ADVERTISEMENT

ಧರ್ಮದ ಚೌಕಟ್ಟು

ಡಾ. ಗುರುರಾಜ ಕರಜಗಿ
Published 18 ಸೆಪ್ಟೆಂಬರ್ 2019, 6:41 IST
Last Updated 18 ಸೆಪ್ಟೆಂಬರ್ 2019, 6:41 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಬ್ರಹ್ಮದತ್ತ ವಾರಾಣಸಿಯನ್ನು ಆಳುತ್ತಿದ್ದಾಗ ಬೋಧಿಸತ್ವ ಒಬ್ಬ ಚಾಂಡಾಲನಾಗಿ ಹುಟ್ಟಿದ್ದ. ಬೆಳೆದು ದೊಡ್ಡವನಾದ ಮೇಲೆ ರಾಜಧಾನಿಯಲ್ಲಿ ಸೇವೆ ಮಾಡಿಕೊಂಡು ಕುಟುಂಬ ನಿರ್ವಹಣೆ ಮಾಡುತ್ತಿದ್ದ.

ಒಂದು ದಿನ ಅವನ ಹೆಂಡತಿಗೆ ಮಾವಿನಹಣ್ಣು ತಿನ್ನುವ ಆಸೆಯಾಯಿತು. ಆಕೆ ತನ್ನ ಬಯಕೆಯನ್ನು ಗಂಡನ ಬಳಿ ಹೇಳಿಕೊಂಡಳು. ಆತ ಯೋಚನೆ ಮಾಡಿ ಹೇಳಿದ, 'ಪ್ರಿಯೆ, ಇದು ಮಾವಿನಹಣ್ಣಿನ ಕಾಲವಲ್ಲ. ಈ ಸಮಯಕ್ಕೆ ಸಿಕ್ಕುವ ಯಾವ ಹಣ್ಣನ್ನಾದರೂ ಹೇಳು, ತಂದುಕೊಡುತ್ತೇನೆ' ಆಕೆಗೆ ಹಟ ಬಂದಿತು, 'ನನಗೆ ಬೇಕಾದದ್ದು ಮಾವಿನಹಣ್ಣು. ಬೇರೆ ಯಾವ ಹಣ್ಣೂ ಬೇಡ. ಎರಡು ದಿನದಲ್ಲಿ ಹಣ್ಣು ಸಿಗದಿದ್ದರೆ ಸತ್ತು ಹೋಗುತ್ತೇನೆ' ಎಂದು ಹೆದರಿಸಿದಳು. ಬೋಧಿಸತ್ವ ಯೋಚಿಸಿದ. ಅತ್ಯಂತ ಪ್ರಿಯಳಾದ ಪತ್ನಿ ಕೇಳಿದ್ದನ್ನು ತಂದುಕೊಡುವುದು ತನ್ನ ಕರ್ತವ್ಯ. ಆದರೆ ಮಾವಿನಹಣ್ಣು ಎಲ್ಲಿ ಸಿಕ್ಕೀತು ಎಂದು ಯೋಚನೆ ಮಾಡುವಾಗ ರಾಜನ ಉದ್ಯಾನದಲ್ಲಿ ಒಂದು ಮಾವಿನಮರ ಮಾತ್ರ ವರ್ಷವಿಡೀ ಹಣ್ಣು ಕೊಡುತ್ತದೆ. ಅದರಲ್ಲಿ ಹಣ್ಣಿದ್ದರೆ ತಂದುಬಿಡಬೇಕು ಎಂದುಕೊಂಡು ರಾತ್ರಿ ಉದ್ಯಾನವನ್ನು ಕಳ್ಳತನದಲ್ಲಿ ಪ್ರವೇಶಿಸಿದ. ಕತ್ತಲೆಯಲ್ಲಿ ಹಣ್ಣು ಕಾಣುವುದು ಹೇಗೆ? ಅದರಲ್ಲೂ ರಾಜಸೇವಕರು ಅಲ್ಲಿ ಸುತ್ತಾಡುತ್ತಿದ್ದಾಗ ಸದ್ದು ಮಾಡದೆ ಕೆಲಸ ಮಾಡಬೇಕು. ಹೀಗೆ ನಿಧಾನವಾಗಿ ಕೊಂಬೆಯಿಂದ ಕೊಂಬೆಗೆ ಹೋಗುತ್ತಿದ್ದಂತೆ ರಾತ್ರಿ ಕಳೆದು ಬೆಳಗಾಯಿತು. ಈಗ ಕೆಳಗಿಳಿದರೆ ಸೈನಿಕರು ಬಂಧಿಸಿ ಕರೆದೊಯ್ಯುತ್ತಾರೆ. ಆದ್ದರಿಂದ ಹಗಲಲ್ಲಿ ಹಣ್ಣುಗಳನ್ನು ನೋಡಿ ಗುರುತಿಟ್ಟುಕೊಂಡು, ರಾತ್ರಿ ಅವುಗಳನ್ನು ಕತ್ತರಿಸಬೇಕು ಎಂದು ಮರದಲ್ಲೇ ಅಡಗಿ ಕುಳಿತ.

ಬೆಳಿಗ್ಗೆ ಅಲ್ಲಿಗೆ ರಾಜಪುರೋಹಿತ ಬಂದು ಮರದ ಕೆಳಗೆ ಆಸನಗಳನ್ನು ಜೋಡಿಸಿ ಸಿದ್ಧನಾಗಿ ನಿಂತ. ರಾಜ ಅಲ್ಲಿಗೆ ಬಂದು ಆಸನದ ಮೇಲೆ ಕುಳಿತ. ಪುರೋಹಿತ ಆತನಿಗೆ ಪಾಠ ಪ್ರಾರಂಭಿಸಿದ. ಮರದ ಮೇಲಿದ್ದ ಬೋಧಿಸತ್ವನಿಗೆ ಆಶ್ಚರ್ಯ ಮತ್ತು ಆಘಾತಗಳಾದವು. ಕಲಿಯುವ ರಾಜ ಎತ್ತರದ ಆಸನದ ಮೇಲೆ ಕುಳಿತಿದ್ದಾನೆ, ಕಲಿಸುವ ಗುರು ಕೆಳಗೆ ಕುಳಿತಿದ್ದಾನೆ! ಚಾಂಡಾಲನಾದರೂ ಧಾರ್ಮಿಕನಾದ ಬೋಧಿಸತ್ವ, 'ಛೇ ಏನು ನನ್ನ ಜನ್ಮಇದು! ಹೆಂಡತಿಯ ಆಸೆಗಾಗಿ ಹಣ್ಣು ಕಳವು ಮಾಡಲು ಬಂದ ನಾನು ಅಧಾರ್ಮಿಕ, ಉನ್ನತ ಆಸನದಲ್ಲಿ ಕುಳಿತು ಶಿಷ್ಯನಾದ ರಾಜನೂ ಅಧಾರ್ಮಿಕ, ಕೆಳಗೆ ಕುಳಿತು ಕಲಿಸುವ ಪುರೋಹಿತನೂ ಅಧಾರ್ಮಿಕ'. ಹೀಗೆ ಹೇಳುತ್ತ ಮರದಿಂದ ಕೆಳಗಿಳಿದು ರಾಜನನ್ನು ನೋಡುತ್ತ ಹೇಳಿದ, “ಮಹಾರಾಜಾ, ನಾನು ನಾಶವಾಗಿದ್ದೇನೆ, ನೀನು ಮೂರ್ಖನಾಗಿದ್ದೀ ಮತ್ತು ಈ ರಾಜಪುರೋಹಿತ ಸತ್ತು ಹೋಗಿದ್ದಾನೆ. ಸಾಕಿನ್ನು ನಾಟಕ”. ರಾಜ ಎದ್ದು ನಿಂತು, 'ನೀನು ಯಾರು? ಏಕೆ ಹೀಗೆ ಹೇಳಿದೆ?” ಎಂದು ಕೇಳಿದ. ಅದಕ್ಕೆ ಬೋಧಿಸತ್ವ, “ರಾಜಾ ನಾನು ಹುಟ್ಟಿನಿಂದ ಚಾಂಡಾಲ. ಆದರೆ ಅಧರ್ಮಿಯಲ್ಲ. ಆದರೆ ಇಂದು ಹೆಂಡತಿಯ ಅಪೇಕ್ಷೆ ಪೂರೈಸಲು ಕಳ್ಳತನ ಮಾಡಲು ಬಂದು ಧಾರ್ಮಿಕವಾಗಿ ನಾನು ನಾಶವಾಗಿದ್ದೇನೆ. ನೀನು ರಾಜನಾದವನು, ಧರ್ಮವನ್ನು ತಿಳಿದುಕೊಳ್ಳಬೇಕಾದವನು. ಶಿಷ್ಯನಾದ ನೀನು ಗುರುವಿಗಿಂತ ಎತ್ತರದ ಸ್ಥಾನದಲ್ಲಿ ಕುಳಿತು ಅವನಿಗೆ ಅಪಮಾನ ಮಾಡಿ ಮೂರ್ಖನಾಗಿದ್ದೀಯಾ. ಈ ರಾಜ ಪುರೋಹಿತ ಹೊಟ್ಟೆಪಾಡಿಗೆ, ನೀನು ಹೇರಳವಾಗಿ ನೀಡುವ ಹಣದಾಸೆಗೆ ಬಲಿಯಾಗಿ ಧರ್ಮದ ಪರಿ ಗೊತ್ತಿದ್ದೂ ಗುರುಧರ್ಮವನ್ನು ಆಚರಿಸದೇ ಧಾರ್ಮಿಕವಾಗಿ ಸತ್ತು ಹೋಗಿದ್ದಾನೆ' ಎಂದ.

ADVERTISEMENT

ರಾಜನಿಗೆ ತಪ್ಪಿನ ಅರಿವಾಗಿ ಗುರುವನ್ನು ಉನ್ನತಾಸನದ ಮೇಲೆ ಕೂಡ್ರಿಸಿ, ತಾನು ಕೆಳಗೆ ಕುಳಿತು ಕಲಿಯತೊಡಗಿದ. ತಾನೇ ಮರದ ಹಣ್ಣನ್ನು ಬೋಧಿಸತ್ವನಿಗೆ ಕೊಟ್ಟು ಕಳ್ಳತನದ ಪಾಪದಿಂದ ಪಾರು ಮಾಡಿದ ಮತ್ತು ಆತನನ್ನು ಕೊತ್ವಾಲನನ್ನಾಗಿ ನೇಮಿಸಿಕೊಂಡ.

ನಮ್ಮ ನಮ್ಮ ಧರ್ಮದ ಚೌಕಟ್ಟಿನಲ್ಲಿ ಕಾರ್ಯ ಮಾಡುವುದು ಸಮಾಜ ಜೀವನದ ನೆಮ್ಮದಿಗೆ ಅವಶ್ಯಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.