‘ಮನೆಯೊಂದು ಮೂರು ಬಾಗಿಲು’ ಎಂಬುದು ಒಡೆದ ಮನೆಗೆ ಸಂಬಂಧಿಸಿದಂತೆ ಹೇಳುವ ಮಾತು. ಕರ್ನಾಟಕದಲ್ಲಿ ಬಿಜೆಪಿಯ ಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ದಿನದಿಂದ ದಿನಕ್ಕೆ ಬಾಗಿಲುಗಳ ಸಂಖ್ಯೆ ಹೆಚ್ಚಾಗುತ್ತಿದೆ. ಬಾಗಿಲುಗಳನ್ನು ಮುಚ್ಚಿ ಭಿನ್ನರ ಬಾಯಿಯನ್ನು ಮುಚ್ಚಿಸುವ ಕೆಲಸ ಸಾಧ್ಯವಾಗುತ್ತಿಲ್ಲ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಬಿ.ವೈ.ವಿಜಯೇಂದ್ರ ಅವರ ನೇಮಕವಾದಾಗ ಬಸನಗೌಡ ಪಾಟೀಲ ಯತ್ನಾಳ ಒಬ್ಬರೇ ಟೀಕೆ ಮಾಡುತ್ತಿದ್ದರು. ಅವರ ಬಾಯಿಯನ್ನು ಬಂದ್ ಮಾಡಲು ಯಾರೂ ಪ್ರಯತ್ನಿಸದೇ ಇದ್ದುದರಿಂದ ಭಿನ್ನರ ಸಂಖ್ಯೆ ನಿಧಾನವಾಗಿ ಹೆಚ್ಚಾಗುತ್ತಾ ಹೋಯಿತು. ಯತ್ನಾಳ ಅವರೊಂದಿಗೆ ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ, ಪ್ರತಾಪ ಸಿಂಹ, ಅರವಿಂದ ಲಿಂಬಾವಳಿ, ಬಿ.ಪಿ.ಹರೀಶ್ ಮುಂತಾದವರು ಸೇರಿಕೊಂಡರು. ವಿಜಯೇಂದ್ರ ಅವರ ನಾಯಕತ್ವಕ್ಕೆ ಸವಾಲು ಹಾಕಿ ಪ್ರತ್ಯೇಕ ಆಂದೋಲನವನ್ನೇ ನಡೆಸಿದರು.
ವಿಜಯೇಂದ್ರ ಅವರು ಹೈಕಮಾಂಡ್‌ಗೆ ದೂರು ನೀಡಿದರೂ ಯತ್ನಾಳ ಬಣದ ಭಿನ್ನಮತೀಯ ಚಟುವಟಿಕೆ ನಿಲ್ಲಲೇ ಇಲ್ಲ. ನಂತರ ಹಿರಿಯ ನಾಯಕ ಸದಾನಂದ ಗೌಡ ಅವರೂ ರಾಜ್ಯ ಘಟಕದ ಅಧ್ಯಕ್ಷರ ವಿರುದ್ಧ ಅತೃಪ್ತಿ ಹೊರಹಾಕಿದರು. 23 ಜಿಲ್ಲಾಧ್ಯಕ್ಷರ ನೇಮಕಾತಿ ಹೊರಬಿದ್ದ ನಂತರ ಅಸಮಾಧಾನದ ಹೊಗೆ ಇನ್ನಷ್ಟು ಜೋರಾಯಿತು. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸದಸ್ಯ ಡಾ. ಕೆ.ಸುಧಾಕರ್ ಅವರು ವಿಜಯೇಂದ್ರ ಅವರ ಮೇಲೆ ಮುಗಿಬಿದ್ದರು. ದಿನದಿಂದ ದಿನಕ್ಕೆ ಏರುತ್ತಲೇ ಇರುವ ಭಿನ್ನಮತದ ಗ್ರಾಫ್‌ಗೆ ಕಡಿವಾಣ ಹಾಕಲು ಹೈಕಮಾಂಡ್‌ಗೂ ಸಾಧ್ಯವಾಗುತ್ತಿಲ್ಲ. ‘ಉಕ್ಕಿನ ಮನುಷ್ಯ’ ಖ್ಯಾತಿಯ ಅಮಿತ್ ಶಾ ಮತ್ತು ‘56 ಇಂಚಿನ ಎದೆ’ಯ ನರೇಂದ್ರ ಮೋದಿ ಅವರೂ ತಟಸ್ಥರಾಗಿರುವುದರ ಹಿಂದಿನ ಗುಟ್ಟು ಏನೆಂಬುದೇ ಗೊತ್ತಾಗುತ್ತಿಲ್ಲ.
ವಿಜಯೇಂದ್ರ ಅವರು ಚುನಾಯಿತ ಅಧ್ಯಕ್ಷರೇನಲ್ಲ. ಹೈಕಮಾಂಡ್ ನೇಮಕ ಮಾಡಿದ ಅಧ್ಯಕ್ಷರು. ಅಂತಹ ಅಧ್ಯಕ್ಷರ ವಿರುದ್ಧ ಟೀಕೆ ಟಿಪ್ಪಣಿ ಬರುತ್ತಿದೆ ಎಂದರೆ ಹೈಕಮಾಂಡ್ ನಡೆಯನ್ನು ಟೀಕಿಸಲಾಗುತ್ತಿದೆ ಎಂದೇ ಅರ್ಥ. ಜೊತೆಗೆ ಹೈಕಮಾಂಡ್ ಪ್ರತಿನಿಧಿಯಾಗಿ ಬಂದಿದ್ದ ರಾಧಾ ಮೋಹನ್ ದಾಸ್ ಅಗರವಾಲ್ ಅವರಿಗೂ ಇಲ್ಲಿ ಒಳ್ಳೆಯ ಸ್ವಾಗತವೇನೂ ಸಿಗಲಿಲ್ಲ. ಅವರನ್ನೂ ಟೀಕಿಸಿ ಓಡಿಸಲಾಯಿತು. ತರುಣ್ ಚುಗ್ ಅವರ ಮಾತಿಗೂ ಬೆಲೆ ಸಿಗಲಿಲ್ಲ. ಅಂದರೆ ರಾಜ್ಯದಲ್ಲಿನ ಬಿಜೆಪಿಯ ಗುಂಪುಗಳು ಹೈಕಮಾಂಡ್‌ಗೂ ಸವಾಲು ಹಾಕಿದಂತಾಗಿದೆ. ಆದರೂ ಯಾವುದೇ ಕ್ರಮ ಕೈಗೊಳ್ಳಲು ಅದು ಮುಂದಾಗಿಲ್ಲ. ಪಕ್ಷದ ರಾಷ್ಟ್ರ ಘಟಕದ ಅಧ್ಯಕ್ಷ ಜೆ.ಪಿ.ನಡ್ಡಾ ಅಥವಾ ರಾಜ್ಯ ಉಸ್ತುವಾರಿಯ ಮಾತುಗಳನ್ನೂ ಕೇಳಿಸಿಕೊಳ್ಳದ ಮಟ್ಟಕ್ಕೆ ಇಲ್ಲಿನ ಬಿಜೆಪಿ ಭಿನ್ನರು ಬೆಳೆದು ನಿಂತಿದ್ದಾರೆ. ರಾಜ್ಯ ಘಟಕದ ಈ ಗೊಂದಲಗಳನ್ನು ಬಗೆಹರಿಸಲಾಗದ ಹೀನಾಯ ಮಟ್ಟಕ್ಕೆ ಬಂದು ನಿಂತಿದೆಯೇ ಬಿಜೆಪಿ ಹೈಕಮಾಂಡ್ ಎಂಬ ಅನುಮಾನ ಕಾಡುವಂತಾಗಿದೆ.
ಕರ್ನಾಟಕದ ರಾಜಕೀಯ ಈಗ ಸಂಕೀರ್ಣ ಕಾಲಘಟ್ಟದಲ್ಲಿದೆ. ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿಯೂ ಎಲ್ಲವೂ ಸರಿಯಾಗಿಲ್ಲ. ಅಲ್ಲಿಯೂ ಮುಖ್ಯಮಂತ್ರಿ ಕುರ್ಚಿಯ ವಿಷಯದಲ್ಲಿ ಹೊಯ್ ಕೈ ನಡೆಯುತ್ತಿದೆ. ಬೆಲೆ ಏರಿಕೆಯ ಬೇಗೆಯಲ್ಲಿ ಜನ ಬೇಯುತ್ತಿದ್ದಾರೆ. ದಿನಕ್ಕೊಂದು ಹಗರಣದ ವಾಸನೆ ಹೊಡೆಯುತ್ತಿದೆ. ಭ್ರಷ್ಟಾಚಾರದ ಆರೋಪಗಳಿಗಂತೂ ಕೊನೆಯೇ ಇಲ್ಲ. ಅಭಿವೃದ್ಧಿ ಕಾರ್ಯಗಳೂ ನಡೆಯುತ್ತಿಲ್ಲ. ಔಷಧಗಳ ಕೊರತೆ ಎದ್ದು ಕಾಣುತ್ತಿದೆ. ಮೈಕ್ರೊ ಫೈನಾನ್ಸ್ ಸಂಸ್ಥೆಗಳ ಕಿರುಕುಳದಿಂದ ಜನ ಸಾಯುತ್ತಿದ್ದಾರೆ. ಮುಡಾ ಹಗರಣವಾಗಲಿ, ವಾಲ್ಮೀಕಿ ನಿಗಮದ ಹಗರಣವಾಗಲಿ ತಾರ್ಕಿಕ ಅಂತ್ಯ ಕಂಡಿಲ್ಲ. ಇಂತಹ ಸಂದರ್ಭದಲ್ಲಿ ರಚನಾತ್ಮಕ ಹೋರಾಟ ನಡೆಸಬೇಕಾದ ವಿರೋಧ ಪಕ್ಷ ಒಡಲೊಳಗೆ ಭಿನ್ನಮತದ ಬೆಂಕಿಯನ್ನು ಇಟ್ಟುಕೊಂಡು ಬೇಯುತ್ತಿದೆ. ತನ್ನನ್ನು ತಾನೇ ಸುಟ್ಟುಕೊಳ್ಳುತ್ತಿದೆ. ನಗುವವರ ಮುಂದೆ ಎಡವಿಬಿದ್ದು ನರಳಾಡುತ್ತಿದೆ.
ಹಾವೂ ಸಾಯಬಾರದು, ಕೋಲೂ ಮುರಿಯಬಾರದು ಎನ್ನುವ ನೀತಿಯನ್ನು ಬಿಜೆಪಿ ಹೈಕಮಾಂಡ್ ಅನುಸರಿಸುತ್ತಿರುವಂತೆ ಕಾಣುತ್ತಿದೆ. ಕರ್ನಾಟಕದಲ್ಲಿ ಬಿಜೆಪಿಯನ್ನು ಬಲವಾಗಿ ಕಟ್ಟಿದ, ಅಧಿಕಾರಕ್ಕೆ ತಂದ ನಾಯಕ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ, ಲಿಂಗಾಯತ ಸಮುದಾಯದ ನಾಯಕ, ಚುನಾವಣೆಗಳಲ್ಲಿ ಹಣವನ್ನು ಚೆಲ್ಲುವ ಸಾಮರ್ಥ್ಯ ಇರುವ ವಿಜಯೇಂದ್ರ ಅವರನ್ನು ಅಧ್ಯಕ್ಷ ಸ್ಥಾನದಿಂದ ಇಳಿಸಿದರೆ ಆಗುವ ನಷ್ಟದ ಬಗ್ಗೆ ಬಿಜೆಪಿ ಹೈಕಮಾಂಡ್‌ಗೆ ಅರಿವು ಇದೆ. ಹಾಗೆಂದು ಅವರನ್ನು ಸ್ವತಂತ್ರವಾಗಿ ಬಿಡಲೂ ಅದಕ್ಕೆ ಮನಸ್ಸು ಇದ್ದಂತಿಲ್ಲ. ಅವರು ಅಧ್ಯಕ್ಷರಾಗಿ ಇರಬೇಕು, ಆದರೆ ಲಗಾಮು ತಮ್ಮ ಕೈಯಲ್ಲಿಯೇ ಇರಬೇಕು ಎನ್ನುವ ನೀತಿಯನ್ನು ಹೈಕಮಾಂಡ್ ಅನುಸರಿಸುತ್ತಿರುವಂತೆ ಕಾಣುತ್ತಿದೆ. ರಾಜ್ಯ ಬಿಜೆಪಿಯಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಸೂಕ್ಷ್ಮವಾಗಿ ಗಮನಿಸಿದರೆ, ಇದೊಂದು ಹೈಕಮಾಂಡ್ ಪ್ರಾಯೋಜಿತ ಭಿನ್ನಮತ ಇರಬಹುದೇನೋ ಎನ್ನುವ ಅನುಮಾನವೂ ಬರುತ್ತದೆ.
ಕರ್ನಾಟಕವು ಹೀಗೆ ಹೈಕಮಾಂಡ್ ಪ್ರಾಯೋಜಿತ ಭಿನ್ನಮತದ ಪರ್ವಕ್ಕೆ ಸಾಕ್ಷಿಯಾದದ್ದು ಇದೇ ಮೊದಲಲ್ಲ. ಸಾಧಾರಣವಾಗಿ ಇಂತಹ ಪ್ರಯೋಗಗಳು ಆಡಳಿತ ಪಕ್ಷದಲ್ಲಿ ಆಗುತ್ತವೆ. ಈಗ ಅಪರೂಪಕ್ಕೆ ಇದು ವಿರೋಧ ಪಕ್ಷದಲ್ಲಿ ಕಾಣಿಸಿಕೊಂಡಿದೆ. 1956ರಲ್ಲಿ ಪ್ರಧಾನಿ ನೆಹರೂ ಮತ್ತು ಕರ್ನಾಟಕದ ಆಗಿನ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರ ನಡುವೆ ವೈಮನಸ್ಸು ಉಂಟಾಗಿ ನೆಹರೂ ಪ್ರಣೀತ ಭಿನ್ನಮತದಿಂದ ಕೆಂಗಲ್ ಅಧಿಕಾರ ಕಳೆದುಕೊಂಡಿದ್ದರು. 1958ರಲ್ಲಿ ಎಸ್.ನಿಜಲಿಂಗಪ್ಪ ಅವರೂ ಹೈಕಮಾಂಡ್ ಪ್ರೇರಿತ ಭಿನ್ನಮತಕ್ಕೆ ಬಲಿಯಾಗಿದ್ದರು. ಮುಖ್ಯಮಂತ್ರಿ ಸ್ಥಾನವನ್ನು ಕಳೆದುಕೊಂಡಿದ್ದರು.
ಕೆಂಗಲ್ ಹನುಮಂತಯ್ಯ ಅವರಾಗಲಿ, ನಿಜಲಿಂಗಪ್ಪ ಅವರಾಗಲಿ ಹೈಕಮಾಂಡ್ ಬೆದರಿಕೆಗೆ ಸೊಪ್ಪು ಹಾಕಿರಲಿಲ್ಲ. ಕೆಂಗಲ್ ಹನುಮಂತಯ್ಯ ಅವರ ವಿರುದ್ಧದ ದೂರು ಪ್ರಧಾನಿ ನೆಹರೂ ಅವರನ್ನು ತಲುಪಿದಾಗ, ಅವರು ಕೆಂಗಲ್ ಅವರಿಗೆ ದೆಹಲಿಗೆ ಬರುವಂತೆ ಸೂಚಿಸಿದರು. ಕೆಂಗಲ್ ದೆಹಲಿಗೆ ಹೋದಾಗ ನೆಹರೂ ‘ನಿಮ್ಮ ಆಡಳಿತ ವೈಖರಿ ಬಗ್ಗೆ ಬಹಳಷ್ಟು ದೂರುಗಳು ಬಂದಿವೆ. ನೀವು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದೀರಿ. ನಿಮ್ಮ ಮೇಲೆ ಭ್ರಷ್ಟಾಚಾರದ ಆರೋಪವೂ ಇದೆ’ ಎಂದಾಗ ಕೆಂಗಲ್ ‘ಮಿಸ್ಟರ್ ನೆಹರೂ, ನಿಮ್ಮ ಆಡಳಿತದ ಬಗ್ಗೆಯೂ ದೂರುಗಳು ಇವೆ. ನಿಮ್ಮ ಮಗಳು ಇಂದಿರಾ ಗಾಂಧಿ ಸಂವಿಧಾನೇತರ ಶಕ್ತಿಯಾಗಿ ದರ್ಬಾರು ನಡೆಸುತ್ತಿರುವ ಬಗ್ಗೆ ಕಾಂಗ್ರೆಸ್‌ನಲ್ಲಿ ಅತೃಪ್ತಿ ಇದೆ. ನೀವೇನು ಪ್ರಶ್ನಾತೀತ ನಾಯಕರಲ್ಲ. ನಿಮ್ಮ ಮುಂದೆ ನಾವು ಕೈಕಟ್ಟಿ ಗುಲಾಮರಂತೆ ನಿಲ್ಲಬೇಕೇನು?’ ಎಂದು ಪ್ರಶ್ನಿಸಿದ್ದರು.
ತಮಿಳುನಾಡಿನ ಆವಡಿಯಲ್ಲಿ ಕಾಂಗ್ರೆಸ್ ಅಧಿವೇಶನ ನಡೆದಾಗ ನೆಹರೂ ಅವರು ಸಮಾಜವಾದಿ ಆರ್ಥಿಕ ಸಿದ್ಧಾಂತವನ್ನು ಮಂಡಿಸಿದರು. ಅದಕ್ಕೆ ನಿಜಲಿಂಗಪ್ಪ ವಿರೋಧ ವ್ಯಕ್ತಪಡಿಸಿದರು. ಆಗ ನೆಹರೂ ‘ನೀನು ಹಳ್ಳಿಗ, ನಿನಗೆ ಭಾರತವನ್ನು ಹೇಗೆ ಪುನರ್‌ನಿರ್ಮಾಣ ಮಾಡಬೇಕು ಎನ್ನುವ ಪರಿಕಲ್ಪನೆಯೇ ಇಲ್ಲ’ ಎಂದು ನಿಜಲಿಂಗಪ್ಪ ಅವರನ್ನು ಟೀಕಿಸಿದರು. ಇದಕ್ಕೆ ಸಿಟ್ಟಾದ ನಿಜಲಿಂಗಪ್ಪ ‘ಗ್ರಾಮೀಣಾಭಿವೃದ್ಧಿಯ ಬಗ್ಗೆ ನನಗೆ ಇರುವಷ್ಟು ಕಾಳಜಿಯ ಹತ್ತನೇ ಒಂದು ಭಾಗ ನಿಮಗೆ ಇದ್ದಿದ್ದರೆ ಭಾರತದ ಆರ್ಥಿಕ ಚಿತ್ರಣವೇ ಬೇರೆಯಾಗುತ್ತಿತ್ತು’ ಎಂದು ತಿರುಗೇಟು ನೀಡಿದ್ದರು. ಆದರೆ ಇವೇ ಮಾತುಗಳು ನಂತರ ಹೈಕಮಾಂಡ್ ಪ್ರೇರಿತ ಭಿನ್ನಮತವಾಗಿ ಅವರು ಅಧಿಕಾರ ಕಳೆದುಕೊಂಡರು.
ವಿಜಯೇಂದ್ರ ಅವರು ಕೆಂಗಲ್ ಹನುಮಂತಯ್ಯ ಅವರೂ ಅಲ್ಲ, ನಿಜಲಿಂಗಪ್ಪ ಅವರ ತರಹದವರೂ ಅಲ್ಲ. ಅಮಿತ್ ಶಾ ಅಥವಾ ಮೋದಿಯವರ ಮುಂದೆ ನಿಂತು ಈ ರೀತಿಯ ಪ್ರತಿಭಟನೆಯ ಮಾತುಗಳನ್ನು ಹೇಳುವ ಧೈರ್ಯವೂ ಅವರಿಗೆ ಇಲ್ಲ. ಆದರೆ ಬಿಜೆಪಿ ಹೈಕಮಾಂಡ್‌ಗೆ ಯಡಿಯೂರಪ್ಪ ಅವರ ಕುರಿತು ಭಯ ಅಂತೂ ಇದ್ದೇ ಇದೆ. ಈ ತೊಳಲಾಟದಲ್ಲಿ ಬಳಲುತ್ತಿರುವವರು ಕರ್ನಾಟಕದ ಜನ. ಇದು ಹೀಗೆಯೇ ಮುಂದುವರಿದರೆ ಮುಂದೊಂದು ದಿನ ರಾಜ್ಯದ ಮತದಾರರು ‘ಸಕ್ರಿಯ ವಿರೋಧ ಪಕ್ಷ ಬೇಕು’ ಎಂದು ಜಾಹೀರಾತು ನೀಡಬೇಕಾದೀತು. ವಿರೋಧ ಪಕ್ಷ ಅಷ್ಟೇ ಅಲ್ಲ ಈಗ ಸಕ್ರಿಯ ಆಡಳಿತ ಪಕ್ಷವೂ ಬೇಕೇಬೇಕಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.