ADVERTISEMENT

ಚೈತನ್ಯದ ವಸತಿ ಜಡ

ಡಾ. ಗುರುರಾಜ ಕರಜಗಿ
Published 20 ಮಾರ್ಚ್ 2019, 18:59 IST
Last Updated 20 ಮಾರ್ಚ್ 2019, 18:59 IST
   

ಜಡವೇನು? ಜೀವವೇಂ? ಚೈತನ್ಯ ನಿದ್ರಿಸಿರು |
ವೆಡೆಯೆಲ್ಲ ಜಡಲೋಕ ಕಲ್ಲು ಕಡ್ಡಿ ಕಸ ||
ಅಡಗಿರ್ಪ ಚೈತನ್ಯವೆಚ್ಚರಲು ಜಂತು ಜಗ |
ಜಡವೆ ಜೀವದ ವಸತಿ – ಮಂಕುತಿಮ್ಮ || 108 ||

ಪದ-ಅರ್ಥ: ನಿದ್ರಿಸಿರುವೆಡೆಯೆಲ್ಲ=ನಿದ್ರಿಸಿರುವ+ಎಡೆಯೆಲ್ಲ, ಚೈತನ್ಯವೆಚ್ಚರಲು= ಚೈತನ್ಯ+ಎಚ್ಚರಲು(ಎಚ್ಚರಾದಾಗ), ವಸತಿ= ವಾಸಸ್ಥಾನ.

ವಾಚ್ಯಾರ್ಥ: ಯಾವುದು ಜಡ? ಯಾವುದು ಜೀವ? ಎಲ್ಲಿ ಚೈತನ್ಯ ನಿದ್ರಿಸುತ್ತಿದೆಯೋ ಅದೆಲ್ಲವೂ ಜಡ. ಅದು ಕಲ್ಲು, ಕಡ್ಡಿ, ಕಸ ಇದ್ದ ಹಾಗೆ. ಅದರೊಳಗೆ ಅಡಗಿದ್ದ ಚೈತನ್ಯ ಎದ್ದೊಡನೆ ಜಡ ಜೀವವಾಗುತ್ತದೆ. ಹೀಗೆ ಜೀವಕ್ಕೆ ಜಡವೇ ವಸತಿ.

ವಿವರಣೆ: ಜಡ ಎಂದರೇನು? ಜೀವವೆಂದರೇನು? ಯಾವಾಗ ಜೀವ ಜಡವಾಗುತ್ತದೆ? ಯಾವಾಗ ಜಡ ಜೀವಂತವಾಗುತ್ತದೆ? ಈ ಪ್ರಶ್ನೆಗಳಿಗೆ ಉತ್ತರಗಳನ್ನು ನಾವು ನಮ್ಮ ಬದುಕಿನಲ್ಲೇ ಕಂಡಿದ್ದೇವೆ. ಅತ್ಮೀಯರೊಬ್ಬರಿದ್ದಾರೆ, ಅವರಿಗೊಂದು ಹೆಸರು ವಿಶಾಲ ಎಂದಿಟ್ಟುಕೊಳ್ಳೋಣ. ಅವರಿಗೆ ಆರೋಗ್ಯ ಕೆಟ್ಟಿತು. ಅವರು ಆಸ್ಪತ್ರೆಯಲ್ಲಿದ್ದಾರೆ ಎನ್ನುತ್ತೇವೆ. ಅವರೀಗ ತುಂಬ ಆತಂಕದ ಸ್ಥಿತಿಯಲ್ಲಿದ್ದಾರೆ ಎಂದು ವರದಿ ಬಂದಿತು. ಮರುದಿನ ಅವರು ಕಾಲವಾದರು ಎಂಬ ಸುದ್ದಿ ಬಂತು. ಆಗ ಯಾರೂ ವಿಶಾಲರನ್ನು ಮನೆಗೆ ಕರೆತರುತ್ತಿದ್ದಾರೆ ಎನ್ನುವುದಿಲ್ಲ. ವಿಶಾಲರ ದೇಹವನ್ನು ತರುತ್ತಾರೆ ಎನ್ನುತ್ತಾರೆ. ಅದು ವಿಶಾಲರ ದೇಹ, ವಿಶಾಲ ಅಲ್ಲ. ಆ ದೇಹಕ್ಕೆ ಯಾವ ಚಲನವಲನವೂ ಇಲ್ಲ. ತಾನು ಎಲ್ಲಿದ್ದೇನೆ ಎಂಬುದರ ಅರಿವಿಲ್ಲ. ಯಾವ ವಸ್ತುವಿಗೆ ತನ್ನ ಇರುವಿಕೆಯ ಅರಿವು, ಜ್ಞಾನ ಇಲ್ಲವೋ, ಅದು ಜಡ. ನನ್ನ ಮುಂದೆ ಒಂದು ಮೇಜು ಇದೆ. ಅದಕ್ಕೆ ತನ್ನ ಹೆಸರು ಮೇಜು ಎನ್ನುವುದು ಗೊತ್ತಿಲ್ಲ. ಅದನ್ನು ಎಲ್ಲಿಟ್ಟರೆ ಅಲ್ಲಿ ಇರುತ್ತದೆ. ಆದ್ದರಿಂದ ಅದು ಜಡ. ದಯವಿಟ್ಟು ಗಮನಿಸಿ. ಒಂದು ಕ್ಷಣದ ಹಿಂದೆ ವಿಶಾಲ ಆಗಿದ್ದವರು ಮರುಕ್ಷಣದಲ್ಲಿ ವಿಶಾಲರ ದೇಹವಾಯಿತಲ್ಲ, ಜಡವಾಯಿತಲ್ಲ, ಹಾಗಾದರೆ ವಿಶಾಲ ಎಲ್ಲಿಗೆ ಹೋದರು? ಈ ದೇಹವನ್ನೇ ಇಷ್ಟು ವರ್ಷ ವಿಶಾಲ ಎಂದು ಭಾವಿಸಿದ್ದೆವಲ್ಲ, ಅದು ಇನ್ನೂ ಅಲ್ಲಿಯೇ ಇದೆ. ಆದರೆ ಅದು ವಿಶಾಲ ಅಲ್ಲ. ಅಂದರೆ ಯಾವ ಚೈತನ್ಯದಿಂದ ಆ ವ್ಯಕ್ತಿ ವಿಶಾಲ ಆಗಿದ್ದರೋ, ಆ ಚೈತನ್ಯ ಹೊರಗೆ ಹೋದಕ್ಷಣ ಅದು ಜಡವಾಯಿತು. ಅದನ್ನೇ ಕಗ್ಗ ಹೇಳುತ್ತದೆ, ಎಲ್ಲೆಲ್ಲಿ ಚೈತನ್ಯ ಸುಪ್ತವಾಗಿದೆಯೋ, ನಿಶ್ಚಲವಾಗಿದೆಯೋ ಅದೆಲ್ಲ ಕಲ್ಲು, ಕಡ್ಡಿ, ಕಸ ಇದ್ದ ಹಾಗೆ, ಬರೀ ಜಡ.

ADVERTISEMENT

ಇನ್ನೊಂದನ್ನೂ ನಾವು ಕಂಡಿದ್ದೇವೆ. ಜನವರಿ, ಫೆಬ್ರುವರಿ ತಿಂಗಳುಗಳಲ್ಲಿ ನೀವು ಪ್ರವಾಸ ಹೋದರೆ ಇಕ್ಕೆಲಗಳಲ್ಲಿ ಒಣಗಿದ ಮರಗಳು ದೂಳು ತುಂಬಿದ ನೆಲ ಕಾಣುತ್ತದೆ. ಆದರೆ ಮಾರ್ಚ್‌ ತಿಂಗಳಲ್ಲಿ ಒಂದು ಮಳೆಯಾಯಿತೋ, ಎಲ್ಲೆಲ್ಲಿಯೂ ನೆಲದಲ್ಲಿ ಹಸಿರೊಡೆದು ಹುಲ್ಲು ತಲೆ ಎತ್ತುತ್ತದೆ. ಎಲ್ಲಿತ್ತು ಈ ಹಸಿರು ಮೊದಲು? ಅದು ಸುಪ್ತವಾಗಿ, ಜಡವಾಗಿ, ಬೀಜರೂಪದಲ್ಲಿ ನೆಲದಲ್ಲಿ ಕುಳಿತಿತ್ತು. ಒಂದು ಬಾರಿ ಅದಕ್ಕೆ ಜೀವಜಲ ದೊರಕಿತೋ, ಚೈತನ್ಯ ಉಕ್ಕಿ ಹೊರಗೆ ನೆಗೆದು ನಿಂತು ತನ್ನ ಜೀವಂತಿಕೆಯನ್ನು ತೋರಿಸಿತು. ಇದೇ ರೀತಿ ಮನೆಯ ಚೀಲಗಳಲ್ಲಿ ಕುಳಿತಿದ್ದ ಬೀಜಗಳು ಜಡವೇ. ಅವುಗಳ ಚೈತನ್ಯ ಅಡಗಿ ಕುಳಿತಿದೆ. ಆ ಬೀಜ ನೆಲದಲ್ಲಿ ಬಿದ್ದು ಪೋಷಕಾಂಶ ದೊರೆತೊಡನೆ ಚೈತನ್ಯ ಚಿಮ್ಮಿ ತೆನೆತೆನೆಯಾಗಿ ತನ್ನನ್ನು ನೂರ್ಮಡಿ ಹೆಚ್ಚಿಸಿಕೊಳ್ಳುತ್ತದೆ, ಜೀವಂತಿಕೆಯನ್ನು ಮೆರೆಯುತ್ತದೆ. ಹೀಗೆ ಜಡಕ್ಕೆ ಚೈತನ್ಯದ ಸಂಪರ್ಕ ಬಂದೊಡನೆ ಜೀವವಾಗುತ್ತದೆ.

ಇನ್ನೊಂದು ವಿಶಿಷ್ಠತೆಯೆಂದರೆ ಜೀವ ನಿಲ್ಲುವುದು ಜಡದಲ್ಲಿಯೇ. ಚೈತನ್ಯ ತನ್ನಷ್ಟಕ್ಕೆ ತಾನೇ ಇರಲಾರದು. ಅದರ ಗುಣಪ್ರದರ್ಶನಕ್ಕೆ ಒಂದು ಜಡವಸ್ತು ಬೇಕು. ಹೇಗೆ ಆತ್ಮಕ್ಕೊಂದು ದೇಹ ಬೇಕೋ, ಜೀವಚೈತನ್ಯಕ್ಕೆ ಜಡವಾದ ಬೀಜ ಬೇಕೋ, ಹಾಗೆಯೇ ಚೈತನ್ಯದ ಇರುವಿಕೆಗೆ ಒಂದು ಜಡ ಬೇಕೇ ಬೇಕು. ಜೀವಂತ ದೇಹಗಳು ಇರುವುದಕ್ಕೆ, ವಸತಿಗೆ, ನಿರ್ಜೀವ ವಸ್ತುಗಳಿಂದಾದ ಜಡವಾದ ಮನೆ ಬೇಕು. ಅದನ್ನೇ ಕಗ್ಗ ಸುಂದರವಾಗಿ ಜಡವೆ ಜೀವದ ವಸತಿ ಎನ್ನುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.