ADVERTISEMENT

ಫಲವಿಲ್ಲದ ವೃತ

ಡಾ. ಗುರುರಾಜ ಕರಜಗಿ
Published 26 ಆಗಸ್ಟ್ 2019, 20:15 IST
Last Updated 26 ಆಗಸ್ಟ್ 2019, 20:15 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಬಹಳ ಹಿಂದೆ ಬ್ರಹ್ಮದತ್ತ ವಾರಾಣಸಿಯಲ್ಲಿ ರಾಜ್ಯಭಾರ ಮಾಡುತ್ತಿದ್ದಾಗ ಬೋಧಿಸತ್ವ ಮಹಾನ್ ಜ್ಞಾನಿಯಾಗಿ ಹುಟ್ಟಿದ್ದ. ಅವನು ಹೆಚ್ಚಿನ ಸಾಧನೆ ಮಾಡಿ ಶಕ್ರದೇವನಾದ.

ಈ ಸಮಯದಲ್ಲಿ ಒಂದು ತೋಳ ಗಂಗಾನದಿಯ ದಂಡೆಯ ಮೇಲೆ ವಾಸವಾಗಿತ್ತು. ಒಂದು ದಿನ ಅದು ನದಿಯ ದಂಡೆಯಲ್ಲಿದ್ದ ಕಲ್ಲಿನ ಮೇಲೆ ಬಂದು ಮಲಗಿಕೊಂಡಿತು. ನಿಧಾನಕ್ಕೆ ನದಿಯ ನೀರು ಏರುತ್ತಿತ್ತು. ತೋಳಕ್ಕೆ ಎಚ್ಚರವಾದಾಗ ನೀರು ತುಂಬ ಹತ್ತಿರ ಬಂದದ್ದು ಕಂಡು ಗಾಬರಿಯಾಗಿ ಮೇಲಕ್ಕೆ ಹತ್ತಿ ವಿಶಾಲವಾದ ಕಲ್ಲಿನ ಮೇಲೆ ಮಲಗಿತು. ಮತ್ತೆ ಅದಕ್ಕೆ ಗಾಢ ನಿದ್ರೆ. ಈ ಸಲ ಎಚ್ಚರಾದಾಗ ತೋಳಕ್ಕೆ ಭಯ ಹತ್ತಿತು, ಯಾಕೆಂದರೆ ನದಿಯ ನೀರು ಕಲ್ಲಿನ ಸುತ್ತಲೂ ಹರಡಿಕೊಂಡಿತ್ತು. ತೋಳ ಅಲ್ಲಿಂದ ಎಲ್ಲಿಯೂ ಹೋಗುವುದು ಸಾಧ್ಯವಿರಲಿಲ್ಲ. ನೀರು ಇಳಿಯುವವರೆಗೂ ಅದಕ್ಕೆ ತಿನ್ನಲು ಏನೂ ಸಿಕ್ಕುವ ದಾರಿ ಕಾಣಲಿಲ್ಲ. ಆಗ ತೋಳ ಚಿಂತಿಸಿತು. ಇಂದು ನನಗೆ ಯಾವ ಬೇಟೆಯೂ ಸಿಗುವುದಿಲ್ಲ ಯಾಕೆಂದರೆ ಬೇಟೆಯಾಡಲು ಯಾವ ದಾರಿಯೂ ಇಲ್ಲ. ಅದಕ್ಕೊಂದು ವಿಚಾರ ಹೊಳೆಯಿತು. ಹೇಗಿದ್ದರೂ ನನಗೆ ತಿನ್ನಲು ಏನೂ ಸಿಕ್ಕಲಾರದು, ಆದ್ದರಿಂದ ಇಂದು ಉಪೋಸಥ ವೃತಮಾಡಿ ಪುಣ್ಯಗಳಿಸುತ್ತೇನೆ ಎಂದುಕೊಂಡು ಶೀಲಗ್ರಹಣ ಮಾಡಿ ಮಲಗಿಕೊಂಡಿತು.

ಶಕ್ರದೇವ ತನ್ನ ದಿವ್ಯದೃಷ್ಟಿಯಿಂದ ಇದನ್ನು ತಿಳಿದ. ತೋಳ ಮಾಡುವುದು ಮೋಸದ ವೃತ, ಈ ಮೋಸವನ್ನು ಮುರಿಯಬೇಕೆಂದು ತೀರ್ಮಾನಿಸಿದ. ತಾನೊಂದು ಪುಟ್ಟ ಕುರಿಯ ಮರಿಯ ರೂಪವನ್ನು ಧರಿಸಿ ತೋಳದಿಂದ ಸ್ವಲ್ಪ ದೂರದಲ್ಲಿ ನಿಂತುಕೊಂಡ. ಇಷ್ಟು ಹತ್ತಿರ ಕುರಿಮರಿ ತಾನಾಗಿಯೇ ಬಂದು ನಿಂತಿರುವಾಗ ಉಪವಾಸ ಇರಲು ಸಾಧ್ಯವೇ? ಉಪವಾಸವನ್ನು ಮತ್ತೊಂದು ದಿನ ಮಾಡಿದರಾಯಿತು ಎಂದು ಕುರಿಮರಿಯ ಮೇಲೆ ಹಾರಿತು. ಅದು ಹೇಳಿಕೇಳಿ ಮಾಯದ ಕುರಿಮರಿ, ತೋಳದ ಕೈಗೆ ಸಿಕ್ಕೀತೇ? ಛಕ್ಕನೇ ಅಲ್ಲಿಂದ ಹಾರಿ ದೂರ ಹೋಯಿತು. ತೋಳ ಮತ್ತೆ ಮುನ್ನುಗ್ಗಿತು. ಕುರಿಮರಿ ತೋಳವನ್ನು ಸರಿಯಾಗಿ ಓಡಾಡಿಸಿತು. ತೋಳಕ್ಕೆ ಸುಸ್ತಾಯಿತು. ಈ ಕುರಿಮರಿ ತನಗಿನ್ನು ಸಿಗುವುದಿಲ್ಲ ಎನ್ನಿಸಿ ತೋಳ ಮತ್ತೆ ಮರಳಿ ತನ್ನ ಸ್ಥಾನಕ್ಕೆ ಬಂದು ಕುಳಿತಿತು. ಹೇಗಿದ್ದರೂ ಬೇಟೆ ಸಿಗಲಿಲ್ಲವಲ್ಲ, ಉಪವಾಸ ವೃತವನ್ನಾದರೂ ಪೂರೈಸುತ್ತೇನೆ, ಒಂದಷ್ಟು ಪುಣ್ಯ ಬರಲಿ ಎಂದು ಯೋಚಿಸಿತು.

ADVERTISEMENT

ಆತ ಶಕ್ರದೇವ ತನ್ನ ನೈಜರೂಪದಲ್ಲಿ ಆಕಾಶದಲ್ಲಿ ಕಾಣಿಸಿಕೊಂಡ. ತೋಳಕ್ಕೆ ಹೇಳಿದ, ‘ಎಲೈ ತೋಳ, ನೀನೊಂದು ಮೋಸದ ಪ್ರಾಣಿ. ನಾನೇ ಕುರಿಮರಿಯಾಗಿ ನಿನ್ನ ಮುಂದೆ ಬಂದದ್ದು ನಿನಗೆ ತಿಳಿಯಲಿಲ್ಲ. ಏನೂ ಆಹಾರ ಸಿಗದಿದ್ದಾಗ ಅದನ್ನು ಉಪವಾಸವೆಂದು ಆಚರಿಸಬೇಕೆಂದು ನಾಟಕಮಾಡಿದೆ. ಕುರಿಮರಿ ಮುಂದೆ ಬಂದಾಗ ವೃತ ಮರೆತುಹೋಯಿತಲ್ಲವೆ? ಇನ್ನು ಮುಂದೆ ಯಾವ ವೃತವನ್ನು ನೀನು ಮಾಡುವುದು ಬೇಡ. ಮಾಡಿದರೂ ಅದರ ಫಲ ನಿನಗೆ ದೊರಕಲಾರದು’ ಎಂದು ಹೇಳಿ ದೇವಲೋಕಕ್ಕೆ ಹೊರಟು ಹೋದ.

ನಮ್ಮೆಲ್ಲರ ವೃತಗಳು ಸಾಮಾನ್ಯವಾಗಿ ಸ್ವಾರ್ಥಮೂಲವಾದವುಗಳು. ನಾವು ಯಾವುದಾದರೂ ಒಂದು ಅಪೇಕ್ಷೆಯನ್ನು ಇಟ್ಟುಕೊಂಡೇ ವೃತ, ಉಪವಾಸಗಳ ಆಚರಣೆಯನ್ನು ಮಾಡುವುದು. ಸ್ವಾರ್ಥದ ವೃತ ಒಂದು ವ್ಯಾಪಾರವಿದ್ದಂತೆ. ಅದರಲ್ಲಿ ಧರ್ಮದ ಯಾವ ಲಕ್ಷಣವೂ ಇಲ್ಲ, ಅದರಿಂದ ಯಾವ ಫಲವೂ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.