ADVERTISEMENT

ಸ್ವಕ್ಷೇತ್ರದ ಶಕ್ತಿ

ಡಾ. ಗುರುರಾಜ ಕರಜಗಿ
Published 12 ಮಾರ್ಚ್ 2019, 19:53 IST
Last Updated 12 ಮಾರ್ಚ್ 2019, 19:53 IST
   

ಹಿಂದೆ ಬ್ರಹ್ಮದತ್ತ ವಾರಾಣಸಿಯನ್ನು ಆಳುತ್ತಿದ್ದಾಗ ಬೋಧಿಸತ್ವ ಒಂದು ಪುಟ್ಟ ಬುರುಲಿ ಹಕ್ಕಿಯಾಗಿ ಹುಟ್ಟಿದ್ದ. ಅವನು ಒಂದು ಹೊಲದಲ್ಲಿ ನೇಗಿಲು ಉಳುವ ಜಾಗೆಯಲ್ಲಿದ್ದ ಒಂದು ಕಲ್ಲುಗುಡ್ಡೆಯ ನಡುವೆ ವಾಸವಾಗಿದ್ದ.

ಒಂದು ದಿನ ಬುರುಲಿ ಹಕ್ಕಿ ಸಂತೋಷವಾಗಿ ಹಾಡಿಕೊಂಡು ಹಾರಾಡುತ್ತಿತ್ತು. ಅದಕ್ಕೆ ಅಂದು ಯಾಕೋ ತುಂಬ ಹರ್ಷವಾಗಿ, ದಿನವೂ ಹಾರುವ ಸ್ಥಳದಲ್ಲೇ ಯಾಕೆ ಹಾರಾಡಬೇಕು, ಇಂದು ಸ್ವಲ್ಪ ದೂರ ಹೋಗುತ್ತೇನೆ ಎಂದು ಹಾರುತ್ತ ನಡೆಯಿತು. ಸಂತೋಷದಲ್ಲಿ ಅದಕ್ಕೆ ಎಷ್ಟು ದೂರ ಹಾರಿದೆ ಎನ್ನುವುದು ಗಮನಕ್ಕೇ ಬರಲಿಲ್ಲ.

ಎಷ್ಟೋ ಹೊತ್ತಿನ ಮೇಲೆ ನೋಡಿದರೆ ಅದು ದಟ್ಟವಾದ ಕಾಡಿನ ಪ್ರದೇಶಕ್ಕೆ ಬಂದು ಬಿಟ್ಟಿದೆ! ಈ ಹಕ್ಕಿಗೆ ಅದು ಸಂಪೂರ್ಣವಾಗಿ ಅರಿಯದ ಸ್ಥಳ. ಆಗ ಅದರ ಕಣ್ಣಿಗೊಂದು ಭಾರೀ ಗಿಡುಗ ಬಿತ್ತು. ಆ ಗಿಡುಗ ಇದನ್ನೇ ನೋಡುತ್ತಿದೆ. ಗಮನಿಸಿದರೆ ಅದು ಇದರ ಮೇಲೆ ಆಕ್ರಮಣ ಮಾಡುವಂತಿದೆ. ಗಿಡುಗ ದಾಳಿ ಮಾಡಿದರೆ ಈ ಹಕ್ಕಿ ಉಳಿದೀತೇ? ತಾನು ಸತ್ತು ಹೋಗುತ್ತೇನೆ ಎಂಬ ಗಾಬರಿಯಿಂದ ಬುರುಲಿ ಹಕ್ಕಿ ಜೋರಾಗಿ ಅಳತೊಡಗಿತು.

ADVERTISEMENT

“ನಾನು ಬಹುದೊಡ್ಡ ತಪ್ಪು ಮಾಡಿಬಿಟ್ಟೆ. ನಾನು ನನ್ನ ಕ್ಷೇತ್ರ ಬಿಟ್ಟು ಪರಕೀಯ ಕ್ಷೇತ್ರಕ್ಕೆ ಬರಬಾರದಿತ್ತು. ನನ್ನ ಕ್ಷೇತ್ರದಲ್ಲೇ ಇದ್ದಿದ್ದರೆ ನಾನು ಯಾರನ್ನಾದರೂ ಎದುರಿಸಬಹುದು. ಈ ಪರದೇಶದಲ್ಲಿ ಗಿಡುಗ ನನ್ನನ್ನು ಹೊಡೆಯಲು ನೋಡುತ್ತಿದೆ. ಏನು ಮಾಡಲಿ”? ಎಂದಿತು. ಇದರ ಮಾತನ್ನು ಕೇಳಿಸಿಕೊಂಡ ಗಿಡುಗ, “ಏ ಮೂರ್ಖ ಬುರುಲಿ, ಏನು ಬಡಬಡಿಸುತ್ತಿದ್ದೀ? ನೀನು ಈ ಪ್ರದೇಶದಲ್ಲಿ ಮಾತ್ರವಲ್ಲ, ಯಾವ ಪ್ರದೇಶದಲ್ಲಿ ಸಿಕ್ಕರೂ ಒಂದೇ ಹೊಡೆತಕ್ಕೆ ಮುಗಿಸಿಬಿಡುತ್ತೇನೆ. ನನಗೆ ಸ್ಥಳ ಮುಖ್ಯವಲ್ಲ. ನೀನು ಇರುವುದು ಎಲ್ಲಿ?” ಎಂದು ಕೇಳಿತು.

“ಹತ್ತಿರದ ಹೊಲದಲ್ಲಿ ನೇಗಿಲು ಉಳುವ ಸ್ಥಳದಲ್ಲಿ ಕಲ್ಲುಗುಡ್ಡೆಯ ನಡುವೆ” ಎಂದಿತು ಬುರುಲಿ ಬಿಕ್ಕುತ್ತ. “ಆಯ್ತು, ನೀನು ನಿನ್ನ ಮನೆಗೆ ಹೊರಡು. ನಾನು ಅಲ್ಲಿಗೇ ಬಂದು ನಿನ್ನನ್ನು ಹೊಡೆಯುತ್ತೇನೆ. ಹೇಗೆ ಪಾರಾಗುತ್ತೀಯೋ ನೋಡೋಣ” ಎಂದು ಅದನ್ನು ಹಾರಲು ಬಿಟ್ಟಿತು ಗಿಡುಗ.

ಬುರುಲಿ ಹಕ್ಕಿ ಹಾರಿ ಬಂದು ದೊಡ್ಡ ಕಲ್ಲು ಗುಡ್ಡೆಯ ಮೇಲೆ ಕುಳಿತಿತು. “ಗಿಡುಗ ಈಗ ಬಾ, ನನ್ನನ್ನು ಹೊಡೆ” ಎಂದು ಕೂಗಿತು. ಮೊದಲೇ ಕೋಪಗೊಂಡಿದ್ದ ಗಿಡುಗ ಇದರ ಆಹ್ವಾನವನ್ನು ಕೇಳಿ ಮತ್ತಷ್ಟು ವ್ಯಗ್ರವಾಗಿ, ಭರದಿಂದ ನುಗ್ಗಿ ಬಂದು, ಶಕ್ತಿಯನ್ನೆಲ್ಲ ಒಗ್ಗೂಡಿಸಿ, ಎರಡೂ ರೆಕ್ಕೆಗಳನ್ನೆತ್ತಿ ಕಲ್ಲುಬಂಡೆಯ ಮೇಲೆ ಕುಳಿತಿದ್ದ ಬುರುಲಿ ಹಕ್ಕಿಗೆ ಅಪ್ಪಳಿಸಿತು. ಬುದ್ಧಿವಂತ ಬುರುಲಿ ಗಿಡುಗ ಹತ್ತಿರ ಬರುತ್ತಿದ್ದಂತೆ ಕಲ್ಲುಗುಡ್ಡೆಯ ಒಳಗೆ ಸೇರಿಕೊಂಡಿತು. ಗಿಡುಗಕ್ಕೆ ತನ್ನ ವೇಗವನ್ನು ನಿಯಂತ್ರಿಸಲಾಗದೆ ಕಲ್ಲಿಗೆ ಹೊಡೆದು ಬಿತ್ತು. ಅದರ ಎದೆ ಒಡೆದು ಚೂರಾಯಿತು. ಕಣ್ಣುಗಳು ಹೊರಕ್ಕೆ ಬಂದು ಕ್ಷಣದಲ್ಲೇ ಸತ್ತು ಹೋಯಿತು.

ನಮ್ಮ ನಮ್ಮ ಕ್ಷೇತ್ರಗಳಲ್ಲಿ ನಾವು ಬಲಶಾಲಿಗಳೇ. ಆದರೆ ಅದು ಎಲ್ಲ ಕ್ಷೇತ್ರಗಳಲ್ಲೂ ಹಾಗೆಯೇ ಆಗುತ್ತದೆಂದು ಹೋರುವುದು ಕಷ್ಟ. ಸಾಹಿತ್ಯದಲ್ಲಿ ಪಾಂಡಿತ್ಯವಿದೆಯೆಂದು ಹೋಟೆಲ್ಲು ನಡೆಸಹೋದರೆ ಮನೆ ಮಾರಿಕೊಳ್ಳಬೇಕಾಗುತ್ತದೆ. ಅಂದರೆ ನಮಗೆ ಯಾವ ಕ್ಷೇತ್ರದಲ್ಲಿ ಪರಿಣತಿ ಇದೆಯೋ ಅದರಲ್ಲೇ ಮುಂದುವರೆದರೆ ಕ್ಷೇಮ. ಹಾಗೆಂದರೆ ಬೇರೆ ಕ್ಷೇತ್ರಗಳಲ್ಲಿ ಪ್ರಯತ್ನಿಸಬಾರದೆಂದಲ್ಲ. ಮೊದಲು ಅದರಲ್ಲಿ ಪರಿಣತಿಯನ್ನು ಪಡೆದು ಪ್ರವೇಶಿಸುವುದು ಸೂಕ್ತ. ಅರಿವಿಲ್ಲದ ಕ್ಷೇತ್ರದಲ್ಲಿ ಕೈ ಹಾಕುವುದು ಬುರುಲಿ ಹಕ್ಕಿಯ ಸ್ಥಿತಿಯಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.