ADVERTISEMENT

ನಮ್ಮದಲ್ಲದ ವಸ್ತು-ಹುಲ್ಲು

ಡಾ. ಗುರುರಾಜ ಕರಜಗಿ
Published 12 ನವೆಂಬರ್ 2019, 21:47 IST
Last Updated 12 ನವೆಂಬರ್ 2019, 21:47 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಹಿಂದೆ ಬ್ರಹ್ಮದತ್ತ ವಾರಾಣಸಿಯಲ್ಲಿ ರಾಜ್ಯಭಾರ ಮಾಡುತ್ತಿದ್ದಾಗ ಬೋಧಿಸತ್ವ ಅವನ ಸಚಿವನಾಗಿದ್ದ. ಒಂದು ಬಾರಿ ಬ್ರಹ್ಮದತ್ತ ತನ್ನ ರಾಜ್ಯವನ್ನು ವಿಸ್ತರಿಸಬೇಕೆಂದು ದೊಡ್ಡ ಸೈನ್ಯದೊಡನೆ ಹೊರಟು ಕೋಸಲ ರಾಜ್ಯದ ಮೇಲೆ ದಾಳಿ ಮಾಡಿದ. ಸಾವತ್ತಿ ನಗರದಲ್ಲಿ ನುಗ್ಗಿ ರಾಜನನ್ನು ಸೆರೆ ಹಿಡಿದ. ಕೋಸಲರಾಜನ ಮಗ ಛತ್ತ ಓಡಿಹೋಗಿ ತಪ್ಪಿಸಿಕೊಂಡ. ಆತ ತಕ್ಕಶಿಲೆಗೆ ಹೋಗಿ ಮೂರು ವೇದಗಳು ಮತ್ತು ಹದಿನೆಂಟು ವಿವಿಧ ವಿದ್ಯೆಗಳನ್ನು ಕಲಿತು ಅಲ್ಲಿಂದ ಹೊರಟು ತನಗೆ ಸಿಕ್ಕ ಗುರುಗಳಿಂದ ಬೇರೆ ಬೇರೆ ವಿದ್ಯೆಗಳನ್ನು ಕಲಿಯುತ್ತ ನಡೆದ.

ಒಂದು ಹಳ್ಳಿಯಲ್ಲಿದ್ದ ಆಶ್ರಮ ಸೇರಿ ಅವರಿಂದಲೂ ವಿದ್ಯೆಗಳನ್ನು ಕಲಿತ. ಅಲ್ಲಿ ಐದು ನೂರು ಜನ ಋಷಿಗಳಿದ್ದರು. ಛತ್ತ ಅವರನ್ನು ಕೇಳಿದ, ‘ನೀವು ಈ ಪ್ರದೇಶದಲ್ಲೇ ಏಕೆ ಉಳಿದಿದ್ದೀರಿ? ಬೇರೆ ದೇಶಗಳನ್ನು ಸುತ್ತಿ ಇನ್ನೂ ಹೆಚ್ಚು ಕಲಿಯಬಹುದಲ್ಲ’. ‘ನಮಗೆ ಹೇಗೆ ಹೋಗುವುದು, ಎಲ್ಲಿಗೆ ಹೋಗುವುದು ತಿಳಿದಿಲ್ಲವಾದ್ದರಿಂದ ಇಲ್ಲಿಯೇ ಉಳಿದಿದ್ದೇವೆ’ ಎಂದರು ಋಷಿಗಳು. ‘ನಾನು ಕರೆದುಕೊಂಡು ಹೋಗುತ್ತೇನೆ, ಬನ್ನಿ’ ಎಂದು ಅವರೆಲ್ಲರನ್ನು ಕರೆದುಕೊಂಡು ಬೇರೆ ನಗರಗಳನ್ನು ತೋರಿಸುತ್ತ ವಾರಾಣಸಿಗೆ ಕರೆತಂದ.

ರಾಜ ಬ್ರಹ್ಮದತ್ತ ಈ ಋಷಿಗಳನ್ನೆಲ್ಲ ಬರ ಮಾಡಿಕೊಂಡು, ಆದರದಿಂದ ರಾಜೋದ್ಯಾನದಲ್ಲಿ ಅವರನ್ನು ಇರಿಸುವ ವ್ಯವಸ್ಥೆ ಮಾಡಿದ. ಈ ಹಿಂದೆ ಬ್ರಹ್ಮದತ್ತ ಕೋಸಲ ರಾಜ್ಯದ ಮೇಲೆ ದಾಳಿ ಮಾಡಿದಾಗ ಅಲ್ಲಿದ್ದ ಸಮಸ್ತ ಐಶ್ವರ್ಯವನ್ನೆಲ್ಲ ಲೂಟಿ ಮಾಡಿ ತಂದಿದ್ದ. ಅದನ್ನೆಲ್ಲ ಕಬ್ಬಿಣದ ಹಂಡೆಗಳಲ್ಲಿ ತುಂಬಿಸಿ ರಾಜೋದ್ಯಾನದಲ್ಲಿ ಆಳದಲ್ಲಿ ಹೂಳಿ ಇಟ್ಟಿದ್ದ. ಈ ವಿಷಯಯಾರಿಗೂ ತಿಳಿಯದಂತೆ ನೋಡಿಕೊಂಡಿದ್ದ. ಈ ಸನ್ಯಾಸಿಗಳು ಅಲ್ಲಿಯೇ ಇದ್ದದ್ದು.

ADVERTISEMENT

ಪಾಪ! ಅವರಿಗೇನು ಗೊತ್ತು, ತಮ್ಮ ಪಾದದಡಿಯೇ ಅಪಾರ ಐಶ್ವರ್ಯವಿದೆಯೆಂದು? ಆದರೆ ಛತ್ತನ ಮನಸ್ಸಿನಲ್ಲಿ ಆರದ ದ್ವೇಷವಿತ್ತು. ಈ ರಾಜ ನಮ್ಮರಾಜ್ಯವನ್ನು ಸೋಲಿಸಿ, ಲೂಟಿ ಮಾಡಿದ್ದಾನೆ, ಅದಕ್ಕೆ ಪ್ರತೀಕಾರ ಮಾಡಬೇಕು ಎಂದುಕೊಂಡೇ ಆತ ಇಲ್ಲಿಗೆ ಬಂದವನು. ಛತ್ತ ತನಗೆ ತಿಳಿದ ವಿದ್ಯೆಯಿಂದ ನಿಧಿಯನ್ನು ಬಚ್ಚಿಟ್ಟ ಸ್ಥಳವನ್ನು ಗುರುತಿಸಿದ. ನಂತರ ಋಷಿಗಳಿಗೆ ಹೇಳಿದ, ‘ನಾನು ಛತ್ತ, ಕೋಸಲ ರಾಜ್ಯದ ರಾಜಪುತ್ರ. ಈ ರಾಜ ನನ್ನ ತಂದೆಯನ್ನು ಸೆರೆಯಲ್ಲಿಟ್ಟು ರಾಜ್ಯದ ಸಂಪತ್ತೆಲ್ಲವನ್ನು ಲೂಟಿ ಮಾಡಿ ಈ ಉದ್ಯಾನದಲ್ಲಿ ಅಡಗಿಸಿ ಇಟ್ಟಿದ್ದಾನೆ.

ನಾನು ಇಂದು ರಾತ್ರಿ ಅದನ್ನು ತೆಗೆಸಿಕೊಂಡು ಹೋಗಿ ಮತ್ತೆ ರಾಜ್ಯವನ್ನು ಕಟ್ಟುತ್ತೇನೆ. ತಾವೆಲ್ಲ ನನ್ನೊಡನೆ ಬಂದು ಅಲ್ಲಿಯೇ ಶಾಂತಿಯಿಂದ ಧರ್ಮಕಾರ್ಯಗಳನ್ನು ಮಾಡಿಕೊಂಡಿರಬಹುದು’. ಒಂದೆಡೆಗೆ ಶಾಂತಿಯಿಂದ ಬದುಕುವುದು ಸಾಧ್ಯವೆಂದಾಗ ಅವರೆಲ್ಲ ಒಪ್ಪಿದರು. ಅಂದೇ ರಾತ್ರಿ ಸನ್ಯಾಸಿಗಳೆಲ್ಲರೊಂದಿಗೆ ಸೇರಿ ನೆಲದಲ್ಲಿ ಹೂತಿದ್ದ ನಿಧಿಯನ್ನು ತೆಗೆದು ದೊಡ್ಡಚರ್ಮದ ಚೀಲಗಳಲ್ಲಿ ತುಂಬಿಕೊಂಡು ಕೋಸಲ ರಾಜ್ಯಕ್ಕೆ ಹೊರಟರು. ಕೋಸಲವನ್ನು ಸೇರಿ ಛತ್ತ ಮತ್ತೆ ಸೈನಿಕರನ್ನು ಕೂಡಿಸಿದ, ಮಂತ್ರಿಗಳನ್ನು ನಿಯಮಿಸಿದ. ಬಳಿಯಿದ್ದ ಹಣದಿಂದ ಕೋಟೆಗಳನ್ನು ಭದ್ರ ಮಾಡಿದ.

ಇತ್ತ ವಾರಾಣಸಿಯ ರಾಜನಿಗೆ ಈ ವಿಷಯ ತಿಳಿದು ರಾಜೋದ್ಯಾನಕ್ಕೆ ಹೋಗಿ ನೋಡಿದರೆ ನಿಧಿ ತುಂಬಿದ್ದ ಗಡಿಗೆಗಳಲ್ಲಿ ಹುಲ್ಲುತುಂಬಿದೆ! ಅಯ್ಯೋ ಹಣ ಹೋಗಿ ಬರೀ ಹುಲ್ಲು ಬಂತು ಎಂದು ಪ್ರಲಾಪಿಸತೊಡಗಿದ. ಆಗ ಬೋಧಿಸತ್ವ ಹೇಳಿದ, ‘ರಾಜಾ, ಏಕೆ ಹುಲ್ಲು, ಹುಲ್ಲು ಎಂದು ಅಳುತ್ತೀಯೆ? ಇಷ್ಟು ದಿನಗಳ ಕಾಲ ನೆಲದಲ್ಲಿ ಕುಳಿತಿದ್ದ ಹಣ, ನಿನಗೆ ಪ್ರಯೋಜನವಿಲ್ಲದೆ ಹುಲ್ಲೇ ಆಗಿತ್ತಲ್ಲ? ಅದಕ್ಕೇಕೆ ದುಃಖ’ ಎಂದು ಸಮಾಧಾನ ಮಾಡಿ ಕರೆದುಕೊಂಡು ಹೋದ.

ಹೌದು, ನಮ್ಮದಲ್ಲದ, ಬೇರೆಯವರಿಗೆ ನೋವು ಕೊಟ್ಟು ಪಡೆದ ಹಣವೆಲ್ಲ ಹುಲ್ಲೇ. ಅದು ನಿಮ್ಮ ಪ್ರಯೋಜನಕ್ಕೆ ಬರುವುದಿಲ್ಲ ಮಾತ್ರವಲ್ಲ, ಅವಕಾಶ ಬಂದಾಗ ಅದೇ ಒಣಗಿ, ಬೆಂಕಿಯನ್ನು ತಗುಲಿಸಿಕೊಂಡು, ತಂದವನನ್ನು ಸುಟ್ಟು ಹಾಕುತ್ತದೆ. ಈ ಹುಲ್ಲಿನ ಬಗ್ಗೆ ಮೋಹ ಬೇಡ, ಎಚ್ಚರ ಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.