ADVERTISEMENT

ವಿವೇಕದಿಂದ ತಪ್ಪಿದ ಅನರ್ಥ

ಬೆರಗಿನ ಬೆಳಗು –4

ಡಾ. ಗುರುರಾಜ ಕರಜಗಿ
Published 19 ಜೂನ್ 2018, 13:21 IST
Last Updated 19 ಜೂನ್ 2018, 13:21 IST
ವಿವೇಕದಿಂದ ತಪ್ಪಿದ ಅನರ್ಥ
ವಿವೇಕದಿಂದ ತಪ್ಪಿದ ಅನರ್ಥ   

ಹಿಂದೆ ವಾರಾಣಸಿ ನಗರದಲ್ಲಿ ಬ್ರಹ್ಮದತ್ತ ರಾಜ್ಯಭಾರ ಮಾಡುತ್ತಿದ್ದಾಗ ಬೋಧಿಸತ್ವ ಒಬ್ಬ ವರ್ತಕನ ಮಗನಾಗಿ ಹುಟ್ಟಿದ್ದ. ವಯಸ್ಸಿಗೆ ಬಂದ ಮೇಲೆ ತಾನೇ ದೇಶಗಳನ್ನು ಸುತ್ತುತ್ತ ವ್ಯಾಪಾರ ಮಾಡುತ್ತಿದ್ದ. ಒಂದು ಬಾರಿ ಐದುನೂರು ಬಂಡಿಗಳಲ್ಲಿ ಅತ್ಯಮೂಲ್ಯ ವಸ್ತುಗಳನ್ನು ತುಂಬಿಕೊಂಡು ಪೂರ್ವದಿಕ್ಕಿಗೆ ಹೊರಡಲು ಸಿದ್ಧನಾದ. ಅದೇ ಊರಿನಲ್ಲಿ ಮತ್ತೊಬ್ಬ ವರ್ತಕನ ಮಗನೂ ವ್ಯಾಪಾರ ಮಾಡುತ್ತಿದ್ದ. ಅವನು ಆಲಸಿ ಹಾಗೂ ಮೂರ್ಖ. ಬೋಧಿಸತ್ವನನ್ನು ನೋಡಿ ತಾನೂ ಐದುನೂರು ಬಂಡಿಗಳಲ್ಲಿ ವಸ್ತುಗಳನ್ನು ತುಂಬಿಕೊಂಡು ಪೂರ್ವದಿಕ್ಕಿಗೇ ಹೊರಟ. ಬೋಧಿಸತ್ವ ಇನ್ನೊಬ್ಬ ವರ್ತಕನನ್ನು ಮುಂದೆ ಹೋಗುವಂತೆ ಕೋರಿದ. ಆ ವರ್ತಕನಿಗೆ ತುಂಬ ಸಂತೋಷ. ತಾನೇ ಮೊದಲು ಹೋಗುವುದರಿಂದ ಹೆಚ್ಚಿನ ಗಿರಾಕಿಗಳು ದೊರೆತು ಹೆಚ್ಚು ಲಾಭವಾಗುತ್ತದೆ ಎಂದು ಭಾವಿಸಿ ಸಂತೋಷಪಟ್ಟ.

ಅವನು ಮುಂದೆ ಸಾಗಿದಾಗ ವಿಸ್ತಾರವಾದ ಮರುಭೂಮಿ ಬಂದಿತು. ಅದು ಮನುಷ್ಯರಿಲ್ಲದ, ನೀರಿಲ್ಲದ ನೆಲ. ಅಲ್ಲೊಬ್ಬ ರಾಕ್ಷಸ, ಮಾಯಾವಿ. ಅವರನ್ನು ಮೋಸಗೊಳಿಸಲು ತಾನು ಒಂದು ಸುಂದರವಾದ ಬಂಡಿಯನ್ನೇರಿ, ಬಟ್ಟೆಗಳನ್ನು ಒದ್ದೆಮಾಡಿಕೊಂಡು, ಕೂದಲಿನಿಂದ ನೀರು ಇಳಿಯುವಂತೆ ತಲೆಯನ್ನು ನೆನೆಸಿಕೊಂಡು, ಜೊತೆಗಾರರನ್ನು ಕರೆದುಕೊಂಡು ವರ್ತಕನ ಮುಂದೆ ಬಂದ. ಅವರೆಲ್ಲರನ್ನು ನೋಡಿ ವರ್ತಕ ಕೇಳಿದ: ‘ಮುಂದೆ ಮಳೆಯಾಗುತ್ತಿದೆಯೇ? ನೀರು ದೊರೆಯುತ್ತದೆಯೇ?’ ರಾಕ್ಷಸ ಜೋರಾಗಿ ನಕ್ಕು ‘ಕಾಣುವುದಿಲ್ಲವೇ? ನಾವೆಲ್ಲ ನೆನೆದು ಹೋಗಿದ್ದೇವೆ. ಮುಂದೆ ಶುದ್ಧ ನೀರಿನ ದೊಡ್ಡ ದೊಡ್ಡ ಕೊಳಗಳಿವೆ. ನೀವು ಹುಚ್ಚರು ಬಂಡಿಗಳಲ್ಲಿ ನೀರು ತುಂಬಿಕೊಂಡು ದನಗಳಿಗೆ ಹಿಂಸೆ ಮಾಡುತ್ತೀರಿ. ನೀರನ್ನೆಲ್ಲ ಚೆಲ್ಲಿಬಿಟ್ಟು ಮುಂದೆ ಶುದ್ಧ ನೀರು ತುಂಬಿಕೊಳ್ಳಿ’ ಎಂದು ಹೇಳಿ ಅವಸರದಿಂದ ಮುಂದೆ ಹೋಗಿಬಿಟ್ಟ. ವರ್ತಕ ಅವನ ಮಾತನ್ನು ನಂಬಿ ಒಂದು ಹನಿಯೂ ಉಳಿಯದಂತೆ ನೀರನ್ನು ಚೆಲ್ಲಿಸಿಬಿಟ್ಟ. ಮುಂದೆ ಸಾಗಿದಂತೆ ಕೆಂಡ ಸುರಿದಂತೆ ಬಿಸಿಲು, ನೀರಿನ ಹೆಸರೂ ಇಲ್ಲ. ವರ್ತಕನ ಜೊತೆಗಾರರು, ದನಗಳು ಬಸವಳಿದುಹೋದವು. ಆಗ ರಾಕ್ಷಸ ಬಂದು ಅವರನ್ನೆಲ್ಲ ಕೊಂದು ತಿಂದುಬಿಟ್ಟ. ಮೂಳೆಗಳು ಎಲ್ಲೆಡೆಗೆ ಹರಡಿದವು.

ನಂತರ ಅದೇ ಮಾರ್ಗವಾಗಿ ಬೋಧಿಸತ್ವ ತನ್ನ ಬಂಡಿಗಳೊಡನೆ ಬಂದ. ರಾಕ್ಷಸ ಹಿಂದೆ ವರ್ತಕನಿಗೆ ಮಾಡಿದ ಉಪಾಯವನ್ನೇ ಮಾಡಿ, ಇವರ ಮುಂದೆ ಬಂದ. ಬೋಧಿಸತ್ವನಿಗೆ ಹೇಳಿದ: ‘ನೀನು ಮಹಾಮೂರ್ಖ. ಅಷ್ಟೊಂದು ನೀರು ತುಂಬಿಕೊಂಡು ಹೊರಟಿದ್ದೀ. ಮುಂದೆ ವಿಪರೀತ ಮಳೆಯಾಗುತ್ತಿದೆ. ಶುದ್ಧನೀರಿನ ಕೊಳಗಳು ತುಂಬಿವೆ. ನೀರನ್ನೆಲ್ಲ ಖಾಲಿ ಮಾಡಿ ದನಗಳಿಗೆ ವಿಶ್ರಾಂತಿ ಕೊಡು.’ ಬೋಧಿಸತ್ವ ಹೇಳಿದ: ‘ಆಯ್ತು ಸ್ವಾಮೀ, ನಿಮಗೆ ಕೃತಜ್ಞತೆಗಳು; ನೀವು ಹೊರಡಿ.’ ಬಂಡಿಗಳ ಯಾತ್ರೆ ಮುಂದೆ ನಡೆಯಿತು. ಅಲ್ಲಿ ರಾಶಿ ರಾಶಿ ಮೂಳೆಗಳು, ಅನಾಥವಾಗಿ ನಿಂತಿದ್ದ ಬಂಡಿಗಳು ಕಂಡವು. ಬೋಧಿಸತ್ವನಿಗೆ ಎಲ್ಲ ಅರ್ಥವಾಯಿತು. ತನ್ನ ಬಂಡಿಗಳನ್ನು ನಿಲ್ಲಿಸಿ ಇನ್ನೊಬ್ಬ ವರ್ತಕನ ಬಂಡಿಯಲ್ಲಿದ್ದ ಸಾಮಾನುಗಳನ್ನು ತನ್ನ ಬಂಡಿಗಳಿಗೆ ಸಾಗಿಸಿ ಮುಂದೆ ನಡೆದು ಪಟ್ಟಣವನ್ನು ಸೇರಿ ಅಪಾರವಾದ ಹಣ ಸಂಗ್ರಹಮಾಡಿ ತನ್ನ ಊರಿಗೆ ಮರಳಿದ.
ಇಬ್ಬರಿಗೂ ಎದುರಾದದ್ದು ಒಂದೇ ಸನ್ನಿವೇಶ. ಒಬ್ಬ ಹೇಳಿದ ಮಾತನ್ನು ಪರೀಕ್ಷಿಸದೇ ಒಪ್ಪಿ ಪ್ರಾಣವನ್ನು ಕಳೆದುಕೊಂಡ. ಮತ್ತೊಬ್ಬ ಕೇಳಿದ ಮಾತನ್ನು ತನ್ನ ವಿವೇಕದ ಒರೆಗೆ ಹಚ್ಚಿ, ನಡೆದು ಯಶಸ್ಸು ಸಂಪಾದಿಸಿದ. ನಮ್ಮ ಬದುಕಿನಲ್ಲೂ ಸಲಹೆ ಕೊಡುವವರೆಲ್ಲ ನಮ್ಮ ಮೇಲಿನ ಪ್ರೇಮದಿಂದ, ನಮ್ಮ ಒಳಿತಿಗೇ ಹೇಳುತ್ತಾರೆಂಬುದು ಸರಿಯಲ್ಲ. ಯಾವುದೇ ಸಲಹೆ ಬಂದರೂ ಅದನ್ನು ಪರೀಕ್ಷಿಸಿ, ಒರೆಗೆ ಹಚ್ಚಿ ನಂತರ ಅದನ್ನು ಪಾಲಿಸುವುದು ಅಥವಾ ಬಿಡುವುದು ನಮ್ಮ ಬದುಕಿಗೆ ಕ್ಷೇಮ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.