ಯಕ್ಷಗಾನ
ಕರಾವಳಿ ಜಿಲ್ಲೆಗಳನ್ನು ಇಡೀ ಕರ್ನಾಟಕದಲ್ಲೇ ಧರ್ಮದ್ವೇಷದ ರಕ್ತಸಿಕ್ತ ರಂಗಸ್ಥಲವನ್ನಾಗಿ ಮಾರ್ಪಡಿಸಿದ್ದರಲ್ಲಿ ಅಲ್ಲಿನ ಯಕ್ಷಗಾನ ರಂಗಭೂಮಿಯು ಬಹುದೊಡ್ಡ ಪಾತ್ರ ವಹಿಸುತ್ತಿದೆ. ಯಕ್ಷಗಾನವೀಗ ಯಕ್ಷಗಾನವಾಗಿ ಉಳಿದಿಲ್ಲ. ಅದನ್ನು ‘ಪಕ್ಷಗಾನ’ ಎಂದು ಕರೆಯುವುದು ಮೇಲು. ಯಕ್ಷಗಾನ ಪ್ರದರ್ಶನಗಳಲ್ಲೀಗ ದೇವೇಂದ್ರ ಮರೆಯಾಗಿದ್ದಾನೆ. ಎಲ್ಲೆಲ್ಲಿಯೂ ರಾರಾಜಿಸುವ ಹೆಸರೆಂದರೆ ಅದು ‘ನರೇಂದ್ರ’. ಹೇಗಾದರೂ ‘ನರೇಂದ್ರ’ ಎನ್ನುವ ಹೆಸರನ್ನು ಯಾವುದೇ ಸನ್ನಿವೇಶಕ್ಕಾದರೂ ತಳಕು ಹಾಕಿ, ‘ನರೇಂದ್ರ’ನೇ ಎಲ್ಲವೂ, ‘ನರೇಂದ್ರ’ನಿಂದಲೇ ಎಲ್ಲವೂ ಎಂದೆಲ್ಲ ಬಡಬಡಿಸುವುದು ಕೆಲವು ಕಲಾವಿದರಿಗೆ ಗೀಳಾಗಿಬಿಟ್ಟಿದೆ.
ಒಂದು ಪಕ್ಷಕ್ಕೆ, ಮತ್ತದರ ನಾಯಕನಿಗೆ ಪರಾಕು ಹೇಳುವುದಷ್ಟೇ ಆಗಿದ್ದರೆ ಯಕ್ಷಗಾನ ಕಲೆಯ ಹೊಸ ಅವತಾರವನ್ನು ಹೇಗೋ ಸಹಿಸಿಕೊಳ್ಳಬಹುದಿತ್ತು. ಸಮಸ್ಯೆ ಇಷ್ಟು ಮಾತ್ರವಲ್ಲ, ಕೆಲವು ಯಕ್ಷಗಾನದ ವೇಷಗಳು ಅತ್ಯುಗ್ರ ದ್ವೇಷ ಭಾಷಣ ಮಾಡುತ್ತಿವೆ. ಒಂದು ಸಮುದಾಯವನ್ನು ರಾಕ್ಷಸೀಕರಿಸುವುದು, ಒಂದು ರಾಜಕೀಯ ಪಕ್ಷ ಮತ್ತದರ ನಾಯಕನ ಕುರಿತು ಅಸತ್ಯಗಳಿಂದ ಕೂಡಿದ ಅಪಪ್ರಚಾರ ನಡೆಸುವುದು, ರಾಜ್ಯದ ಗ್ಯಾರಂಟಿ ಕಲ್ಯಾಣ ಕಾರ್ಯಕ್ರಮಗಳನ್ನು ಅವಹೇಳನ ಮಾಡುವುದು– ಹೀಗೆ ಎಲ್ಲವೂ ಕಲಾತ್ಮಕ ಅಭಿವ್ಯಕ್ತಿಯ ಹೆಸರಲ್ಲಿ ನಡೆಯುತ್ತಿವೆ.
ಇಂತಹ ಉದ್ದೇಶಗಳಿಗಾಗಿಯೇ ಹಾಸ್ಯ ಸನ್ನಿವೇಶಗಳನ್ನು ಯಕ್ಷಗಾನ ರೂಪದಲ್ಲಿ ಪ್ರಸ್ತುತಪಡಿಸುವುದು ಮತ್ತು ಅದರಲ್ಲಿ ಹಿಂದೂ ಮತ್ತು ಮುಸ್ಲಿಮರ ಪಾತ್ರಗಳ ಸಂಭಾಷಣೆಯ ಸನ್ನಿವೇಶವನ್ನು ಹೇಗೋ ಪೋಣಿಸಿ, ಪ್ರೇಕ್ಷಕರ ಮನಸ್ಸಿನಲ್ಲಿ ದ್ವೇಷ ಬಿತ್ತುವುದು ಯಕ್ಷಗಾನ ರಂಗದ ಇತ್ತೀಚೆಗಿನ ಬಹುದೊಡ್ಡ ಆವಿಷ್ಕಾರ. ಅದರ ಜತೆಗೆ ಒಂದು ರಾಜಕೀಯ ಪಕ್ಷ ಮಾತ್ರ ‘ಭಯೋತ್ಪಾದಕರಿಂದ’ ದೇಶವನ್ನು ರಕ್ಷಿಸುತ್ತದೆ, ಉಳಿದೆಲ್ಲ ಪಕ್ಷಗಳು ಮುಸ್ಲಿಂಮರ ಓಲೈಕೆಯಲ್ಲಿ ತೊಡಗಿವೆ ಎಂಬ ನಿರೂಪಣೆಯ ನಿರ್ಮಾಣದಲ್ಲೂ ಯಕ್ಷಗಾನ ರಂಗಭೂಮಿ ದೊಡ್ಡದಾಗಿ ತೊಡಗಿಸಿಕೊಂಡಿದೆ. ನಾವು ಹಿಂದೂಗಳು ಹಾಗೆ, ನೀವು ಮುಸ್ಲಿಮರು ಹೀಗೆ ಅಂತ ಸಂಬಂಧವೇ ಇಲ್ಲದೆ ಸಂಭಾಷಣೆಗಳನ್ನು ಪ್ರಸಂಗಗಳಲ್ಲಿ ತುರುಕಲಾಗುತ್ತದೆ.
ಕೀಳು ಅಭಿರುಚಿಯ ಮಾತುಗಾರಿಕೆ ಯಕ್ಷಗಾನದಲ್ಲಿ ಅಲ್ಲೊಮ್ಮೆ ಇಲ್ಲೊಮ್ಮೆ ಬಹುಕಾಲದಿಂದಲೂ ಕೇಳಿಬರುತ್ತಿತ್ತು. ಈಗ ಹಾಗಲ್ಲ. ಈಗ ನೇರ ಪ್ರಚೋದನಕಾರಿ ಮಾತುಗಳು. ಆ ಕಾರಣಕ್ಕಾಗಿಯೇ ಇಲ್ಲಿ ಬರೆಯಲಾಗದವುಗಳು. ಹಿಂದೆ ದ್ವಂದಾರ್ಥದಲ್ಲಿ, ಶ್ಲೇಷೆಯಲ್ಲಿ ಪ್ರಕಟವಾಗುತ್ತಿದ್ದ ಪೂರ್ವಗ್ರಹ ಈಗ ನಿರ್ಭಿಡೆಯಿಂದ ನೇರ ಮಾತುಗಳಲ್ಲಿ ಪ್ರಕಟವಾಗುತ್ತದೆ. ಹಾಸ್ಯಕ್ಕೆಂದೇ ಸೃಷ್ಟಿಸಲಾದ ವಿಕೃತ ಪ್ರದರ್ಶನಗಳಲ್ಲಿ ಮಾತ್ರವಲ್ಲ; ಪ್ರಧಾನ ಧಾರೆಯ ಪ್ರದರ್ಶನಗಳಲ್ಲಿಯೂ ದ್ವೇಷ, ಅಪಹಾಸ್ಯ, ಅಪಪ್ರಚಾರದ ತುಣುಕುಗಳು ಇಣುಕುತ್ತಿವೆ. ಇವೆಲ್ಲವುಗಳ ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ.
ಯಕ್ಷಗಾನ ರಂಗದ ಮಹಾನ್ ಕಲಾವಿದ ಮತ್ತು ಮಾನವತಾವಾದಿಯಾಗಿದ್ದ ದಿವಂಗತ ಶೇಣಿ ಗೋಪಾಲಕೃಷ್ಣ ಭಟ್ ಅವರು ಒಂದು ಕಾಲಕ್ಕೆ ನಿರೂಪಿಸುತ್ತಿದ್ದ ‘ಬಪ್ಪಬ್ಯಾರಿ’ ಎಂಬ ಒಂದು ಯಕ್ಷಗಾನ ಪಾತ್ರವಿದೆ. ‘ಬಪ್ಪನಾಡು ಕ್ಷೇತ್ರ ಮಹಾತ್ಮೆ’ ಎನ್ನುವ ಮತೀಯ ಸಾಮರಸ್ಯ ಸಾರುವ ಪ್ರಸಂಗದಲ್ಲಿ ಶೇಣಿಯವರು, ಬಪ್ಪ ಎಂಬ ಮುಸ್ಲಿಂ ಸಮುದಾಯದ ಸಾಹುಕಾರನ ಪಾತ್ರವನ್ನು ಅತ್ಯದ್ಭುತವಾಗಿ ಕಟ್ಟಿ ಕೊಡುತ್ತಿದ್ದರು. ಈಗ ಆ ಪಾತ್ರ ನಿರ್ವಹಿಸುವ ಕಲಾವಿದರು ಸಂಭಾಷಣೆಯಲ್ಲಿ ಪರೋಕ್ಷವಾಗಿ ಟಿಪ್ಪುವನ್ನು ಎಳೆತಂದು, ಟಿಪ್ಪು ಜಯಂತಿ ಖಂಡಿಸುವ ಮಾತುಗಳನ್ನು ತುರುಕಿ, ವಾಟ್ಸ್‌ಆ್ಯಪ್ ವಿಶ್ವವಿದ್ಯಾಲಯದಿಂದ ಪಡೆದ ಜ್ಞಾನವನ್ನು ಪ್ರದರ್ಶಿಸುತ್ತಾರೆ. ಹೀಗೆ ರಾಜಕೀಯ ಪಕ್ಷವೊಂದರ ಐ.ಟಿ ಸೆಲ್ ಹರಿಬಿಡುವ ಅಪ್ಪಟ ಸುಳ್ಳುಗಳಿಗೆ ರಂಗಸ್ಥಳದಲ್ಲಿ ತುತ್ತೂರಿಯಾಗಿಬಿಡುವ ಪ್ರವೃತ್ತಿಯನ್ನು ಮೈಗೂಡಿಸಿಕೊಂಡ ಕಲಾವಿದರ ಸಂಖ್ಯೆ ಹೆಚ್ಚುತ್ತಿದೆ.
ಯಕ್ಷಗಾನದ ಈ ಸ್ಥಿತ್ಯಂತರವನ್ನು ಕಲೆಯೊಂದರ ಅಂಚಿನಲ್ಲಿ ನಡೆಯುವ ಒಂದಷ್ಟು ಅಪಭ್ರಂಶವೆಂದು ಕಡೆಗಣಿಸಲು ಸಾಧ್ಯವಿಲ್ಲ. ಲವಲೇಶವೂ ಅಳುಕಿಲ್ಲದೆ, ಕಿಂಚಿತ್ತೂ ಲಜ್ಜೆಯಿಲ್ಲದೆ, ಯಾವೊಂದು ಪ್ರತಿರೋಧವೂ ಕಾಣದೆ ಒಂದು ಸಮುದಾಯದ ಕುರಿತಾಗಿ ಅಪನಂಬಿಕೆ ಮತ್ತು ದ್ವೇಷ ಹರಡಲು, ಒಂದು ರಾಜಕೀಯ ಪಕ್ಷವನ್ನು ಮತ್ತದರ ನಾಯಕರನ್ನು ಕೀಳಾಗಿ ಚಿತ್ರಿಸಲು, ಇನ್ನೊಂದು ಪಕ್ಷ ಮತ್ತು ಅದರ ನಾಯಕನನ್ನು ವೈಭವೀಕರಿಸಲು ರಂಗಭೂಮಿಯೊಂದರ ದುರುಪಯೋಗ ಈ ಮಟ್ಟದಲ್ಲಿ ನಡೆಯುತ್ತಿರುವುದು ದೇಶದಲ್ಲೇ ಮೊದಲಿರಬೇಕು.
ಕರಾವಳಿಯ ದ್ವೇಷೋತ್ಪಾದನಾ ಕಾರ್ಖಾನೆಗಳಲ್ಲಿ ಕಾಲಾಳುಗಾಗಿ ದುಡಿಯುವ ಬಹುತೇಕ ಯುವಕರು ಹಿಂದುಳಿದ ಜಾತಿಗಳಿಗೆ ಸೇರಿದವರು. ಅದೇ ರೀತಿಯಲ್ಲಿ, ಯಕ್ಷಗಾನದಲ್ಲಿ ದ್ವೇಷದ ‘ಬಾಯಾಳು’ಗಳಾಗಿ ಬಡಬಡಿಸಿ ಕೃತಾರ್ಥತೆ ಹೊಂದುತ್ತಿರುವ ಹೆಚ್ಚಿನ ಕಲಾವಿದರು ಕೂಡ ಶೂದ್ರ ಜಾತಿಗಳಿಗೆ ಸೇರಿದವರು.
ದಶಕಗಳ ಹಿಂದೆ ಪ್ರಾಸಬದ್ಧ ಮಾತುಗಳ ಮೂಲಕ ದ್ವೇಷ ಪ್ರಸಾರ ಮಾಡುತ್ತಿದ್ದ ಶೂದ್ರ ಜಾತಿಯ ಯಕ್ಷಗಾನ ಕಲಾವಿದರೊಬ್ಬರು ತಮ್ಮ ಇಳಿ ವಯಸ್ಸಿನಲ್ಲಿ ಮೈತುಂಬ ಕೇಸುಗಳನ್ನು ಹಾಕಿಸಿಕೊಂಡಿದ್ದರು. ದ್ವೇಷ ವಾಹಕ ಪಾತ್ರವನ್ನು ವಹಿಸಲು ಅವರಿಗೆ ಒಪ್ಪಿಸಿದ ಸೂತ್ರಧಾರರು ಯಾರೂ ಕಷ್ಟಕಾಲದಲ್ಲಿ ಅವರ ನೆರವಿಗೆ ಬರಲಿಲ್ಲ. ಕೇಸುಗಳಿಂದ ಬಿಡಿಸಿಕೊಳ್ಳಲು ಅವರು ದೈನೇಸಿಯಾಗಿ ಅಲೆಯಬೇಕಾಯಿತು; ಕಂಡಕಂಡವರಲ್ಲಿ ಅಂಗಲಾಚಬೇಕಾಯಿತು. ಇವೆಲ್ಲವನ್ನೂ ಅವರು ತಮ್ಮ ಆತ್ಮಚರಿತ್ರೆಯಲ್ಲಿ ಬರೆದುಕೊಂಡಿದ್ದಾರೆ. ಇಂದಿನ ದ್ವೇಷಗಾನ ಕಲಾವಿದರು ಆ ದಿವಂಗತ ಕಲಾವಿದರ ಅನುಭವಗಳಿಂದ ಕಲಿಯಬಹುದಾದ ಪಾಠಗಳಿವೆ. ಆಗ ರಾಜ್ಯದಲ್ಲಿ ದ್ವೇಷಭಾಷಣ ಬಿಗಿಯುವರನ್ನು ಬೆನ್ನಟ್ಟಿ ಕೇಸು ಜಡಿಯುವ ಸರ್ಕಾರವೊಂದಿತ್ತು (ಜೆ.ಎಚ್. ಪಟೇಲ್ ಮುಖ್ಯಮಂತ್ರಿಯಾಗಿದ್ದ ಕಾಲ). ಈಗ ಯಾರೂ ಕೇಳುವವರಿಲ್ಲ ಎನ್ನುವುದೇ ದ್ವೇಷಗಾನ ಕಲಾವಿದರಿಗೆ ಧೈರ್ಯ ತಂದುಕೊಟ್ಟಿರಬೇಕು.
ಪಡ್ಡೆ ಯುವಕ–ಯುವತಿಯರು ಸಾಮಾಜಿಕ ಜಾಲತಾಣಗಳ ಗೋಡೆಯಲ್ಲಿ ಗೀಚುವ ದ್ವೇಷದ ಸಾಲುಗಳನ್ನು ಜನ ಗಂಭೀರವಾಗಿ ಪರಿಗಣಿಸದೇ ಹೋಗಬಹುದು. ಮೂರನೇ ದರ್ಜೆಯ ರಾಜಕೀಯ ನಾಯಕರು ಮತ್ತು ವೇದಿಕೆ ಏರಿದರೆ ಮನೋಸ್ಥಿಮಿತ ಕಳೆದುಕೊಳ್ಳುವ ‘ವಾಗ್ಮಿ’ಗಳ ದ್ವೇಷ ಭಾಷಣಗಳನ್ನು ಜನ ಕಡೆಗಣಿಸಬಹುದು. ಆದರೆ, ಯಕ್ಷಗಾನ ರಂಗಭೂಮಿಯ ಮೂಲಕ ದ್ವೇಷವನ್ನು ಹರಡುವ ವಿದ್ಯಮಾನವನ್ನು ಸುಲಭವಾಗಿ ನಿರ್ಲಕ್ಷಿಸಲಾಗದು. ಏಕೆಂದರೆ, ಕರಾವಳಿಯಲ್ಲಿ ಯಕ್ಷಗಾನ ಬರೀ ಮನರಂಜನಾ ಕಲೆಯಲ್ಲ. ಅದಕ್ಕೊಂದು ಧಾರ್ಮಿಕ ಆವರಣವಿದೆ. ದೇವರುಗಳಿಗೆ ಸಲ್ಲಿಸುವ ಸೇವೆಯೆಂದು ಅದನ್ನು ಜನ ಪರಿಗಣಿಸುತ್ತಾರೆ.
‘... ಅಂಬುಜಾಸನ ವಾಣಿಯರ ಪಾದಾಂಬುಜಕೆ ಪೊಡಮಡುತ ವರ್ಣಿಪೆನೀ ಕಥಾಮೃತವ...’ ಎಂದು ಸಕಲ ವೈದಿಕ ದೇವಾನುದೇವತೆಗಳನ್ನು ಪ್ರಾರ್ಥಿಸಿಯೇ ಯಕ್ಷಗಾನದ ಹೆಸರಲ್ಲಿ ನಡೆಯುವ ದ್ವೇಷಗಾನ– ಪಕ್ಷಗಾನ ಪ್ರದರ್ಶನಗಳು ಪ್ರಾರಂಭವಾಗುವುದು. ಸಹಜವಾಗಿಯೇ ಯಕ್ಷಗಾನ ರಂಗಸ್ಥಳದಿಂದ ರವಾನೆಯಾಗುವ ಪ್ರತ್ಯಕ್ಷ– ಪರೋಕ್ಷ ದ್ವೇಷ ಸಂದೇಶಗಳಿಗೆ ಹೆಚ್ಚಿನ ವಿಶ್ವಾಸಾರ್ಹತೆ ಮತ್ತು ಸ್ವೀಕೃತಿ ಇರುತ್ತದೆ.
‘ಕರ್ನಾಟಕದ ಕಲೆ’ ಎಂದು ಯಕ್ಷಗಾನ ಪ್ರಸಿದ್ಧ. ಆದರೆ, ವಾಸ್ತವದಲ್ಲಿ ಯಕ್ಷಗಾನವು ಕರ್ನಾಟಕವನ್ನು ‘ಕರ್ನಾಟಕ ಸಂಸ್ಕೃತಿ’ಯಿಂದ ದೂರಕ್ಕೆ ಒಯ್ಯುವ ಕಲೆಯಾಗುತ್ತಿದೆ. ಒಂದರ್ಥದಲ್ಲಿ ಯಕ್ಷಗಾನ ಇದನ್ನು ಹಿಂದಿನಿಂದಲೂ ಮಾಡುತ್ತಾ ಬಂದಿದೆ. ರಾಜಕೀಯದಿಂದ ದೂರವಿದ್ದು ಕೇವಲ ಕಲೆಯಾಗಿ ಪ್ರದರ್ಶನಗೊಳ್ಳುತ್ತಿದ್ದ ಕಾಲದಲ್ಲೂ ಸ್ಥಳೀಯ ಸಂಸ್ಕೃತಿಯ ಮೇಲೆ ಕೆಲವೇ ಕೆಲವು ಪುರಾಣ ಕಥಾನಕಗಳ ಪಾರಮ್ಯವನ್ನು ಹೇರುವ ಕೆಲಸವನ್ನು ಯಕ್ಷಗಾನವು ಸದ್ದಿಲ್ಲದೇ ಮಾಡುತ್ತಿತ್ತು. ಸ್ಥಳೀಯ ಪುರಾಣಗಳನ್ನು ಕೇಂದ್ರೀಕರಿಸಿಕೊಂಡ ಪ್ರಸಂಗಗಳು ಮುನ್ನೆಲೆಗೆ ಬಂದಾಗಲೂ ಅವುಗಳಿಗೆ ಎರಡನೇ ದರ್ಜೆಯ ಸ್ಥಾನ ನೀಡಲಾಯಿತು. ಇಲ್ಲವೇ ಅವುಗಳನ್ನು ಸ್ಥಾಪಿತ ಪುರಾಣ ಕಥೆಗಳ ಜೊತೆಗೆ ಕೃತಕವಾಗಿ ಬೆಸೆಯಲಾಯಿತು. ಬಹುತ್ವ ಮತ್ತು ಸಾಮರಸ್ಯವನ್ನು ಎತ್ತಿಹಿಡಿಯುವ ಸ್ಥಳೀಯ ಸಂಸ್ಕೃತಿಯನ್ನು ಯಕ್ಷಗಾನ ಗೌಣಗೊಳಿಸಿದ್ದು ಹೀಗೆ.
ಯಕ್ಷಗಾನ ಒಂದು ಪ್ರಾದೇಶಿಕ ಕಲೆ; ಸ್ಥಳೀಯ ರಂಗಭೂಮಿ. ಈ ಕಲೆ ಇಂದಿನ ಜಾಗತೀಕರಣದ ಸಂದರ್ಭದಲ್ಲಿ ಸ್ಥಳೀಯ ಸಂಸ್ಕೃತಿಯನ್ನು ಮತ್ತು ಅನನ್ಯತೆಯನ್ನು ರಕ್ಷಿಸಲು ಅದು ನೆರವಾಗಬೇಕಿತ್ತು. ಆದರೆ, ಯಕ್ಷಗಾನ ಕರಾವಳಿಯ ನೆಲದ ಸಂಸ್ಕೃತಿ ಮತ್ತು ಅನನ್ಯತೆಯನ್ನು ನಾಶಗೊಳಿಸುತ್ತಿರುವ ರಾಜಕೀಯದ ಕೈಗೆ ತನ್ನನ್ನು ತಾನು ಒಪ್ಪಿಸಿಕೊಂಡಿದೆ ಅಥವಾ ಅದಕ್ಕೆ ಈ ಸಾಂಸ್ಕೃತಿಕ ನಾಶದ ಪ್ರಕ್ರಿಯೆಯಲ್ಲಿ ಭಾಗಿಯಾಗದೆ ಉಳಿಯಲಾಗದ ಒಂದು ರಾಜಕೀಯ-ಸಾಮಾಜಿಕ ಪರಿಸರ ಯಕ್ಷಗಾನದ ನೆಲದಲ್ಲಿ ಸೃಷ್ಟಿಯಾಗಿದೆ. ಹಾಗಾಗಿ, ಪ್ರಸ್ತುತ ಕರಾವಳಿಯ ಧರ್ಮದ್ವೇಷದ ವೈರಸ್‌ಗೆ ಮದ್ದರೆಯಲು ಹೊರಟವರು ಆ ಪುಣ್ಯ ಕೆಲಸವನ್ನು ಯಕ್ಷಗಾನ ರಂಗಸ್ಥಳಗಳಿಂದಲೇ ಪ್ರಾರಂಭಿಸಿದರೆ ಒಳಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.