ADVERTISEMENT

ಅರೆಗಣ್ಣಿನಿಂದಲೂ ಪ್ರಗತಿ ಸಾಧ್ಯ

ಡಾ. ಗುರುರಾಜ ಕರಜಗಿ
Published 25 ಅಕ್ಟೋಬರ್ 2018, 6:00 IST
Last Updated 25 ಅಕ್ಟೋಬರ್ 2018, 6:00 IST

ಅರೆಗಣ್ಣಿನಿಂದಲೂ ಪ್ರಗತಿ ಸಾಧ್ಯ

ಅರೆಗಣ್ಣು ನಮದೆಂದು ಕೊರಕೊರಗಿ ಫಲವೇನು ? |
ಅರೆಬೆಳಕು ಧರೆಯೊಳೆಂದೊರಲಿ ಸುಖವೇನು ? ||
ಇರುವಕಣ್ಣಿರುವಬೆಳಕಿನೊಳಾದನಿತ ನೋಡಿ |
ಪರಕಿಸಿದೊಡದು ಲಾಭ – ಮಂಕುತಿಮ್ಮ || 47 ||

ಶಬ್ದ-ಅರ್ಥ: ಅರೆಗಣ್ಣು=ಅಸ್ಪಷ್ಟ ದೃಷ್ಟಿ, ದರೆಯೊಳೆಂದೊರಲಿ=ಧರೆಯೊಳು+ಎಂದು+ಒರಲಿ,
ಇರುವಕಣ್ಣಿರುವಬೆಳಕಿನೊಳಾದನಿತ=ಇರುವ ಕಣ್ಣು+ಇರುವ ಬೆಳಕಿನೊಳು+ಆದನಿತ(ಸಾಧ್ಯವಿದ್ದಷ್ಟು) ಪರಿಕಿಸಿದೊಡದು=ಪರಿಕಿಸಿದೊಡೆ(ಪರೀಕ್ಷಿಸಿದರೆ)+ಅದು

ADVERTISEMENT

ವಾಚ್ಯಾರ್ಥ: ನಮ್ಮದು ಅರೆದೃಷ್ಟಿ, ಸಂಪೂರ್ಣ ತಿಳಿವಳಿಕೆ ಇಲ್ಲದ ದೃಷ್ಟಿ ಎಂದು ಸದಾ ಕೊರಗುತ್ತಿದ್ದರೆ ಏನು ಫಲ? ಈ ಜಗತ್ತಿನಲ್ಲಿ ಇರುವುದೇ ಅರೆ ಜ್ಞಾನ ಎಂದು ಗೋಳಾಡಿದರೆ ಏನು ಬಂತು ಸುಖ? ನಮಗಿರುವ ಕಣ್ಣಿನಿಂದ ದೊರೆತ ಬೆಳಕಿನಿಂದ ಸಾಧ್ಯವಾದಷ್ಟು ಗಮನಿಸಿದರೆ ಅದೇ ಲಾಭ ಬದುಕಿಗೆ.

ವಿವರಣೆ: ನಾವೆಲ್ಲ ಮಹಾನ್ ದಾರ್ಶನಿಕರಲ್ಲ, ಮಹರ್ಷಿಗಳಲ್ಲ. ನಮ್ಮ ದೃಷ್ಟಿ ಸಮಗ್ರವಾದದ್ದಲ್ಲ, ಅದೇನಿದ್ದರೂ ಕೊಂಚವೇ ಜ್ಞಾನದ ದೃಷ್ಟಿ-ಅರೆಗಣ್ಣು. ಅರೆಗಣ್ಣಿನ ದೃಷ್ಟಿ ಬಹಳ ದೂರ ಹೋಗಲಾರದು. ಅರೆಮರೆ ಜ್ಞಾನದ ಪರಿಸ್ಥಿತಿಯೇ ಹಾಗೆ. ಇದು ಇಂದು ಮಾತ್ರ ಕಂಡು ಬರುವ ಸ್ಥಿತಿಯಲ್ಲ. ಪ್ರಪಂಚದ ಉಗಮದಿಂದಲೂ ಪರಿಪೂರ್ಣ ದೃಷ್ಟಿ ಇರುವ ಮಹಾನುಭಾವರು ಅಲ್ಲೊಬ್ಬರು, ಇಲ್ಲೊಬ್ಬರು ಮಾತ್ರ. ಬಹುಜನರ ದೃಷ್ಟಿ ಅರೆಗಣ್ಣೇ. ನಮ್ಮದು ಅರೆಗಣ್ಣು ಎಂದು ಕೊರಗುತ್ತ ಕುಳಿತರೆ ಏನು ಫಲ! ಬರೀ ತಳಮಳದಿಂದ ಪೂರ್ಣದೃಷ್ಟಿ ಬರುವ ಸಾಧ್ಯತೆ ಇಲ್ಲ. ನಮ್ಮ ಅಲ್ಪ ಜ್ಞಾನದಿಂದ ಜಗತ್ತೆಲ್ಲವೂ ಅರೆಬೆಳಕಿನಿಂದಿದೆ ಎನ್ನಿಸುತ್ತಿದೆ. ಧರೆಯ ಬೆಳಕನ್ನು ಗ್ರಹಿಸುವಲ್ಲಿ ನಮ್ಮ ಕಣ್ಣುಗಳು ಸಫಲವಾಗಿಲ್ಲದಿದ್ದುದರಿಂದ ಧರೆಯಲ್ಲಿ ಬರಿ ಅರೆಬೆಳಕೇ ತೋರುತ್ತಿದೆ. ಹಾಗಾದರೆ ನಮ್ಮ ಬದುಕು ಹೀಗೆಯೇ ಮಬ್ಬಾದ ಬೆಳಕಿನಲ್ಲೇ ನಡೆಯಬೇಕೇ? ಕಗ್ಗ ಹೇಳುತ್ತದೆ, ನಮ್ಮ ದೌರ್ಬಲ್ಯಗಳ ಬಗ್ಗೆ ನರಳಿ, ಕೊರಗಿ ಫಲವಿಲ್ಲ. ನಮಗಿರುವ ಕಣ್ಣಿನ ಶಕ್ತಿಯಲ್ಲಿ, ತೋರಿಬರುವ ಬೆಳಕಿನಲ್ಲಿ ನಮಗೆ ಆದಷ್ಟು ಶಕ್ತಿಯಿಂದ ಪರೀಕ್ಷಿಸಿದಾಗ ಬರುವುದೇ ಲಾಭ.

ಸೂರ್ಯ ಹೇಳಿದ, ‘ನಾನು ಎಂದಿನಿಂದಲೂ ಬೆಳಗುತ್ತಲೇ ಇದ್ದೇನೆ. ನನ್ನ ಹೆಸರಿನಿಂದ ಜನ ಭಾನುವಾರ ರಜೆ ತೆಗೆದುಕೊಳ್ಳುತ್ತಾರೆ. ನನಗೆ ರಜವೇ ಇಲ್ಲ. ನಾನು ಆರು ತಿಂಗಳುಗಳ ಕಾಲ ರಜೆ ತೆಗೆದುಕೊಳ್ಳುತ್ತೇನೆ’. ಜಗತ್ತಿನ ಜೀವಿಗಳಿಗೆ ಗಾಬರಿಯಾಯಿತು. ಸೂರ್ಯನಿಲ್ಲದಿದ್ದರೆ ಬದುಕುವುದು ಹೇಗೆ? ಸೂರ್ಯನಿಗೆ ಬದಲಿಯಾಗಿ ಯಾರು ತಾನೇ ಈ ಬೆಳಕನ್ನು ಕೊಡಬಲ್ಲವರು? ಎಲ್ಲ ಬೆಳಕಿನ ಮೂಲಗಳು ಹೆದರಿ ಹಿಂಜರಿದವು. ಆದರೆ ಗುಡಿಸಲಿನ ಮೂಲೆಯಲ್ಲಿದ್ದ ಹಣತೆ ಹೇಳಿತು, ‘ನಾನು ಸೂರ್ಯನ ಸ್ಥಾನವನ್ನು ತುಂಬಲಾರೆ, ಪ್ರಪಂಚವನ್ನು ಬೆಳಗಲಾರೆ. ಆದರೆ ನನಗೆ ಯಾರಾದರೂ ಎಣ್ಣೆಯನ್ನು ಸರಿಯಾಗಿ ಪೂರೈಸಿದರೆ ಈ ಗುಡಿಸಲಿನ ಮೂಲೆಯನ್ನು ಬೆಳಗಿಸಬಲ್ಲೆ’. ನಾವೂ ಅಷ್ಟೇ, ನಮ್ಮ ಜ್ಞಾನದ ಮಿತಿಯಲ್ಲಿ, ಪ್ರಯತ್ನಶೀಲರಾಗಿ ದುಡಿದರೆ ನಮ್ಮ ಅರೆಗಣ್ಣು ಕೂಡ ನಮ್ಮನ್ನು ಸ್ವಲ್ಪ ಮುನ್ನಡೆಯಿಸಬಲ್ಲದು. ಡಿ.ವಿ.ಜಿಯವರ ಯಾವುದೇ ಕಗ್ಗದಲ್ಲಿ ನಿರಾಸೆಗೆ ಅವಕಾಶವಿಲ್ಲ. ಅಲ್ಲೊಂದು ಅವಕಾಶವಿದೆ. ಎಂಥ ಆಶಾರಹಿತ ಪರಿಸ್ಥಿತಿಯಲ್ಲಿ ತಡವಿಕೊಂಡು ಮೇಲೇಳುವ ಪ್ರಚೋದನೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.