ADVERTISEMENT

ಕಿರಿಯರೊಂದಿಗೆ ಸ್ನೇಹ

ಡಾ. ಗುರುರಾಜ ಕರಜಗಿ
Published 15 ಡಿಸೆಂಬರ್ 2018, 6:26 IST
Last Updated 15 ಡಿಸೆಂಬರ್ 2018, 6:26 IST
   

ವಾರಾಣಸಿಯಲ್ಲಿ ಬ್ರಹ್ಮದತ್ತ ರಾಜ್ಯಭಾರ ಮಾಡುವ ಕಾಲದಲ್ಲಿ ಬೋಧಿಸತ್ವ ರಾಜನ ತೋಟದಲ್ಲಿ ಒಂದು ದರ್ಭೆ ಹುಲ್ಲಿನ ದೇವತೆಯಾಗಿ ಹುಟ್ಟಿದ್ದ. ಅದು ಎಲ್ಲ ವೃಕ್ಷದೇವತೆಗಳಲ್ಲಿ ಅತ್ಯಂತ ಕನಿಷ್ಠವಾದದ್ದು. ಅದೇ ತೋಟದಲ್ಲಿಯೇ ಒಂದು ಅತ್ಯಂತ ಮಂಗಲವಾದ ಮತ್ತು ಬಲಿಷ್ಠವಾದ ವೃಕ್ಷವಿತ್ತು. ಅದರ ಕಾಂಡದ ಗಾತ್ರ ದೊಡ್ಡದು ಮತ್ತು ನೇರ. ಅದು ಕೊಂಬೆಗಳಿಂದ ಹಾಗೂ ಎಲೆಗಳಿಂದ ಅಲಂಕೃತವಾಗಿತ್ತು.

ಅದು ರಾಜನ ಅತ್ಯಂತ ಪ್ರಿಯವೃಕ್ಷವೂ ಆಗಿತ್ತು. ಅದಕ್ಕೆ ಮುಕ್ಖಕ ಎಂಬ ಹೆಸರನ್ನು ರಾಜನೇ ಕೊಟ್ಟಿದ್ದ. ಅದರ ದೇವತೆ ಅತ್ಯಂತ ಪ್ರತಾಪಶಾಲಿಯಾದ ದೇವರಾಜ. ಬೋಧಿಸತ್ವ ಕನಿಷ್ಠ ದರ್ಭೆಯ ದೇವತೆಯಾಗಿದ್ದರೂ ದೇವರಾಜನೊಡನೆ ಸ್ನೇಹವನ್ನು ಹೊಂದಿದ್ದ.

ಹೀಗಿರುವಾಗ ರಾಜನ ಅರಮನೆಯಲ್ಲಿಯ ಒಂದು ಮುಖ್ಯ ಮರದ ಕಂಭದಲ್ಲಿ ಕೊರಕಲು ಕಾಣಿಸಿತು. ದಿನಗಳೆದಂತೆ ಅದು ಸೀಳಿ ಮುರಿದು ಬೀಳುವಂತಾಯಿತು. ರಾಜ ಬಡಗಿಗಳನ್ನು ಕರೆಸಿ ಒಂದು ಸೂಕ್ತವಾದ ಮರದ ಕಂಭವನ್ನು ಸಿದ್ಧಪಡಿಸಿ ಮುರಿಯಲಿರುವ ಕಂಭವನ್ನು ಬದಲಿಸಲು ಹೇಳಿದ. ಅವರು ಸರಿಯಾದ ಮರವನ್ನು ಹುಡುಕಲು ಕಾಡುಗಳಲ್ಲಿ ಅಲೆದರು. ಯಾವುದೂ ಸೂಕ್ತವೆನ್ನಿಸಲಿಲ್ಲ. ಕೊನೆಗೆ ಮುಕ್ಖಕ ವೃಕ್ಷ ಸರಿಯಾದದ್ದು ಎಂದು ಅವರಿಗೆ ಎನ್ನಿಸಿತು. ಕೊನೆಗೆ ರಾಜನ ಬಳಿ ಬಂದು ಹೇಳಿದರು, ‘ಪ್ರಭೂ, ನಾವು ಕಾಡೆಲ್ಲ ಅಲೆದರೂ ತಮ್ಮ ಅರಮನೆಗೆ ಸರಿಯಾಗುವ ಗಟ್ಟಿ ಮರ ದೊರೆಯಲಿಲ್ಲ. ಒಂದು ಮರ ಸರಿಯಾಗಿದೆ ಆದರೆ ಅದನ್ನು ಕತ್ತರಿಸುವುದು ಸಾಧ್ಯವಿಲ್ಲ’. ಅದಕ್ಕೆ ಕಾರಣವನ್ನು ರಾಜ ಕೇಳಿದಾಗ, ‘ಸ್ವಾಮೀ, ಅದಕ್ಕೆ ಎರಡು ಕಾರಣಗಳು. ಒಂದು, ಅದು ತಮ್ಮ ರಾಜೋದ್ಯಾನದ ಮರ. ಎರಡನೆಯದು, ಅದು ಮಂಗಲವೃಕ್ಷ. ಅದನ್ನು ಕಡಿಯುವುದು ಶ್ರೇಯಸ್ಕರವಲ್ಲ’. ರಾಜ ಯೋಚಿಸಿ ಹೇಳಿದ, ‘ಪರವಾಗಿಲ್ಲ, ಅದನ್ನೇ ಕತ್ತರಿಸಿ ಕಂಭ ಮಾಡಿ. ನಾವು ಅದರ ಬದಲಾಗಿ ನಾಲ್ಕು ಮಂಗಲ ವೃಕ್ಷಗಳನ್ನು ಹಾಕಿಸುತ್ತೇನೆ’.

ADVERTISEMENT

ಬಡಗಿಗಳು ಅದಕ್ಕೆ ಒಪ್ಪಿ ಮರುದಿನ ಉದ್ಯಾನವನಕ್ಕೆ ಹೋಗಿ ಮರಕ್ಕೆ ಪೂಜೆ ಸಲ್ಲಿಸಿ ಬಲಿ ನೀಡಿದರು. ಮರುದಿನವೇ ಅದನ್ನು ಕತ್ತರಿಸುವ ಯೋಜನೆ ಹಾಕಿದರು. ಮಂಗಲವೃಕ್ಷದ ದೇವತೆ ದೇವರಾಜನಿಗೆ ಗಾಬರಿಯಾಯಿತು. ತಾನೇನು ಮಾಡಬೇಕೆಂಬುದು ತಿಳಿಯದೆ ದೇವರಾಜ ದುಃಖಿತನಾಗಿದ್ದಾಗ ಉಳಿದ ಮರಗಳ ದೇವತೆಗಳೂ ಬಂದು ಸಾಂತ್ವನ ಹೇಳಿದವು. ದರ್ಭೆಯ ದೇವತೆಯಾದ ಬೋಧಿಸತ್ವ ದೇವರಾಜನಿಗೆ ಹೇಳಿದ, ‘ಚಿಂತಿಸಬೇಡ. ನಾನು ನಿಮ್ಮ ವೃಕ್ಷವನ್ನು ಕತ್ತರಿಸದಂತೆ ಮಾಡುತ್ತೇನೆ’. ಮರುದಿನ ಬಡಗಿಗಳು ಬರುವ ಮೊದಲು ತಾನು ಒಂದು ಓತಿಕ್ಯಾತನಾಗಿ ವೇಷ ಬದಲಾಯಿಸಿದ. ಇನ್ನೊಬ್ಬ ದೇವತೆಯನ್ನು ತನ್ನ ಹಾಗೆಯೇ ಕಾಣುವ ಮತ್ತೊಂದು ಓತಿಕ್ಯಾತನನ್ನಾಗಿ ಮಾಡಿದ. ಬಡಗಿಗಳು ತಮ್ಮ ಸಲಕರಣೆಗಳೊಂದಿಗೆ ಬಂದಾಗ ಅವರಿಗೆ ಕಾಣುವಂತೆಯೇ ಓತಿಕ್ಯಾತ ಸರಸರನೇ ಬಂದು ಮರದ ಬೇರಿನ ಬುಡದಲ್ಲಿ ಸೇರಿತು. ಮರುಕ್ಷಣದಲ್ಲಿ ಇನ್ನೊಂದು ಓತಿಕ್ಯಾತ ಮರದ ಮೇಲೆ ಸರಸರನೇ ಸರಿದಾಡಿ ಸದ್ದು ಮಾಡಿತು. ಕೆಳಗೆ ಬೇರಿನ ಬುಡದಲ್ಲಿ ಸೇರಿದ ಓತಿಕ್ಯಾತ ಕ್ಷಣದಲ್ಲಿಯೇ ಮರದ ಮೇಲೇರಿದ್ದನ್ನು ಕಂಡು ಬಡಗಿಗಳು, ಓಹೋ ಈ ಮರ ಪೂರ್ತಿ ಪೊಳ್ಳಾಗಿದೆ. ಈ ಟೊಳ್ಳಾದ, ನಿಸ್ಸಾರವಾದ ಮರದಿಂದ ಕಂಭಮಾಡುವುದು ಅಸಾಧ್ಯವೆಂದು ಬಿಟ್ಟು ಹೋದರು. ವೃಕ್ಷದೇವತೆ ದೇವರಾಜ ಬೋಧಿಸತ್ವನಿಗೆ ಕೃತಜ್ಞತೆ ಹೇಳಿದ.

ಎಂಥ ಸುಂದರ ಕಥೆ ಇದು! ನಾವು ಎಷ್ಟೇ ಬಲಿಷ್ಠರಾದರೂ, ಪ್ರಭಾವಶಾಲಿಗಳಾಗಿದ್ದರೂ ಯಾವ ಸಂದರ್ಭದಲ್ಲಿ ಯಾರ ಸಹಾಯ ಬೇಕಾದೀತು ಎಂಬುದನ್ನು ಹೇಳುವುದು ಸಾಧ್ಯವಿಲ್ಲ. ಆದ್ದರಿಂದ ಸಮಾನರೊಂದಿಗೂ, ನಮಗಿಂತ ತುಂಬ ಚಿಕ್ಕವರೊಂದಿಗೂ ಪ್ರೀತಿಯ ಮಿತೃತ್ವವನ್ನು ಬೆಳೆಸಿಕೊಳ್ಳಬೇಕು. ಅವರೂ, ನಮಗೆ ಆಪತ್ತಾದಾಗ ಉಪಕಾರ ಮಾಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.