ADVERTISEMENT

ನಿಸರ್ಗದ ಪಾಠ

ಡಾ. ಗುರುರಾಜ ಕರಜಗಿ
Published 15 ಜನವರಿ 2020, 19:36 IST
Last Updated 15 ಜನವರಿ 2020, 19:36 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ನೆಲವೊಂದೆ, ಹೊಲಗದ್ದೆ ತೋಟ ಮರಳೆರೆ ಬೇರೆ |
ಜಲವೊಂದೆ, ಸಿಹಿಯುಪ್ಪು ಜವುಗೂಟೆ ಬೇರೆ ||
ಕುಲವೊಂದರೊಳೆ ಸೋದರ ವ್ಯಕ್ತಿಗುಣ ಬೇರೆ |
ಹಲವುವೊಂದುಂ ಸಾಜ – ಮಂಕುತಿಮ್ಮ || 237 ||

ಪದ-ಅರ್ಥ: ಮರಳೆರೆ= ಮರಳು+ಎರೆ (ಕಪ್ಪುಭೂಮಿ), ಜವುಗೂಟೆ= ಜವುಗು+ಊಟೆ, ಹಲವುವೊಂದುಂ= ಹಲವುಂ (ಬೇರೆಬೇರೆಯಾಗಿರುವುದು)+ ಒಂದುಂ (ಒಂದೇ ಆಗಿರುವುದು), ಸಾಜ= ಸಹಜ.
ವಾಚ್ಯಾರ್ಥ: ನೆಲವು ಒಂದೇ ಆದರೂ ಹೊಲ, ಗದ್ದೆ, ತೋಟ, ಮರಳು ನೆಲ, ಎರೆ ಭೂಮಿ ಇವೆಲ್ಲ ಬೇರೆ ಬೇರೆ. ನೀರು ಒಂದೇ ಆದರೂ ಸಿಹಿಯಾದದ್ದು, ಉಪ್ಪಾದದ್ದು, ಜವುಗಿನಲ್ಲಿ ಊಟೆಯಾಗಿ ಬರುವ ನೀರು ಬೇರೆ. ಹೀಗೆ ಒಂದೇ ಹಲವು ರೀತಿಯಲ್ಲಿರುವುದು ಸಹಜ.

ವಿವರಣೆ: ಇಂದಿನ ಬದುಕಿಗೆ ಅತ್ಯಂತ ಅವಶ್ಯವಾಗಿ ಬೇಕಾದ ಮೌಲ್ಯವನ್ನು
ಈ ಕಗ್ಗ ಬಹಳ ಸುಂದರವಾಗಿ, ಅತ್ಯಂತ ಸುಲಭ ಗ್ರಾಹ್ಯವಾದ ಉದಾಹರಣೆ
ಗಳೊಂದಿಗೆ ವಿವರಿಸುತ್ತದೆ.

ADVERTISEMENT

ಭೂಮಿ ಎನ್ನುವುದು ಒಂದೇ. ವಿಜ್ಞಾನಿಗಳ ಪ್ರಕಾರ ನಾಲ್ಕೂವರೆ ಬಿಲಿಯನ್ ವರ್ಷಗಳ ಹಿಂದೆ ಮಹಾಸ್ಫೋಟದಿಂದ ಪ್ರಪಂಚ ಉದ್ಭವಿಸಿದಾಗ ಬೆಂಕಿಯಂತೆ ಗರಗರನೇ ತಿರುಗುವ ಆವಿಯ ಗಾಳಿ ನಿಧಾನವಾಗಿ ಶತಶತಮಾನಗಳ ನಂತರ ತಂಪಾಗುತ್ತ, ದ್ರವವಾಯಿತು, ನಂತರ ಗಟ್ಟಿಯಾಗಿ ನೆಲವಾಯಿತು. ಮೇಲೆ ಗಟ್ಟಿಯಾದಂತೆನಿಸಿದರೂ ಒಳಗೊಳಗೆ ದ್ರವ ಕುದಿಯುತ್ತಲೇ ಇತ್ತು, ಇನ್ನು ಕುದಿಯುತ್ತಲೇ ಇದೆ. ಆ ಭೂಮಿ ಒಂದೇ ರೀತಿಯಲ್ಲಿ ತಂಪಾಗಲಿಲ್ಲ. ಹಾಗೆ ಬೇರೆಬೇರೆಯಾಗಿ ತಂಪಾದಾಗ ಆ ಭೂಮಿಯ ರಚನೆಯಲ್ಲೂ ವ್ಯತ್ಯಾಸವಾಯಿತು. ಕೆಲವು ಕಡೆಗೆ ಗಟ್ಟಿ ಬಂಡೆಗಲ್ಲಾಯಿತು, ಮತ್ತೊಂದೊಡೆಗೆ ಕಲ್ಲು ಗಟ್ಟಿಯಾಗದೇ ಪುಡಿಪುಡಿಯಾಯಿತು, ಮುಂದೆ ಮರಳಾಯಿತು. ಮತ್ತೆ ಕೆಲವು ಪ್ರದೇಶದಲ್ಲಿ ನೆಲ ಹೆಚ್ಚು ಬೆಂದು ಕಪ್ಪಗಾಯಿತು. ಹೀಗೆ ಭೂಮಿ ಒಂದೇ ಆದರೂ ಅದರಲ್ಲಿ ಸಾವಿರಾರು ಬಗೆಗಳಾದವು.

ಜಗತ್ತಿನಲ್ಲಿರುವ ನೀರು ಒಂದೇ. ಆದರೆ ಅದು ಹರಿದು ಬರುವ ಮಣ್ಣಿನ ಗುಣ ಅದರ ರುಚಿಯನ್ನು ಬದಲಾಯಿಸುತ್ತದೆ. ಸಮುದ್ರದ ದಂಡೆಯಲ್ಲಿರುವ ಬಾವಿಯಲ್ಲೇ ಸಿಹಿ ನೀರು ಬಂದದ್ದನ್ನು ಕಂಡಿದ್ದೇವೆ. ಸಿಹಿನೀರಿನ ಬಾವಿಯ ಹತ್ತಿರವೇ ಇದ್ದ ಮತ್ತೊಂದು ಬಾವಿಯಲ್ಲಿಯ ನೀರು ಬಾಯಿಗೆ ಹಾಕದಷ್ಟು ಉಪ್ಪು. ಅಂದರೆ ನೀರಿಗೆ ತನ್ನದೇ ಆದ ರುಚಿಯಿಲ್ಲ. ಯಾವ ಮಣ್ಣಿನೊಡನೆ ಅದರ ಸಂಸ್ಕಾರವಾಗುತ್ತದೋ ಅದರ ಗುಣ ಅದಕ್ಕೆ ಬರುತ್ತದೆ.

ಇದೇ ರೀತಿ ತಂದೆ-ತಾಯಿಗಳು ಒಬ್ಬರೇ ಆದರೂ ಮಕ್ಕಳಲ್ಲಿ ಅದೆಷ್ಟು ಭಿನ್ನತೆ! ಆ ಮಕ್ಕಳ ವಂಶವಾಹಿನಿ ಆಗಬಹುದು, ಅವರು ಪಡೆದ ವ್ಯಕ್ತಿಗಳ ಸಂಪರ್ಕವಾಗಬಹುದು ಅವರ ಸ್ವಭಾವವನ್ನೇ ಬದಲಿಸುತ್ತದೆ.

ಹೀಗೆ ಮೂಲ ಒಂದೇ ಆದರೂ ವ್ಯಕ್ತಿಗಳಲ್ಲಿ, ವಸ್ತುಗಳಲ್ಲಿ ಭಿನ್ನತೆ ಇರುವುದು ಸಹಜವಾದದು. ಇದು ವಾಸ್ತವ. ಈ ವಾಸ್ತವ ನಮ್ಮ ಬದುಕಿಕೊಂದು ಪಾಠ ಕಲಿಸುತ್ತದೆ. ನಾವೆಲ್ಲ ಮನುಷ್ಯರು. ಎಲ್ಲರೂ ಒಂದೇ ಮೂಲದಿಂದ ಬಂದವರು. ಆದರೆ ನಮ್ಮ ಚಿಂತನೆಯ ರೀತಿಗಳಿಂದ, ಜೊತೆಗಿರುವ ಸಹಚರರಿಂದ ನಮ್ಮ ಸ್ವಭಾವವನ್ನು ಬದಲಿಸಿಕೊಳ್ಳುತ್ತೇವೆ. ಈ ಭಿನ್ನತೆ ಸಹಜವೆಂದು ಒಪ್ಪಿಕೊಳ್ಳುವುದು ಕ್ಷೇಮ. ಹೇಗೆ ಬೇರೆ ತರಹದ ಮಣ್ಣು, ನೀರು ತಮ್ಮ ಭಿನ್ನತೆಯನ್ನು ದ್ವೇಷವನ್ನಾಗಿಸಿ ಕೊಂಡಿಲ್ಲವೋ ಹಾಗೆಯೇ ನಮ್ಮ ಭಿನ್ನತೆ ದ್ವೇಷವಾಗುವುದು ದುರ್ದೈವ. ಮತ, ಜಾತಿಗಳ ಹೆಸರಲ್ಲಿ ಲಿಂಗ, ಭಾಷೆಗಳ ಹೆಸರಿನಲ್ಲಿ ಹೊಡೆದಾಡುವುದು ಅಪ್ರಬುದ್ಧತೆ ಮಾತ್ರವಲ್ಲ, ಮೂರ್ಖತನ. ಇದು ನಾವು ನಿಸರ್ಗದಿಂದ ಕಲಿಯಲೇಬೇಕಾದ ಪಾಠ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.