ADVERTISEMENT

ಅನುರಣನ | ಆತ್ಮಶೋಧನೆಗೆ ಹಿಂದುಳಿದವರಿಗೆ ಅವಕಾಶ

ಹಿಂದುಳಿದವರ ದೌರ್ಬಲ್ಯ ಮತ್ತು ಮುಂದುವರಿದವರ ಪ್ರಾಬಲ್ಯದ ನಡುವೆ ಸಲುಕಿದ ಜಾತಿ ಜನಗಣತಿ ಫಲಿತಾಂಶ

ನಾರಾಯಣ ಎ.
Published 20 ಏಪ್ರಿಲ್ 2025, 23:37 IST
Last Updated 20 ಏಪ್ರಿಲ್ 2025, 23:37 IST
   

ವಿರೋಧಾಭಾಸ ಎಂದರೆ ಇದು. ಕರ್ನಾಟಕದಲ್ಲಿ ಹತ್ತು ವರ್ಷಗಳ ಹಿಂದೆ ನಡೆದ ಜಾತಿ ಜನಗಣತಿಯ ಉದ್ದೇಶವು ಹಿಂದುಳಿದ ವರ್ಗಕ್ಕೆ ಸೇರಿದ ಜಾತಿಗಳ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಯು ಇನ್ನುಳಿದ ಜಾತಿಗಳಿಗೆ ಹೋಲಿಸಿದರೆ ಯಾವ ಮಟ್ಟದಲ್ಲಿದೆ ಎಂದು ಕಂಡುಕೊಳ್ಳುವುದಾಗಿತ್ತು. ರಾಜ್ಯದ ಶೇಕಡ 90ರಷ್ಟು ಜನರಿಂದ ಸಂಗ್ರಹಿಸಿದ ಈ ವಿವರಗಳು ಸೋರಿಕೆಯಾದ ನಂತರ ಈಗ ನಡೆಯುತ್ತಿರುವುದು ಮುಂದುವರಿದಿರುವ ಜಾತಿಗಳ ಜನಸಂಖ್ಯೆಯ ನಿಖರತೆಯ ಕುರಿತಾದ ಅಬ್ಬರದ ಚರ್ಚೆ!

ಯಾವ ಹಿಂದುಳಿದ ವರ್ಗಗಳ ಸಲುವಾಗಿ ಈ ಗಣತಿ ನಡೆಸಲಾಯಿತೋ ಅವರು ಕೂಡ ಕರ್ನಾಟಕದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಪ್ರಗತಿಯಲ್ಲಿ ತಮಗೆ ದಕ್ಕಿದ್ದೆಷ್ಟು, ತಮ್ಮಿಂದ ವಂಚಿಸಲ್ಪಟ್ಟದ್ದೆಷ್ಟು ಎನ್ನುವುದನ್ನು ಅರಿಯುವ ಕುತೂಹಲ ತೋರುವ ಬದಲಿಗೆ, ಪ್ರಬಲರ ಸಂಖ್ಯಾ ಚದುರಂಗದಾಟದಲ್ಲಿ ಕಳೆದುಹೋಗುತ್ತಿದ್ದಾರೆ.

ಕರ್ನಾಟಕ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ನಡೆಸಿದ ಜಾತಿ ಜನಗಣತಿಯ ವರದಿಯ ಸುತ್ತ ಮೂರು ವಿಷಯಗಳಿವೆ. ಒಂದು, ವಿವಿಧ ಜಾತಿಗಳಲ್ಲಿ ಇರುವ ಜನರ ಅಂಕಿ ಸಂಖ್ಯೆ. ಎರಡನೆಯದು, ವಿವಿಧ ಜಾತಿಗಳ ಸಾಮಾಜಿಕ, ಆರ್ಥಿಕ ಸ್ಥಿತಿಗತಿ ಹೇಗಿದೆ ಎನ್ನುವ ಬಹುಮುಖ್ಯ ವಿವರ. ಮೂರನೆಯದು, ಈ ಎರಡು ಅಂಶಗಳನ್ನು ಆಧರಿಸಿ ಪರಿಷ್ಕರಿಸಲಾದ ಮೀಸಲಾತಿ ಪ್ರಮಾಣದ ಪ್ರಸ್ತಾಪ. ಈ ಮೂರರ ಪೈಕಿ ಮುಖ್ಯ ವಿಚಾರ ಅಂದರೆ, ಹಿಂದುಳಿದ ವರ್ಗಗಳ ಸ್ಥಿತಿಗತಿಯ ವಿಚಾರ ಬದಿಗೆ ಸರಿದಿದೆ. ಜಾತಿವಾರು ಅಂಕಿ ಅಂಶಗಳ ವೈಜ್ಞಾನಿಕತೆಯ ಪ್ರಶ್ನೆಯೇ ದೊಡ್ಡದಾಗಿಬಿಟ್ಟಿದೆ. ಹಾಗಾಗಿ, ಈ ಪ್ರಶ್ನೆಗೆ ಉತ್ತರಿಸಿಯೇ ಮುಂದುವರಿಯುವುದು ಕ್ಷೇಮ.

ADVERTISEMENT

ಅಷ್ಟಕ್ಕೂ ವೈಜ್ಞಾನಿಕ ಎಂದರೆ ಏನು? ಯಾವುದೇ ವಿಧಾನವನ್ನು ಬಳಸಿ ಮರುಪರಿಶೀಲನೆಗೆ ಒಳಪಡಿಸಿದರೂ ಬದಲಾಗದೇ ಉಳಿಯುವ ಸತ್ಯವನ್ನು ಮಾತ್ರ ಸತ್ಯ ಅಂತ ಒಪ್ಪಿಕೊಳ್ಳುವುದನ್ನೇ ವೈಜ್ಞಾನಿಕ ಎನ್ನುವುದು. ಸರ್ಕಾರದ ಬಳಿ ಇರುವ ಮಾಹಿತಿಯನ್ನು ಹಳ್ಳಿಹಳ್ಳಿಗಳಲ್ಲಿ, ವಾರ್ಡ್‌ವಾರ್ಡ್‌ಗಳಲ್ಲಿ ಪಾರದರ್ಶಕವಾಗಿ, ಪ್ರಶ್ನೆ ಎತ್ತಿದವರ ಸಮ್ಮುಖದಲ್ಲೇ ವಾಸ್ತವ ಸ್ಥಿತಿಗೆ ತಾಳೆ ಮಾಡಿ ಪರಿಶೀಲಿಸುವುದು ವೈಜ್ಞಾನಿಕತೆಯ ಬಗ್ಗೆ ಎದ್ದಿರುವ ಗುಮಾನಿಗೆ ಉತ್ತರವಾಗಬಹುದೇನೊ.

ಇನ್ನು ಗಣತಿ ಎಲ್ಲರನ್ನೂ ಒಳಗೊಂಡಿಲ್ಲ ಎನ್ನುವ ತಕರಾರು. ಗಣತಿ ಎಂದ ಮೇಲೆ ಒಂದಷ್ಟು ಭಾಗ ಹೊರಗುಳಿಯುವುದು ಸಹಜ. ಭಾರತ ಸರ್ಕಾರ ನಡೆಸಿದ 2011ರ ಜನಗಣತಿಯಲ್ಲೇ ಪ್ರತಿ ಸಾವಿರ ಜನಸಂಖ್ಯೆಯಲ್ಲಿ 29 ಮಂದಿ ಹೊರಗುಳಿದಿದ್ದಾರೆ ಅಂತ ಕೇಂದ್ರ ಸರ್ಕಾರದ ದಾಖಲೆಗಳು ಸ್ಪಷ್ಟವಾಗಿ ಹೇಳುತ್ತವೆ. ಹಾಗಾಗಿ, ಈ ತಕರಾರನ್ನು ಗಂಭೀರ ಅಂತ ಪರಿಗಣಿಸಬೇಕಿಲ್ಲ.

ಇವೆಲ್ಲವುಗಳಾಚೆಗೆ ಒಂದು ಗಂಭೀರ ಪ್ರಶ್ನೆ ಇದೆ. ಕರ್ನಾಟಕ ಈ ಗಣತಿ ನಡೆಸಿದ ಬಹಳ ಸಮಯದ ಬಳಿಕ, ಅಂದರೆ 2022ರಲ್ಲಿ ಬಿಹಾರ ಈ ಪ್ರಕ್ರಿಯೆಯನ್ನು ಪ್ರಾರಂಭಿಸಿ 2023ರಲ್ಲಿ ವರದಿ ಪ್ರಕಟಿಸಿತು. ಪಕ್ಕದ ತೆಲಂಗಾಣ 2024ರ ನವೆಂಬರ್‌ನಲ್ಲಿ ಪ್ರಾರಂಭಿಸಿ 2025ರ ಫೆಬ್ರುವರಿಯಲ್ಲಿ ವಿವರಗಳನ್ನು ಪ್ರಕಟಿಸಿತು. ಕರ್ನಾಟಕ ಹತ್ತು ವರ್ಷಗಳ ನಂತರವೂ ತಡವರಿಸುತ್ತಿರುವುದೇಕೆ? ಅಪೂರ್ಣತೆಯ ಮತ್ತು ಅವೈಜ್ಞಾನಿಕತೆಯ ಆಪಾದನೆಗಳು ಅಲ್ಲಿಯೂ ಇದ್ದವು. ಅಲ್ಲಿ ಸಾಧ್ಯವಾದದ್ದು ಕರ್ನಾಟಕದಲ್ಲಿ ಇಷ್ಟೊಂದು ಕಷ್ಟವಾಗುತ್ತಿರುವುದೇಕೆ? ಬಿಹಾರ ಮತ್ತು ತೆಲಂಗಾಣಕ್ಕಿಂತಲೂ ಕರ್ನಾಟಕದಲ್ಲಿ ಸರ್ಕಾರದ ಮೇಲೆ ಮತ್ತು ಸಮಾಜದ ಮೇಲೆ ಪ್ರಬಲ ಜಾತಿಗಳ ಹಿಡಿತ ಬಲವಾಗಿದೆ ಎಂದು ಇದರ ಅರ್ಥವೇ? ಅಥವಾ ಹಿಂದುಳಿದ ವರ್ಗಗಳು ಇಲ್ಲಿ ದುರ್ಬಲವಾಗಿವೆಯೇ?

ಕರ್ನಾಟಕದಲ್ಲಿ ಹಿಂದುಳಿದ ಜಾತಿಗಳಿಗೆ ನ್ಯಾಯ ಒದಗಿಸುವ ಪ್ರತಿ ಪ್ರಯತ್ನವೂ ಇಂತಹ ಅಡೆತಡೆಗಳನ್ನು ಎದುರಿಸಿದೆ. ಕೊನೆಗೆ ಆಯಾ ಸಂದರ್ಭದಲ್ಲಿ ಅಧಿಕಾರದಲ್ಲಿದ್ದವರು ಪ್ರಬಲ ಜಾತಿಗಳನ್ನು ಓಲೈಸಿದ ನಂತರವೇ ಹಿಂದುಳಿದ ಜಾತಿಗಳ ಪರವಾಗಿ ಸಾಮಾಜಿಕ ನ್ಯಾಯದ ತಕ್ಕಡಿಯನ್ನು ಒಂದಷ್ಟು ಸರಿದೂಗಿಸಲು ಸಾಧ್ಯವಾಗಿದ್ದು. ಹಾವನೂರು ಆಯೋಗವು (1975) ಒಂದು ಪ್ರಬಲ ಜಾತಿಯನ್ನು ಮೀಸಲಾತಿಯಿಂದ ಹೊರಗಿಟ್ಟ ಕಾರಣಕ್ಕೆ ಹುಟ್ಟಿಕೊಂಡ ಪ್ರತಿರೋಧ ಅಂತಹ ಬಲಿಷ್ಠ ಮುಖ್ಯಮಂತ್ರಿ ದೇವರಾಜ ಅರಸು ಅವರನ್ನೇ ಅಲುಗಾಡಿಸಿತು. ಪರಿಣಾಮವಾಗಿ, ಮೀಸಲಾತಿ ಪಟ್ಟಿಯಿಂದ ಹೊರಗಿಟ್ಟವರನ್ನು ಮತ್ತೆ ಸೇರಿಸಿಕೊಳ್ಳಬೇಕಾಯಿತು. ಹಿಂದುಳಿದ ವರ್ಗಗಳ ಎರಡನೆಯ ಆಯೋಗ ಅಥವಾ ವೆಂಕಟಸ್ವಾಮಿ ಆಯೋಗ (1988) ಈಗ ನಡೆಸಿದಂತೆ ಶೇ 90ಕ್ಕಿಂತ ಹೆಚ್ಚು ಜನಸಂಖ್ಯೆಯನ್ನು ಒಳಗೊಂಡ ವಿಸ್ತೃತ ಅಧ್ಯಯನ ನಡೆಸಿ ವರದಿ ನೀಡಿದ್ದನ್ನು ಪ್ರಬಲ ಜಾತಿಗಳ ಒತ್ತಡದ ಕಾರಣಕ್ಕೆ ಸಂಪೂರ್ಣ ತಿರಸ್ಕರಿಸಬೇಕಾಯಿತು. ಹಿಂದುಳಿದ ವರ್ಗಗಳ ಮೂರನೇ ಆಯೋಗ ಅಥವಾ ಚಿನ್ನಪ್ಪ ರೆಡ್ಡಿ ಆಯೋಗವು ಹೊರಗಿಟ್ಟ ಜಾತಿಗಳನ್ನು ಸೇರಿಸಿಕೊಂಡ ಅಂದಿನ ಸರ್ಕಾರದ ರಾಜಿ- ರಾಜಕೀಯಕ್ಕೆ ಹಿಂದುಳಿದ ವರ್ಗಗಳ ಹಿತಾಸಕ್ತಿ ಮತ್ತೆ ಬಲಿಯಾಯಿತು. ಈ ಮೂರು ಸಂದರ್ಭಗಳಲ್ಲೂ ಪ್ರಬಲ ಜಾತಿಗಳ ಪ್ರತಿರೋಧ ಹುಟ್ಟಿಕೊಂಡದ್ದು ಅವರನ್ನು ಮೀಸಲಾತಿಯಿಂದ ಕೈಬಿಟ್ಟದ್ದಕ್ಕೆ. ಈ ಬಾರಿ ಹಾಗಲ್ಲ. ಈ ಬಾರಿ ಪ್ರಬಲ ಜಾತಿಗಳ ಜನಸಂಖ್ಯೆ ಅವರು ಊಹಿಸಿದ್ದಕ್ಕಿಂತ ಕಡಿಮೆ ಇದೆ ಎನ್ನುವ ಕಾರಣಕ್ಕೆ ಪ್ರತಿರೋಧ.

ಕರ್ನಾಟಕದಲ್ಲಿ ಹಿಂದುಳಿದ ವರ್ಗಗಳಿಗೆ ಸಂಖ್ಯಾಬಲ ಇದ್ದರೂ ಅವರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಪುರೋಗತಿಗಾಗಿ ಒಂದು ಸಣ್ಣ ಹೆಜ್ಜೆ ಇಡುವುದಕ್ಕೂ ಇಷ್ಟೊಂದು ಕಷ್ಟವಾಗುತ್ತಿರುವುದೇಕೆ? ರಾಜ್ಯದ ಹಿಂದುಳಿದ ವರ್ಗಗಳಿಗೆ ಸೇರಿದ ಜನ ಯೋಚಿಸಬೇಕಾದ ವಿಷಯ ಇದು. ಹೀಗಾಗುತ್ತಿರುವುದಕ್ಕೆ ಕಾರಣ ಮುಂದುವರಿದ ಜಾತಿಗಳ ಪ್ರಾಬಲ್ಯ ಎನ್ನುವುದಕ್ಕಿಂತ ಹೆಚ್ಚಾಗಿ ಹಿಂದುಳಿದ ವರ್ಗದಲ್ಲಿರುವ ದೌರ್ಬಲ್ಯ.

ಹಿಂದುಳಿದ ವರ್ಗದಡಿ ಬರುವ ಹಲವು ಜಾತಿಗಳ ಪೈಕಿ ಸ್ವಲ್ಪ ಮುಂದುವರಿದ ಜಾತಿಗಳು ಇತರ ಜಾತಿಗಳ ಹಿತಾಸಕ್ತಿಯನ್ನು ಕಡೆಗಣಿಸುತ್ತಿರುವುದು ಈ ವರ್ಗದಲ್ಲಿ ಒಂದು ಆಂತರಿಕ ಸಂಘರ್ಷವನ್ನು ಜೀವಂತವಾಗಿಟ್ಟಿದೆ. ಹಿಂದುಳಿದ ವರ್ಗ ಒಂದು ರಾಜಕೀಯ ಶಕ್ತಿಯಾಗಿ ಸೆಟೆದು ನಿಲ್ಲುವ ಸಾಧ್ಯತೆಯನ್ನು ಈ ಸಂಘರ್ಷ ಕ್ಷೀಣವಾಗಿಸಿದೆ.

ಚಾರಿತ್ರಿಕವಾಗಿ ಹಿಂದುಳಿದವರ ಪ್ರಜ್ಞೆ ವಿಸ್ತರಿಸಿದ ಕೇರಳದ ನಾರಾಯಣ ಗುರುಗಳಂತಹವರು, ಮಹಾರಾಷ್ಟ್ರದ ಮಹಾತ್ಮ ಫುಲೆ ಅಂತಹವರು ಮತ್ತು ತಮಿಳುನಾಡಿನ ಪೆರಿಯಾರ್ ರಾಮಸ್ವಾಮಿ ನಾಯ್ಕರ್ ಅಂತಹವರು ಕರ್ನಾಟಕದಲ್ಲಿ ಹುಟ್ಟಿಬರಲಿಲ್ಲ ಎನ್ನುವ ಕೊರತೆ ಈಗಲೂ ಈ ವರ್ಗವನ್ನು ಇಲ್ಲಿ ಕಾಡುತ್ತಿದೆ. ಕರ್ನಾಟಕದಲ್ಲಿ ಈ ಕೊರತೆ ಎದುರಿಸಿರುವ ಹಿಂದುಳಿದವರು ತಮ್ಮನ್ನು ತಾವೇ ರಕ್ಷಿಸಿಕೊಳ್ಳಬೇಕು. ಇದರರ್ಥ, ಹಿಂದುಳಿದ ವರ್ಗದಲ್ಲಿ ಇರುವ ಬಲಿಷ್ಠ ಜಾತಿಗಳು ಇನ್ನೂ ತೀರಾ ದುರ್ಬಲವಾಗಿಯೇ ಉಳಿದಿರುವ ಜಾತಿಗಳಿಗಾಗಿ ಸ್ವಲ್ಪ ತ್ಯಾಗ ಮಾಡದೇಹೋದರೆ ಹಿಂದುಳಿದ ವರ್ಗ ಒಂದು ಶಕ್ತಿಯಾಗಿ ಹೊರಹೊಮ್ಮಲು ಬೇಕಾದ ಒಗ್ಗಟ್ಟು ಕರ್ನಾಟಕದಲ್ಲಿ ಮರೀಚಿಕೆಯಾಗಿಯೇ ಉಳಿದೀತು. ಪಕ್ಷಗಳು ಯಾವುದೇ ಇದ್ದರೂ, ಸಂಖ್ಯಾಬಲ ಕಡಿಮೆ ಇದ್ದರೂ ಪ್ರಬಲ ಜಾತಿಗಳ ಪ್ರಾಬಲ್ಯ ಯಥಾಪ್ರಕಾರ ಮುಂದುವರಿದೀತು.

ಜಾತಿ ಜನಗಣತಿಯ ವಿಚಾರಕ್ಕೆ ಮತ್ತೆ ಬರುವುದಾದರೆ, ಎಲ್ಲ ಮಿತಿಗಳಾಚೆಗೆ ಈ ಗಣತಿಯ ಮೂಲಕ ಕರ್ನಾಟಕದ ವಾಸ್ತವ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಚಿತ್ರಣವೊಂದು ಈಗ ಹೊರಬರುತ್ತಿದೆ. ಇದು ಹತ್ತು ವರ್ಷದ ಹಳೆಯ ಚಿತ್ರಣ. ಆದರೆ ಲಭ್ಯವಿರುವ ಅತ್ಯಂತ ಈಚೆಗಿನ ಚಿತ್ರಣ. ರಾಜ್ಯದ ಜನಸಂಖ್ಯೆಯಲ್ಲಿ ಬಹುಪಾಲು ಹೊಂದಿದ್ದರೂ ತಮ್ಮ ಅಸ್ಮಿತೆಯನ್ನೂ ಶಕ್ತಿಯನ್ನೂ ಸಂಸ್ಕೃತಿಯನ್ನೂ ಮರೆತು ಹಿಂದುಳಿದಿರುವಿಕೆಯ ಶಾಪವನ್ನು ಶಾಶ್ವತವಾಗಿ ಅಂಟಿಸಿಕೊಂಡಿರುವ ಈ ಸಮುದಾಯಗಳಿಗೆ ಇಲ್ಲೊಂದು ಸಂದೇಶವಿದೆ. ಹಿಂದುಳಿದವರು ತಮ್ಮಂತೆ ಅಥವಾ ತಮಗಿಂತಲೂ ಹಿಂದುಳಿದಿರುವವರ ಜತೆ ಸೇರಿ ತಮ್ಮ ಏಳಿಗೆಯನ್ನು ಕಂಡುಕೊಳ್ಳಬೇಕೆನ್ನುವ ಸೂಚನೆ ಇದೆ. ಹಿಂದುಳಿದಿರುವವರ ಹಿತಾಸಕ್ತಿಯ ವಿಷಯ ಬಂದಾಗಲೆಲ್ಲ ಕಾಲು ಕೆದರಿ ಜಗಳಕ್ಕೆ ನಿಲ್ಲುವ ವರ್ಗಗಳ ದಾಳಗಳಾಗಬೇಡಿ ಎನ್ನುವ ಎಚ್ಚರಿಕೆ ಇದೆ.

ಹಿಂದುಳಿದ ವರ್ಗಗಳ ಏಳಿಗೆ ಎಂದರೆ ಅದು ಕೆಲವೇ ಕೆಲವು ಜಾತಿಗಳ ಏಳಿಗೆಯ ಪ್ರಶ್ನೆಯಷ್ಟೇ ಅಲ್ಲ. ಅದು ಇಡೀ ರಾಜ್ಯದ ಹಿತಾಸಕ್ತಿಯ ಪ್ರಶ್ನೆ. ರಾಜ್ಯದಲ್ಲಿ ಅರ್ಥಿಕ ಅಭಿವೃದ್ಧಿಯು ಆರ್ಥಿಕ ಸಮಾನತೆಯನ್ನೂ ತರಬೇಕು ಎಂದಾದರೆ, ಜನಸಂಖ್ಯೆಯಲ್ಲಿ ಬಹುಸಂಖ್ಯಾತರಾಗಿರುವ ಹಿಂದುಳಿದ ಜಾತಿಗಳಿಗೆ ಸಂಪತ್ತು ಮತ್ತು ಅಧಿಕಾರ ಎರಡೂ ಪ್ರವಹಿಸಲೇಬೇಕು. ಇದು ಸಾಧ್ಯವಾಗಬೇಕಾದರೆ, ಹಿಂದುಳಿದ ಜಾತಿಗಳು ತಮ್ಮನ್ನು ಆವರಿಸಿಕೊಂಡಿರುವ ವಿಸ್ಮೃತಿಯಿಂದ ಮೊದಲು ಹೊರಬರಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.