ADVERTISEMENT

ಶಕ್ತಿಮೀರಿದ ಅಪೇಕ್ಷೆ

ಡಾ. ಗುರುರಾಜ ಕರಜಗಿ
Published 23 ಜನವರಿ 2020, 19:45 IST
Last Updated 23 ಜನವರಿ 2020, 19:45 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಹಿಂದೆ ವಾರಾಣಸಿಯಲ್ಲಿ ಸೆನಕರಾಜ ಅಳುತ್ತಿದ್ದಾಗ ಬೋಧಿಸತ್ವ ಇಂದ್ರತ್ವವನ್ನು ಪಡೆದಿದ್ದ. ಸೆನಕರಾಜನಿಗೆ ಒಬ್ಬ ನಾಗರಾಜನ ಕೃಪೆಯಿಂದ ಪ್ರಾಣಿ, ಪಕ್ಷಿಗಳ ಭಾಷೆ ತಿಳಿಯುತ್ತಿತ್ತು.

ಒಂದು ದಿನ ರಾಜ ಅರಮನೆಯ ಮಾಳಿಗೆಯ ಮೇಲೆ ಕುಳಿತು ಊಟಮಾಡುತ್ತಿದ್ದಾಗ ಅವನ ತಟ್ಟೆಯಿಂದ ಒಂದು ಹನಿ ಜೇನುತುಪ್ಪ, ಒಂದು ಹನಿ ಕಾಕಂಬಿ ಮತ್ತು ಒಂದು ಚೂರು ಕಜ್ಜಾಯ ನೆಲದ ಮೇಲೆ ಬಿತ್ತು. ಅದನ್ನು ಕಂಡು ಒಂದು ಇರುವೆ ಓಡಿ ಬಂದು, “ಎಲ್ಲರೂ ಬೇಗ ಬನ್ನಿ, ರಾಜನ ಅರಮನೆಯ ಮಾಳಿಗೆಯ ಮೇಲೆ ಜೇನುತುಪ್ಪ ಹಾಗೂ ಕಾಕಂಬಿಗಳ ಗಡಿಗೆಗಳು ಒಡೆದು ಪ್ರವಾಹದಂತೆ ಹರಿಯುತ್ತಿವೆ. ಕಜ್ಜಾಯದ ಬಂಡಿಯೇ ಮುರಿದು ರಾಶಿ ರಾಶಿ ಕಜ್ಜಾಯ ಬಿದ್ದಿದೆ” ಎಂದು ಕೂಗುತ್ತಿತ್ತು. ಅದರ ಮಾತನ್ನು ಕೇಳಿ ರಾಜ ನಕ್ಕ. ಅವನೇಕೆ ನಕ್ಕ ಎನ್ನುವುದು ರಾಣಿಗೆ ತಿಳಿಯಲಿಲ್ಲ.

ರಾತ್ರಿ ಸ್ನಾನ ಮಾಡಿ ಮಲಗುವುದಕ್ಕೆ ಮುನ್ನ ಮಂಚದ ಮೇಲೆ ಕುಳಿತಿದ್ದಾಗ ಒಂದು ಹೆಣ್ಣು ಜೇನುಹುಳವನ್ನು ಗಂಡು ಜೇನುಹುಳ ಮಾತನಾಡಿಸುತ್ತಿತ್ತು, “ಪ್ರಿಯೆ, ಬೇಗ ಬಾ. ನಾವೂ ರಾಜನ ಮಂಚದ ಮೇಲೆಯೇ ರಮಿಸೋಣ”. ಆಗ ಹೆಣ್ಣು ಹುಳ, “ಸ್ವಲ್ಪ ಹೊತ್ತು ತಾಳು. ಈಗ ರಾಜನ ಮೈಗೆ ಗಂಧವನ್ನು ಹಚ್ಚುತ್ತಾರೆ. ಅದು ಸಾಕಷ್ಟು ಕೆಳಗೂ ಬೀಳುತ್ತದೆ. ಅದರಲ್ಲಿ ನಾನು ಹೊರಳಾಡಿ ಸುಗಂಧಿತಳಾಗುತ್ತೇನೆ. ಆಮೇಲೆ ರಮಿಸೋಣ” ಎಂದಿತು. ಅದರ ಬುದ್ಧಿವಂತಿಕೆಯನ್ನು ಕಂಡು ರಾಜ ಮತ್ತೆ ನಕ್ಕ. ರಾಣಿಗೆ ಅದನ್ನು ಕಂಡು ಆಶ್ಚರ್ಯವಾಯಿತು.

ADVERTISEMENT

ಮರುದಿನ ಮತ್ತೆ ಊಟಮಾಡುವಾಗ ಇಂಥದೇ ಪ್ರಸಂಗ ಬಂದಿತು. ತಟ್ಟೆಯಿಂದ ಒಂದು ಅಗುಳು ಅನ್ನ ಕೆಳಗೆ ಬಿದ್ದಾಗ ಮತ್ತೊಂದು ಇರುವೆ, “ಬನ್ನಿ, ಅನ್ನದ ಗಾಡಿ ಮುರಿದು ಹೋಗಿ ಅನ್ನದ ರಾಶಿ ಬಿದ್ದಿದೆ. ಎಲ್ಲರೂ ಹೊಟ್ಟೆತುಂಬ ತಿನ್ನೋಣ” ಎಂದು ಬಳಗವನ್ನು ಕರೆಯಿತು. ಈಗ ರಾಜ ಜೋರಾಗಿ ನಕ್ಕ. ರಾಣಿ ನಗುವಿನ ಕಾರಣ ಕೇಳಿದಳು. ಆ ಕಾರಣವನ್ನು ಮಾತ್ರ ಕೇಳಬೇಡ ಎಂದು ರಾಜ ಎದ್ದು ಹೋದ. ರಾಣಿಗೆ ಸಂಶಯ ಬಲವಾಯಿತು. ಆಕೆ ಅವನನ್ನು ಒಂದೇ ಸಮನೆ ಕಾಡತೊಡಗಿದಳು. ಕಾಟ ವಿಪರೀತವಾದಾಗ ರಾಜ, “ರಾಣಿ, ನನಗೆ ಪ್ರಾಣಿ, ಪಕ್ಷಿಗಳ ಭಾಷೆ ತಿಳಿಯುತ್ತದೆ. ಅವುಗಳ ಮಾತು ಕೇಳಿ ನಗು ಬರುತ್ತದೆ” ಎಂದ. “ಹಾಗಾದರೆ ನನಗೂ ಭಾಷೆ ತಿಳಿಯುವ ಮಂತ್ರವನ್ನು ಹೇಳಿ” ಎಂದು ಗಂಟು ಬಿದ್ದಳು. ರಾಜ ಹೇಳಿದ, “ನನಗೆ ಈ ಮಂತ್ರವನ್ನು ಕಲಿಸಿದ ನಾಗರಾಜ, ಇದನ್ನು ಮತ್ತೊಬ್ಬರಿಗೆ ಹೇಳಿದರೆ ನೀನು ಸತ್ತು ಹೋಗುತ್ತೀ ಎಂದು ಹೇಳಿದ್ದಾನೆ. ಆದ್ದರಿಂದ ಅದನ್ನು ನಿನಗೆ ಕಲಿಸಲಾರೆ”. ಆಕೆಯ ಹಟ ಹೆಚ್ಚಾಯಿತು. “ನೀನು ಸತ್ತರೂ ಚಿಂತೆಯಿಲ್ಲ, ನನಗೆ ಮಂತ್ರವನ್ನು ಕೊಟ್ಟೇ ತೀರಬೇಕು” ಎಂದು ಅಳತೊಡಗಿದಳು.

ಹೆಂಡತಿಯ ಪ್ರೀತಿಗೆ ವಶನಾಗಿ ರಾಜ ಮಂತ್ರವನ್ನು ಕೊಡಲು ತೀರ್ಮಾನಿಸಿದ. ಆಕೆಯನ್ನು ಅರಮನೆಯ ಉದ್ಯಾನದಲ್ಲಿ ಬಂದು ಸೇರಲು ತಿಳಿಸಿ ನಡೆದ. ಇದನ್ನು ಕಂಡ ಇಂದ್ರ, ಇಂಥ ಒಳ್ಳೆಯ ರಾಜ ಹೆಂಡತಿಯ ಮೋಹದಿಂದ ಸತ್ತು ಹೋಗುತ್ತಾನಲ್ಲ ಎಂದು ಚಿಂತಿಸಿ ಭೂಮಿಗೆ ಬಂದು ರಾಜನನ್ನು ಕಂಡ, “ನೀನು ಹೀಗೆ ಸಾಯುವುದು ಉಚಿತವಲ್ಲ ಮತ್ತು ಆಕೆಗೆ ಆ ಮಂತ್ರ ಪಡೆಯುವ ಶಕ್ತಿ ಇಲ್ಲ” ಎಂದ ಇಂದ್ರ. “ಆದರೆ ಮಾತು ಕೊಟ್ಟುಬಿಟ್ಟಿದ್ದೇನೆ, ತಪ್ಪಿಸುವುದು ಹೇಗೆ?” ಎಂದು ಕೇಳಿದ ರಾಜ. “ಚಿಂತೆ ಬೇಡ. ಮಂತ್ರವನ್ನು ಪಡೆಯಲು ಮಾಡಬೇಕಾದ ಸಿದ್ಧತೆ ಎಂದು ಕಟುಕರಿಂದ ನೂರು ಚಾಟಿ ಏಟು ಬೆನ್ನ ಮೇಲೆ ಹೊಡೆಸು. ಆಗ ಆಕೆ ಮಂತ್ರ ಕೇಳುವುದಿಲ್ಲ”. ರಾಜ ಹಾಗೆಯೇ ವ್ಯವಸ್ಥೆ ಮಾಡಿದ. ಮೂರು ಏಟು ಬೀಳುವುದರಲ್ಲಿ ಆಕೆ “ಮಂತ್ರ ಬೇಡ” ಎಂದು ನಿಂತು ಬಿಟ್ಟಳು.

ಸಾಧನೆಗಳನ್ನು ಯಾರು ಯಾರಿಗೋ ಅರ್ಪಿಸಲಾಗದು, ಶಕ್ತಿ ಇಲ್ಲದೇ ಆ ಶಕ್ತಿಗಳನ್ನು ಕೇಳಲೂ ಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.