ADVERTISEMENT

ಆಪತ್ತಿನ ಉಪಾಯಗಳು

ಡಾ. ಗುರುರಾಜ ಕರಜಗಿ
Published 12 ಜುಲೈ 2019, 18:27 IST
Last Updated 12 ಜುಲೈ 2019, 18:27 IST
   

ಬ್ರಹ್ಮದತ್ತ ವಾರಾಣಸಿಯಲ್ಲಿ ರಾಜ್ಯಭಾರ ಮಾಡುತ್ತಿದ್ದಾಗ ಬೋಧಿಸತ್ವ ದೊಡ್ಡ ಆನೆಯಾಗಿ ಹುಟ್ಟಿದ್ದ. ಅದು ಪರ್ವತದಂತೆ ಬೃಹತ್ತಾಗಿ ಬೆಳೆದು ಆನೆಗಳ ನಾಯಕನಾಗಿತ್ತು. ಆ ಆನೆ ಹಿಮಾಲಯದಲ್ಲಿ ಚಲಿಸುವ ಬೆಟ್ಟದಂತೆ ತಿರುಗಾಡಿಕೊಂಡು ಸುಖವಾಗಿತ್ತು.

ಅದೇ ಸಮಯದಲ್ಲಿ ಹತ್ತಿರದಲ್ಲೇ ಒಂದು ದೊಡ್ಡ ಸರೋವರವಿತ್ತು. ಅದರಲ್ಲಿ ಬಂಗಾರ ಬಣ್ಣದ ಒಂದು ಏಡಿ ಇತ್ತು. ದೊಡ್ಡ ಬಂಡೆಯಷ್ಟು ದೊಡ್ಡದಾದ ಈ ಏಡಿ ಯಾವ ಪ್ರಾಣಿ ಸರೋವರದಲ್ಲಿ ಕಾಲಿಟ್ಟರೂ ಹಿಡಿದು ತಿಂದು ಬಿಡುತ್ತಿತ್ತು. ದೊಡ್ಡ ದೊಡ್ಡ ಆನೆಗಳಿಗೂ ಏಡಿಯ ಹಿಡಿತದಿಂದ ಪಾರಾಗುವುದು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಯಾವ ಪ್ರಾಣಿಗಳೂ ಸರೋವರದಲ್ಲಿ ಕಾಲಿಡದೆ ಅದು ಕೇವಲ ಏಡಿಯ ಕೆರೆ ಎಂದೇ ಹೆಸರಾಗಿತ್ತು.

ಬೋಧಿಸತ್ವ ಅನೆ ಮತ್ತೊಂದು ಹೆಣ್ಣಾನೆಯೊಂದಿಗೆ ಸಹವಾಸ ಮಾಡಿತು. ನಂತರ ತಂದೆ, ತಾಯಿ, ಹೆಂಡತಿ ಮಕ್ಕಳನ್ನು ಕರೆದುಕೊಂಡು ಕೆರೆಯ ಹತ್ತಿರ ಬಂದಿತು. ಆ ಕೆರೆಯಲ್ಲಿ ಕಾಲಿಡುವುದು ಬೇಡ ಎಂದು ಉಳಿದೆಲ್ಲ ಪ್ರಾಣಿಗಳು ಹೇಳಿದರೂ ಕೇಳದೆ ಕೆರೆಯ ಹತ್ತಿರ ಹೋಯಿತು. ಅದು ಪ್ರಾಣಿಗಳನ್ನು ಕೇಳಿತು, ‘ಏಡಿ ಪ್ರಾಣಿಗಳನ್ನು ನೀರಲ್ಲಿ ಇಳಿಯುವಾಗ ಹಿಡಿಯುತ್ತದೋ ಅಥವಾ ಹೊರಗೆ ಬರುವಾಗ ಹಿಡಿಯುತ್ತದೋ?’.

ADVERTISEMENT

ಪ್ರಾಣಿಗಳು, ‘ಅದು ಯಾವಾಗಲೂ ಹೊರಗೆ ಬರುವಾಗಲೇ ಹಿಡಿಯುತ್ತದೆ’ ಎಂದವು. ಆಗ ಬೋಧಿಸತ್ವ ಆನೆ ತನ್ನ ಪರಿವಾರದವರಿಗೆಲ್ಲ, ‘ನೀವು ನಿರಾತಂಕವಾಗಿ ನೀರಲ್ಲಿಳಿದು ಆಟವಾಡಿ ಹೊರಡಿ, ನಾನು ಕೊನೆಗೆ ಬರುವಾಗ ಏಡಿಯನ್ನು ವಿಚಾರಿಸುತ್ತೇನೆ’ ಎಂದಿತು. ಇದರ ಧೈರ್ಯದ ಮೇಲೆ ನಂಬಿಕೆ ಇಟ್ಟು ಎಲ್ಲ ಆನೆಗಳು ನೀರಿಗಿಳಿದು ಆಟವಾಡಿದವು. ಕೊನೆಗೆ ಎಲ್ಲ ಆನೆಗಳು ಏರಿ ಏರಿದ ಮೇಲೆ ನಾಯಕ ಆನೆ ನಿಧಾನವಾಗಿ ಕೆರೆಯಿಂದ ಹೊರಗೆ ಬರತೊಡಗಿತು. ಸರಿಯಾದ ಸಮಯ ನೋಡಿ ಏಡಿ ಆನೆಯ ಒಂದು ಕಾಲನ್ನು ಬಿಗಿಯಾಗಿ ಹಿಡಿಯಿತು.

ಅದರ ಕಬ್ಬಿಣದ ಇಕ್ಕಳದಂತಹ ಹಿಡಿತದಿಂದ ಆನೆಯ ಕಾಲೇ ಕತ್ತರಿಸಿದಂತಾಯಿತು. ಆನೆ ಫೀಳಿಟ್ಟಿತು, ಒದ್ದಾಡಿತು, ಎಳೆದಾಡಿತು. ಆದರೆ ಬಿಡುಗಡೆ ಸಾಧ್ಯವಾಗಲಿಲ್ಲ. ಆನೆಗೆ ಮರಣಭೀತಿ ಕಾಡಿತು. ಪಂಜರದಲ್ಲಿಟ್ಟ ಪಕ್ಷಿಯಂತೆ ಕೂಗಿಕೊಂಡಿತು. ಉಳಿದ ಆನೆಗಳೆಲ್ಲ ಗಾಬರಿಯಿಂದ ಓಡಿಹೋದವು. ಆದರೆ ಆನೆಯ ಹೆಂಡತಿ ಮಾತ್ರ ಅಲ್ಲಿಂದ ಅಲುಗಾಡದೆ ನಿಂತುಬಿಟ್ಟಿತು. ‘ಪ್ರಿಯ, ದಯಮಾಡಿ ಧೈರ್ಯಗೆಡಬೇಡ. ನಾನು ನಿನ್ನೊಂದಿಗೇ ಇರುತ್ತೇನೆ. ನಿನಗೆ ಸಹಾಯ ಮಾಡುತ್ತೇನೆ. ನೀನಿಲ್ಲದೆ ನನಗೆ ಪ್ರಪಂಚವಿಲ್ಲ’ ಎಂದಿತು. ಅದರ ಮಾತಿನಿಂದ ಆನೆಯ ಆತ್ಮವಿಶ್ವಾಸ ಹೆಚ್ಚಿತು. ನಂತರ ಹೆಣ್ಣಾನೆ ಏಡಿಯನ್ನು ಉದ್ದೇಶಿಸಿ ಮಾತನಾಡಿತು. ‘ಎಲೈ ಸುವರ್ಣ ಏಡಿ, ನೀನು ಸಮುದ್ರದ ಏಡಿಗಳಿಗೆಲ್ಲ ನಾಯಕನಾಗುವ ಶಕ್ತಿ ಇರುವಂಥವನು.

ಇಂಥ ಪುಟ್ಟ ಕೆರೆಯಲ್ಲಿ ಏಕೆ ಕುಳಿತಿದ್ದೀ? ನನ್ನ ಗಂಡನ ಕಾಲು ಹಿಡಿದರೆ ನಿನಗೇನು ಸಿಕ್ಕೀತು? ಹಿಡಿಯುವುದಿದ್ದರೆ ನೀನು ಅರಗಿಸಿ ಕೊಳ್ಳುವಂಥ ಪ್ರಾಣಿಗಳನ್ನು ಹಿಡಿ’ ಎಂದಿತು. ಏಡಿ ಈ ಮಧುರವಾದ ಮಾತುಗಳನ್ನು ಕೇಳುತ್ತ ತನ್ನ ಹಿಡಿತವನ್ನು ತುಸು ಸಡಿಲ ಮಾಡಿತು. ತಕ್ಷಣ ಆನೆ ತನ್ನ ಕಾಲನ್ನು ಬಲವಾಗಿ ಕೊಸರಿಕೊಂಡು ಬಿಡಿಸಿಕೊಂಡಿತು. ಆಗ ಅದರ ಇನ್ನೊಂದು ಕಾಲು ಏಡಿಯ ಚಿಪ್ಪಿನ ಮೇಲೆ ಊರಿ ಅದು ಮುರಿದು ಚೂರು ಚೂರಾಯಿತು. ಆನೆಗಳು ಸಂಭ್ರಮದಿಂದ ಹಾರಾಡುತ್ತ ಅದರ ತುಂಡುಗಳನ್ನು ದೂರದೂರಕ್ಕೆ ಎಸೆದುಬಿಟ್ಟವು. ಏಡಿಯ ಕಾಟದಿಂದ ಕೆರೆ ಮುಕ್ತವಾಯಿತು.

ಸಮಸ್ಯೆಗಳು ಬಂದಾಗ ಇವೆರಡೂ ಕಾರ್ಯಗಳು ಪರಿಹಾರಕ್ಕೆ ಸಹಾಯ ಮಾಡುತ್ತವೆ. ಮೊದಲನೆಯದು ಆತ್ಮವಿಶ್ವಾಸವನ್ನು ಕಳೆದುಕೊಳ್ಳದಿರುವುದು ಮತ್ತು ಎರಡನೆಯದು ಆವೇಶಗೊಳ್ಳದೆ, ಶಾಂತವಾಗಿ ಉಪಾಯವನ್ನು ಬಳಸುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.