ADVERTISEMENT

ಬೆರಗಿನ ಬೆಳಕು: ದಾನದ ನಂತರ ಕಾಡಿಗೆ ಗಮನ

ಡಾ. ಗುರುರಾಜ ಕರಜಗಿ
Published 17 ಜೂನ್ 2021, 19:31 IST
Last Updated 17 ಜೂನ್ 2021, 19:31 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ದೂತನಿಗೆ ಹಾಗೆ ಹೇಳಿಬಿಟ್ಟು ವೆಸ್ಸಂತರ ತನ್ನ ಆಪ್ತ ಸೇವಕರನ್ನು ಕರೆದು ಕೆಲವು ಸಿದ್ಧತೆಗಳನ್ನು ಮಾಡುವಂತೆ ಸೂಚನೆ ಮಾಡಿ ಯಾವ ಚಿಂತೆಯೂ ಇಲ್ಲದೆ ನಿದ್ರೆ ಮಾಡಿದ. ಮರುದಿನ ನಾಗರಿಕರು ಬಂದಾಗ ಅವರಲ್ಲಿ ಒಂದು ವಿನಂತಿ ಮಾಡಿಕೊಂಡ, ‘ನನ್ನ ದಾನದಿಂದ ನಿಮಗೆ ಕೋಪ ಬಂದಿದೆ. ತಾವು ಅಪೇಕ್ಷಿಸಿದಂತೆ ನಾನು ದೇಶವನ್ನು ಬಿಟ್ಟು ಹೋರಟುಹೋಗುತ್ತೇನೆ. ತಮ್ಮಿಂದ ನನಗೆ ಮತ್ತೊಂದು ದಿನದ ಅವಕಾಶಬೇಕು. ಯಾಕೆಂದರೆ ದಾನ ನನ್ನ ಜೀವನ, ಸ್ವಭಾವ. ದಾನ ಮಾಡಲಾರದೆ ನಾನು ಹೋಗಲಾರೆ. ಇಂದು ನಾನು ಏಳುನೂರರ ದಾನ ಕೊಡುತ್ತೇನೆ. ಏಳನೂರು ಆನೆಗಳು, ಏಳನೂರು ಕುದುರೆಗಳು, ಏಳನೂರು ರಥಗಳು, ಏಳುನೂರು ಸುಂದರ ಸ್ತ್ರೀಯರು, ಏಳುನೂರು ಗೋವುಗಳು, ಏಳನೂರು ದಾಸಿಯರು ಮತ್ತು ಏಳನೂರು ದಾಸರನ್ನು ದಾನ ಮಾಡುತ್ತೇನೆ. ಅದರೊಂದಿಗೆ ನಾನಾ ತರಹದ ತಿಂಡಿ-ತೀರ್ಥಗಳನ್ನು ಹಂಚುತ್ತೇವೆ. ಆನಂತರ ನಾಳೆ ಬೆಳಿಗ್ಗೆ ಈ ದೇಶದಿಂದ ಹೊರಟುಹೋಗುತ್ತೇನೆ’.ಅವನ ಮಾತಿನಲ್ಲಿದ್ದ ಪ್ರಾಮಾಣಿಕತೆ, ಧೃಡತೆಯನ್ನು ಕಂಡು ನಾಗರಿಕರಾರೂ ಮಾತನಾಡಲಿಲ್ಲ.

ವೆಸ್ಸಂತರ ಎಲ್ಲವನ್ನೂ ದಾನಮಾಡಿ ಅರಮನೆಗೆ ಬಂದು ಹೆಂಡತಿಯಾದ ಮಾದ್ರಿಯೊಡನೆ ಮಾತನಾಡಿದ, ‘ಆರ್ಯೆ, ನಾನು ಕೊಟ್ಟ ಹಾಗೂ ನನ್ನ ಬಳಿಯಿರುವ ಧನ, ಧಾನ್ಯ, ಬಂಗಾರ, ಮಣಿಗಳು ಮತ್ತು ಪಿತ್ರಾರ್ಜಿತವಾಗಿ ಬಂದ ವಸ್ತುಗಳನ್ನು ನಿಧಿ ಮಾಡಿ ಇಟ್ಟುಬಿಡು’. ಆಕೆ ಆಶ್ಚರ್ಯದಿಂದ, ‘ಇದನ್ನೆಲ್ಲ ನಿಧಿ ಮಾಡಿ ಏನು ಮಾಡಲಿ? ಅದನ್ನೆಲ್ಲ ಎಲ್ಲಿಡಲಿ?’ ಎಂದು ಕೇಳಿದಳು. ಆಗ ವೆಸ್ಸಂತರ, ‘ಮಾದ್ರಿ, ಅವುಗಳನ್ನೆಲ್ಲ ಸದಾಚಾರಿಗಳಿಗೆ ದಾನ ಮಾಡಿಬಿಡು. ಅದಕ್ಕಿಂತ ದೊಡ್ಡ ನಿಧಿ ಬೇರೆ ಇಲ್ಲ’ ಎಂದ. ‘ಆಯ್ತು ಹಾಗೆಯೇ ಮಾಡುತ್ತೇನೆ’ ಎಂದು ಅವನ ಮಾತನ್ನು ಒಪ್ಪಿಕೊಂಡಳು. ಮತ್ತೆ ಉಪದೇಶ ಮಾಡುತ್ತ ಹೇಳಿದ, ‘ಮಾದ್ರಿ, ನೀನು ಅತ್ತೆ- ಮಾವಂದಿರನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಮಕ್ಕಳನ್ನು ಚೆನ್ನಾಗಿ ಬೆಳೆಸು. ನಮ್ಮ ತಂದೆ ಯಾರನ್ನಾದರೂ ರಾಜನನ್ನಾಗಿ ಮಾಡಿದರೆ ಅವನನ್ನು ವಿರೋಧಿಸಬೇಡ. ಅವನಿಗೆ ಸಹಕಾರವನ್ನು ನೀಡು. ನಾನಿಲ್ಲವೆಂದು ನೀನು ಮನಸ್ಸಿಗೆ ತೊಂದರೆ ಮಾಡಿಕೊಳ್ಳಬಾರದು’. ಆಕೆಗೆ ಗಾಬರಿಯಾಯಿತು. ಆಕೆಗೆ ವೆಸ್ಸಂತರ ಯಾಕೆ ಹೀಗೆ ಮಾತನಾಡುತ್ತಾನೆಂಬುದು ತಿಳಿಯಲಿಲ್ಲ. ‘ಯಾಕೆ ಸ್ವಾಮಿ, ಹೀಗೆ ಅನುಚಿತವಾದ ಮಾತುಗಳನ್ನಾಡುತ್ತಿದ್ದೀರಿ? ತಾವು ಎಲ್ಲಿಗೆ ಹೋಗುತ್ತಿದ್ದೀರಿ?’ ಎಂದು ಆತಂಕದಿಂದ ಕೇಳಿದಳು.

ನಡೆದದ್ದನ್ನೆಲ್ಲ ತಿಳಿಸಿ ತಾನು ಬೆಳಿಗ್ಗೆ ಸಿವಿದೇಶದಿಂದ ಹೊರಡುವುದಾಗಿ ವೆಸ್ಸಂತರ ಹೇಳಿದ. ಆಗ ಮಾದ್ರಿ ಅಳುತ್ತ ಹೇಳಿದಳು, ‘ನಾನು ನಿಮ್ಮನ್ನು ಬಿಟ್ಟು ಇರಲಾರೆ. ನೀವು ಯಾವ ಸ್ಥಳದಲ್ಲಿದ್ದರೂ, ಯಾವ ಸ್ಥಿತಿಯಲ್ಲಿದ್ದರೂ, ನಾನು ನಿಮ್ಮ ಜೊತೆಗೇ ಇರುತ್ತೇನೆ. ನಿಮ್ಮ ಜೊತೆಗೇ ಇದ್ದರೆ ನನಗೆ ರಾಜ್ಯದ, ಸಂಭ್ರಮದ ನೆನಪೇ ಬರುವುದಿಲ್ಲ. ಆದ್ದರಿಂದ ನಾನು ನನ್ನ ಇಬ್ಬರು ಮಕ್ಕಳನ್ನು ಕರೆದುಕೊಂಡು ನಿಮ್ಮ ಸಂಗಡ ಬಂದೇ ತೀರುತ್ತೇನೆ’. ಅವರ ಮಕ್ಕಳಾದ ಜಾಲಿಕುಮಾರ ಮತ್ತು ಕೃಷ್ಣಾಜಿನರಿಬ್ಬರೂ ಬಂದು ತಂದೆ-ತಾಯಿಯರ ಹತ್ತಿರ ಕುಳಿತರು. ಅಂತೂ ಅರಮನೆಯನ್ನು ಬಿಟ್ಟು ಘನವಾದ ಕಾಡಿಗೆ ಹೋಗಲು
ಸರ್ವಸಿದ್ಧತೆಗಳಾದವು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.