ADVERTISEMENT

ಎಲ್ಲವೂ ಪರಸತ್ವದ ರೂಪಗಳೇ

ಡಾ. ಗುರುರಾಜ ಕರಜಗಿ
Published 8 ಏಪ್ರಿಲ್ 2019, 20:00 IST
Last Updated 8 ಏಪ್ರಿಲ್ 2019, 20:00 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಪರಮಾಣುವಿಂ ಪ್ರಪಂಚಗಳ ಸಂಯೋಜಿಪುದು |
ಮರೆಯಿಂದ ಸೃಷ್ಟಿಯಂತ್ರವ ಚಾಲಿಸುವುದು ||
ಚರಲೀಲೆಯಲಿ ಜೀವವೆನಿಪ ಚೈತನ್ಯವದು |
ಪರಸತ್ತ್ವ ಶಕ್ತಿಯೆಲೊ – ಮಂಕುತಿಮ್ಮ ||

ಪದ-ಅರ್ಥ: ಸಂಯೋಜಿಪುದು=ರಚಿಸುವುದು, ಕಟ್ಟುವುದು, ಚಾಲಿಸುವುದು=ನಡೆಯಿಸುವುದು, ಚರಲೀಲೆಯಲಿ=ಸದಾ ಬದಲಾಗುವ ವಿಶ್ವಲೀಲೆಯಲ್ಲಿ

ವಾಚ್ಯಾರ್ಥ: ಪರಮಾಣುಗಳಿಂದ ಪ್ರಪಂಚಗಳನ್ನು ಸೃಷ್ಟಿಸುವುದು, ತಾನು ಮರೆಯಲ್ಲೇ ಇದ್ದು ಸೃಷ್ಟಿಯ ಯಂತ್ರವನ್ನು ನಡೆಯಿಸುವುದು, ಸದಾ ಬದಲಾಗುವ ಈ ವಿಶ್ವದಲ್ಲಿ ಜೀವ ಎನ್ನಿಸುವ ಚೈತನ್ಯವೇ ಪರಸತ್ವ ಶಕ್ತಿ.

ADVERTISEMENT

ವಿವರಣೆ: ಈ ಪ್ರಪಂಚ ಹುಟ್ಟಿದ್ದು ಹೇಗೆ ? ಅದಕ್ಕೆ ಅನೇಕ ಸಿದ್ಧಾಂತಗಳಿವೆ. ವಿಜ್ಞಾನಿಗಳ ಪ್ರಕಾರ ಮೊದಲು ಅದು ಒಂದು ಅಗ್ನಿಗೋಳವಾಗಿತ್ತು. ಜಲಜನಕ ಮಾತ್ರ ಧಗಧಗನೆ ಉರಿಯುತ್ತಿತ್ತು. ನಂತರ ಅದು ತಣ್ಣಗಾಗುತ್ತ ಬಂದಿತು, ದ್ರವರೂಪವಾಯಿತು. ಕೊನೆಗೆ ಘನವಾಗಿ ನೆಲೆ ನಿಂತಿತು. ಮೊದಲು ಕೇವಲ ಜಲಜನಕದ ಪರಮಾಣುಗಳೇ ಇದ್ದದ್ದು ಪರಸ್ಪರ ಘರ್ಷಣೆಯಲ್ಲಿ ಸಂಯೋಗ ಹೊಂದಿ ಬೇರೆ ಸಂಯುಕ್ತಗಳಾದವು. ಸಂಯುಕ್ತಗಳು ಮತ್ತಷ್ಟು ಸಂಯುಕ್ತಗಳೊಡನೆ ಬೆರೆತು ಕ್ಲಿಷ್ಟ ಸಂಯುಕ್ತಗಳಾದವು. ಅವುಗಳಿಂದ ಬೇರೆ ಬೇರೆ ವಸ್ತುಗಳಾದವು. ಹಾಗೆ ನೋಡಿದರೆ ಇಂದು ಪ್ರಪಂಚದಲ್ಲಿರುವ ಎಲ್ಲ ವಸ್ತುಗಳೂ ಬೇರೆ ಬೇರೆ ಮೂಲವಸ್ತುಗಳ ಪರಮಾಣುಗಳ ಸಂಯೋಜನೆಗಳಿಂದ ಆದವುಗಳು. ಈ ಸಂಯೋಜನೆಗಳೇ ನಮ್ಮ ಪೃಥ್ವಿಯನ್ನು ಮಾತ್ರವಲ್ಲ, ಇಡೀ ಸೃಷ್ಟಿಯಲ್ಲಿರುವ ಸಕಲ ಗ್ರಹ, ನಕ್ಷತ್ರ ಮುಂತಾದವುಗಳನ್ನು ರಚಿಸಿದ್ದು.

ವಿಮಾನ ನಿಲ್ದಾಣದಲ್ಲಿ ಅನೇಕ ವಿಮಾನಗಳು ಗಗನಕ್ಕೇರುತ್ತವೆ, ಅನೇಕ ವಿಮಾನಗಳು ಧರೆಗಿಳಿಯುತ್ತವೆ. ಅವು ಹೇಗೆ ಒಂದನ್ನೊಂದು ಸ್ಪರ್ಶಿಸದೇ ಹಾರುತ್ತವೆ? ಅವುಗಳನ್ನು ನಿಯಂತ್ರಿಸುವ ಒಂದು ವ್ಯವಸ್ಥೆ ಇದೆ. ಅದು ಕಣ್ಣಿಗೆ ಕಾಣುತ್ತದೆ. ಅದೇ ರೀತಿ ಪ್ರಪಂಚದಲ್ಲಿರುವ ಎಲ್ಲ ವ್ಯವಹಾರಗಳ ಸುವ್ಯವಸ್ಥಿತ ನಡೆಗೆ ಒಂದು ನಿಯಂತ್ರಿಸುವ ಶಕ್ತಿ ಇದ್ದೇ ಇರುತ್ತದೆ. ಪ್ರಪಂಚದಲ್ಲಿ ಗ್ರಹಗಳು ನಿಯಮಿತವಾಗಿ ಚಲಿಸುತ್ತಿವೆ. ಒಂದಕ್ಕೊಂದು ಡಿಕ್ಕಿ ಹೊಡೆದಿಲ್ಲ, ಸರಿಯಾದ ಸಮಯಕ್ಕೆ ಬೆಳಗಾಗುತ್ತದೆ, ರಾತ್ರಿಯಾಗುತ್ತದೆ. ಸಮುದ್ರ ತನ್ನ ಮೇರೆಯನ್ನು ಮೀರಿಲ್ಲ. ಹಾಗಾದರೆ ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿರುವ ಈ ಸೃಷ್ಟಿಯಂತ್ರವನ್ನು ಚಾಲಿಸುವ, ನಿಯಂತ್ರಿಸುವ ಶಕ್ತಿಯೊಂದಿರಬೇಕಲ್ಲವೇ?

ಅದಲ್ಲದೆ ನಾವು ಕಾಣುವ, ಅನುಭವಿಸುವ, ಸದಾಕಾಲ ಬದಲಾಗುವ ಈ ವಿಶ್ವದಲ್ಲಿ ಅದೆಷ್ಟು ಜೀವಗಳು? ಒಂದರ ಹಾಗೆ ಮತ್ತೊಂದಿಲ್ಲ. ಪ್ರತಿಯೊಂದು ಜೀವವೂ ಚೈತನ್ಯದ ಬುಗ್ಗೆ.

ಕಗ್ಗ ಹೇಳುತ್ತದೆ, ಪರಮಾಣುಗಳಿಂದ ಪ್ರಪಂಚವನ್ನು ಸಂಯೋಜಿಸುವ, ಕಣ್ಣಿಗೆ ಕಾಣದೆ ಮರೆಯಲ್ಲಿದ್ದೆ ಇಡೀ ಸೃಷ್ಟಿಯಂತ್ರವನ್ನು ನಡೆಯಿಸುವ, ದೃಶ್ಯಪ್ರಪಂಚದಲ್ಲಿ ಕಾಣುವ ಎಲ್ಲ ಜೀವಿಗಳಲ್ಲಿ ಚೈತನ್ಯವಾಗಿರುವುದು ಆ ಪರಸತ್ವ ಶಕ್ತಿಯೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.