ADVERTISEMENT

ಆಲೆಮನೆಯಾದ ವಿಶ್ವ

ಡಾ. ಗುರುರಾಜ ಕರಜಗಿ
Published 29 ಏಪ್ರಿಲ್ 2019, 18:43 IST
Last Updated 29 ಏಪ್ರಿಲ್ 2019, 18:43 IST

ಸಚ್ಚಿದಾನಂದಂಗಳಾತ್ಮ ಸ್ವಭಾವ ರಸ |
ಬಚ್ಚಿಡುವುದದನು ಜೀವಿತೆಯ ಮಾಯಿಕತೆ ||
ಇಕ್ಷುವೊಲ್ ಜೀವ, ಗಾಣದವೊಲ್ ಜಗನ್ಮಾಯೆ |
ನಿಚ್ಚವಿಳೆಯಾಲೆಮನೆ – ಮಂಕುತಿಮ್ಮ || 125 ||

ಪದ-ಅರ್ಥ: ಸಚ್ಚಿದಾನಂದಂಗಳಾತ್ಮ= ಸತ್(ಇರುವಿಕೆ) ಚಿತ್ (ಜ್ಞಾನ)+ ಆನಂದಗಳು+ ಆತ್ಮ, ರಸ= ಸಾರ, ತಿರುಳು, ವೈಶಿಷ್ಟ್ಯ, ಬಚ್ಚಿಡುವುದದನು= ಬಚ್ಚಿಡುವುದು+ ಅದನು, ಜೀವಿತೆಯ= ಬದುಕಿನ, ಮಾಯಿಕತೆ= ಮಾಯಾಜಾಲ, ಇಕ್ಷು= ಕಬ್ಬು, ನಿಚ್ಚವಿಳೆಯಾಲೆಮನೆ= ನಿಚ್ಚವು(ನಿತ್ಯವು) +ಇಳೆ +ಆಲೆಮನೆ (ಗಾಣದಮನೆ)

ವಾಚ್ಯಾರ್ಥ: ಸತ್, ಚಿತ್, ಆನಂದಗಳು ಆತ್ಮದ ಮೂಲ ಸ್ವಭಾವದ ತಿರುಳು, ಸಾರ. ಆದರೆ ಬದುಕಿನಲ್ಲಿ ಹರಡಿರುವ ಮಾಯೆಯ ಜಾಲ ಅದನ್ನು ಮುಚ್ಚಿಡುತ್ತದೆ. ಜೀವ ಒಂದು ಕಬ್ಬು ಇದ್ದಂತೆ, ಜಗತ್ತಿನ ಮಾಯೆ ಒಂದು ಗಾಣ. ಈ ಜಗತ್ತು ನಿತ್ಯವೂ ಆಲೆಮನೆಯೇ.

ADVERTISEMENT

ವಿವರಣೆ: ಸತ್, ಚಿತ್, ಆನಂದಗಳು ಆತ್ಮದ ಮೂಲ ಸ್ವಭಾವ. ಸತ್ ಎಂದರೆ ಇರುವಿಕೆ, ಚಿತ್ ಎಂದರೆ ಜ್ಞಾನ, ಆನಂದವೆಂದರೆ ಆಧ್ಯಾತ್ಮಿಕ ಸ್ವಾತಂತ್ರ್ಯದಿಂದ ದೊರೆಯುವ ಶಾಂತಿ. ಇವು ಮೂರೂ ಆತ್ಮದ ಸ್ವಭಾವಗುಣ. ಹಾಗೆ ನೋಡಿದರೆ ಇವು ಆತ್ಮದ ಸ್ವಭಾವದ ರಸ, ಅವುಗಳ ಸಾರ. ಆದರೆ ಆ ಸಾರವನ್ನು, ವೈಶಿಷ್ಟ್ಯವನ್ನು ಯಾಕೆ ಜೀವಿಗಳು ಗುರುತಿಸುವುದಿಲ್ಲ? ಕಗ್ಗವೇ ಉತ್ತರಿಸುತ್ತದೆ ಬದುಕಿನಲ್ಲಿ ಹರಡಿರುವ ಮಾಯೆ ಅದನ್ನು ಮುಚ್ಚಿಡುತ್ತದೆ.

‘ಸರ್ವ ಭೂತಾನಿ ಸಮ್ಮೋಹಂ ಸರ್ಗೇ ಯಾಸ್ತಿ ಪರಂತಪ ||’

‘ಸಮಸ್ತ ಜೀವರಾಶಿಗಳು ಸೃಷ್ಟಿಕಾಲದಲ್ಲೇ (ಹುಟ್ಟಿದ ಕೂಡಲೇ) ಮೋಹ ಪರವಶತೆಯನ್ನು ಹೊಂದುತ್ತವೆ’.

ಸಮಸ್ತ ಜೀವರಾಶಿ ಜಗತ್ತಿನಲ್ಲಿ ಜನಿಸಿದ ಕೂಡಲೆ ಮೋಹಪಾಶದಲ್ಲಿ (ಮಾಯಾಜಾಲದಲ್ಲಿ) ಸಿಲುಕಿ ಭ್ರಾಂತಿಗೆ ಒಳಗಾಗುತ್ತದೆ. ಅದು ಯಾವ ಮಟ್ಟದ ಭ್ರಾಂತಿ, ಮಾಯೆ? ವಚನಕಾರ ಷಣ್ಮುಖಸ್ವಾಮಿ ಹೇಳುತ್ತಾರೆ,

‘ಮಾಯೆಯೆಂಬ ರಕ್ಕಸಿ ಸಕಲ ಪ್ರಾಣಿಗಳ ಸಾರವ ಹೀರಿಹಿಪ್ಪೆಯ ಮಾಡಿ ಉ:ಫೆಂದು ಊದುತ್ತಿದ್ದಾಳೆ ಇಂತೀ ತ್ರಿವಿಧಮುಖದಲ್ಲಿ ಕಾಡುವ
ನಿಮ್ಮ ಮಾಯೆಯ ಗೆಲುವೆಡೆ ಆರಳವಲ್ಲವಯ್ಯಾ ಅಖಂಡೇಶ್ವರಾ, ನೀವು ಕರುಣಿಸದನ್ನಕ್ಕ’

ಮಾಯೆ ಎಂಬುವಳು ಪ್ರಾಣಿಗಳ ಸಾರವನ್ನು ಹೀರಿ ಹಿಂಡಿ ಹಿಪ್ಪೆಯ ಮಾಡುತ್ತಿದ್ದಳಂತೆ. ಆಕೆ ಹೀರಿದ ಸಾರ ಇದೇ. ಆತ್ಮದ ಸ್ವಭಾವದ ಸಾರವಾದ ಸತ್‍ಚಿತ್ ಆನಂದವನ್ನೇ ಹಿಂಡಿದೆ.

ವಚನ ಕಗ್ಗದ ಮುಂದಿನ ಸಾಲನ್ನು ವಿಶದ ಮಾಡುತ್ತದೆ. ಜೀವವೆಂಬುದು ಕಬ್ಬು ಇದ್ದಂತೆ, ಜಗತ್ತಿನ ಮಾಯೆ ಗಾಣವಿದ್ದಂತೆ. ಈ ಮಾಯೆ, ಅದನ್ನು ವಚನಕಾರ ರಕ್ಕಸಿ ಎನ್ನುತ್ತಾರೆ, ಜೀವವನ್ನು ಹಿಂಡಿ ಹಿಪ್ಪೆ ಮಾಡಿ ಉ:ಫೆಂದು ಊದುತ್ತಾಳೆ. ಹೀಗಾಗಿ ಜೀವಕ್ಕೆ ಆತ್ಮದ ಮೂಲ ಸ್ವಭಾವವಾದ ಸತ್, ಚಿತ್, ಆನಂದದ ಕಲ್ಪನೆಯೇ ಬರುವುದಿಲ್ಲ. ಈ ಜಗತ್ತು ಮಾಯೆಯಿಂದಾಗಿ ನಿತ್ಯವೂ ಆಲೆಮನೆಯಾಗಿದೆ. ದಿನದಿನವೂ, ಕ್ಷಣಕ್ಷಣವೂ ಜೀವಗಳು ಮಾಯೆಯ ಗಾಣದಲ್ಲಿ ಅರೆಸಿಕೊಂಡು ತಮ್ಮ ಸತ್ವವನ್ನು ಮರೆಯುತ್ತಿವೆ.→l

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.