ADVERTISEMENT

ಹೃದಯಪಾಠವಾಗದ ಬಾಯಿಪಾಠ

ಡಾ. ಗುರುರಾಜ ಕರಜಗಿ
Published 21 ಡಿಸೆಂಬರ್ 2018, 5:32 IST
Last Updated 21 ಡಿಸೆಂಬರ್ 2018, 5:32 IST
   

ಹಿಂದೆ ವಾರಣಾಸಿಯಲ್ಲಿ ಬ್ರಹ್ಮದತ್ತ ರಾಜನಾಗಿದ್ದಾಗ ಬೋಧಿಸತ್ವ ಅತ್ಯಂತ ಶ್ರೀಮಂತನಾದ ಬ್ರಾಹ್ಮಣನ ಮನೆಯಲ್ಲಿ ಜನಿಸಿದ್ದ. ದೊಡ್ಡವನಾದ ಮೇಲೆ ತಕ್ಷಶಿಲೆಗೆ ಹೋಗಿ ಎಲ್ಲ ವಿದ್ಯೆಗಳನ್ನು ಸಂಪಾದಿಸಿಕೊಂಡು ಬಂದು ಶ್ರೇಷ್ಠ ಗುರುವಾಗಿ ಐದುನೂರು ಜನ ಶಿಷ್ಯರಿಗೆ ಶಿಕ್ಷಣ ನೀಡುತ್ತಿದ್ದ.

ಈ ಐದುನೂರು ಶಿಷ್ಯರಲ್ಲಿ ಒಬ್ಬ ಶತಮೂರ್ಖ ವಿದ್ಯಾರ್ಥಿಯೂ ಇದ್ದ. ಆತ ತುಂಬ ಒಳ್ಳೆಯ ಹುಡುಗ, ಪ್ರಾಮಾಣಿಕ ಮತ್ತು ವಿಧೇಯನಾದವನು. ಗುರುವಿನ ಸೇವೆಯನ್ನು ಅತ್ಯಂತ ಶ್ರದ್ಧೆಯಿಂದ ಮಾಡುವವನು ಆದರೆ ತಲೆಗೆ ವಿದ್ಯೆ ಹತ್ತುತ್ತಿರಲಿಲ್ಲ.

ಒಂದು ದಿನ ರಾತ್ರಿ ಬೋಧಿಸತ್ವ ಮಂಚದ ಮೇಲೆ ಮಲಗಿದಾಗ ಈ ಶಿಷ್ಯ ಬಂದು ಗುರುವಿನ ಕೈ-ಕಾಲುಗಳನ್ನು ಹದವಾಗಿ ಒತ್ತಿ ಹೊರಟ. ಆಗ ಬೋಧಿಸತ್ವ, “ಮಗೂ ಮಂಚದ ಎರಡೂ ಕಾಲುಗಳು ಅಲುಗಾಡುತ್ತಿವೆ, ರಾತ್ರಿ ನಿದ್ರೆ ಮಾಡುವುದು ಕಷ್ಟ. ಅವುಗಳಿಗೆ ಯಾವುದಾದರೂ ಆಧಾರವನ್ನು ಕೊಡು”ಎಂದ. ವಿದ್ಯಾರ್ಥಿ ಅಲ್ಲಲ್ಲಿ ಹುಡುಕಾಡಿ ಒಂದು ಕಾಲಿಗೆ ಆಧಾರವನ್ನು ಕೊಟ್ಟ. ಮತ್ತೊಂದು ಕಾಲಿಗೆ ಏನೂ ದೊರೆಯಲಿಲ್ಲ. ಆಗ ಗುರುಗಳಿಗೆ ನಿದ್ರೆ ಹತ್ತುತ್ತಿತ್ತು. ಅವರಿಗೆ ತೊಂದರೆಯಾಗಬಾರದೆಂದು ತಾನೇ ಅಲ್ಲಿ ಕುಳಿತು ಕೈಯಿಂದ ಒತ್ತಿ ಹಿಡಿದ. ಬೆಳಿಗ್ಗೆ ಬೋಧಿಸತ್ವ ಎದ್ದು ನೋಡುತ್ತಾನೆ, ಶಿಷ್ಯ ರಾತ್ರಿಯಿಡೀ ಮಂಚ ಹಿಡಿದೇ ಕುಳಿತಿದ್ದಾನೆ. ಅವನ ಗುರುಭಕ್ತಿಯನ್ನು ನೋಡಿ ಬೋಧಿಸತ್ವನಿಗೆ ಹೃದಯ ತುಂಬಿ ಬಂದಿತು. ಈ ಹುಡುಗನನ್ನು ಹೇಗಾದರೂ ಬುದ್ಧಿವಂತನನ್ನಾಗಿ ಮಾಡಬೇಕು ಎಂದುಕೊಂಡ. ಅವನು ಯೋಚನೆ ಮಾಡಿ ಒಂದು ನಿರ್ಧಾರಕ್ಕೆ ಬಂದ. ಈ ಹುಡುಗ ಹೇಗೂ ಕಾಡಿಗೆ ಸೌದೆ, ಎಲೆ ತರಲು ಹೋಗುತ್ತಾನೆ, ಕೆಲವೊಮ್ಮೆ ಬೇರೆ ಕೆಲಸಗಳಿಗೂ ಹೋಗುತ್ತಾನೆ. ಅವನು ಮರಳಿ ಬಂದ ಮೇಲೆ ಅಲ್ಲಿ ಏನು ಕಂಡೆ, ಏನು ಮಾಡಿದೆ, ಅದೆಲ್ಲ ಹೇಗಿದೆ? ಎಂದು ಕೇಳಿದಾಗ ಅವನು ಕೊಟ್ಟ ಉತ್ತರಗಳನ್ನೇ ಪರಿಷ್ಕಾರ ಮಾಡುತ್ತ ಹೋದರೆ ಅವನ ಭಾಷೆ ಬಲಿಯುತ್ತದೆ ಎಂದುಕೊಂಡ.

ADVERTISEMENT

ಮರುದಿನ, “ಮಗೂ, ಇಂದು ಕಾಡಿಗೆ ಹೋದಾಗ ಏನು ನೋಡಿದೆ, ಏನು ತಿಂದೆ, ಏನು ಕುಡಿದೆ ಮತ್ತು ಏನು ಮಾಡಿದೆ ಎನ್ನುವುದನ್ನು ನೆನಪಿನಲ್ಲಿಟ್ಟುಕೊಂಡು, ಬಂದ ಮೇಲೆ ನನಗೆ ಹೇಳು” ಎಂದು ಬೋಧಿಸತ್ವ ಹೇಳಿದ. ಶಿಷ್ಯ ತಲೆಯಲ್ಲಾಡಿಸಿ ಹೋದ, ಬಂದ ಮೇಲೆ ಅಲ್ಲೊಂದು ಹಾವು ಕಂಡೆ ಎಂದು ಹೇಳಿದ. ಹಾವು ಹೇಗಿರುತ್ತದೆ ಎಂದು ಗುರು ಕೇಳಿದಾಗ ಶಿಷ್ಯ. “ಅದು ನೇಗಿಲಿನ ಗುಳದ ಹಾಗಿದೆ” ಎಂದ. ಗುರುವಿಗೆ ಸಂತೋಷ. ಎಷ್ಟು ಚೆಂದದ ಉಪಮಾನವನ್ನು ಶಿಷ್ಯ ಕೊಟ್ಟ ಎಂದು ಹಿಗ್ಗಿದ. ಮರುದಿನ ಶಿಷ್ಯ ಆನೆಯನ್ನು ಕಂಡೆ ಎಂದ. ಅದು ಹೇಗಿದೆ ಎಂದಾಗ ಮತ್ತೆ ನೇಗಿಲಿನ ಗುಳದ ಹಾಗೆ ಎಂದು ಉತ್ತರ ನೀಡಿದ. ಮರುದಿನ ಕಬ್ಬು ನೋಡಿದೆ, ಅದರ ಮರುದಿನ ಮೊಸರು ತಿಂದೆ ಎಂದ. ಅವು ಹೇಗಿವೆ ಎಂದು ಕೇಳಿದರೆ ಮತ್ತೆ “ನೇಗಿಲಿನ ಗುಳದ ಹಾಗೆ” ಎಂದ.

ಗುರುವಿಗೆ ಸಿಟ್ಟು ಬಂದಿತು. ಅವನು ಯಾಕೆ ಹೀಗೆ ಹೇಳುತ್ತಾನೆ ಎಂದು ವಿಚಾರಿಸಿದಾಗ ಮೊದಲನೆಯ ದಿನ ಜೊತೆಗಿದ್ದ ಬುದ್ಧಿವಂತ ಶಿಷ್ಯ ಹಾವನ್ನು ನೇಗಿಲನ ಗುಳಕ್ಕೆ ಹೋಲಿಸಿ ಹೇಳಿದ್ದ. ಅದೇ ಅವನ ತಲೆಯಲ್ಲಿ ಭದ್ರವಾಗಿ ಕುಳಿತಿತ್ತು. ಮುಂದೆ ಯಾವ ಪ್ರಶ್ನೆಗೂ ಅದೇ ಉತ್ತರ ಬರುತ್ತಿತ್ತು. ಬೋಧಿಸತ್ವ ಈ ಹುಡುಗನಿಗೆ ಓದು, ತಲೆಗೆ ಹತ್ತುವುದಿಲ್ಲವೆಂದು ಆಶ್ರಮದ ಮೇಲ್ವಿಚಾರಣೆಯನ್ನು ನೀಡಿ ಕಲಿಕೆಯಿಂದ ಮುಕ್ತಮಾಡಿದ.

ಇಂದು ನಮ್ಮ ಶಾಲೆಗಳ ಕಲಿಕೆಯೂ ಶಿಷ್ಯನ ಕಲಿಕೆಯೇ ಆಗಿದೆ. ಪಠ್ಯಪುಸ್ತಕವೇ ಮಸ್ತಕಕ್ಕೇರಿ, ಚಿಂತನೆ, ಸ್ವ ಆಲೋಚನೆ ಹಿಂದೆ ಸರಿದಿವೆ. ಬಾಯಿಪಾಠ, ಗಿಳಿಪಾಠವಾಗಿ ಹೃದಯಪಾಠವಾಗುವುದು ತಪ್ಪಿ ಹೋಗಿದೆಯಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.