ADVERTISEMENT

ಅಪಾಯದ ಅನುಕರಣೆ

ಡಾ. ಗುರುರಾಜ ಕರಜಗಿ
Published 2 ಮೇ 2019, 20:00 IST
Last Updated 2 ಮೇ 2019, 20:00 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಹಿಂದೆ ಬ್ರಹ್ಮದತ್ತ ವಾರಣಾಸಿಯನ್ನು ಆಳುತ್ತಿದ್ದಾಗ ಬೋಧಿಸತ್ವ ಹಿಮಾಲಯದಲ್ಲಿ ನೀರುಕಾಗೆಯ ಯೋನಿಯಲ್ಲಿ ಜನಿಸಿದ್ದ. ಅವನು ಒಂದು ಪ್ರಶಾಂತವಾದ ಕೊಳದ ಬದಿಯಲ್ಲಿ ವಾಸವಾಗಿದ್ದ. ಆಗ ಅವನ ಹೆಸರು ವೀರಕ. ಕೊಳದಲ್ಲಿ ಅನೇಕ ಮೀನುಗಳಿದ್ದು ವೀರಕನ ಬದುಕು ಸುಂದರವಾಗಿತ್ತು.

ಆಗ ಕಾಶಿಯಲ್ಲಿ ಭಾರೀ ಬರಗಾಲ ಬಿತ್ತು. ನದಿ, ಕೆರೆಗಳಲ್ಲಿ ನೀರು ಬತ್ತಿ ಹೋಯಿತು. ಕುಡಿಯುವುದಕ್ಕೇ ನೀರಿಲ್ಲದಾಗ ಜನ ಹಾಹಾಕಾರಗೊಂಡರು. ಧರ್ಮಕಾರ್ಯಗಳು ನಿಂತು ಹೋದವು. ಯಾರೂ ಶ್ರಾದ್ಧ, ಬಲಿಕರ್ಮಗಳನ್ನು ಮಾಡುತ್ತಿರಲಿಲ್ಲ. ಹೀಗಾಗಿ ಕಾಗೆಗಳಿಗೆ ದುರವಸ್ಥೆ ಬಂದಿತು. ಇಲ್ಲಿದ್ದರೆ ಉಳಿಗಾಲವಿಲ್ಲವೆಂದು ಹಾರಿ ಬೇರೆ ಬೇರೆ ಕಾಡುಗಳಿಗೆ ಹೊರಟುಹೋದವು.

ಸವಿಟ್ಠಕನೆಂಬ ಒಂದು ಕಾಗೆ ತನ್ನ ಹೆಂಡತಿಯನ್ನು ಕರೆದುಕೊಂಡು ಹಿಮಾಲಯ ಪ್ರದೇಶಕ್ಕೆ ಬಂದು ವೀರಕನಿದ್ದ ಕೊಳದ ಪಕ್ಕದಲ್ಲೇ ನೆಲೆಮಾಡಿತು. ಸವಿಟ್ಠಕ ಕಾಗೆ ತುಂಬ ಬುದ್ಧಿವಂತ. ಅದು ದಿನಾಲು ವೀರಕ ಕೊಳಕ್ಕೆ ಹೋಗಿ ಮೀನು ಹಿಡಿಯುವುದನ್ನು ಗಮನಿಸುತ್ತಿತ್ತು. ಸಾಮಾನ್ಯವಾದ ಕಾಗೆಗಳು ನೀರಿನಲ್ಲಿ ಮುಳುಗು ಹಾಕಲಾರವು. ದಂಡೆಗೆ ಬಿದ್ದುದನ್ನು ಮಾತ್ರ ತಿನ್ನುವಂಥವು. ಆದರೆ, ವೀರಕ ಮಾತ್ರ ನೀರಲ್ಲಿ ಮುಳುಗಿ ಸ್ವಲ್ಪ ಕಾಲ ಇದ್ದು, ಮೀನುಗಳನ್ನು ಬೆನ್ನತ್ತಿ ಹಿಡಿದುಕೊಂಡು ಹೊರಗೆ ಬರುತ್ತಿತ್ತು. ನೀರು ಕಾಗೆಯಾದ್ದರಿಂದ ಅದಕ್ಕೆ ಆ ಶಕ್ತಿ ಇತ್ತು. ಆಗ ಸವಿಟ್ಠಕ ಈ ನೀರು ಕಾಗೆ ವೀರಕನ ಜೊತೆಗೆ ಇದ್ದು ಸೇವೆ ಮಾಡಿಕೊಂಡಿದ್ದರೆ ನಮಗೆ ಹೊಟ್ಟೆಗೆ ಚಿಂತೆಯಿಲ್ಲ ಎಂದು ಭಾವಿಸಿ ವೀರಕನ ಕಡೆಗೆ ಬಂದು ತನ್ನ ಆಸೆಯನ್ನು ಹೇಳಿಕೊಂಡು ಸೇವೆಗೆ ಅವಕಾಶ ಕೇಳಿತು. ವೀರಕ ಆಗಲಿ ಎಂದು ತನಗೆ ಬೇಕಾದಷ್ಟು ಮೀನುಗಳನ್ನು ತಿಂದು ಮತ್ತಷ್ಟನ್ನು ಸಿವಿಟ್ಠಕನಿಗೂ ಅವನ ಹೆಂಡತಿಗೂ ತಂದು ಹಾಕುತಿತ್ತು.

ADVERTISEMENT

ಸವಿಟ್ಠಕನ ಹೆಂಡತಿಗೆ ಯಾವಾಗಲೂ ದುರಭಿಮಾನ. ನಾವೇಕೆ ಈ ಕಾಗೆ ತಂದುಕೊಡುವ ಮೀನಿನ ಮೇಲೆ ಅವಲಂಬನವಾಗಿರಬೇಕು? ನಾವೇ ಹಿಡಿದು ತಿನ್ನಬಹುದಲ್ಲ. ಈ ಕಾಗೆಯ ಹಂಗೇಕೆ ನಮಗೆ? ಎಂದು ಯೋಚಿಸತೊಡಗಿತು. ಕಾಲಕಳೆದಂತೆ ಈ ನಂಬಿಕೆ ಬಲವಾಗತೊಡಗಿತು. ಈ ಕಾಗೆಯೂ ಕಪ್ಪಾಗಿದೆ, ನಾನೂ ಕಪ್ಪಗಿದ್ದೇನೆ. ನನ್ನ ಕಣ್ಣು, ಕೊಕ್ಕು, ಪಾದ, ಗರಿಗಳು ಅದರಂತೆಯೇ ಇವೆ. ನಾನೂ ಆ ಕಾಗೆಯಷ್ಟೇ ದೊಡ್ಡವಳಾಗಿದ್ದೇನೆ. ನಾನೇ ಇನ್ನು ಮೇಲೆ ಮೀನು ಹಿಡಿಯುತ್ತೇನೆ ಎಂದು ತೀರ್ಮಾನಿಸಿ ಗಂಡನಿಗೆ ಹೇಳಿತು. ಆತ ಹೇಳಿದ, ‘ಬೇಡ ನೋಡುವುದಕ್ಕೆ ನಾವು ಹಾಗೆಯೇ ಇರಬಹುದು. ಆದರೆ, ವೀರಕ ನೀರುಕಾಗೆ. ಅದಕ್ಕೆ ನೀರಿನಲ್ಲಿ ಬಹಳ ಹೊತ್ತು ಇರುವ ಶಕ್ತಿ ಇದೆ, ನಮಗಿಲ್ಲ. ಆದ್ದರಿಂದ ಈ ಪ್ರಯತ್ನ ಬೇಡ”. ಮೊಂಡುತನಕ್ಕೆ ಅಹಂಕಾರ ಸೇರಿದರೆ ಕೇಳೀತೇ?

ಒಂದು ದಿನ ಸವಿಟ್ಠಕ ಬೇರೆ ಕಡೆಗೆ ಹೋದಾಗ ಹೆಣ್ಣು ಕಾಗೆ, ವೀರಕ ಮಾಡುತ್ತಿದ್ದಂತೆ ನೇರವಾಗಿ ನೀರಿನಲ್ಲಿ ಧುಮುಕಿತು. ಧುಮುಕಿದ ವೇಗಕ್ಕೆ ನೀರಿನಲ್ಲಿ ಬಹಳ ಆಳಕ್ಕೆ ಹೋಯಿತು. ಅದರ ಕಣ್ಣಿಗೆ ಮೀನುಗಳೇ ಕಾಣುತ್ತಿಲ್ಲ. ಕಣ್ಣು ತೆರೆಯವುದೇ ಕಷ್ಟ. ಉಸಿರುಗಟ್ಟುತ್ತಿದೆ. ಅದಕ್ಕೆ ಹೊರಗೆ ಬಂದರೆ ಸಾಕು ಎನ್ನುವಂತಾಯಿತು. ಪಟಪಟನೆ ರೆಕ್ಕೆ ಬಡಿದು ಮೇಲಕ್ಕೆ ಬರಲು ಪ್ರಯತ್ನಿಸಿತು. ಆದರೆ, ಮೇಲೆ ಕಟ್ಟಿದ್ದ ಪಾಚಿಯಲ್ಲಿ ಸಿಕ್ಕಿಕೊಂಡಿತು. ಕೇವಲ ಕೊಕ್ಕಿನ ಮುಂಭಾಗ ಮಾತ್ರ ಹೊರಬಂದಿತು. ಕಾಗೆ ಉಸಿರುಕಟ್ಟಿ ಸತ್ತು ಹೋಯಿತು. ಸವಿಟ್ಠಕ ಹೆಂಡತಿಯನ್ನು ಕಳೆದುಕೊಂಡು ದುಖಃಪಟ್ಟಿತು.

ನಮ್ಮ ಶಕ್ತಿ ನಮಗೆ. ಇನ್ನೊಬ್ಬರನ್ನು ಅನುಕರಿಸಹೋಗಿ, ನಮ್ಮ ಶಕ್ತಿಯ ಮಿತಿಗಳನ್ನು ದಾಟಿದಾಗ ಅಪಾಯ ಕಾದಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.