ADVERTISEMENT

ಬೆಳಗಿನ ಬೆರಗು ಅಂಕಣ | ನೆಮ್ಮದಿಯ ನೆಲೆಗಳು

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2023, 22:45 IST
Last Updated 28 ಫೆಬ್ರುವರಿ 2023, 22:45 IST
   

ಗುಡಿಯ ಪೂಜೆಯೊ, ಕಥೆಯೊ, ಸೊಗಸು ನೋಟವೊ, ಹಾಡೊ |
ಬಡವರಿಂಗುಪಕೃತಿಯೊ, ಆವುದೋ ಮನದ ||
ಬಡಿದಾಟವನು ನಿಲಿಸಿ ನೆಮ್ಮದಿಯನೀವೊಡದೆ |
ಬಿಡುಗಡೆಯೊ ಜೀವಕ್ಕೆ – ಮಂಕುತಿಮ್ಮೆ || 832 ||

ಪದ-ಅರ್ಥ: ಬಡವರಿಂಗುಪಕೃತಿಯೊ=ಬಡವರಿಗೆ (ಬಡವರಿಗೆ)+ಉಪಕೃತಿಯೊ(ಉಪಕಾರವೊ), ನೆಮ್ಮದಿಯನೀವೊಡದೆ=ನೆಮ್ಮದಿಯನು+ಈವೊಡೆ(ಕೊಡುವುದಾದರೆ)+ಅದೆ.

ವಾಚ್ಯಾರ್ಥ: ಗುಡಿಯಲ್ಲಿ ಪೂಜೆಯೊ, ಕಥೆಯೋ, ಸುಂದರವಾದ ನೋಟವೋ, ಹಾಡೋ, ಬಡವರಿಗೆ ಮಾಡುವ ಉಪಕಾರವೊ, ಯಾವುದೇ ಆಗಲಿ, ಅದು ಮನಸ್ಸಿನ ಹೊಯ್ದಾಟವನ್ನು ನಿಲ್ಲಿಸಿ, ಸಮಾಧಾನ ನೀಡುವುದಾದರೆ, ಅದೇ ಜೀವಕ್ಕೆ ಬಿಡುಗಡೆಯ ಮಾರ್ಗ.

ADVERTISEMENT

ವಿವರಣೆ: ಅವನೊಬ್ಬ ರಾಜ. ಎಲ್ಲಿ ಭೋಗಭಾಗ್ಯಗಳಿದ್ದರೂ ಮನದಲ್ಲಿ ಸಂತೋಷ, ಶಾಂತಿ ಇರಲಿಲ್ಲ. ತನಗೆ ಶಾಂತಿಯ ಮಾರ್ಗವನ್ನು ತಿಳಿಸುವವರಿಗೆ ಬಹುದೊಡ್ಡ ಬಹುಮಾನ ಎಂದು ಘೋಷಣೆ ಮಾಡಿದ. ಬಹುಮಾನದ ಆಸೆಗೆ ನೂರಾರು ಜನ, ನೂರಾರು ಸಲಹೆಗಳನ್ನು ಕೊಟ್ಟರೂ ಶಾಂತಿ ಇಳಿಯಲಿಲ್ಲ. ಒಂದು ದಿನ ಒಬ್ಬ ಸನ್ಯಾಸಿ ಬಂದು, ರಾಜನೊಂದಿಗೆ ಮಾತನಾಡಿ ಹೇಳಿದ, “ಇದು ತುಂಬ ಸುಲಭ. ನಿಮ್ಮ ರಾಜ್ಯದಲ್ಲಿ ಅತ್ಯಂತ ಸಂತೋಷ, ಶಾಂತಿಯಿಂದ ಇರುವವನನ್ನು ಹುಡುಕಿಸಿ. ಅವನ ಅಂಗಿಯನ್ನು ನೀವು ಹಾಕಿಕೊಂಡರೆ ಆ ಶಾಂತಿ, ಸಂತೋಷ ನಿಮ್ಮದೇ”. ರಾಜಮಂತ್ರಿಗಳಿಗೆ ಅಂಥವನನ್ನು ಹುಡುಕಲು ಆಜ್ಞೆ ಮಾಡಿದ.ದೂತರು ರಾಜ್ಯದ ಮೂಲೆ ಮೂಲೆಗಳನ್ನು ಹುಡುಕಿಹೋದರು. ಸದಾ ಸಂತೋಷದಲ್ಲಿರುವವರು ಸಿಕ್ಕಾರೆಯೇ ಎಂದುಪರೀಕ್ಷಿಸಿದರು. ಎಲ್ಲರಿಗೂ ಒಂದಲ್ಲ ಒಂದು ತೊಂದರೆ ಕಾಡುತ್ತಿತ್ತು. ಕೆಲವರಿಗೆ ಸಧ್ಯಕ್ಕೆ ತೊಂದರೆ ಇಲ್ಲದಿದ್ದರೂ ಮುಂದೆ ಬಂದೀತು ಎಂಬ ಚಿಂತೆ ಬಾಧಿಸಿ, ಇಂದಿನ ಸಂತೋಷವನ್ನು ಹಾಳು ಮಾಡಿತ್ತು. ಕೊನೆಗೊಬ್ಬ ತರುಣ ಸಿಕ್ಕ. ಅವನು ಕಾಡಿಗೆ ಹೋಗಿ ಮರ ಕಡಿದು ತಂದು ಮಾರಾಟಮಾಡಿ ಜೀವನ ಸಾಗಿಸುವವನು. ಅವನು ಯಾವಾಗಲೂ ನಗುನಗುತ್ತಲೇ ಇರುವವನು. ಯಾರು ಕೇಳಿದರೂ “ತುಂಬ ಚೆನ್ನಾಗಿದ್ದೇನೆ” ಎಂದು ನಕ್ಕು ಹೋಗಿಬಿಡುತ್ತಿದ್ದ. ಅವನಿಗೆ ನಾಳಿನ ಯಾವುದರ ಬಗ್ಗೆಯೂ ಚಿಂತೆಯಿಲ್ಲ. ಅವನೇ ಅತ್ಯಂತ ಸಂತೋಷ ಜೀವಿ ಎಂದು ತೀರ್ಮಾನ ಮಾಡಿ ಅವನನ್ನು ರಾಜನ ಬಳಿಗೆ ಕರೆ ತಂದರು. ಸನ್ಯಾಸಿಯೂಅಲ್ಲಿಯೇ ಇದ್ದ. ರಾಜ “ಅಯ್ಯಾ, ನಿನ್ನ ಅಂಗಿಯನ್ನು ನನಗೆಕೊಡು” ಎಂದು ಕೇಳಿದ. ತರುಣ ಮತ್ತೆ ಘೊಳ್ಳನೆ ನಕ್ಕು,“ಸ್ವಾಮೀ, ನನ್ನ ಹತ್ತಿರ ಅಂಗಿಯೇ ಇಲ್ಲ. ನಾನು ಯಾವಾಗಲೂಹೀಗೆಯೇ ಬರಿಮೈಯಲ್ಲೇ ಇರುವುದು” ಎಂದ.ಸನ್ಯಾಸಿ ಹೇಳಿದ, “ರಾಜಾ, ಈ ತರುಣನ ಹತ್ತಿರ ಯಾವಭೋಗಭಾಗ್ಯಗಳಿಲ್ಲ, ಅಂಗಿಯೂ ಇಲ್ಲ, ಆದರೆ ಸಂತೋಷ ನೆಲೆಯಾಗಿದೆ. ಸಂತೋಷ ದೊರಕುವುದು ವಸ್ತುಗಳಿಂದಲ್ಲ,ಅಧಿಕಾರದಿಂದಲ್ಲ, ಸುತ್ತಲೂ ಸಂತೋಷವನ್ನು ಎಲ್ಲದರಲ್ಲಿ ಕಾಣುವ ಮನೋಧರ್ಮದಿಂದ”. ಕಗ್ಗ ಹೇಳುವುದು ಅದನ್ನೇ, ಸಂತೋಷವನ್ನು ಹುಡುಕಿಕೊಂಡು ಎಲ್ಲೆಲ್ಲಿಯೋ ಸುತ್ತ ಬೇಡ. ಅದು ನಿನಗೆ ಪೂಜೆಯಲ್ಲೋ, ಕಥೆಯಲ್ಲೋ, ಸುಂದರ ಪ್ರದೇಶದ ದರ್ಶನದಲ್ಲೋ ಹಾಡಿನಲ್ಲೋ ಅಥವಾ ನೀನು ದೀನರಿಗೆ ಮಾಡುವ ಸಹಾಯದಲ್ಲೋ ದೊರೆಯಬಹುದು. ಯಾವ ಕಾರ್ಯದಿಂದ ಮನದ ಬಡಿದಾಟ ಕಡಿಮೆಯಾಗುವುದೋ ಅದೇ ನಿನಗೆ ನೆಮ್ಮದಿಯ ತಾಣ, ಅದರಿಂದ ದಣಿದ ಜೀವಕ್ಕೆ ಬಿಡುಗಡೆ, ಬದುಕಿಗೆ ಶಾಂತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.