ADVERTISEMENT

ವಿಧಿಯ ಪಕ್ಷಪಾತ

​ಪ್ರಜಾವಾಣಿ ವಾರ್ತೆ
Published 16 ಜುಲೈ 2019, 19:45 IST
Last Updated 16 ಜುಲೈ 2019, 19:45 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ತಾಪಿಸುತೆ ತಣಿಯಿಸುತೆ ಕುಲುಕಿಸುತೆ ಋತುವೈದ್ಯ |
ಭೂಪಟದಿ ಜೀವರಸಗಳ ಪಚಿಸುವಂತೆ ||
ಪಾಪಿಯಂ ಪ್ರೋತ್ಸಾಹಿಸಿ ಸುಕೃತಿಯ ಪರೀಕ್ಷಿಸುತ |
ವೇಪಿಪನು ವಿಧಿ ನಮ್ಮ – ಮಂಕುತಿಮ್ಮ || 159 ||

ಪದ-ಅರ್ಥ: ತಾಪಿಸುತೆ=ಸುಡುತ್ತ, ತಣಿಯುಸುತೆ=ತಂಪು ಮಾಡುತ್ತ, ಋತುವೈದ್ಯ=ಋತು ಎಂಬ ವೈದ್ಯ, ಪಚಿಸುವಂತೆ=ಪಚನ ಮಾಡುವಂತೆ, ಬೇಯಿಸುವಂತೆ, ಪ್ರೋತ್ಸಾಹಿಸಿ=ಪ್ರೋತ್ಸಾಹ ನೀಡಿ, ವೇಪಿಪನು=ಅಲುಗಾಡಿಸುವನು, ಶೋಧಿಸುವನು.

ವಾಚ್ಯಾರ್ಥ: ಬೇಸಿಗೆಯಲ್ಲಿ ಸುಡುತ್ತ, ಮಳೆಗಾಲದಲ್ಲಿ ನೆನೆಯಿಸುತ್ತ, ಚಳಿಗಾಲದಲ್ಲಿ ನಡುಗಿಸುತ್ತ ಋತುಗಳೆಂಬ ವೈದ್ಯ ಭೂಮಿಯಾಳದಲ್ಲಿ ಜೀವರಸಗಳನ್ನು ಪಾಕ ಮಾಡುವಂತೆ, ವಿಧಿ ಪಾಪಿಗಳಿಗೆ ಉತ್ತೇಜನ ನೀಡುತ್ತ, ಸಜ್ಜನರನ್ನು ಪರೀಕ್ಷಿಸುತ್ತ ನಮ್ಮನ್ನು ಸರಿಯಾಗಿ ಅಲುಗಾಡಿಸುತ್ತದೆ.

ADVERTISEMENT

ವಿವರಣೆ: ಕೋಟಿ, ಕೋಟಿ ವರ್ಷಗಳ ಹಿಂದೆ ಸೃಷ್ಟಿಯಾದದ್ದು ಈ ಭೂಮಿ. ಮೊದಮೊದಲು ಬೆಂಕಿಯ ಗೋಳವೇ ಆಗಿದ್ದುದು ನಂತರ ನಿಧಾನವಾಗಿ ತಂಪಾಗುತ್ತ ಬಂದಿತು. ಮುಂದೆ ಸಾವಿರಾರು ವರ್ಷಗಳವರೆಗೆ ಮಳೆಯಾಯಿತಂತೆ. ನಂತರ ನೀರು ಕೆಳಗಿಳಿದು ಭೂಪ್ರದೇಶ ಮೇಲೆ ಬರತೊಡಗಿತು. ಆದರೂ ಭೂಮಿಯ ಆಳದಲ್ಲಿ ಲಾವಾ ಕುದಿಯುತ್ತಿದೆ. ಅಲ್ಲಲ್ಲಿ ಭೂಕಂಪಗಳಾಗಿ ಭೂಮಿ ನಡುಗುತ್ತಿದೆ, ಅದರ ಪದರುಗಳು ಮೇಲೆ ಕೆಳಗಾಗುತ್ತಿವೆ. ಗಿಡಮರಗಳು ನೆಲದಾಳಕ್ಕೆ ಸಿಕ್ಕು, ಅಲ್ಲಿಯ ಕಾವಿಗೆ ಸುಟ್ಟು, ಬೆಂದು, ಕರಗಿ ದ್ರವವಾಗಿ, ಅನಿಲವಾಗಿ ನಿಂತವು.

ಹೀಗೆ ಶತಶತಮಾನಗಳಿಂದ ಭೂಮಿಯ ಆಳದಲ್ಲಿ ಜೀವರಸ ಸಿದ್ಧವಾಗಿ ನಿಂತಿದೆ. ಇದೆಲ್ಲ ಆದದ್ದು ಋತುಗಳ ಪ್ರಭಾವದಿಂದ. ಅದಕ್ಕೇ ಕಗ್ಗ ಅದನ್ನು ವೈದ್ಯ ಎಂದು ಕರೆಯುತ್ತದೆ. ಋತುಗಳು ತಮ್ಮ ಪರಿಣಾಮಗಳಿಂದ ಜೀವರಸವನ್ನು ತಯಾರು ಮಾಡುವಂತೆ ವಿಧಿ ನಮ್ಮನ್ನು ಕುಲುಕಾಡಿಸಿ, ಅಗ್ನಿಕುಂಡದಲ್ಲಿ ಹಾಯಿಸಿ, ಪರೀಕ್ಷಿಸಿ ಶುದ್ಧಗೊಳಿಸುತ್ತದೆ.

ಆದರೆ ಕೆಲವೊಮ್ಮೆ ಅದರ ನಡೆ ತುಂಬ ವಿಚಿತ್ರ ಎನ್ನಿಸುತ್ತದೆ. ನಮಗೆ ಅದರ ಕಾರಣಗಳು ಅರ್ಥ ಆಗದೇ ಹೋಗುತ್ತವೆ. ಪಾಪಿಗಳಿಗೆ ತುಂಬ ಪ್ರೋತ್ಸಾಹ ನೀಡಿದಂತೆ ಕಾಣುತ್ತದೆ. ಅದಕ್ಕೆಂದೇ ದಾಸರು ಹಾಡಿದರು, “ಸಜ್ಜನರಿಗಿದು ಕಾಲವಲ್ಲ, ಅಜ್ಞಾನಿ ಮೂಢರಿಗೆ ಹರಿ ನಿನ್ನ ಬಲವೊ”. ಹದಿನೆಂಟು ದಿವಸಗಳ ಯುದ್ಧದ ಕೊನೆಯ ದಿನದವರೆಗೂ ದುರ್ಯೋಧನ ಚಕ್ರವರ್ತಿಯಾಗಿಯೇ ಇದ್ದ. ರಾವಣ ಅದೆಷ್ಟು ವರ್ಷಗಳ ಕಾಲ ಸಾಮ್ರಾಜ್ಯವನ್ನಾಳಿದನೋ? ಪುರಾಣ ಕಥೆಗಳೇಕೆ ಇಂದಿಗೂ ಅಂದಿನ ದುರ್ಯೋಧನ, ರಾವಣರಂಥವರು ವ್ಯಾಪಾರಿಗಳಾಗಿ, ಕಾಳಸಂತೆಕೋರರಾಗಿ, ಧರ್ಮವನ್ನು ಮರೆತ ಜನನಾಯಕರಾಗಿ ಮೆರೆಯುತ್ತ ಅಟ್ಟಹಾಸ ಮಾಡುತ್ತಿರುವುದು ಕಾಣಿಸದೇ? ಆಗ, ವಿಧಿ ಕುರುಡಾಗಿದೆ, ಕೇವಲ ಅನ್ಯಾಯಗಳಿಗೆ ಮಾತ್ರ ತನ್ನ ಸಹಾಯಹಸ್ತವನ್ನು ನೀಡುತ್ತಿದೆ ಎಂದು ಭಾಸವಾಗುತ್ತದೆ. ಹಾಗೆಯೇ ಪುರಾಣಗಳಲ್ಲಿ, ಇತಿಹಾಸದಲ್ಲಿ ನೋಡಿದರೆ ಕಷ್ಟಪರಂಪರೆಗಳು ಬಂದದ್ದು ಸಜ್ಜನರಿಗೇ. ರಾಮನಿಗೇ ವನವಾಸ ತಪ್ಪಲಿಲ್ಲ.

ರಾಜಕುಮಾರ ಕೃಷ್ಣ ಗೊಲ್ಲರ ಮನೆಯಲ್ಲಿ ಬೆಳೆದ, ಭಕ್ತ ಅಂಬರೀಷನಿಗೆ ಋಷಿಯ ಶಾಪ ಕಾಡಿತ್ತು, ವಶಿಷ್ಠ, ವಿಶ್ವಾಮಿತ್ರರ ಜಿದ್ದಾಜಿದ್ದಿಗೆ ಪಾಪ! ಹರಿಶ್ಚಂದ್ರ ಪಡಬಾರದ ಕಷ್ಟಪಟ್ಟ. ಅಬ್ರಹಾಂ ಲಿಂಕನ್, ಜಾನ್ ಕೆನೆಡಿ, ಮಾರ್ಟಿನ್ ಲೂಥರ್ ಕಿಂಗ್, ಮಹಾತ್ಮ ಗಾಂಧಿಯಂಥವರೆಲ್ಲ ಹಂತಕರ ಗುಂಡಿಗೆ ಬಲಿಯಾಗಬೇಕಾಯಿತು. ಕಗ್ಗ ಅದನ್ನು ಎಷ್ಟು ಚೆನ್ನಾಗಿ ಹೇಳುತ್ತದೆ-ವಿಧಿ ಪಾಪಿಗಳನ್ನು ಪ್ರೋತ್ಸಾಹಿಸಿ, ಸಜ್ಜನರನ್ನು ಪರೀಕ್ಷಿಸುತ್ತದೆ. ಆದರೆ ಕೊನೆಯ ಸಾಲು ಮುಖ್ಯ. ಇದು ಏಕೆ ಹೀಗೆ ಮಾಡುತ್ತದೆ? ನಮ್ಮನ್ನು ಶೋಧಿಸುವುದಕ್ಕೆ. ಮೇಲೆ ಹೇಳಿದ ಯಾವುದೇ ಉದಾಹರಣೆಯನ್ನು ತೆಗೆದುಕೊಳ್ಳಿ, ಕೊನೆಗೆ ಜಗಮಾನ್ಯರಾದವರು ಸುಕೃತಗಳನ್ನು ಮಾಡಿದವರೇ. ಅನ್ಯಾಯ ಮಾಡಿದವರೆಲ್ಲ ತಾವೇ ಮಾಡಿದ ಪಾಪದ ಕುಂಡದಲ್ಲಿ ಭಸ್ಮವಾಗಿ ಹೋದರು. ವಿಧಿ ನಮ್ಮನ್ನು ಶೋಧಿಸಿ, ಪರಿಷ್ಕಾರ ಮಾಡಿ ಪರಿಶುದ್ಧರನ್ನಾಗಿಸುತ್ತದೆ. ಅದು ಪಾಪಿಗಳ, ದೋಷಿಗಳ ಪರವಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.