂದಿ ಬಡವರಾಗಿಯೋ ಕಡುಬಡವರಾಗಿಯೋ ಬದುಕಬೇಕಾದ ಅನಿವಾರ್ಯ ಸ್ಥಿತಿ ತಲುಪಲಿದ್ದಾರೆ.

ಭಾರತಕ್ಕೆ ಬಡತನವೇನೂ ಹೊಸದಲ್ಲ. ಬಡತನದ ನಡುವೆಯೇ ‘ಅದಕು, ಇದಕು, ಎದಕು’ ಹೊಂದಿಕೊಂಡು ಹೋಗುವುದು ಹೇಗೆ ಎನ್ನುವುದನ್ನು ಪ್ರಪಂಚವು ಭಾರತದಿಂದ ಕಲಿಯಬೇಕು. ಅದು ಹಳೆಯ ಬಡತನದ ಕತೆ ಅಥವಾ ಬಡತನದ ಹಳೆಯ ಕತೆ. ಕೊರೊನೋತ್ತರ ಭಾರತ ಎದುರಿಸಬೇಕಾಗಿ ಬರಬಹುದಾದ ಬಡತನ ಇದಲ್ಲ ಅಥವಾ ಅಷ್ಟೇ ಅಲ್ಲ. ಬಡವರು ಬಡವರಾಗಿಯೇ ಮುಂದುವರಿಯುವುದನ್ನು ನಿಭಾಯಿಸುವುದು ಮತ್ತು ಬಡವರಲ್ಲದವರು ಬಡವರಾದಾಗ ಎದುರಾಗುವ ಸಾಮಾಜಿಕ, ಆರ್ಥಿಕ, ಸಾಂಸ್ಥಿಕ, ಮಾನಸಿಕ ಸಮಸ್ಯೆಗಳನ್ನು ಸಂಭಾಳಿಸುವುದು ವಿಭಿನ್ನ ರೀತಿಯ ಸವಾಲುಗಳು.

ADVERTISEMENT

ಬಹಳ ಕಾಲದಿಂದ ಬಡತನದ ಕುರಿತಾಗಿ ಅಧ್ಯಯನ ಮಾಡುತ್ತಿರುವ ವಿದ್ವಾಂಸರನೇಕರ ಪ್ರಕಾರ, ಪ್ರಪಂಚದಲ್ಲಿ ಬಡವರಲ್ಲದ ಭಾರಿ ಸಂಖ್ಯೆಯ ಜನ ಬಡತನದ ರೇಖೆಗಿಂತ ಒಮ್ಮಿಂದೊಮ್ಮೆಲೆ ಈ ಪರಿ ಕೆಳಗೆ ಕುಸಿಯುತ್ತಿರುವ ವಿದ್ಯಮಾನ ಸಂಭವಿಸುತ್ತಿರುವುದು ಬಹಳ ಕಾಲದ ನಂತರ ಇದೇ ಮೊದಲು. ನಿಜ ಹೇಳಬೇಕೆಂದರೆ, ಹಳೆಯ ಬಡತನದ ಆಳ-ಅಗಲ, ಸ್ತರ-ವಿಸ್ತಾರ, ಕ್ಲಿಷ್ಟತೆ-ಸಂಕೀರ್ಣತೆ ಇತ್ಯಾದಿಗಳೇ ಪ್ರಪಂಚಕ್ಕೆ ಯಾವತ್ತೂ ಸರಿಯಾಗಿ ಅರ್ಥವಾದದ್ದಿಲ್ಲ. ಬಡತನದ ಹೊಸ ಸ್ವರೂಪವಂತೂ ಇನ್ನಷ್ಟು ಜಿಗುಟಾದ ಆರ್ಥಿಕ ಒಗಟು.

ಪ್ರತೀ ದಿನದ ಅನ್ನವನ್ನು ಆ ದಿನದ ಸಂಪಾದನೆ ಯಿಂದಲೇ ಸಂಪಾದಿಸಿಕೊಳ್ಳಬೇಕಾದ ಬದುಕಿನ ದುರ್ಬಲತೆ (vulnerability) ಮತ್ತು ಅನಿಶ್ಚಿತತೆಯನ್ನು (volatility), ಈ ಸ್ಥಿತಿಯಿಂದ ಹೊರಗೆ ಇದ್ದವರಿಗೆ ಅರ್ಥ ಮಾಡಿಕೊಳ್ಳುವುದು ಯಾವತ್ತಿಗೂ ಸಾಧ್ಯವಿಲ್ಲ. ಇಂತಹ ಬಡತನದ ಜತೆ ಸೆಣಸಿ ಬದುಕುವುದು ಒಂದು ಕೌಶಲ. ತಂತಿಯ ಮೇಲೆ ನಡೆಯುವ ಕೌಶಲವಿದೆಯಲ್ಲಾ ಹಾಗೆ. ಹುಟ್ಟಿದಂದಿನಿಂದಲೇ ಅದಕ್ಕೆ ಸಿದ್ಧವಾಗಬೇಕು. ಬದುಕಿನ ಯಾವುದೋ ಹಂತದಲ್ಲಿ ಈ ಕೌಶಲವನ್ನು ಸಂಪಾದಿಸಲಾಗದು. ಹೊಸದಾಗಿ ಬಡತನದ ಯಾದಿಗೆ ಸೇರುವವರ ಬಳಿ ಈ ಕೌಶಲ ಇರುವುದಿಲ್ಲ, ಅದನ್ನು ಕಲಿಯಲು ಅವರಿಗೆ ಆಗುವುದೂ ಇಲ್ಲ. ಆದುದರಿಂದ ಅಂತಹವರು ಅನುಭವಿಸುವ ದುರ್ಭರತೆಯೇ ಬೇರೆ. ಅದೆಲ್ಲಾ ಬಿಡಿ. ರೇಷನ್ ಅಕ್ಕಿಯ ಅನ್ನವನ್ನು ಉಪ್ಪು– ಖಾರದ ಮಿಶ್ರಣ ಬೆರೆಸಿ ತಿಂದು ಬದುಕಿಡೀ ಸವೆಸುವುದಿದೆಯಲ್ಲಾ ಅದೂ ಒಂದು ಕೌಶಲ. ಜೀವಸತ್ವಗಳು, ಪೋಷಕಾಂಶಗಳು, ವಿಟಮಿನ್ ಮುಂತಾದವೆಲ್ಲಾ ಆ ಬದುಕಿನ ಶಬ್ದಕೋಶದಲ್ಲಿ ಪರಕೀಯ ಪದಗಳು.

ಇಂತಹವರ ಬದುಕಿನಲ್ಲಿ ಸರ್ಕಾರಗಳು ನೀಡುವ ಉಚಿತ ಅಕ್ಕಿಯೋ ಗೋಧಿಯೋ ತರುವ ಸಣ್ಣ ನೆಮ್ಮದಿಯನ್ನು ಅರ್ಥ ಮಾಡಿಕೊಳ್ಳದೆ ಇಂತಹ ಕಾರ್ಯಕ್ರಮಗಳನ್ನು ಅಣಕಿಸಿದವರೆಷ್ಟೋ! ಬಡವರನ್ನು ಸೋಮಾರಿಗಳನ್ನಾಗಿ ಮಾಡುವ ಯೋಜನೆಗಳು ಇವು ಅಂತ ಫೇಸ್‌ಬುಕ್‌ನಲ್ಲಿ ಬರೆದವರೆಷ್ಟೋ! ವಾಟ್ಸ್‌ಆ್ಯಪ್‌ನಲ್ಲಿ ದಾಟಿಸಿದವರೆಷ್ಟೋ! ಆಹಾರ ಭದ್ರತೆ ಯೋಜನೆಗಳ ಅಗತ್ಯವನ್ನು ಪ್ರತಿಪಾದಿಸುತ್ತಿದ್ದ ಅರ್ಥಶಾಸ್ತ್ರಜ್ಞರನ್ನು ಕೆಲಸಕ್ಕೆ ಬಾರದ ಬುದ್ಧಿಜೀವಿಗಳು, ಪ್ರಸ್ತುತತೆ ಕಳೆದುಕೊಂಡಿರುವ ಎಡಪಂಥೀಯ ನೀತಿಗಳಿಗೆ ಮಾರಿಕೊಂಡವರು ಮುಂತಾಗಿ ಅಣಕಿಸಿದವರೆಷ್ಟೋ! ಹೀಗೆ ಮಾಡುತ್ತಿದ್ದ ಕೆಲವರಾದರೂ ಈಗ ಆಧಾರ್ ಕಾರ್ಡ್ ಹಿಡಿದು ಉಚಿತ ಅಕ್ಕಿಗೆ ಕ್ಯೂ ನಿಲ್ಲುವ ಸ್ಥಿತಿ ಬಂದಿದೆ. ಈ ಕ್ಯೂ ಇನ್ನೂ ಉದ್ದವಾಗಲಿದೆ ಎಂದು ಮೇಲೆ ಪ್ರಸ್ತಾಪಿಸಿರುವ ವರದಿಗಳು ಹೇಳುತ್ತಿವೆ.

ಒಂದು ಕಾಲದಲ್ಲಿ ತಾವು ಹೀಗಳೆಯುತ್ತಿದ್ದ ಯೋಜನೆಗಳೇ ಎಷ್ಟೋ ಮಂದಿಗೆ ಈಗ ಹಸಿವು ನೀಗಿಸಲು ಇರುವ ಏಕೈಕ ಮೂಲವಾಗಿವೆ. ಕೊರೊನಾ ಕಾಲದಲ್ಲಿ ತಮ್ಮನ್ನು ಅಚಾನಕ್ ಆಗಿ ಮುತ್ತಿಕೊಂಡ ಈ ಸಂಕಷ್ಟ ಕೆಲವರ ಬದುಕನ್ನು ಕಾರಣವಿಲ್ಲದೆ ಕಾಡುತ್ತಿರು ತ್ತದೆ ಮತ್ತು ಅಂತಹವರಿಗೊಂದಷ್ಟು ನೆರವಿನ ಹಸ್ತದ ಅಗತ್ಯ ಇರುತ್ತದೆ ಎನ್ನುವ ಸತ್ಯವನ್ನು ‘ಅನ್ನಭಾಗ್ಯ’ ಮುಂತಾದ ಯೋಜನೆಗಳನ್ನು ಹಳಿಯುತ್ತಿದ್ದವರೆಲ್ಲಾ ಈಗಲಾದರೂ ತಿಳಿದುಕೊಂಡಿರಬಹುದು. ಅಷ್ಟರ ಮಟ್ಟಿಗೆ ಕೊರೊನಾ ವೈರಸ್ಸಿನದ್ದು ದೈವೀ ನ್ಯಾಯ.

ಬಡತನ ಒಂದು ಮಾನಸಿಕ ಸ್ಥಿತಿಯಾಗಿರಬಹುದು; ಆದರೆ ಹಸಿವು ನೀಗಿಸಬೇಕಾದದ್ದು ಒಂದು ದೈಹಿಕ ಅವಶ್ಯಕತೆ. ತೀರಾ ಇತ್ತೀಚಿನವರೆಗೆ, ಹೆಚ್ಚುತ್ತಿದ್ದ ನವ ಶ್ರೀಮಂತರ (neo-rich) ಸಂಖ್ಯೆಯ ಬಗ್ಗೆ ಅಭಿಮಾನ ಪಡುತ್ತಿದ್ದ ದೇಶಗಳು ಈಗ ಇದ್ದಕ್ಕಿದ್ದಂತೆಯೇ ನವ ಬಡತನದೊಂದಿಗೆ (neo-poverty) ಸೆಣಸುವ ಮಾರ್ಗಗಳನ್ನು ಆವಿಷ್ಕರಿಸಲು ಹೆಣಗಾಡುತ್ತಿವೆ. ಕೆಲಸ ಕಳೆದುಕೊಳ್ಳುತ್ತಿರುವ, ಸಂಬಳ ಕಡಿತ ಅನುಭವಿಸುತ್ತಿರುವ, ವ್ಯಾಪಾರ ಕುಸಿದಿರುವ, ಹಾಕಿದ ಬಂಡವಾಳವೆಲ್ಲಾ ನಿರರ್ಥಕವಾಗಿರುವ- ಹೀಗೆ ಅಸಂಖ್ಯ ರೀತಿಯಲ್ಲಿ ಜೀವನ ಮಟ್ಟದಲ್ಲಿ ಇದ್ದಕ್ಕಿದ್ದಂತೆಯೇ ಕುಸಿತ ಕಾಣುತ್ತಿರುವ ಜನರಲ್ಲಿ ಒಂದಷ್ಟು ಮಂದಿ ಹೇಗೋ ಸೆಣಸಿ ಒಂದು ಹಂತದ ಅನುಕೂಲವನ್ನು ಹೊಂದಿಸಿಕೊಂಡು ದಡ ಸೇರಬಹುದು. ಆದರೆ ಇನ್ನೆಷ್ಟೋ ಮಂದಿ ಕುಸಿದ ಸ್ಥಿತಿಯಲ್ಲೇ ಉಳಿಯಬಹುದು ಅಥವಾ ಮತ್ತಷ್ಟು ಪತನವನ್ನು ಕಾಣಬಹುದು. ಈ ಹೊಸ ಬಡತನ, ಅದಕ್ಕೆ ತುತ್ತಾದವರು ಅನುಭವಿಸುವ ಕಷ್ಟ-ಕೋಟಲೆಗಳು ಅದೃಶ್ಯ ವಾಗಿರುತ್ತವೆ. ಹಳೆ ಬಡವರು ಹೇಗಿದ್ದರೂ ಬಡವರು, ಅವರಿಗೆ ಬಡವರಿಗೆ ಸಿಗುವ ನೆರವಾದರೂ ಸಿಗುತ್ತದೆ. ಹೊಸ ಬಡವರಿಗೆ ತಾವು ಬಡವರು ಅಂತ ಹೇಳಿಕೊಳ್ಳುವ ಹಾಗಿಲ್ಲ, ಹೇಳದೇ ಇದ್ದರೆ ಏನೂ ಸಿಗುವುದಿಲ್ಲ.

ಇಂಗ್ಲೆಂಡ್ ಮುಂತಾದ ಯುರೋಪಿಯನ್ ದೇಶ ಗಳಲ್ಲಿ ಕೊರೊನಾ ದೆಸೆಯಿಂದ ದಿಕ್ಕೆಟ್ಟ ಕಂಪನಿಗಳು ತಮ್ಮ ನೌಕರರಿಗೆ ಸಂಬಳ ನೀಡಲು ಸರ್ಕಾರ ನೆರವಾಗಿದ್ದು ಈ ಕಾರಣಕ್ಕೇ. ಹೀಗಾಗಿಯೇ ಹುಚ್ಚು ದೊರೆಯಂತೆ ವರ್ತಿಸುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡಾ ಕೆಲಸ ಕಳೆದುಕೊಂಡ ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ ಪ್ರತೀ ತಿಂಗಳು ಒಂದಷ್ಟು ಪಗಾರ ತಲುಪಿಸುವ ವ್ಯವಸ್ಥೆ ಮಾಡಿದ್ದು. ಹಾಗೆಂದು ಹೊಸ ಬಡತನ ಪ್ರಪಂಚಕ್ಕೇನೂ ಹೊಸದಲ್ಲ. ಅದು ಭಾರಿ ಪ್ರಮಾಣದಲ್ಲಿ ಸೃಷ್ಟಿಯಾದ ಸನ್ನಿವೇಶಗಳನ್ನು ಚರಿತ್ರೆಯಲ್ಲಿ ಕಾಣುತ್ತೇವೆ. ದೊಡ್ಡ ಯುದ್ಧಗಳಾದಾಗ, ಆರ್ಥಿಕ ಹಿಂಜರಿತ ತೀವ್ರವಾಗಿ ಕಾಡಿದಾಗ, ಆವರೆಗೆ ಇದ್ದ ನೆಮ್ಮದಿಯ ಬದುಕು ಇದ್ದಕ್ಕಿದ್ದಂತೆಯೇ ದುರ್ಭರವಾಗಿದ್ದಿದೆ. ಶಿವರಾಮ ಕಾರಂತರ ‘ಮುಗಿದ ಯುದ್ಧ’, ಅನುಪಮಾ ನಿರಂಜನರ ‘ನೂಲು ನೇಯ್ದ ಚಿತ್ರ’ ಇತ್ಯಾದಿ ಕೃತಿಗಳೆಲ್ಲಾ ಇಂತಹ ವಸ್ತುಗಳ ಸುತ್ತವೇ ಹುಟ್ಟಿಕೊಂಡಿರುವುದು. ಆಯಾ ಕಾಲದ ಅಧಿಕಾರಸ್ಥ ವ್ಯವಸ್ಥೆ ಜನಮೆಚ್ಚುವಂತೆ ಈ ಸಮಸ್ಯೆಗಳನ್ನು ನಿಭಾಯಿಸಿದ ಉದಾಹರಣೆಗಳೂ ಇವೆ.

ಎರಡನೆಯ ಮಹಾಯುದ್ಧ ನಂತರದ ‘ಮಾರ್ಷಲ್ ಪ್ಲ್ಯಾನ್’ ಯುರೋಪಿಯನ್ ದೇಶಗಳಲ್ಲಿ ಅನುಷ್ಠಾನಗೊಂಡ ರೀತಿ, 1929ರ ಮಹಾನ್ ಆರ್ಥಿಕ ಹಿಂಜರಿತದ ನಂತರ ಅಮೆರಿಕದ ಅಧ್ಯಕ್ಷ ರೂಸ್‌ವೆಲ್ಟ್ ‘ನ್ಯೂ ಡೀಲ್’ ಎಂಬ ಹೆಸರಿನಲ್ಲಿ ಅಮೆರಿಕದ ಆರ್ಥಿಕತೆ ಯನ್ನು ಪುನರ್‌ನಿರ್ಮಿಸಿದ ಪರಿ ಇತ್ಯಾದಿಗಳೆಲ್ಲಾ ಈ ಕಾಲಕ್ಕೆ ಬೇಕಾದ ಮಹತ್ವದ ಪಾಠಗಳಾಗಿರಬಹುದು. ಚರಿತ್ರೆಯಿಂದ ಪಾಠ ಕಲಿತು ವರ್ತಮಾನದಲ್ಲಿ ಅಳವಡಿ ಸಿಕೊಳ್ಳುವ ಪ್ರಬುದ್ಧ ನಾಯಕತ್ವ ಇರುವ ದೇಶಗಳಲ್ಲಿ ಹೊಸ ಬಡತನ ಅಷ್ಟೊಂದು ಕಾಡದು. ಚರಿತ್ರೆಯನ್ನು ವಿರೂಪಗೊಳಿಸಿ ವರ್ತಮಾನದ ರಾಜಕೀಯಕ್ಕೆ ಬಳಸಿ ಕೊಳ್ಳುವ, ವರ್ತಮಾನದ ಎಲ್ಲಾ ಸಮಸ್ಯೆಗಳಿಗೂ ಚರಿತ್ರೆಯಲ್ಲೇ ಸಮಜಾಯಿಷಿ ಹುಡುಕುವ, ಚಾರಿತ್ರಿಕ ನಾಯಕರನ್ನು ಜಾತಿವಾರು- ವರ್ಗವಾರು ಹುಡುಕಿ ಅವರ ಪ್ರತಿಮೆ ನಿರ್ಮಿಸುತ್ತಾ ಸಂಭ್ರಮಿಸುವ, ಅಂಕಿಸಂಖ್ಯೆಗಳಲ್ಲೇ ಭವಿಷ್ಯದ ಸ್ವರ್ಗ ಸೃಷ್ಟಿಸುವ ನಾಯಕತ್ವ ಇರುವೆಡೆ, ಅದೆಷ್ಟೋ ಮಂದಿ ಹೊಸ ಬಡವರು ಮತ್ತು ಹಳೆಯ ಬಡವರ ಗೋಳು ಯಾರಿಗೂ ಕೇಳದೆ, ಯಾರಿಗೂ ಗೋಚರಿಸದೆ ಹಾಗೆಯೇ ಭಕ್ತಿಯಲ್ಲಿ, ಭಜನೆಯಲ್ಲಿ ಕಳೆದುಹೋಗಬಹುದು.

ನಾರಾಯಣ ಎ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.