ADVERTISEMENT

ಮಲಿನವಾದ ಮನಸ್ಸು

ಡಾ. ಗುರುರಾಜ ಕರಜಗಿ
Published 21 ಫೆಬ್ರುವರಿ 2019, 20:06 IST
Last Updated 21 ಫೆಬ್ರುವರಿ 2019, 20:06 IST
   

ಹಿಂದೆ ಬ್ರಹ್ಮದತ್ತ ರಾಜ್ಯಭಾರ ಮಾಡುತ್ತಿದ್ದಾಗ ಬೋಧಿಸತ್ವ ಒಂದು ಅತ್ಯದ್ಭುತವಾದ ನವಿಲಾಗಿ ಹುಟ್ಟಿದ. ಅವನಿಗೆ ಸುವರ್ಣದ ಬಣ್ಣ, ನಡುನಡುವೆ ಕೆಂಪುಗೆರೆಗಳು ಕಂಗೊಳಿಸುತ್ತಿದ್ದವು. ತನ್ನನ್ನು ಜನ ಕಂಡರೆ ಹಿಡಿದು ಕೊಂದುಹಾಕುತ್ತಾರೆಂಬುದು ನವಿಲಿಗೆ ತಿಳಿದಿದ್ದರಿಂದ ಅದು ಜನವಸತಿಯನ್ನು ತೊರೆದು ಮೂರು ಪರ್ವತ ಶ್ರೇಣಿಗಳನ್ನು ದಾಟಿ ನಾಲ್ಕನೆಯ ಪರ್ವತದ ಶಿಖರಗಳಲ್ಲಿ ದಂಡಕ-ಹಿರಣ್ಯ ಪರ್ವತದ ಕೆಳಗೆ ನೆಲೆಸಿತ್ತು. ತನ್ನ ರಕ್ಷೆಗಾಗಿ ಭಗವಂತನ ಪ್ರಾರ್ಥನೆ ಮಾಡುತ್ತ ಆದಷ್ಟು ಹೊರಗೆ ಕಾಣಿಸಿಕೊಳ್ಳದೆ ಇರುತ್ತಿತ್ತು.

ವಾರಾಣಸಿಯ ರಾಜನ ಹೆಂಡತಿ ಖೇಮಾದೇವಿಗೆ ಸುವರ್ಣಬಣ್ಣದ, ಕೆಂಪುರೇಖೆಗಳಿದ್ದ ನವಿಲೊಂದು ಧರ್ಮೋಪದೇಶ ಮಾಡುತ್ತಿದ್ದಂತೆ ಕನಸು ಬಿದ್ದಿತು. ಆಕೆ ರಾಜನಿಗೆ ಅಂತಹ ನವಿಲನ್ನು ತಂದುಕೊಡಲು ಕೇಳಿಕೊಂಡಳು. ರಾಜ ಸಾವಿರಾರು ಬೇಡರನ್ನು ಕಳುಹಿಸಿ ಅದನ್ನು ಹುಡುಕಿಸಿದ. ಒಬ್ಬ ಬೇಡರವನು ನೆಲದ ಮೇಲೆ ಬಲೆಯನ್ನು ಹಾಸಿ ಹಿಡಿಯಲು ನೋಡಿದ. ಅದು ಅತ್ಯಂತ ಪರಿಶುದ್ಧವಾದ ನವಿಲಾದ್ದರಿಂದ ಬಲೆಯ ಮೇಲೆ ನಡೆದಾಡಿದರೂ ಅದನ್ನು ಹಿಡಿಯಲಾಗಲಿಲ್ಲ. ಅವನು ಏಳು ವರ್ಷ ಪ್ರಯತ್ನಮಾಡಿ ಸಫಲನಾಗದೆ ಸತ್ತು ಹೋದ. ಇತ್ತ ಖೇಮಾದೇವಿಯೂ ತೀರಿಹೋದಳು.

ತನ್ನ ಹೆಂಡತಿಯ ಆಸೆ ಪೂರೈಸದಿದ್ದುದಕ್ಕೆ ಕೋಪದಿಂದ ರಾಜ ಶಾಸನ ಮಾಡಿದ. ದಂಡಕ-ಹಿರಣ್ಯಪ್ರದೇಶದಲ್ಲಿರುವ ಬಂಗಾರ ಬಣ್ಣದ ನವಿಲನ್ನು ತಿಂದವರು ಅಮರರಾಗುತ್ತಾರೆ ಎಂದು ಡಂಗುರ ಹೊಡೆಸಿದ. ಮತ್ತೆ ಅನೇಕ ಜನ ಪ್ರಯತ್ನಿಸಿ ಸೋತರು. ಈ ರಾಜನ ಕಾಲವಾದ ನಂತರ ಪಟ್ಟಕ್ಕೆ ಬಂದ ರಾಜನೂ ಅಮರನಾಗುವ ಆಸೆಯಿಂದ ಬೇಡರಿಗೆ ನವಿಲನ್ನು ಹಿಡಿದು ತರುವಂತೆ ಆಜ್ಞೆ ಮಾಡಿದ. ಆ ಬೇಡನೂ ಏಳು ವರ್ಷ ಪ್ರಯತ್ನಿಸಿ ವಿಫಲನಾಗಿ ಸತ್ತು ಹೋದ. ಇತ್ತ ರಾಜನೂ ಕಾಲವಾದ.

ADVERTISEMENT

ಹೀಗೆ ಆರು ತಲೆಮಾರುಗಳು ಕಳೆದು ಹೋದವು. ಏಳನೆಯ ರಾಜ ಒಬ್ಬ ಬುದ್ಧಿವಂತನಾದ ಬೇಡನನ್ನು ಕರೆದು ನವಿಲನ್ನು ಹಿಡಿದು ತರಲೇಬೇಕೆಂದು ಆಜ್ಞೆ ಮಾಡಿದ. ಆ ಬೇಡ ಒಂದು ಹೆಣ್ಣು ನವಿಲನ್ನು ಹಿಡಿದು ಸಾಕಿದ. ಅದಕ್ಕೆ ಚಪ್ಪಾಳೆ ತಟ್ಟಿದಾಗ ನರ್ತಿಸುವಂತೆ, ಚಿಟಿಕೆ ಹೊಡೆದಾಗ ಕಾಮೋದ್ರೇಕದ ನಾದ ಹೊರಡಿಸುವಂತೆ ತರಬೇತಿ ನೀಡಿದ. ನಂತರ ಅರಣ್ಯಪ್ರದೇಶದಲ್ಲಿ ಬಲೆಯನ್ನು ಹಾಸಿ, ಈ ಹೆಣ್ಣು ನವಿಲನ್ನು ಅಲ್ಲಿ ತಿರುಗಾಡುವಂತೆ ಮಾಡಿದ. ನಂತರ ಚಪ್ಪಾಳೆ ತಟ್ಟಿದಾಗ ಅದು ಕುಣಿಯತೊಡಗಿತು, ಚಿಟಿಕೆ ಹೊಡೆದಾಗ ಕಾಮೋದ್ರೇಕದ ನಾದ ಹೊರಡಿಸಿತು. ಬಂಗಾರ ಬಣ್ಣದ ನವಿಲಿಗೆ ಇದು ಮೊದಲನೆಯ ಅನುಭವ. ಹೆಣ್ಣು ನವಿಲಿನ ಧ್ವನಿ ಕೇಳಿ ಅದಕ್ಕೆ ಕಾಮಪ್ರಚೋದನೆಯಾಯಿತು. ಅದರ ಮನಸ್ಸು ಕುಲಷಿತವಾದ್ದರಿಂದ ಅದರ ದೈವತ್ವ ಕರಗಿ ಹೋಗಿ ಬಲೆಯಲ್ಲಿ ಸಿಲುಕಿಕೊಂಡಿತು. ಬೇಡ ಅದನ್ನು ಹಿಡಿದು ರಾಜನ ಬಳಿಗೆ ತಂದ.

“ನನ್ನನ್ನು ಯಾಕೆ ಕೊಲ್ಲಬಯಸುತ್ತೀ?” ಎಂದು ರಾಜನನ್ನು ಕೇಳಿತು ನವಿಲು.

“ನಿನ್ನ ಮಾಂಸವನ್ನು ತಿಂದರೆ ನಾನು ಅಮರನಾಗುತ್ತೇನೆ. ಆದ್ದರಿಂದ ನಿನ್ನನ್ನು ಕೊಲ್ಲಲೇಬೇಕು” ಎಂದ ರಾಜ. ನವಿಲು ಜೋರಾಗಿ ನಕ್ಕಿತು, “ಹುಚ್ಚಾ, ನಾನೇ ಸಾಯುವುದಾದರೆ, ನನ್ನ ಮಾಂಸ ನಿನಗೆ ಹೇಗೆ ಅಮರತ್ವವನ್ನು ಕೊಟ್ಟೀತು?. ಅದೆಲ್ಲ ಕಥೆ. ನಾವು ನಮ್ಮ ಕರ್ಮಕ್ಕನುಸಾರವಾಗಿ ಬದುಕುತ್ತೇವೆ, ಒಂದು ದಿನ ಸಾಯುತ್ತೇವೆ. ಇಷ್ಟು ಶತಮಾನಗಳ ತನಕ ಯಾವ ಬಲೆಗೂ ಸಿಲುಕದ ನಾನು, ನನ್ನ ಮನಸ್ಸನ್ನು ಕಾಮದೆಡೆಗೆ ತಿರುಗಿಸಿ ದೈವತ್ವವನ್ನು ಕಳೆದುಕೊಂಡೆ. ನಾನೂ ಹಿಂದೆ ಚಕ್ರವರ್ತಿಯಾಗಿದ್ದೆ. ಯಾವುದೋ ಪಾಪ ಮಾಡಿದ ತಪ್ಪಿಗೆ ನವಿಲಾಗಿ ಹುಟ್ಟಿದೆ. ಹಿಂದಿನ ಪುಣ್ಯ ಕರ್ಮಗಳಿಂದ ದೈವತ್ವ ಬಂದಿತ್ತು. ನೀನೂ ಹಾಗೆಯೇ ಪಾಪಕರ್ಮಗಳನ್ನು ಮಾಡದೆ ಬದುಕು ಸಾಗಿಸಿ ಮುಕ್ತಿ ಪಡೆ” ಎಂದು ಬೋಧಿಸಿ ಅಲ್ಲಿಂದ ಹಾರಿ ಮತ್ತೆ ಕಾಡಿಗೆ ಹೋಯಿತು.

ಎಲ್ಲಿಯವರೆಗೂ ನಮ್ಮ ನಡೆ, ಮನಸ್ಸು ಶುದ್ಧವಾಗಿರುತ್ತವೆಯೋ ಅಲ್ಲಿಯವರೆಗೂ ನಮಗೆ ಭದ್ರತೆ, ಆಶ್ರಯ ದೊರೆಯುತ್ತದೆ. ಅವುಗಳನ್ನು ಕಳೆದುಕೊಂಡಾಗ ಯಾವ ರಕ್ಷಣೆಯೂ ನಮ್ಮನ್ನು ಕಾಪಾಡಲಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.